ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ ವಿವಾದ ಬಗೆಹರಿಸಲು ಮುಂದೆ ಬನ್ನಿ: ಮೋದಿಗೆ ಪಾಕ್‌ನ ನೂತನ ಪ್ರಧಾನಿ ಮನವಿ

ಭಾರತದ ಜೊತೆ ಉತ್ತಮ ಬಾಂಧವ್ಯ ಬಯಸುತ್ತೇನೆ: ಪಾಕ್ ನೂತನ ಪ್ರಧಾನಿ ಶಾಹಬಾಝ್
Last Updated 11 ಏಪ್ರಿಲ್ 2022, 14:44 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಭಾರತದ ಜೊತೆ ಉತ್ತಮ ಬಾಂಧವ್ಯ ಬಯಸುತ್ತೇನೆ ಎಂದು ಪಾಕಿಸ್ತಾನದ ನೂತನ ಪ್ರಧಾನಿ ಶಾಹಬಾಝ್ ಷರೀಫ್ ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್ ಖಾನ್ ಅವರನ್ನು ಕೆಳಗಿಳಿಸಿದ ಬಳಿಕ ಇಂದು ನೂತನ ಪ್ರಧಾನಿಯಾಗಿ ಆಯ್ಕೆಯಾದ ಶಾಹಬಾಜ್ ತಮ್ಮ ನೆರೆ ರಾಷ್ಟ್ರಗಳ ಜೊತೆಗಿನ ಸಂಬಂಧದ ಕುರಿತಂತೆ ಮಾತನಾಡಿದ್ದಾರೆ.

ಭಾರತದ ಜೊತೆ ನಾನು ಉತ್ತಮ ಬಾಂಧವ್ಯ ಇರಿಸಿಕೊಳ್ಳಲು ಬಯಸುತ್ತೇನೆ. ಆದರೆ, ಕಾಶ್ಮೀರ ವಿವಾದ ಬಗೆಹರಿಯದ ಹೊರತು ಅದು ಸಾಧ್ಯವಿಲ್ಲ ಎಂದು ಹೇಳಿದರು.

ನೆರೆಯ ದೇಶಗಳ ಜೊತೆಗಿನ ಸಂಬಂಧವು ಆಯ್ಕೆಯ ವಿಷಯವಲ್ಲ. ನಾವು ಅವರ ಜೊತೆಯೇ ಬದುಕಬೇಕು. ದುರಾದೃಷ್ಟವಶಾತ್, ಕಾಶ್ಮೀರ ವಿವಾದ ಆರಂಭವಾದಾಗಿನಿಂದ ಭಾರತದ ಜೊತೆ ಪಾಕಿಸ್ತಾನದ ಸಂಬಂಧ ಉತ್ತಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2019ರಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ಸಂದರ್ಭ ಗಂಭೀರ ಮತ್ತು ರಾಜತಾಂತ್ರಿಕ ಪ್ರಯತ್ನ ಮಾಡದ್ದಕ್ಕೆ ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿದರು.

'ಆಗಸ್ಟ್ 2019ರಲ್ಲಿ ಭಾರತವು 370ನೇ ವಿಧಿಯನ್ನು ರದ್ದುಗೊಳಿಸಿ ಬಲವಂತದ ಅತಿಕ್ರಮಣ ಮಾಡಿದಾಗ, ನಾವು ಯಾವ ಗಂಭೀರ ಪ್ರಯತ್ನಗಳನ್ನು ಮಾಡಿದ್ದೇವೆ ... ನಾವು ಯಾವ ರಾಜತಾಂತ್ರಿಕತೆಯನ್ನು ನಡೆಸಿದ್ದೇವೆ ... ಕಾಶ್ಮೀರಿಗಳ ರಕ್ತವು ಕಾಶ್ಮೀರದ ರಸ್ತೆಗಳಲ್ಲಿ ಹರಿಯುತ್ತಿದೆ ಮತ್ತು ಅವರ ರಕ್ತದಿಂದ ಕಾಶ್ಮೀರ ಕಣಿವೆಯು ಕೆಂಪು ಬಣ್ಣಕ್ಕೆ ತಿರುಗಿದೆ’ಎಂದು ಶಾಹಬಾಝ್‌ ಹೇಳಿದರು.

‘ನಾವು ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತೇವೆ. ಆದರೆ, ಕಾಶ್ಮೀರ ವಿವಾದವನ್ನು ಬಗೆಹರಿಸುವವರೆಗೆ ಶಾಂತಿ ನಿರ್ಮಾಣ ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ಪಾಕಿಸ್ತಾನವು ಕಾಶ್ಮೀರದ ಜನರಿಗೆ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತದೆ. ನಾವು ಕಾಶ್ಮೀರಿ ಸಹೋದರ, ಸಹೋದರಿಯರಿಗಾಗಿ ಪ್ರತಿ ವೇದಿಕೆಯಲ್ಲಿ ಧ್ವನಿ ಎತ್ತುತ್ತೇವೆ ಎಂದರು.

ಇದೇವೇಳೆ, ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಮುಂದೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಾಹಬಾಝ್ ಕೇಳಿಕೊಂಡಿದ್ದಾರೆ. ಇದರಿಂದಾಗಿ ಉಭಯ ದೇಶಗಳು ಗಡಿಯ ಎರಡು ಬದಿಗಳಲ್ಲಿನ ಬಡತನ, ನಿರುದ್ಯೋಗ, ಔಷಧಿಗಳ ಕೊರತೆ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

2016ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳು ಪಠಾಣ್‌ ಕೋಟ್ ವಾಯುನೆಲೆಯ ಮೇಲೆ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಬಿಗಡಾಯಿಸಿತು. ಉರಿಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲಿನ ದಾಳಿ ಸೇರಿದಂತೆ ನಂತರದ ದಾಳಿಗಳು ಸಂಬಂಧವನ್ನು ಇನ್ನಷ್ಟು ಹದಗೆಡಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT