ವಾಷಿಂಗ್ಟನ್: ದೇಶದಲ್ಲಿರುವ ರಾಜತಾಂತ್ರಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ಅಮೆರಿಕವು ಸಾಕಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂದು ಗೃಹ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಖಾಲಿಸ್ತಾನ ಬೆಂಬಲಿಗರ ಗುಂಪೊಂದು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮೇಲೆ ದಾಳಿ ನಡೆಸಿ, ಭಾರತದ ಧ್ವಜ ತೆಗೆದು ಖಾಲಿಸ್ತಾನದ ಧ್ವಜ ಹಾರಿಸಿತ್ತು. ಇದರ ಬೆನ್ನಲ್ಲೇ ಗೃಹ ಇಲಾಖೆ ಉಪ ವಕ್ತಾರ ವೇದಾಂತ್ ಪಟೇಲ್ ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
‘ನಾವು ಭಾರತೀಯ ಅಧಿಕಾರಿಗಳೊಂದಿಗೆ ಈ ವಿಷಯವೂ ಸೇರಿ ಹಲವು ವಿಷಯಗಳ ಕುರಿತು ನಿಕಟ ಸಂಪರ್ಕದಲ್ಲಿದ್ದೇವೆ’ ಎಂದು ಪಟೇಲ್ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಹಿಂಸಾಚಾರಕ್ಕೆ ಸಿಖ್ ಸಮುದಾಯ ಖಂಡನೆ: ಸ್ಯಾನ್‌ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿ ಮೇಲಿನ ದಾಳಿ ಮತ್ತು ರಾಜತಾಂತ್ರಿಕರ ವಿರುದ್ಧದ ಇತ್ತೀಚಿನ ಹಿಂಸಾಚಾರ ಖಂಡಿಸಿ, ಸಿಲಿಕಾನ್ ವ್ಯಾಲಿಯ ಸಿಖ್ ಸಮುದಾಯದ ಸದಸ್ಯರು ಸೇರಿ ಭಾರತೀಯ ಅಮೆರಿಕನ್ನರು ಈಚೆಗೆ ಅಮೆರಿಕ ನ್ಯಾಯಾಂಗ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದರು.
ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಸಿಖ್ ಸಮುದಾಯ ಬೆಂಬಲಿಸುವುದಿಲ್ಲ. ಇವು ಸಮುದಾಯಕ್ಕೆ ಕೆಟ್ಟ ಹೆಸರು ತರುತ್ತವೆ ಎಂದು ಸಮುದಾಯದ ಮುಖಂಡರು ಮತ್ತು ಭಾರತೀಯ ಅಮೆರಿಕನ್ ಪ್ರಮುಖರು ಅಧಿಕಾರಿಗಳ ಭೇಟಿ ಮಾಡಿದ ವೇಳೆ ಕಳವಳ ವ್ಯಕ್ತಪಡಿಸಿದರು.
ಸ್ಯಾನ್ ಫ್ರಾನ್ಸಿಸ್ಕೊದಲ್ಲಿನ ರಾಯಭಾರ ಕಚೇರಿ ಅಸುರಕ್ಷಿತವಾಗಿದೆ. ಹಿಂಸಾಚಾರದ ಘಟನೆಗೆ ಪೊಲೀಸರ ನಿಷ್ಕ್ರಿಯತೆಯೂ ಕಾರಣವಾಗಿದೆ. ಘಟನೆಯ ನಂತರ ಸಮುದಾಯದವರಿಗೆ ವೈಯಕ್ತಿಕ ಸುರಕ್ಷತೆಯ ಬಗ್ಗೆಯೂ ಆತಂಕ ಎದುರಾಗಿದೆ ಎಂದು ಅಧಿಕಾರಿಗಳಿಗೆ ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.