ಜ್ಞಾನ ಸಂಗ್ರಹವೇ ಕಲಾವಿದನ ಆಸ್ತಿ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಜ್ಞಾನ ಸಂಗ್ರಹವೇ ಕಲಾವಿದನ ಆಸ್ತಿ

Published:
Updated:
Prajavani

ಯಕ್ಷಗಾನ ಕ್ಷೇತ್ರ ಬಹಳಷ್ಟು ವಿಸ್ತಾರವಾಗಿ ಹೊಸ ಪ್ರೇಕ್ಷಕರ ಮುಂದೆ ಅರಳಿಕೊಳ್ಳುತ್ತ ಇದೆ. ಬಯಲಾಟ, ಸಣ್ಣ ಮಟ್ಟಿನ ಪ್ರದರ್ಶನ, ತಾಳಮದ್ದಳೆ ಕೂಟಗಳ ಆಯೋಜನೆಯ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ಹೊಸತಲೆಮಾರಿನ ಕಲಾವಿದರು ಪಾತ್ರವನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುವುದಿಲ್ಲ ಎನ್ನುವುದು ಇತ್ತೀಚೆಗಿನ ದಿನಗಳಲ್ಲಿ ಕೇಳಿಬರುತ್ತಿರುವ ಆರೋಪ. ಧಾವಂತದ ಬದುಕಿನಲ್ಲಿ ಅದು ಸ್ವಲ್ಪ ಕಷ್ಟವೂ ಹೌದು. ಆದರೆ ಸಿದ್ಧತೆ ಮಾಡಿಕೊಳ್ಳುವ ಆಸಕ್ತಿ ಇರುವವರೂ ನಮ್ಮ ನಡುವೆ ಇದ್ದಾರೆ.

ಮಲಯಾಳಂ ಕಲಾವಿದ ಮೋಹನ್‌ಲಾಲ್‌ ಒಮ್ಮೆ ಕಲೆಯ ಬಗ್ಗೆ ಹೀಗೆ ಹೇಳಿದ್ದಾರೆ. ‘Art is to make believe' ಅಂತ. ಅಂದರೆ ‘ಇದು ಹೀಗೆ’ ಎಂದು ನೋಡುಗರನ್ನು ನಂಬಿಸುವುದೇ ಕಲೆಯ ಮೂಲ ಉದ್ದೇಶ. ಅದಕ್ಕೂ ಮುನ್ನ ಯಾವುದನ್ನು ಪ್ರಸ್ತುತಪಡಿಸಬೇಕೋ ಅದನ್ನು ಕಲಾವಿದ ಮೊದಲು ಸ್ವತಃ ನಂಬಬೇಕು. ಉದಾಹರಣೆಗೆ ಮಹಾಭಾರತ ಕತೆಯಲ್ಲಿ ಕೃಷ್ಣ ಮತ್ತು ಗಾಂಧಾರಿ ಸಂಭಾಷಣೆ ಸಂದರ್ಭದಲ್ಲಿ ಗಾಂಧಾರಿ ಪಾತ್ರ ನಿರ್ವಹಿಸುವಾಗ ಕಥಾಸಂದರ್ಭವನ್ನು ಮಾತ್ರ ಅರಿತರೆ ಸಾಕಾಗುವುದಿಲ್ಲ. ಗಾಂಧಾರಿಯ ವ್ಯಕ್ತಿಚಿತ್ರದ ಪೂರ್ಣ ಅರಿವಿದ್ದಷ್ಟೂ ಪಾತ್ರಚಿತ್ರಣದ ಮೂಲಬೇರು ಗಟ್ಟಿ ಇರುತ್ತದೆ. ದೇವರಿಗೇ ಶಾಪ ಕೊಡುವಷ್ಟು ತೂಕದ ವ್ಯಕ್ತಿತ್ವ ಆಕೆಯದು ಎಂಬ ಗ್ರಹಿಕೆ ಇದ್ದಾಗ ಮಾತ್ರ ಆತ ಪಾತ್ರದ ಸ್ಥಾಯೀ ಭಾವದ ಎಳೆಯನ್ನು ಹಿಡಿದು ಪಾತ್ರಚಿತ್ರಣ ಮಾಡಬಲ್ಲ. ಎಲ್ಲಕ್ಕೂ ಮಿಗಿಲಾಗಿ ಈ ಕ್ಷೇತ್ರದಲ್ಲಿ ಇರುವ ಕಲಾವಿದರಿಗೆ ಪುರಾಣದ ಬಗ್ಗೆ ಶ್ರದ್ಧೆ ಇರಬೇಕು. ಪುರಾಣದಲ್ಲಿರುವ ಒಳಿತನ್ನೇ ನಾವು ಪ್ರತಿಪಾದಿಸುತ್ತಿದ್ದೇವೆ ಎಂಬ ಬಲವಾದ ನಂಬಿಕೆ ಇದ್ದಾಗ, ಪಾತ್ರಗಳು ಅರಳುತ್ತಾ ಹೋಗುತ್ತವೆ, ಕಲೆ ಬೆಳೆಯುತ್ತ ಹೋಗುತ್ತದೆ. ಪ್ರತಿ ಪಾತ್ರಕ್ಕೂ ಸ್ವತಂತ್ರವಾದ ವ್ಯಕ್ತಿತ್ವ ಇದ್ದೇ ಇದೆಯಲ್ಲ. ಇದಿರು ಪಾತ್ರವನ್ನು ಅವಲಂಬಿಸಿ ಆ ವ್ಯಕ್ತಿತ್ವ ಬೆಳೆಯಬಹುದಷ್ಟೆ. ಆದರೆ ಸ್ವಂತಿಕೆಯ ಅಡಿಪಾಯ ಮುಖ್ಯ. ಹಾಗಾಗಿ ಪಾತ್ರನಿಷ್ಠೆಯೂ ಅಗತ್ಯ.

ಪುರಾಣಗಳ ಮತ್ತು ಪೂರಕ ಪಠ್ಯಗಳ ಓದಿನಿಂದ ಈ ಮಟ್ಟಿನ ಜ್ಞಾನ ಸಂಪಾದನೆ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಓದಿದವರ ಮಾತುಗಳನ್ನು ಆಲಿಸುವುದರಿಂದಲೂ ಜ್ಞಾನವೃದ್ಧಿ ಸಾಧ್ಯ. ಬಹುಶ್ರುತ ಜ್ಞಾನ ಎಂಬುದೊಂದಿದೆಯಲ್ಲ. ಎಲ್ಲರೊಳಗೊಂದು ನುಡಿ ಕಲಿತು ಸರ್ವಜ್ಞನಾಗಲಿಲ್ಲವೇ. ಈ ಜ್ಞಾನ ಪರಂಪರೆಯ ಮಾದರಿ ಇತ್ತೀಚೆಗೆ ಜಾಗತಿಕವಾಗಿಯೂ ಗುರುತಿಸಿಕೊಳ್ಳುತ್ತಿದೆ. ನಮ್ಮದು ಮೊದಲೇ ಶ್ರುತಿ ಪರಂಪರೆ. ಹಾಗಾಗಿ ಪೂರ್ವಸೂರಿಗಳ ಮಾತುಗಳನ್ನು ಆಲಿಸುವ ಸಂದರ್ಭದಲ್ಲಿ ಅವರ ಸ್ವರಭಾರ, ಯತಿ, ಧೋರಣೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಸಮಗ್ರ ಗ್ರಹಿಕೆಯೂ ಸಾಧ್ಯ. ಪಾತ್ರಗಳ ಅಥವಾ ಸಂದರ್ಭದ ಸ್ಥಾಯೀ ಭಾವ ಯಾವುದೆಂದು ಗುರುತಿಸುವುದು ತುಸು ಸುಲಭವೂ ಹೌದು. ಇದಕ್ಕೆ ಹೆಚ್ಚುವರಿ ಓದು ಸೇರಿದಾಗ ಗಳಿಸಿದ ಜ್ಞಾನವು ಪುಟವಿಟ್ಟ ಚಿನ್ನದಂತಾಗುತ್ತದೆ. ತಾಳಮದ್ದಳೆಯಲ್ಲಿ ತೊಡಗಿಸಿಕೊಳ್ಳುವಾಗ ಇಂತಹ ಓದಿನ ಅಗತ್ಯ ಹೆಚ್ಚು ಇರುತ್ತದೆ.

ನಮ್ಮೆಲ್ಲರ ಹಿರಿಯ ಕಲಾವಿದ ಶೇಣಿ ಗೋಪಾಲಕೃಷ್ಣರಿಗೆ ಅಗಾಧ ಓದೂ ಇತ್ತು. ಹರಿಕಥಾ ಕ್ಷೇತ್ರದಲ್ಲಿ ಸಂಪಾದಿಸಿದ ಜ್ಞಾನಮಾರ್ಗವೂ ಇತ್ತು. ಅವರ ವಾಗ್ಝರಿಯನ್ನು, ಸಂಘಟನೆಯನ್ನು ನೋಡಿಯೇ ಕಲಿತ ನೂರಾರು ಕಲಾವಿದರು ನಮ್ಮ ನಡುವೆ ಇದ್ದಾರೆ. ಮಲ್ಪೆ ರಾಮದಾಸ ಸಾಮಗರು ಜ್ಞಾನಿಗಳೂ ಪ್ರತಿಭಾ ಸಂಪನ್ನರೂ ಆಗಿದ್ದರು.

ಈ ರೀತಿ ಪಾತ್ರಗಳಿಗಾಗಿ ನಡೆಸುವ ಓದು ಯಕ್ಷಗಾನದ ಬೆಳವಣಿಗೆಗೂ, ಕಲಾವಿದನ ವೈಯಕ್ತಿಕ ಬೆಳವಣಿಗೆಗೂ ಸಹಕಾರಿ ಆಗುತ್ತದೆ. ಯಕ್ಷಗಾನವು ನಿರಂತರವಾಗಿ ವಿಕಾಸ ಹೊಂದುತ್ತಲೇ ಇರುವ ಕಲೆ. ಇಷ್ಟೊಂದು ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿರುವ, ಜನರ ದೈನಂದಿನ ಜೀವನದಲ್ಲಿ ಒಂದಾಗಿ ಬೆರೆತು ಹೋಗಿರುವ ಮತ್ತೊಂದು ಭಾರತೀಯ ಕಲೆಯಿಲ್ಲ ಎಂದೇ ಹೇಳಬೇಕು. ಅದೇ ಕಾರಣಕ್ಕೆ ಯಕ್ಷಗಾನವನ್ನು ನಿರ್ದೇಶನ ಮಾಡುವುದು ಕಷ್ಟ. ಸಾಮಾನ್ಯವಾಗಿ ಭಾಗವತರೇ ಯಕ್ಷಗಾನದ ನಿರ್ದೇಶಕರು ಎಂದು ಹೆಚ್ಚಿನವರು ಅಭಿಪ್ರಾಯಪಡುತ್ತಾರೆ. ಆದರೆ ಸಂಘಟಕರ, ಪ್ರೇಕ್ಷಕರ ಸದಭಿರುಚಿಯೇ ಯಕ್ಷಗಾನದ ನಿಜವಾದ ನಿರ್ದೇಶಕ ಎಂದು ಹೇಳಬೇಕು. ಈ ಕಲೆಯು ಇಷ್ಟೊಂದು ಚಲನಶೀಲವಾದುದರಿಂದಲೇ ಇರಬೇಕು, ನಮ್ಮ ದೇಶದ ಶಾಸ್ತ್ರೀಯ ಕಲೆಗಳ ಸಾಲಿಗೆ ಯಕ್ಷಗಾನ ಇನ್ನೂ ಸೇರಿಲ್ಲ. ನಿಖರವಾಗಿ ನಿರ್ವಚಿಸಬಹುದಾದ್ದನ್ನು ಶಾಸ್ತ್ರೀಯ ಪರಿಭಾಷೆಗೆ ಒಳಪಡಿಸುವುದು ತುಂಬ ಸುಲಭ. ಶಾಸ್ತ್ರ ಎಂದರೆ ಶಾಸನ ಮಾಡುವುದು ಎಂಬ ಅರ್ಥ ತಾನೆ? ಅಂತಹ ಚೌಕಟ್ಟಿನೊಳಗೆ ಯಕ್ಷಗಾನವನ್ನು ಬಂಧಿಸುವುದು ಕಷ್ಟ.

ಇತ್ತೀಚೆಗೆ ಯಕ್ಷಗಾನದ ಪರೀಕ್ಷೆಗಳನ್ನು ನಡೆಸಲು ಸಿದ್ಧತೆಗಳು ನಡೆದಿವೆ. ಪಠ್ಯ ರಚನೆಯಲ್ಲಿಯ ಸಂದರ್ಭದಲ್ಲಿಯೂ, ಯಕ್ಷಗಾನದ ಅಗಾಧತೆ ಮತ್ತು ವಿಸ್ತಾರವೇ ಒಂದು ಸವಾಲು ಆಗಿರುವುದು ಸಹಜ. ತೆಂಕು, ಬಡಗು, ಬಡಾಬಡಗು ಎಂಬೆಲ್ಲ ಶೈಲಿಯ ಯಕ್ಷಗಾನ ಇರುವಾಗ, ವ್ಯಕ್ತಿಕೇಂದ್ರಿತವಾಗಿ ಅನೇಕ ಶೈಲಿಗಳು ಅಭಿವೃದ್ಧಿ ಹೊಂದಿದ್ದಾಗ, ಪಠ್ಯದಲ್ಲಿ ಯಾವುದನ್ನು ಸೇರಿಸುವುದು, ಯಾವ ಶೈಲಿಯನ್ನು ‘ಇದುವೇ ಯಕ್ಷಗಾನ’ ಎಂದು ನಿರೂಪಿಸುವುದು ಎಂಬ ಪ್ರಶ್ನೆ ಇದಿರಾಗುತ್ತದೆ. ನಿರ್ಧರಿತ ಪಠ್ಯ ರಚನೆ ಆಗಿ ವಿದ್ಯಾರ್ಥಿಗಳು ಅದನ್ನು ಕಲಿಯುತ್ತಿರುವಾಗ ಅತ್ತ ಬಯಲಾಟದಲ್ಲಿ ಬದಲಾವಣೆಗಳು ಪ್ರತಿದಿನ ಎಂಬಂತೆ ನಡೆಯುತ್ತಲೇ ಇರುತ್ತವೆ.

ಯಕ್ಷಗಾನ ಕಲಿಕಾ ಕೇಂದ್ರಗಳಿಗೂ ಈ ಸವಾಲು ಎದುರಾದುದುಂಟು. ಕಲಿಕಾ ಕೇಂದ್ರಗಳಲ್ಲಿ ಕಲಿತು ವೃತ್ತಿಕ್ಷೇತ್ರಕ್ಕೆ ಇಳಿದ ಬಳಿಕ ಕಲಾವಿದರು ಅನಿವಾರ್ಯವಾಗಿ ಚಲನಶೀಲವಾದ ರೂಢಿಗತ ಶೈಲಿಯನ್ನೇ ಅಳವಡಿಸಿಕೊಂಡ ಹಲವು ಉದಾಹರಣೆಗಳಿವೆ. ಜೀವಂತಿಕೆ ಉಳ್ಳ ಕಲೆಯು ಜನಮಾನಸದ ಮುಖ್ಯ ಪ್ರವಾಹದಲ್ಲಿ ಸೇರಿಹೋದಾಗ– ಕಲಿತದ್ದು, ಕಲಿಯದಿದ್ದುದು, ತರಬಯಸಿದ್ದು, ಅನೇಕರು ಬೇಡವೆಂದು ಹೇಳಿದ್ದೂ ಪ್ರದರ್ಶನದ ಸಂದರ್ಭದಲ್ಲಿ ಸೇರಿ ಹೋಗುತ್ತದೆ. ಯಕ್ಷಗಾನ ಎಂದಿಗೂ ‘ಹೀಗೆ’ ಎಂದು ಕಣ್ಕಾಪು ಕಟ್ಟಿಕೊಂಡು ಬೆಳೆದ ಕಲೆ ಅಲ್ಲ.

ಹಾಗಂತ ಪರೀಕ್ಷಾ ವಿಧಾನಗಳ ಬಗ್ಗೆ ತೀರಾ ಸಿನಿಕತನವೂ ಸಲ್ಲದೆನಿಸುತ್ತದೆ. ಯಕ್ಷಗಾನದ ಮೂಲ ವಿಚಾರ ಏನು ಎಂಬ ಬಗ್ಗೆ ಪಠ್ಯವನ್ನು ಈಗಿನ ಮಕ್ಕಳು ಕಲಿತರೆ ಅದರಿಂದ ಕಲೆಯ ಪರಿಚಯ ಸಾಧ್ಯ ಆದೀತು. ಮಕ್ಕಳು ಏನೂ ಕಲಿಯದೇ ಇರುವುದಕ್ಕಿಂತ, ಇಷ್ಟಾದರೂ ಕಲಿತರಲ್ಲ ಎಂಬ ಸಮಾಧಾನ ಹಿರಿಯರಲ್ಲಿ ಮೂಡಬಹುದು.

ಇನ್ನು ‘ಯಕ್ಷಗಾನ ಕೆಟ್ಟಿತು’ ಎಂಬ ಆರೋಪ ಸದಾ ಕಾಲ ಇರುವಂಥದ್ದು. ‘ನಾವು ಚಿಕ್ಕವರಿದ್ದಾಗಲೂ ಹಿರಿಯರು ಇದೇ ಮಾತನ್ನು ಹೇಳುತ್ತಿದ್ದುದನ್ನು ಕೇಳುತ್ತ ಬಂದಿದ್ದೇವೆ’ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎ. ಹೆಗಡೆ ಹೇಳುತ್ತಾರೆ. ನಮ್ಮ ನಿರೀಕ್ಷೆಗೆ ತಕ್ಕಂತೆ ಯಾವುದೇ ವಿಷಯ ಪ್ರಸ್ತುತಗೊಳ್ಳದೇ ಇದ್ದಾಗ ಬೇಸರದ ಮಾತುಗಳು ಬರುವುದು ಸಹಜ. ಕಲಾನಿಷ್ಠ ಕಲಾವಿದರು ಇರುವವರೆಗೂ ಕಲೆಗೆ ಧಕ್ಕೆಯಾಗದು ಎಂಬ ನಂಬಿಕೆ ಇನ್ನೂ ಅಳಿಸಿಹೋಗಿಲ್ಲ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !