ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಚುನಾವಣೆ ಫಲಿತಾಂಶವನ್ನೇ ತಡೆಯುವ ಟ್ರಂಪ್‌ ಪ್ರಯತ್ನಗಳಿಗೆ ಕೋರ್ಟ್‌ ಹೊಡೆತ

Last Updated 12 ಡಿಸೆಂಬರ್ 2020, 11:37 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜೋ ಬಿಡೆನ್ ಗೆದ್ದ ಪ್ರಮುಖ ರಾಜ್ಯಗಳ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳನ್ನು ರದ್ದುಗೊಳಿಸಬೇಕು ಎಂದು ಸಲ್ಲಿಸಲಾಗಿದ್ದ ಮೊಕದ್ದಮೆಯನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನೇ ತಡೆಯುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಯತ್ನಗಳಿಗೆ ಕೊನೆ ಹಾಡಲಾಗಿದೆ.

ದೇಶದ ಅಧ್ಯಕ್ಷರಾಗಿ ಚುನಾಯಿತರಾದ ಬಿಡೆನ್ ಪರವಾಗಿ ಫಲಿತಾಂಶ ನೀಡಿದ್ದ ಜಾರ್ಜಿಯಾ, ಮಿಷಿಗನ್, ಪೆನ್ಸಿಲ್ವೇನಿಯಾ ಮತ್ತು ವಿಸ್ಕಾನ್ಸಿನ್‌ ರಾಜ್ಯದ ಲಕ್ಷಾಂತರ ಮತದಾರರ ಮತಪತ್ರಗಳನ್ನು ನಿರ್ಬಂಧಿಸುವಂತೆ, ಡೊನಾಲ್ಡ್‌ ಟ್ರಂಪ್‌ ಬೆಂಬಲದೊಂದಿಗೆ ಟೆಕ್ಸಾಸ್‌ನ ಅಟಾರ್ನಿ ಜನರಲ್ ನಡೆಸಿದ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

'ಸುಪ್ರೀಂ ಕೋರ್ಟ್‌ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವಿತ್ತಾದರೂ, ಯಾವುದೇ ನಿಲುವನ್ನು ತೆಗೆದುಕೊಂಡಿಲ್ಲ,' ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ ಮತ್ತು ಕ್ಲಾರೆನ್ಸ್ ಥಾಮಸ್ ಹೇಳಿದರು. ಟೆಕ್ಸಾಸ್‌ ಸಲ್ಲಿಸಿದ್ದ ಈ ಅರ್ಜಿಯನ್ನು ರಿಪಬ್ಲಿಕನ್ ಪಕ್ಷದ 126 ಕಾಂಗ್ರೆಸ್‌ ಸದ್ಯರು ಬೆಂಬಲಿಸಿದ್ದರು.

'ಮತ್ತೊಂದು ರಾಜ್ಯ ತನ್ನ ಚುನಾವಣೆಗಳನ್ನು ನಡೆಸುವ ವಿಧಾನದಲ್ಲಿ ಟೆಕ್ಸಾಸ್‌ ನ್ಯಾಯಿಕವಾದ ಆಸಕ್ತಿಯನ್ನು ಪ್ರದರ್ಶಿಸಿಲ್ಲ. ಹೀಗಾಗಿ ಬಾಕಿ ಎಲ್ಲಾ ಅರ್ಜಿಗಳನ್ನೂ ವಜಾಗೊಳಿಸಲಾಗುತ್ತಿದೆ' ಎಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಈ ಮೂಲಕ ಡೆಮಾಕ್ರಾಟಿಕ್‌ ಪಕ್ಷದ ಬಿಡೆನ್ ಅವರು ಗೆದ್ದ ಚುನಾವಣಾ ಫಲಿತಾಂಶಗಳನ್ನು ರದ್ದುಗೊಳಿಸುವ ಡೊನಾಲ್ಡ್‌ ಟ್ರಂಪ್‌ ಅವರ ಪ್ರಯತ್ನಗಳಿಗೆ ಕೋರ್ಟ್‌ ತೀವ್ರ ಹೊಡೆತ ನೀಡಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೆ ಬಿಡೆನ್ ಹೆಚ್ಚಿನ ಮತಗಳನ್ನು ಗಳಿಸಿದ್ದು ಮಾತ್ರವೇ ಅಲ್ಲದೆ, 306 ಎಲೆಕ್ಟ್ರೊಲ್‌ ಮತಗಳನ್ನು ಪಡೆಯುವಲ್ಲಿಯೂ ಯಶಸ್ವಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನ ಹೊಂದಲು 270 ಎಲೆಕ್ಟ್ರೋಲ್‌ ಮತಗಳನ್ನು ಪಡೆಯುವುದು ಅಗತ್ಯ. ಇತ್ತ, ಟ್ರಂಪ್‌ ಈ ಚುನಾವಣೆಯಲ್ಲಿ 232 ಮತಗಳನ್ನಷ್ಟೇ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT