ಭಾನುವಾರ, ಜುಲೈ 3, 2022
24 °C
ವಿಶ್ವ ಆರೋಗ್ಯ ಸಂಸ್ಥೆಯ ತುರ್ತುಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ. ಮೈಕೆಲ್ ರಯಾನ್

'ಲಸಿಕೆ ಹಾಕುವ ಪ್ರಮಾಣ ಹೆಚ್ಚಾದರೆ, ರೂಪಾಂತರ ಕೊರೊನಾ ಅಪಾಯದಿಂದ ರಕ್ಷಣೆ'

ಎಪಿ Updated:

ಅಕ್ಷರ ಗಾತ್ರ : | |

Prajavani

ಜಿನೀವಾ: ‘ಕೋವಿಡ್‌ –19‘ ಲಸಿಕೆ ಹಾಕುವ ಪ್ರಕ್ರಿಯೆ ಕನಿಷ್ಠ ಶೇ 80ರಷ್ಟಾದರೂ ಪೂರ್ಣಗೊಂಡರೆ, ರೂಪಾಂತರ ಕೊರೊನಾ ಸೋಂಕಿನಿಂದ ದಿಢೀರನೆ ಉಂಟಾಗುತ್ತಿರುವ ಅಪಾಯವನ್ನು ತಪ್ಪಿಸಲು ಸಾಧ್ಯವಿದೆ‘ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಉನ್ನತಮಟ್ಟದ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ.

ಈ ಕುರಿತು  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ವಿಭಾಗದ ಮುಖ್ಯಸ್ಥ ಡಾ. ಮೈಕೆಲ್ ರಯಾನ್, ‘ಈ ಸಾಂಕ್ರಾಮಿಕ ರೋಗದಿಂದ ಹೊರಬರಲು ಇರುವ ಮಾರ್ಗವೆಂದರೆ ದೊಡ್ಡ ಪ್ರಮಾಣದಲ್ಲಿ ಹಾಗೂ ವೇಗವಾಗಿ ಲಸಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದು‘ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನೇಕ ಶ್ರೀಮಂತ ರಾಷ್ಟ್ರಗಳು ಮಕ್ಕಳು ಮತ್ತು ಹದಿಹರೆಯದವರಿಗೆ ಲಸಿಕೆ ಹಾಕಲು ಮುಂದಾಗಿವೆ. ಈ ರಾಷ್ಟ್ರಗಳಲ್ಲಿ ಕೋವಿಡ್‌ನಿಂದ ಹೆಚ್ಚು ಅಪಾಯಕ್ಕೆ ಸಿಲುಕುವ ಹಿರಿಯ ನಾಗರಿಕರು ಮತ್ತು ವಿವಿಧ ರೋಗಗಳಿಂದ ಬಳಲುತ್ತಿರುವ ಜನರಿದ್ದಾರೆ. ಇದೇ ರಾಷ್ಟ್ರಗಳು ಲಸಿಕೆಗಳ ಕೊರತೆಯಿರುವ ಬಡ ರಾಷ್ಟ್ರಗಳೊಂದಿಗೆ ಲಸಿಕೆಗಳನ್ನು ಹಂಚಿಕೊಳ್ಳಲು ಒತ್ತಡವನ್ನು ಎದುರಿಸುತ್ತಿವೆ.

ಬ್ರಿಟನ್‌ನಲ್ಲಿ ಬೃಹತ್‌ ಪ್ರಮಾಣದಲ್ಲಿ ಲಸಿಕೆ ಅಭಿಯಾನ ಮಾಡಿದ್ದರಿಂದ ಅಲ್ಲಿ ಪ್ರಕರಣಗಳ ಸಂಖ್ಯೆ ಬಹಳವಾಗಿ ಕಡಿಮೆಯಾಯಿತು. ಇತ್ತೀಚಿನ ದಿನಗಳಲ್ಲಿ ಈ ದೇಶದಲ್ಲಿ ಡೆಲ್ಟಾ ರೂಪಾಂತರ ವೈರಸ್‌ ಪ್ರಕರಣಗಳು ಕಂಡುಬಂದಿವೆ. ಇದು ಮೂಲತಃ ಭಾರತದಲ್ಲಿ ಕಾಣಿಸಿಕೊಂಡಿರುವ ವೈರಸ್‌.

‘ವಿಶ್ವದಾದ್ಯಂತ ಎಷ್ಟು ಪ್ರಮಾಣದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ದತ್ತಾಂಶಗಳು ಪೂರ್ಣ ಪ್ರಮಾಣದಲ್ಲಿ ನಿಖರವಾಗಿ ಲಭ್ಯವಾಗಿಲ್ಲ‘ ಎಂದು ಒಪ್ಪಿಕೊಂಡಿರುವ ರಿಯಾನ್, ‘ಆದರೆ, ಲಸಿಕೆ ಹಾಕುವುದರಿಂದ ಖಂಡಿತವಾಗಿಯೂ ಶೇ 80ರಷ್ಟು ಪ್ರಮಾಣದಲ್ಲಿ ಸಾಂಕ್ರಾಮಿಕ ರೋಗದಿಂದ ಪಾರಾಗಬಹುದು‘ ಎಂದು ಹೇಳಿದ್ದಾರೆ.

‘ಆದ್ದರಿಂದ ಸುರಕ್ಷಿತ ಮಟ್ಟದಲ್ಲಿರಲು ಸಾಕಷ್ಟು ಹೆಚ್ಚಿನ ಪ್ರಮಾಣದ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಅಗತ್ಯವಾಗಿದೆ‘ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು