ಶನಿವಾರ, ಸೆಪ್ಟೆಂಬರ್ 18, 2021
24 °C

'ವಿಶ್ವದ ಅತ್ಯಂತ ಚಿಕ್ಕ ಮಗು' 13 ತಿಂಗಳ ಬಳಿಕ ಆಸ್ಪತ್ರೆಯಿಂದ ಮನೆಗೆ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಸಿಂಗಪುರ: ವಿಶ್ವದ ಅತ್ಯಂತ ಚಿಕ್ಕ ಮಗುವನ್ನು 13 ತಿಂಗಳ ಬಳಿಕ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದೆ.

ಕಳೆದ ವರ್ಷ ಜೂನ್ 9 ರಂದು ಸಿಂಗಪುರದ ನ್ಯಾಷನಲ್ ಯೂನಿವರ್ಸಿಟಿ ಹಾಸ್ಪಿಟಲ್ (ಎನ್‌ಯುಎಚ್) ನಲ್ಲಿ ಜನಿಸಿದ್ದ ಹೆಣ್ಣು ಮಗು ಕ್ವೆಕ್ ಯು ಕ್ಸುವಾನ್ ಕೇವಲ 212 ಗ್ರಾಂ ತೂಕ ಹೊಂದಿತ್ತು. ಕೇವಲ 25 ವಾರಗಳಿಗೆ ತಾಯಿಗೆ ಹೆರಿಗೆಯಾಗಿ ಈ ಮಗುವಿನ ಜನನವಾಗಿತ್ತು ಎಂದು ಬಿಬಿಸಿ ವರದಿ ಮಾಡಿದೆ. ನಾಲ್ಕು ತಿಂಗಳು ಮುಂಚಿತವಾಗಿ ಜನಿಸಿದ್ದ ಮಗು ಕೇವಲ 24 ಸೆಂ.ಮೀ ಉದ್ದವಿತ್ತು.

ಅತ್ಯಂತ ಸಣ್ಣದಾಗಿದ್ದ ಮಗು ‘ಕ್ವೆಕ್ ಯು ಕ್ಸುವಾನ್’ಳನ್ನು ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ತೆಗೆದುಕೊಂಡು ಹೋದಾಗ ಕರ್ತವ್ಯದಲ್ಲಿದ್ದ ನರ್ಸ್ ತನ್ನ ಕಣ್ಣುಗಳನ್ನು ತಾನೇ ನಂಬಲಿಲ್ಲ. ‘ನಾನು ನಿಜಕ್ಕೂ ಆಘಾತಕ್ಕೊಳಗಾಗಿದ್ದೇನೆ. ಹಾಗಾಗಿ, ನಾನು ಪ್ರಾಧ್ಯಾಪಕರೊಂದಿಗೆ ಮಾತನಾಡಿದೆ ಮತ್ತು ಅದನ್ನು ನಂಬಬಹುದೇ ಎಂದು ಕೇಳಿದೆ’ಎಂದು ಎನ್‌ಯುಎಚ್‌ನ ನರ್ಸ್ ಜಾಂಗ್ ಸುಹೆ ಹೇಳಿದರು. ‘ನರ್ಸ್ ಆಗಿ ನನ್ನ 22 ವರ್ಷಗಳ ವೃತ್ತಿ ಜೀವನದಲ್ಲಿ, ನಾನು ಅಂತಹ ಚಿಕ್ಕ ನವಜಾತ ಶಿಶುವನ್ನು ನೋಡಿಲ್ಲ’ ಎಂದು ಅವರು ಹೇಳಿದ್ದಾರೆ.

ಮಗು ಕ್ವೆಕ್ ಯು ಕ್ಸುವಾನ್ ಆಸ್ಪತ್ರೆಯಲ್ಲಿ 13 ತಿಂಗಳುಗಳ ಕಾಲ ಚಿಕಿತ್ಸೆಯನ್ನು ಪಡೆದಿದೆ. ಕೆಲವು ವಾರಗಳ ಕಾಲ ವೆಂಟಿಲೇಟರ್‌ನಲ್ಲಿ ಕಳೆದಿದ್ದು, ಈಗ 6.3 ಕೆಜಿಯಷ್ಟು ತೂಕವನ್ನು ಹೊಂದಿದೆ. ಸದ್ಯ ವಿಶ್ವದಲ್ಲಿ ಬದುಕುಳಿದ ಅತ್ಯಂತ ಚಿಕ್ಕ ಮಗು ಕ್ವೆಕ್ ಯು ಕ್ಸುವಾನ್ ಎಂದು ನಂಬಲಾಗಿದೆ

ಈ ಕುರಿತಂತೆ ಹೆರಿಗೆ ಮಾಡಿಸಿದ್ದ ವೈದ್ಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಹುಟ್ಟಿದ ಸಮಯದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಮಗು ಕಡಿಮೆ ತೂಕ ಹೊಂದಿತ್ತು ಎಂದು ಹೇಳಿದ್ದಾರೆ. ‘ಮಗು ಕ್ವೆಕ್ ಯು ಕ್ಸುವಾನ್ ತೂಕ 400, 500 ಅಥವಾ 600 ಗ್ರಾಂ ಎಂದು ನಾವು ನಿರೀಕ್ಷಿಸಿದ್ದೆವು, ಆದರೆ, ಅವಳು ಕೇವಲ 212 ಗ್ರಾಂ ತೂಕವಿದ್ದಳು’ ಎಂದು ಎನ್‌ಯುಎಚ್‌ನ ನಿಯೋನಾಟಾಲಜಿ ವಿಭಾಗದ ಹಿರಿಯ ಸಲಹೆಗಾರರು ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು