ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ಬರುವವರ ಕ್ವಾರಂಟೈನ್ ನಿರ್ಬಂಧ ಅಂತ್ಯ

ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಠಿಣ ನಿಯಮ ತೆರವು
Last Updated 8 ಜನವರಿ 2023, 11:13 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದಲ್ಲಿ ಕೋವಿಡ್ ಪಿಡುಗು ಕಂಡುಬಂದ ಬಳಿಕ ಕಳೆದ ಮೂರು ವರ್ಷಗಳಿಂದ ಇದ್ದಂತಹ ಕ್ವಾರಂಟೈನ್‌ ಕಡ್ಡಾಯ ನಿಯಮವನ್ನು ಭಾನುವಾರದಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ದೇಶಕ್ಕೆ ಬರಲು ಕಾತರವಾಗಿದ್ದ ಸಾವಿರಾರು ಮಂದಿ ತಾಯ್ನಾಡಿಗೆ ಆಗಮಿಸಿ ಸಂಭ್ರಮಿಸಿದರು.

ಚೀನಾದಲ್ಲಿ ಕೋವಿಡ್‌ ಮತ್ತೆ ಉಲ್ಪಣಿಸಿದ್ದು, ಇದೇ ಸಂದರ್ಭದಲ್ಲಿ ಹೊಸ ವರ್ಷದ ಸಂಭ್ರಮವೂ ಬಂದಿದೆ. ಚೀನಾದಲ್ಲಿ ಭಾರಿ ಪ್ರಮಾಣದಲ್ಲಿ ಕೋವಿಡ್‌ ವ್ಯಾಪಿಸಿರುವುದರಿಂದ ಹಲವು ದೇಶಗಳು ಚೀನಾದಿಂದ ಬರುವ ಜನರಿಗೆ ನಿರ್ಬಂಧ ಹೇರಿದ ಸಂದರ್ಭದಲ್ಲೇ ಚೀನಾದಿಂದ ಈ ಪ್ರಯಾಣ ನಿರ್ಬಂಧ ತೆರವು ಘೋಷಣೆಯಾಗಿದೆ.

ಭಾನುವಾರ ನಸುಕಿನಲ್ಲಿ ಟೊರೆಂಟೊ ಮತ್ತು ಸಿಂಗಪುರದಿಂದ ಬಂದ, 387 ಪ್ರಯಾಣಿಕರಿದ್ದ ಎರಡು ವಿಮಾನಗಳು ದಕ್ಷಿಣ ಗ್ವಾಂಗ್‌ಡಂಗ್ ‍ಪ್ರಾಂತ್ಯದ ಗ್ವಾಂಗ್‌ಝೌ ಮತ್ತುಇ ಶೆಂಝೆನ್‌ ವಿಮಾನನಿಲ್ದಾಣಗಳಲ್ಲಿ ಬಂದಿಳಿದವು ಎಂದು ಸರ್ಕಾರಿ ಸ್ವಾಮ್ಯದ ಸಿಜಿಟಿಎನ್‌ ಟಿವಿ ವರದಿ ಮಾಡಿದೆ.

ಬೀಜಿಂಗ್‌, ಟಿಯಾಂಜಿನ್‌, ಕ್ಷಿಯಾಮಿನ್‌ಗಳ ವಿಮಾನನಿಲ್ದಾಣಗಳಲ್ಲಿ ಸಹ ಪ್ರಯಾಣಿಕರ ದೊಡ್ಡ ಸರದಿ ಕಂಡುಬಂತು.

ಹಾಂಕಾಂಗ್‌ನಿಂದ ಸಹ ಚೀನಾಕ್ಕೆ ಪ್ರಯಾಣವನ್ನು ಮುಕ್ತಗೊಳಿಸಲಾಗಿದೆ. ಚೀನಾದ ಇತರ ಗಡಿಗಳಲ್ಲಿ ಸಹ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಕಳೆದ ತಿಂಗಳು ಚೀನಾದ ಕಟ್ಟುನಿಟ್ಟಿನ ಕೊರೊನಾ ನಿರ್ಬಂಧ ವಿರುದ್ಧ ಜನರು ದಂಗೆ ಎದ್ದಿದ್ದರು. ಬಳಿಕ ತನ್ನ ಕಠಿಣ ನಿಲುವು ಸಡಿಲಿಸಿದ್ದ ಚೀನಾ, ಜನವರಿ 7ರ ನಂತರ ಪ್ರಯಾಣ ನಿರ್ಬಂಧವನ್ನು ತೆರವುಗೊಳಿಸುವ ಭರವಸೆ ನೀಡಿತ್ತು. ದೇಶಕ್ಕೆ ಹೊರಡುವ 48 ಗಂಟೆಗಳ ಮೊದಲು ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡರೆ ಸಾಕು ಎಂದು ಹೇಳಿತ್ತು.

ಕೊರೊನಾ ಸಂಬಂಧಿತ ಪ್ರಕರಣಗಳಲ್ಲಿ ಬಂಧಿತರಾಗಿದ್ದ ನೂರಾರು ಜನರನ್ನು ಬಿಡುಗಡೆಗೊಳಿಸಲು ಚೀನಾ ಸರ್ಕಾರ ಶನಿವಾರ ಆದೇಶ ನೀಡಿದೆ.

ಜಗತ್ತಿನಿಂದ ದೂರ: ಚೀನಾದ ವುಹಾನ್‌ನಿಂದ ಕೋವಿಡ್ ಉಗಮವಾಯಿತು ಎಂಬುದು ಈಗಾಗಲೇ ಸಾಬೀತಾಗಿದ್ದು, ಕೋವಿಡ್ ನಿಯಂತ್ರಿಸಲು ತಾನು ಅಗತ್ಯದ ಎಲ್ಲಾ ಕ್ರಮಗಳನ್ನೂ ಕೈಗೊಳ್ಳುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಕಳೆದ ಮೂರು ವರ್ಷಗಳಿಂದ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಇದರಿಂದಾಗಿ ಚೀನಾದ ಪ್ರಜೆಗಳು ಜಗತ್ತಿನ ಇತರ ಭಾಗಗಳಿಂದ ಪ್ರತ್ಯೇಕಗೊಂಡಂತಹ ಭಾವದಲ್ಲಿದ್ದರು.

ಈ ಬಾರಿ ಹೊಸ ವರ್ಷದ 40 ದಿನಗಳ ಸಂಭ್ರಮಾಚರಣೆ ಅವಧಿಯಲ್ಲಿ 200 ಕೋಟಿ ಪ್ರಯಾಣಗಳು ದಾಖಲಾಗುವ ನಿರೀಕ್ಷೆ ಇದೆ. ಕಳೆದ ವರ್ಷದ ಜನರ ಸಂಚಾರಕ್ಕೆ ಹೋಲಿಸಿದರೆ ಇದು ದುಪ್ಪಟ್ಟು ಆಗಿರಲಿದ್ದು, 2019ಕ್ಕೆ ಹೋಲಿಸಿದರೆ ಶೇ 70ರಷ್ಟು ಆಗಿರಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT