ಮಂಗಳವಾರ, ಮಾರ್ಚ್ 2, 2021
31 °C

ಹಟ ಬಿಡಿ, ಚಟ ಬಿಡಿ, ಪ್ರಾಣ ಬಿಡ್ಬೇಡಿ

ಶಶಿಕುಮಾರ್‌ ಸಿ. Updated:

ಅಕ್ಷರ ಗಾತ್ರ : | |

ಪರೀಕ್ಷೆಯಲ್ಲಿ ಫೇಲಾಗುತ್ತೇನೆಂಬ ಅಂಜಿಕೆ, ಫೇಲಾದೆನೆಂಬ ನೋವು, ಪ್ರೇಮ ವೈಫಲ್ಯ, ಆತ್ಮೀಯರಿಂದ ದೂರವಾದ ನೋವು, ಅವಮಾನ, ಕೌಟುಂಬಿಕ ಕಲಹ, ತಾನು ಅಂದು ಕೊಂಡಿದ್ದು ಆಗಲಿಲ್ಲ ಎಂಬ ನಿರಾಸೆ, ಮಾನಸಿಕ ಒತ್ತಡ, ಸೋಲು, ವ್ಯಸನ ಹಾಗೂ ಖಿನ್ನತೆ...

ಇವೆಲ್ಲವೂ ಆತ್ಮಹತ್ಯೆಗೆ ಪ್ರೇರಣೆ ನೀಡುವಂತಹ ಅಂಶಗಳು. ಎಳೆ ಮನಸುಗಳ ಮೇಲೆ ಇವು ಅತ್ಯಂತ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ. ಈ ಸಮಸ್ಯೆಗಳಿಗೆ ಆತ್ಮಹತ್ಯೆ ಹೊರತು ಪಡಿಸಿದಂತೆ ಬೇರೆ ದಾರಿಯೇ ಇಲ್ಲವೆಂಬ ತಪ್ಪು ಗ್ರಹಿಕೆಯೂ ಅವರಲ್ಲಿ ಗಟ್ಟಿಯಾಗಿ ನೆಲೆಯೂರಿದೆ.

ಈ ಎಳೆ ಮನಸುಗಳ ತಲ್ಲಣ ಗುರುತಿಸಿ, ಅವರ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ಅರ್ಥೈಸಿ, ಅವರ ಖಿನ್ನತೆಗೆ ಚಿಕಿತ್ಸೆ ಕೊಡಿಸಿ ಆತ್ಯಹತ್ಯೆಯ ಹಾದಿ ಹಿಡಿಯದಂತೆ ಜಾಗೃತಿ ಮೂಡಿಸಲು ಸೆ. 10 ಅನ್ನು ‘ವಿಶ್ವ ಆತ್ಮಹತ್ಯೆ ತಡೆ ದಿನ’ವನ್ನಾಗಿ ವಿಶ್ವಸಂಸ್ಥೆ ಘೋಷಿಸಿದೆ.

ಅದರಂತೆ, ಮಲ್ಲೇಶ್ವರದ ‘ಸ–ಮುದ್ರ ಫೌಂಡೇಷನ್’ ಸಹ, ಆತ್ಮಹತ್ಯೆ ತಡೆಗಟ್ಟುವ ಸಲುವಾಗಿ ಎಂಟು ವರ್ಷಗಳಿಂದ ಯುವ ಜನರಲ್ಲಿ ಜಾಗೃತಿ ಮೂಡಿಸುತ್ತಲೇ ಬಂದಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ ನೂರಾರು ಯುವಕ– ಯವತಿಯರ ಮನಃಪರಿವರ್ತಿಸಿ, ಅವರು ಚೆಂದದ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.

ಇದರ ಸಂಸ್ಥಾಪಕಿ ಭಾರತಿ ಸಿಂಗ್. ಆಪ್ತಸಮಾಲೋಚಕಿಯೂ ಆಗಿರುವ ಅವರು, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿ ರುವವರೊಡನೆ ಖುದ್ದು ಸಮಾಲೋಚಿಸಿ, ಅವರ ನಿರ್ಧಾರ ಬದಲಿಸುತ್ತಿದ್ದಾರೆ.

‘ಕೇಸ್ ಸ್ಟಡಿ’ ಒಂದರ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಮಾತು ಆರಂಭಿಸಿದ ಭಾರತಿ ಸಿಂಗ್, ‘‘ಯುವಕನೊಬ್ಬ, ತಾನು ಹುಟ್ಟಿದಾಗಲೇ ತಾಯಿ ಕಳೆದುಕೊಂಡ. ಅದೇ ಕಾರಣಕ್ಕೆ ಆತನ ಕುಟುಂಬಸ್ಥರೆಲ್ಲರೂ ‘ನೀನು ನತದೃಷ್ಟ. ನೀನು ಹುಟ್ಟಿ ನಿನ್ನ ತಾಯಿಯನ್ನು ಕೊಂದೆ’ ಎಂದು ಅವನನ್ನು ಜರಿಯುತ್ತಿದ್ದರು. ಅವನ ಮಲತಾಯಿಯೂ ಅದೇ ಧೋರಣೆ ಹೊಂದಿದ್ದಳು. ಹೀಗಾಗಿ, ಆತ ಖಿನ್ನತೆಗೆ ಜಾರಿದ್ದ’’ ಎಂದರು.

‘‘ಇದರಿಂದ ಆ ಬಾಲಕ ‘ನಾನೇ ಸರಿಯಿಲ್ಲ. ನನ್ನಿಂದಲೇ ಅಮ್ಮ ಸತ್ತಳು. ನನ್ನಿಂದ ಯಾರಿಗೂ ಒಳಿತಾಗಲ್ಲ. ನಾನು ಬದುಕಲೇ ಬಾರದು’ ಎಂದು ನಿರ್ಧರಿಸಿ, ಆತ್ಯಹತ್ಯೆಗೆ 11 ಬಾರಿ ಪ್ರಯತ್ನಿಸಿದ್ದ. ಆ ಪ್ರಕರಣ ನನ್ನ ಬಳಿಗೆ ಬಂತು. ಅವನಿಗೆ ಸತತವಾಗಿ ಕೌನ್ಸೆಲಿಂಗ್ ಮಾಡಿದೆ. ಜೀವನ, ಜೀವಿಸುವುದರ ಮಹತ್ವವನ್ನು ಅವನಿಗೆ ತಿಳಿಸಿದೆ. ವಾಸ್ತವದ ಬಗ್ಗೆ ಅರಿವು ಮೂಡಿಸಿದೆ. ಸಾಯಬೇಕು ಎಂದು ನಿರ್ಧರಿಸಿದ್ದ  ಆತ ಈಗ ಒಳ್ಳೆ ಕಡೆ ಕೆಲಸ ಮಾಡುತ್ತಿದ್ದಾನೆ’’ ಎಂದು ಮಾಹಿತಿ ನೀಡಿದರು.

‘2014–15ರ ಎನ್‌ಸಿಆರ್‌ಬಿ ಅಂಕಿ–ಅಂಶದ ಪ್ರಕಾರ ನಗರದಲ್ಲಿ 2,264 ಯುವ ಜನರು ನಾನಾ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ವರ್ಷ ರಾಜ್ಯದಲ್ಲಿ 10,786 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2014 ರಿಂದ 2016ರಲ್ಲಿ ರಾಜ್ಯದಾದ್ಯಂತ 26,476 ಯುವ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟು ಮಂದಿಯ ಸಾವಿಗೆ, ಖಿನ್ನತೆ, ಭಯ, ಕಲಹ, ವ್ಯಸನ, ಆತಂಕ, ಸೋಲು, ನಿರಾಸೆ, ನೋವು ಹಾಗೂ ಮಾನಸಿಕ ಒತ್ತಡ ಕಾರಣ’ ಎನ್ನುತ್ತಾರೆ ಅವರು.

ಆತ್ಮಹತ್ಯೆ ಯೋಚನೆಗೆ ಮೂಲ ಕಾರಣ ಖಿನ್ನತೆ. ಪೋಷಕರು ತಮ್ಮ ಮಕ್ಕಳ ಖಿನ್ನತೆ ಹಾಗೂ ಮಾನಸಿಕ ಒತ್ತಡದಂತಹ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಚಿಕಿತ್ಸೆ ಕೊಡಿಸಬೇಕು. ಆದರೆ, ಅಂಜಿಕೆ ಸೇರಿದಂತೆ ಇತರೆ ಕಾರಣಗಳಿಂದ ಫೋಷಕರು ಅದಕ್ಕೆ ಮುಂದಾಗುತ್ತಿಲ್ಲ. ಮೊದಲು ಈ ಮನೋಭಾವ ಬದಲಾದರೆ, ಆತ್ಮಹತ್ಯೆ ಪ್ರಕರಣಗಳು ಕ್ಷೀಣಿಸುತ್ತವೆ ಎಂಬುದು ಅವರು ನೀಡುವ ಸಲಹೆ.

‘ಆರದಿರಲಿ ಬೆಳಕು’ ಪ್ರದರ್ಶನ ನಾಳೆ

ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ಮೈಕ್ ಹಿಡಿದು ಭಾಷಣ ಮಾಡಿ ಬೊಬ್ಬೆ ಹೊಡೆದರೆ ಅದು ಕಾರ್ಯರೂಪಕ್ಕೆ ಬರುವುದಿಲ್ಲ. ನಾಟಕದ ಮೂಲಕ ಆ ಬಗ್ಗೆ ಜಾಗೃತಿ ಮೂಡಿಸಿದರೆ ಪರಿಣಾಮ ಬೀರಬಲ್ಲದು ಎನಿಸಿ ‘ಆರದಿರಲಿ ಬೆಳಕು’ ನಾಟಕದ ಮೊರೆ ಹೋಗಿದೆ ಸ–ಮುದ್ರ ಫೌಂಡೇಷನ್.

ಯುವ ಮನಸುಗಳ ತಲ್ಲಣಕ್ಕೆ ಪರಿಹಾರ ಕಂಡುಕೊಳ್ಳುವ ವಿಧಾನವನ್ನು ಕಥೆಯಾಗಿ, ಬಸವರಾಜ ಸೂಳೇರಿಪಾಳ್ಯ ಅವರು ಹೆಣೆದಿದ್ದಾರೆ. ಅದನ್ನು ದೃಶ್ಯರೂಪಕ್ಕೆ ನಿರ್ದೇಶಕ ಕೆಎಸ್‌ಡಿಎಲ್ ಚಂದ್ರು ಅವರು ತರುತ್ತಿದ್ದಾರೆ. ಕಥೆಯ ಪರಿಕಲ್ಪನೆ ಭಾರತಿ ಸಿಂಗ್ ಅವರದ್ದು.

ಸಣ್ಣ ಸಣ್ಣ ವಿಚಾರಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಪ್ರವೃತ್ತಿ ಯುವ ಸಮುದಾಯದಲ್ಲಿ ಹೆಚ್ಚಾಗುತ್ತಿದೆ. ಇದು ಸಾಮಾಜಿಕ ಸಮಸ್ಯೆಯಂತೆ ರೂಪುಗೊಂಡಿದೆ. ಇದರ ವಿರುದ್ಧ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿರುವ ಸ-ಮುದ್ರ ಫೌಂಡೇಷನ್ ಯವ ಕನಸುಗಳ ಆಶಾಕಿರಣ. ಈ ಬಾರಿಯ ವಿಶ್ವ ಆತ್ಮಹತ್ಯೆ ದಿನವನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ ಈ ನಾಟಕವನ್ನು ಆಯೋಜಿಸಿದೆ ಎನ್ನುತ್ತಾರೆ ‘ಆರದಿರಲಿ ಬೆಳಕು’ ನಾಟಕದ ನಿರ್ದೇಶಕ ಕೆಎಸ್‌ಡಿಎಲ್ ಚಂದ್ರು. 

ನಾಟಕ ಪ್ರದರ್ಶನ: ಮಂಗಳವಾರ ಬೆಳಿಗ್ಗೆ 10 ಗಂಟೆಗೆ

ಸ್ಥಳ: ಕುವೆಂಪು ಸಭಾಂಗಣ, ರೇವಾ ವಿಶ್ವವಿದ್ಯಾಲಯ, ಯಲಹಂಕ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು