ಕ್ಷೀಣಿಸುತ್ತಿದೆ ಪುಟ್ಟ ಹಕ್ಕಿಯ ಸಂತತಿ

ಬುಧವಾರ, ಏಪ್ರಿಲ್ 24, 2019
27 °C
ವಿಶ್ವ ಗುಬ್ಬಚ್ಚಿ ದಿನಾಚರಣೆ ಇಂದು; ಕಾಳಜಿಯ ಮನಸ್ಸು ಹೆಚ್ಚಲಿ

ಕ್ಷೀಣಿಸುತ್ತಿದೆ ಪುಟ್ಟ ಹಕ್ಕಿಯ ಸಂತತಿ

Published:
Updated:
Prajavani

ವಿಜಯಪುರ: ಎಲ್ಲೆಡೆ ಕಂಡುಬರುವ ಪುಟ್ಟ ಪಕ್ಷಿ ಗುಬ್ಬಚ್ಚಿ. ಗುಬ್ಬಿ, ಗುಬ್ಬಚ್ಚಿ ಎಂದೇ ಕರೆಯುವುದು ವಾಡಿಕೆ. ಜನ ವಸತಿ ಪ್ರದೇಶಗಳಲ್ಲೇ ಗೂಡು ಕಟ್ಟಿಕೊಂಡು ವಾಸ ಮಾಡುವ ಹಕ್ಕಿಯಿದು.

ದಶಕಗಳ ಹಿಂದೆ ಮನೆಗಳ ಮುಂದೆ ಮುಂಜಾನೆ–ಮುಸ್ಸಂಜೆ ಚಿಂವ್‌, ಚಿಂವ್‌ ಕಲರವ ಮಾಡುತ್ತಿದ್ದ ಗುಬ್ಬಿಗಳ ಗುಂಪು ಇದೀಗ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂತತಿಯೂ ಕ್ಷೀಣಿಸುತ್ತಿದೆ. ಇದು ಪಕ್ಷಿ ಪ್ರೇಮಿಗಳಲ್ಲಿ ಬೇಸರ ಮೂಡಿಸುತ್ತಿದೆ.

ಗುಬ್ಬಚ್ಚಿಯನ್ನು ನೋಡುತ್ತಿದ್ದಂತೆಯೇ ಹೆಣ್ಣು–ಗಂಡು ಪ್ರಭೇದವನ್ನು ಸುಲಭವಾಗಿ ಗುರುತಿಸಬಹುದು. ಗಂಡು ಗುಬ್ಬಿಯ ಕುತ್ತಿಗೆ ಕಪ್ಪಾಗಿ ಇರುತ್ತದೆ. ಹೆಣ್ಣು ಗುಬ್ಬಿಯ ಕುತ್ತಿಗೆ ಸಾಮಾನ್ಯ ಬಿಳುಪು ಬಣ್ಣದಾಗಿರುತ್ತದೆ. ಒಂದೊಂದು ಗುಬ್ಬಿ 24 ಗ್ರಾಂನಿಂದ 40 ಗ್ರಾಂ ತೂಗುತ್ತವೆ. ಐಯುಸಿಎನ್ ಸಂಘಟನೆಯ ಮಾಹಿತಿಯಂತೆ ಜಗತ್ತಿನಲ್ಲಿ ಅಂದಾಜು 90ರಿಂದ 131 ಕೋಟಿ ಗುಬ್ಬಿಗಳಿವೆ ಎಂಬುದು ತಿಳಿಯಲಿದೆ.

‘ಗುಬ್ಬಿ ಸಾಮಾನ್ಯವಾಗಿ ಕಂಡು ಬರುವ ಪಕ್ಷಿ ಪ್ರಭೇದ. ವಿಜಯಪುರ ಜಿಲ್ಲೆಯ ಎಲ್ಲಾ ಭಾಗದಲ್ಲೂ ನೆಲೆ ಕಂಡುಕೊಂಡಿವೆ. ಒಂದು ಹಕ್ಕಿ ಮೂರು ವರ್ಷ ಜೀವಿತಾವಧಿ ಹೊಂದಿದೆ. ಜನ್ಮ ಸ್ಥಳದ ಸುತ್ತಲಿನ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹಾರಾಟ ನಡೆಸಲಿದೆ. ಏಪ್ರಿಲ್‌ನಿಂದ ಆಗಸ್ಟ್‌ವರೆಗೂ ಸಂತಾನೋತ್ಪತ್ತಿಯಲ್ಲಿ ಸಕ್ರಿಯವಾಗಲಿವೆ ಜೋಡಿ ಗುಬ್ಬಿಗಳು’ ಎನ್ನುತ್ತಾರೆ ಐದಾರು ವರ್ಷಗಳಿಂದ ಪಕ್ಷಿಗಳ ಕುರಿತು ಅಧ್ಯಯನ ನಡೆಸುತ್ತಿರುವ ವಿಜಯಪುರದ ರಮೇಶ ದೇಸಾಯಿ.

‘ವಿಜ್ಞಾನಿಗಳ ಶೋಧದ ಪ್ರಕಾರ ಅತಿಯಾದ ಮೊಬೈಲ್ ಸ್ಥಾವರಗಳ ವಿಕಿರಣಗಳಿಂದಲೂ ಗುಬ್ಬಚ್ಚಿಗಳ ಸಂತತಿಗೆ ಹಾನಿಯಾಗಿದೆ. ಕಾಂಕ್ರೀಟ್ ಕಾಡು ಈಚೆಗೆ ಹಳ್ಳಿಗಳನ್ನು ಪ್ರವೇಶಿಸಿದ್ದರಿಂದ ಗೂಡು ಕಟ್ಟಲು ನೆಲೆಯೇ ಸಿಗದಾಗಿದೆ ಗುಬ್ಬಿ ಕುಟುಂಬಕ್ಕೆ.’

‘ಬೇಸಿಗೆ ದಿನಗಳಲ್ಲಿ ನೀರು–ಆಹಾರವೇ ಸಿಗುತ್ತಿಲ್ಲ. ಈ ಹಿಂದೆ ವರ್ಷವಿಡಿ ಮನೆ ಮುಂಭಾಗ ಧಾನ್ಯಗಳನ್ನು ಒಣಗಿಸುವ ಪ್ರಕ್ರಿಯೆ ನಡೆಯುತ್ತಿತ್ತು. ಇದೀಗ ಪ್ಯಾಕೇಟ್‌ ಫುಡ್‌ ಬಂದ ಬಳಿಕ, ಗುಬ್ಬಿಗಳಿಗೆ ಆಹಾರವೇ ಸಿಗದಾಗಿದೆ.’

‘ಇನ್ನೂ ಹೊಲಗಳಲ್ಲೂ ಬೆಳೆ ಪದ್ಧತಿ ಬದಲಾಗಿದೆ. ಜೋಳ, ಕಡಲೆ, ಹೆಸರುಕಾಳು, ಸೂರ್ಯಕಾಂತಿ ಸ್ಥಾನವನ್ನು ಕಬ್ಬು ಆಕ್ರಮಿಸುತ್ತಿದೆ. ಹಸಿರುಮನೆ ನಿರ್ಮಾಣಗೊಳ್ಳುತ್ತಿವೆ. ಎಲ್ಲೂ ಸೂಕ್ತ ಆಹಾರ ಸಿಗದಿರುವುದು, ಅತಿಯಾದ ರಾಸಾಯನಿಕಗಳ ಬಳಕೆಯೂ ಸಹ ಗುಬ್ಬಚ್ಚಿಗಳ ಸಂತತಿ ಕ್ಷೀಣಿಸಲು ಪ್ರಮುಖ ಕಾರಣವಾಗಿವೆ’ ಎನ್ನುತ್ತಾರೆ ಪಕ್ಷಿ ಪ್ರೇಮಿ ರಮೇಶ ದೇಸಾಯಿ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !