ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಾ ಅವಂತ್‌–ಗಾರ್ಡ್‌ಗೆ ನ್ಯಾಷನಲ್‌ ಸ್ಪೆಲ್ಲಿಂಗ್ ಬೀ ಚಾಂಪಿಯನ್‌ ಕಿರೀಟ!

93 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಆಫ್ರಿಕಾದ ಸಂಜಾತೆಗೆ ಜಯ
Last Updated 9 ಜುಲೈ 2021, 6:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಹದಿನಾಲ್ಕರ ಹರೆಯದ ಆಫ್ರಿಕಾ ಮೂಲದ ವಿದ್ಯಾರ್ಥಿನಿ ಜೈಲಾ ಅವಂತ್‌–ಗಾರ್ಡ್‌ 2021ನೇ ಸಾಲಿನ ‘ಸ್ಕ್ರಿಪ್ಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಪ್ರತಿಷ್ಠಿತ ಸ್ಪರ್ಧೆಯ 93 ವರ್ಷಗಳ ಇತಿಹಾಸದಲ್ಲೇ ಆಫ್ರಿಕಾ ಮೂಲದ ಸ್ಪರ್ಧಿಯೊಬ್ಬರು ಮೊದಲಬಾರಿಗೆ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ, ಲೂಸಿಯಾನದ ಮೊದಲ ನಿವಾಸಿಯಾಗಿದ್ದಾರೆ.

ಹಲವು ವರ್ಷಗಳಿಂದ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದ ಭಾರತೀಯ– ಅಮೆರಿಕನ್ನರು ಈ ಬಾರಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಿದೆ.

ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡಿದ್ದ ಭಾರತೀಯ ಅಮೆರಿಕನ್ ಸ್ಪರ್ಧಿಗಳಾದ ಸ್ಯಾನ್‌ಫ್ರಾನ್ಸಿಸ್ಕೊದ 12 ವರ್ಷದ ಚೈತ್ರಾ ತುಮ್ಮಲಾ ಎರಡನೇ ಮತ್ತು ನ್ಯೂಯಾರ್ಕ್‌ನ 13 ವರ್ಷದ ಭಾವನಾ ಮದಿನಿ ಮೂರನೇ ಸ್ಥಾನ ಪಡೆದಿದ್ದಾರೆ. ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರು ಈ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.

8ನೇ ತರಗತಿಯ ವಿದ್ಯಾರ್ಥಿನಿ ಜೈಲಾ ಹಾಗೂ ಒಂಬತ್ತು ಮಂದಿ ಭಾರತೀಯ– ಅಮೆರಿಕನ್‌ ಸ್ಪರ್ಧಿಗಳು ಸೇರಿದಂತೆ ಒಟ್ಟು 11 ಮಂದಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. ಅವಂತ್ ಗಾರ್ಡ್‌ ‘ನ್ಯಾಷನಲ್ ಸ್ಪೆಲ್ಲಿಂಗ್‌ ಬೀ 2021‘ ಪ್ರಶಸ್ತಿ ತನ್ನದಾಗಿಸಿಕೊಂಡರು. ಈ ಸ್ಪರ್ಧೆಯ ಮೊದಲ ಬಹುಮಾನ ₹37 ಲಕ್ಷ(50ಸಾವಿರ ಡಾಲರ್‌).

ಫ್ಲಾರಿಡಾದ ಒರ್ಲ್ಯಾಂಡೊದಲ್ಲಿರುವ ಇಎಸ್‌ಪಿಎನ್‌ ವೈಡ್‌ ವರ್ಲ್ಡ್‌ ಆಫ್‌ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ನಲ್ಲಿ ‘ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ 2021‘ ಚಾಂಪಿಯನ್‌ಷಿಪ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘2021ರ ಸ್ಕ್ರಿಪ್ಸ್‌ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಆಫ್ರಿಕಾದ ಸಂಜಾತೆ ಜೈಲಾ ಅವಂತ್‌ –ಗಾರ್ಡೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಹುಮಾನಿತರೆಲ್ಲರಿಗೂ ಅಭಿನಂದನೆಗಳು. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಶುಭಾಶಯಗಳು. ನಿಘಂಟು ನೋಡುವುದಕ್ಕೆ ಆಸಕ್ತಿ ತೋರುತ್ತಿರುವ ಎಲ್ಲರಿಗೂ ಅಭಿನಂದನೆಗಳು‘ ಎಂದು ಸ್ಪರ್ಧೆ ಆಯೋಜಿಸುವ ನ್ಯಾಷನಲ್‌ ಸ್ಪೆಲ್ಲಿಂಗ್‌ ಬೀ ಸಂಸ್ಥೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT