ಭಾನುವಾರ, ಜನವರಿ 17, 2021
28 °C

ಕೊರೊನಾ ವೈರಸ್ ಮೂಲದ ತನಿಖೆಗಾಗಿ ಜ.14ರಂದು ಡಬ್ಲ್ಯುಎಚ್‌ಒ ತಜ್ಞರ ತಂಡ ಚೀನಾಕ್ಕೆ

ಪಿಿಟಿಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್: ಕೊರೊನಾವೈರಸ್ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಜನವರಿ 14(ಗುರುವಾರ) ದೇಶಕ್ಕೆ ಬರಲಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.

ಈ ಮೂಲಕ ಕೊರೊನಾವೈರಸ್‌ ಸೋಂಕಿನ ಮೂಲದ ಪರಿಶೀಲನೆಗೆ ಅನುಮತಿ ನೀಡುವಲ್ಲಿ ಚೀನಾ ವಿಳಂಬ ನೀತಿ ಅನುಸರಿಸುತ್ತಿದೆ ಎಂಬ ಟೀಕೆಗೆ ಸರ್ಕಾರ ಅಂತ್ಯ ಹಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಜ.14ರಂದು ಚೀನಾಗೆ ಬರಲಿದ್ದು, ಕೊರೊನಾವೈರಸ್ ಮೊದಲು ಕಾಣಿಸಿಕೊಂಡ ಚೀನಾದ ವುಹಾನ್ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿರುವುದಾಗಿ ಚೀನಾದ ಸರ್ಕಾರಿ ಸ್ವಾಮ್ಯದ ಸಿಜಿಟಿಎನ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಜ.14ರಂದು ತಜ್ಞರ ತಂಡ ಯಾವ ಸಮಯಕ್ಕೆ ಚೀನಾಕ್ಕೆ ಬಂದಿಳಿಯಲಿದೆ ಎಂಬ ನಿಖರವಾದ ಮಾಹಿತಿ ಇಲ್ಲ. ಆದರೆ, ನಾವು ತಜ್ಞರ ತಂಡ ಪರಿಶೀಲನೆ ನಡೆಸಲು ಬೇಕಾದ ನಾಲ್ಕು ವಿಡಿಯೊ ಕಾನ್ಫರೆನ್ಸ್ ಸೇರಿದಂತೆ ನಿಗದಿತ ವ್ಯವಸ್ಥೆಗಳನ್ನು ಮಾಡಿದ್ದೇವೆ‘ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ಉಪ ಮುಖ್ಯಸ್ಥ ಝೆಂಗ್ ಯಿಕ್ಸಿನ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಜ್ಞರ ತಂಡ ತಮ್ಮ ಪ್ರವಾಸದ ವೇಳಾಪಟ್ಟಿ ಮತ್ತು ಕಾರ್ಯಕ್ರಮದ ವಿವರಗಳನ್ನು ಅಂತಿಮಗೊಳಿಸಿದ ನಂತರ, ಚೀನಾದಲ್ಲಿರುವ ತಜ್ಞರ ತಂಡ, ವುಹಾನ್‌ಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ ಎಂದು ಝೆಂಗ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೂಸ್‌ ಅಧಾನೋಮ್ ಗೇಬ್ರೆಯೆಸ್ ಅವರು ತಜ್ಞರ ತಂಡಕ್ಕೆ ಅನುಮತಿ ನೀಡಲು ಚೀನಾ ವಿಳಂಬ ಮಾಡಿದ್ದನ್ನು ಟೀಕಿಸಿದ ನಂತರ, ಸೋಮವಾರ ಚೀನಾ ಸರ್ಕಾರ ಈ ಮಾಹಿತಿಯನ್ನು ಖಚಿತಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು