ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಗ್ರೆ ಘರ್ಷಣೆ| ನಮ್ಮವರು ಸತ್ತಿದ್ದಾರೋ ಬದುಕಿದ್ದಾರೋ ಗೊತ್ತಿಲ್ಲ: WHO ಮುಖ್ಯಸ್ಥ

Last Updated 26 ಆಗಸ್ಟ್ 2022, 16:13 IST
ಅಕ್ಷರ ಗಾತ್ರ

ಜಿನಿವಾ: ಇಥಿಯೋಪಿಯಾದ ಟಿಗ್ರೆಯಲ್ಲಿನ ಆಂತರ್ಯುದ್ಧದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಡಾನೊಮ್ ಗೆಬ್ರೆಯೆಸಸ್‌ ಗುರುವಾರ ತಮ್ಮ ವೈಯಕ್ತಿಕ ನೋವು ವ್ಯಕ್ತಪಡಿಸಿದ್ದಾರೆ. ಹಸಿವಿನಿಂದ ಪರಿತಪಿಸುತ್ತಿರುವ ಸಂಬಂಧಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಅವರಿಗೆ ಸಹಾಯ ಮಾಡಲು ಆಗುತ್ತಿಲ್ಲ ಎಂದು ವಿಷಾದಿಸಿದ್ದಾರೆ.

‘ನನಗೆ ಅಲ್ಲಿ ಅನೇಕ ಸಂಬಂಧಿಗಳಿದ್ದಾರೆ. ಅವರಿಗೆ ನಾನು ಹಣ ಕಳುಹಿಸಬೇಕಾಗಿದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಅವರು ಹಸಿವಿನಿಂದ ಪರಿತಪಿಸುತ್ತಿದ್ಧಾರೆ. ನಾನು ಅವರಿಗೆ ಸಹಾಯ ಮಾಡಲು ಸಾಧ್ಯವಿಲ್ಲ ಎಂಬುದೂ ನನಗೆ ಗೊತ್ತು’ ಎಂದು ಜಿನೀವಾದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

‘ನಾನು ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ... ನಾನು ಅವರಿಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ... ಅವರ ಸಂಪರ್ಕ ಸಂಪೂರ್ಣ ಕಡಿತವಾಗಿದೆ’ ಎಂದು ಅವರು ತೀವ್ರ ಹತಾಶೆ ವ್ಯಕ್ತಪಡಿಸಿದರು.

‘ಯಾರು ಸತ್ತಿದ್ದಾರೋ, ಯಾರು ಬದುಕಿದ್ದಾರೋ ತಿಳಿಯುತ್ತಿಲ್ಲ’ ಎಂದು ಟೆಡ್ರೋಸ್‌ ಅಡಾನೋಮ್‌ ಅತೀವ ನೋವುಪಟ್ಟರು.

ಟಿಗ್ರೆಯ ಉತ್ತರ ಭಾಗದ 60 ಲಕ್ಷ ನಾಗರಿಕರ ಮೇಲಿನ ಕ್ರೌರ್ಯವನ್ನು ಟೆಡ್ರೋಸ್‌ ಅಡಾನೋಮ್‌ ಖಂಡಿಸಿದ್ದಾರೆ. ಅಂತರ್ಯುದ್ಧದ ಕಾರಣದಿಂದಾಗಿ ಟಿಗ್ರೆಯಲ್ಲಿ ಸುಮಾರು ಎರಡು ವರ್ಷಗಳಿಂದ ಮೂಲಭೂತ ಸೇವೆಗಳು ಕಡಿತಗೊಂಡಿವೆ.

ವಿಶ್ವ ಸಂಸ್ಥೆಯ ಅಂಗ ಸಂಸ್ಥೆಯಾದ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್‌ ಅಡಾನೋಮ್‌ ಅವರು ಇದೇ ಟಿಗ್ರೆಯವರೇ ಆಗಿದ್ದಾರೆ.

ದಿಗ್ಬಂಧನಕ್ಕೆ ಸಿಲುಕಿರುವ ನಾಗರಿಕರು ಕೇವಲ ಮದ್ದು–ಗುಂಡುಗಳಿಗೆ ಮಾತ್ರ ಬಲಿಯಾಗುತ್ತಿಲ್ಲ... ಬ್ಯಾಂಕಿಂಗ್, ಇಂಧನ, ಆಹಾರ, ವಿದ್ಯುತ್ ಮತ್ತು ಆರೋಗ್ಯ ಸೇವೆ ಸಿಗದೆಯೂ ಹತರಾಗುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇಥಿಯೋಪಿಯಾ ಸರ್ಕಾರಿ ಪಡೆಗಳು ಮತ್ತು ಟಿಗ್ರೆ ಬಂಡುಕೋರರ ನಡುವೆ ಗುರುವಾರ ಮತ್ತೆ ಕಾಳಗ ಆರಂಭವಾಗಿದೆ. ಹೀಗಾಗಿ ಐದು ತಿಂಗಳ ಕದನ ವಿರಾಮ ವ್ಯರ್ಥವಾಗಿದ್ದು, ಶಾಂತಿ ಸ್ಥಾಪನೆಯ ಭರವಸೆಯ ಮೇಲೆ ಕರಿನೆರಳು ಆವರಿಸಿದೆ. ಈ ಹಿನ್ನೆಲೆಯಲ್ಲಿ ಅಡಾನೋಮ್‌ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT