ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಜೀವಿ ಸಂಕುಲಕ್ಕೆ ಮಾರಕವಾಗುತ್ತಿದೆ ಫೇಸ್ ಮಾಸ್ಕ್!

Last Updated 12 ಜನವರಿ 2021, 6:48 IST
ಅಕ್ಷರ ಗಾತ್ರ

ಕೌಲಲಾಂಪುರ: ಮನುಕುಲವನ್ನೇ ಬೆಚ್ಚಿಬೀಳಿಸಿದ ಕೋವಿಡ್ 19 ವೈರಸ್ ಹಾವಳಿಯಿಂದ ಜನರನ್ನು ಕಾಪಾಡಿದ ಮಾಸ್ಕ್ ಮತ್ತು ಗ್ಲೌಸ್ ಈಗ ವನ್ಯಜೀವಿಗಳ ಪ್ರಾಣಕ್ಕೆ ಎರವಾಗುತ್ತಿದೆ! ಒಮ್ಮೆ ಬಳಸಿ ಎಸೆಯುವ ಸರ್ಜಿಕಲ್ ಮಾಸ್ಕ್ ನೇರವಾಗಿ ಪರಿಸರಕ್ಕೆ ಸೇರುತ್ತಿದೆ. ಬಳಸಿದ ಮಾಸ್ಕ್‌ಗಳನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡದಿರುವುದು ಜಲಚರಗಳಿಗೆ, ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ.

ಸಮುದ್ರ ಸೇರುತ್ತಿದೆ ಬಳಸಿದ ಮಾಸ್ಕ್

ಮಾಸ್ಕ್ ಬಳಸಿದ ಬಳಿಕ ಅದನ್ನು ಸರಿಯಾಗಿ ವಿಲೇವಾರಿ ಮಾಡದಿರುವುದರಿಂದ, ಅಲ್ಲದೆ ಜನರ ಬೇಜಾಬಾವ್ದಾರಿಯಿಂದಾಗಿ ಬಹುತೇಕ ಮಾಸ್ಕ್ ನೀರಿನ ಮೂಲಕ್ಕೆ ಸಿಲುಕಿ ಕೊನೆಗೆ ಸಮುದ್ರ ಸೇರುತ್ತಿವೆ. ಕೋವಿಡ್ 19 ಹರಡುವಿಕೆ ತಡೆಯಲು ಮಾಸ್ಕ್ ಕಡ್ಡಾಯ ಎಂಬ ಕ್ರಮವನ್ನು ಬಹುತೇಕ ಎಲ್ಲ ರಾಷ್ಟ್ರಗಳೂ ಅನುಸರಿಸುತ್ತಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಅಲ್ಲದೆ, ಪ್ರವಾಸಿ ತಾಣಗಳಲ್ಲೂ ಮಾಸ್ಕ್ ತ್ಯಾಜ್ಯ ಹೆಚ್ಚಾಗಿ ಉತ್ಪತ್ತಿಯಾಗುತ್ತಿದೆ.

ಮಾಸ್ಕ್ ಮಾತ್ರವಲ್ಲದೆ, ಅದರಲ್ಲಿನ ಎಲಾಸ್ಟಿಕ್ ದಾರವೂ ಸಮಸ್ಯೆ ಸೃಷ್ಟಿಸುತ್ತಿದೆ. ಮಾಸ್ಕ್ ಮತ್ತು ಗ್ಲೌಸ್ ತ್ಯಾಜ್ಯ ನಿರ್ವಹಣೆ ಕುರಿತಂತೆ ಈಗಾಗಲೇ ವಿವಿಧ ಸಂಘಸಂಸ‌್ಥೆಗಳು ದನಿ ಎತ್ತಿವೆ. ಮಲೇಷ್ಯಾದಲ್ಲಿ ಕಂಡುಬರುವ ಮಕಾವ್ ಹೆಸರಿನ ಕೋತಿಯೊಂದು ಮಾಸ್ಕ್‌ನ ದಾರವನ್ನು ಕಚ್ಚಿ ಎಳೆದು ತಿನ್ನಲು ಯತ್ನಿಸುತ್ತಿರುವ ಚಿತ್ರ ಸುದ್ದಿಮಾಡಿತ್ತು.

ಬ್ರಿಟನ್‌ನಲ್ಲಿ ಕಡಲಕಾಗೆಯೊಂದರ ಕಾಲುಗಳಿಗೆ ಮಾಸ್ಕ್‌ನ ದಾರ ಸುತ್ತಿಕೊಂಡು ಸಮಸ್ಯೆಯಾಗಿತ್ತು, ಅಲ್ಲದೆ ವಿವಿಧ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿ ಮತ್ತು ಜಲಚರಗಳು ತೊಂದರೆಗೆ ಸಿಲುಕಿರುವ ಕುರಿತು ಕೂಡ ವರದಿಯಾಗಿದೆ.

ಓಶನ್‌ಏಷ್ಯಾ ವರದಿ ಪ್ರಕಾರ, ಕಳೆದ ವರ್ಷ 150 ಕೋಟಿಗೂ ಅಧಿಕ ಮಾಸ್ಕ್‌ಗಳು ಜಾಗತಿಕವಾಗಿ ಸಮುದ್ರದ ಒಡಲು ಸೇರಿವೆ. ಇದು ಕಡಲಿನ ಪ್ಲಾಸ್ಟಿಕ್ ಮಾಲಿನ್ಯಕ್ಕೆ 6,200 ಟನ್ ಹೆಚ್ಚುವರಿ ಸೇರ್ಪಡೆಯಾಗಿದೆ. ಇದು ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದ್ದು, ಆಮೆ, ಏಡಿ ಮತ್ತು ಮೀನು ಮೊದಲಾದ ಜಲಚರಗಳಿಗೆ ಕಂಟಕವಾಗುತ್ತಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಮುಂದೆ ಅಗಾಧ ಪ್ರಮಾಣದಲ್ಲಿ ಮಾಸ್ಕ್ ತ್ಯಾಜ್ಯ ಸಮುದ್ರ ಮತ್ತು ಪರಿಸರ ಸೇರಿ ಒಟ್ಟಾರೆ ಜೀವಸಂಕುಲಕ್ಕೆ ಅಪಾಯ ತರಲಿದೆ. ಅಲ್ಲದೆ, ಪರೋಕ್ಷವಾಗಿ ಮನುಕುಲಕ್ಕೂ ಕಂಟಕವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT