ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್ ಬೆಂಬಲಿತ ಸಿರಿಯಾ ಉಗ್ರ ತಾಣದ ಮೇಲೆ ಅಮೆರಿಕ ವೈಮಾನಿಕ ದಾಳಿ

ಇರಾಕ್‌ನಲ್ಲಿ ಅಮೆರಿಕದ ಸೇನಾ ನೆಲೆ ಮೇಲೆ ನಡೆದಿದ್ದ ರಾಕೆಟ್ ದಾಳಿಗೆ ಪ್ರತೀಕಾರ
Last Updated 26 ಫೆಬ್ರುವರಿ 2021, 2:27 IST
ಅಕ್ಷರ ಗಾತ್ರ

ವಾಷಿಂಗ್ಟನ್: ಇತ್ತೀಚೆಗೆ ಇರಾಕ್‌ನಲ್ಲಿ ಅಮೆರಿಕದ ಸೇನಾ ನೆಲೆ ಮೇಲೆ ನಡೆದಿದ್ದ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಮಿಲಿಟರಿಯು ಪೂರ್ವ ಸಿರಿಯಾದಲ್ಲಿನ ಇರಾನ್ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.

"ಅಧ್ಯಕ್ಷ ಬಿಡೆನ್ ಅವರ ನಿರ್ದೇಶನದ ಮೇರೆಗೆ, ಅಮೆರಿಕದ ಮಿಲಿಟರಿ ಪಡೆಗಳು ಪೂರ್ವ ಸಿರಿಯಾದಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪುಗಳ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದವು" ಎಂದು ವಕ್ತಾರ ಜಾನ್ ಕಿರ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇರಾಕ್‌ನಲ್ಲಿ ಇತ್ತೀಚಿಗೆ ಅಮೆರಿಕ ಮತ್ತು ಒಕ್ಕೂಟದ ಮಿಲಿಟರಿ ವಿರುದ್ಧದ ದಾಳಿಗೆ ಪ್ರತಿಯಾಗಿ ಮತ್ತು ಉಗ್ರರಿಂದ ದಾಳಿ ಆತಂಕದ ಹಿನ್ನೆಲೆಯಲ್ಲಿ ಈ ದಾಳಿಗೆ ಆದೇಶ ನೀಡಲಾಗಿದೆ" ಎಂದು ಅವರು ಹೇಳಿದ್ದಾರೆ.

ಗುರುವಾರ ನಡೆದ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿದೆಯೇ ಎಂಬ ಬಗ್ಗೆ ಅಮೆರಿಕ ಮಿಲಿಟರಿ ಮಾಹಿತಿ ನೀಡಿಲ್ಲ.

ಕಟೇಬ್ ಹೆಜ್ಬೊಲ್ಲಾ ಮತ್ತು ಕಟೇಬ್ ಸಯ್ಯಿದ್ ಅಲ್-ಶುಹಾದಾ ಸೇರಿದಂತೆ ಇರಾನ್ ಬೆಂಬಲಿತ ಸಶಸ್ತ್ರ ಇರಾಕಿ ಗುಂಪುಗಳ ನಿಯಂತ್ರಣದಲ್ಲಿರುವ ಗಡಿ ನಿಯಂತ್ರಣ ಕೇಂದ್ರವು ನಮ್ಮ ಗುರಿಯಾಗಿತ್ತು ಎಂದು ಅಮೆರಿಕ ತಿಳಿಸಿದೆ.

ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಅಮೆರಿಕ ಮತ್ತು ಒಕ್ಕೂಟದ ಪಡೆಗಳ ನೆಲೆ ಮೇಲೆ ನಡೆದ ಮೂರು ರಾಕೆಟ್ ದಾಳಿಗೆ ಪ್ರತಿಯಾಗಿ ಈ ದಾಳಿ ನಡೆದಿದೆ.

ಫೆಬ್ರವರಿ 15 ರಂದು ಕುರ್ದಿಷ್ ಪ್ರದೇಶದ ರಾಜಧಾನಿ ಅರ್ಬಿಲ್ನಲ್ಲಿನ ಮಿಲಿಟರಿ ಸಂಕೀರ್ಣದ ಮೇಲೆ ನಡೆದಿದ್ದ ರಾಕೆಟ್ ದಾಳಿಯಲ್ಲಿ ಒಬ್ಬ ನಾಗರಿಕ ಮತ್ತು ಮಿತ್ರ ಪಡೆಗಳೊಂದಿಗೆ ಕೆಲಸ ಮಾಡುತ್ತಿದ್ದ ವಿದೇಶಿ ಗುತ್ತಿಗೆದಾರ ಸಾವಿಗೀಡಾಗಿದ್ದರು. ದಾಳಿಯಲ್ಲಿ ಅಮೆರಿಕದ ಹಲವು ಗುತ್ತಿಗೆದಾರರು ಮತ್ತು ಒಬ್ಬ ಸೈನಿಕ ಗಾಯಗೊಂಡಿದ್ದ.

ಇರಾನ್‌ನ ನಿರ್ದೇಶನದಲ್ಲಿ ಕೆಲ ಗುಂಪುಗಳು ಇರಾಕ್‌ನಲ್ಲಿ ಅಮೆರಿಕ ಮಿಲಿಟರಿ ನೆಲೆ ಮೇಲೆ ನಡೆಸಿದ ದಾಳಿಯು ಬಿಡೆನ್ ಆಡಳಿತಕ್ಕೆ ಸವಾಲನ್ನು ಒಡ್ಡಿದೆ ಎಂದು ಹೇಳಲಾಗಿದೆ.

ಈ ಮಧ್ಯೆ, ಇರಾನ್‌ನ ಪರಮಾಣು ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ರಚಿಸಿರುವ 2015 ರ ಒಪ್ಪಂದವನ್ನು ಪುನರ್ ಸ್ಥಾಪಿಸಲು ನಾವು ಬಯಸಿದ್ದೇವೆ ಎಂದು ಬೈಡನ್ ಆಡಳಿತ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT