ಶುಕ್ರವಾರ, ಸೆಪ್ಟೆಂಬರ್ 20, 2019
26 °C
ಯಳಂದೂರು: ಕೃಷಿಕರಲ್ಲಿ ಹೆಚ್ಚಿದ ಆತಂಕ, ದುರಸ್ತಿ ಮಾಡಲು ಒತ್ತಾಯ

ಕೃಷ್ಣಯ್ಯನಕಟ್ಟೆ ಏರಿ ಮೇಲೆ ಹೆಚ್ಚಿದ ಬಿರುಕು

Published:
Updated:
Prajavani

ಯಳಂದೂರು: ತಾಲ್ಲೂಕಿನ ಬಿಳಗಿರಿರಂಗನಬೆಟ್ಟದ ಪಾದ ಬೆಟ್ಟದ ಬಳಿ ಇರುವ ಕೃಷ್ಣಯ್ಯನಕಟ್ಟೆ ಏರಿಯಲ್ಲಿ ಕಂಡು ಬಂದಿರುವ ಬಿರುಕು ದಿನಕಳೆದಂತೆ ಹಿರಿದಾಗುತ್ತಿದೆ. ತುಂತುರು ಮಳೆ ನೀರು ಏರಿ ಮೇಲಿನಿಂದ ಅಣೆಕಟ್ಟೆ ತಳಕ್ಕೆ ಹರಿದು ತಳಪಾಯ ಕುಸಿಯುವ ಭೀತಿ ಎದುರಾಗಿದೆ.

ಬೆಟ್ಟದ ಪಶ್ಚಿಮ ಭಾಗದ ಇಳಿಜಾರಿನಿಂದ ಮಳೆಗಾಲದಲ್ಲಿ ಜಲಾಶಯಕ್ಕೆ ನೀರು ಹರಿದು ಬರುತ್ತದೆ. ಅಣೆಕಟ್ಟೆ ಸುಮಾರು 3,270 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ವನ್ಯಜೀವಿಗಳು ನೀರಿಗಾಗಿ ಇದನ್ನು ಆಶ್ರಯಿಸಿವೆ. ಈ ಬಾರಿ ಮಳೆ ಕೊರತೆಯಿಂದಾಗಿ ಜಲಾಶಯದಲ್ಲಿ ಹೆಚ್ಚು ನೀರಿಲ್ಲ. ನೀರು ತುಂಬಿದಾಗ ಇದರಲ್ಲಿ ಮೀನು ಸಾಕಣೆ ಮಾಡಲಾಗುತ್ತದೆ.

ಕಳೆದ ವರ್ಷ ಸುರಿದ ಮಳೆಗೆ ಅಣೆಕಟ್ಟೆ ಭರ್ತಿಯಾಗಿತ್ತು. ಇತ್ತೀಚಿಗೆ ಸುರಿಯುತ್ತಿರುವ ಸೋನೆ ಮಳೆ ಅಣೆಕಟ್ಟೆಯ ಏರಿಯಲ್ಲಿ ಉಂಟಾಗಿರುವ ಬಿರುಕಿನಲ್ಲಿ ಇಳಿದು ಮಣ್ಣು ಸವೆತಕ್ಕೆ ಕಾರಣವಾಗಿದೆ.

‘ಬಿರುಕು ಕಂಡು ಬಂದಿರುವ ಸ್ಥಳ ಜಲಾಶಯದ ತಳಭಾಗದತ್ತ ತೆರೆದುಕೊಂಡಿದೆ. ಇದರಿಂದ ಮಣ್ಣಿನ ಸವಕಳಿ ಹೆಚ್ಚಿ, ಕಟ್ಟೆ ಒಡೆಯುವ ಅಪಾಯ ಇದೆ. ಅಣೆಕಟ್ಟೆಗೆ ಮಳೆ ನೀರು ಹರಿದು ಬಂದರೆ ಅಪಾಯ ತಪ್ಪಿದ್ದಲ್ಲ’ ಎನ್ನುತ್ತಾರೆ ಸ್ಥಳೀಯ ಕೃಷಿಕರು.

‘ಇಲ್ಲಿ ಮೀನು ಸಾಕಣೆ ಮಾಡುತ್ತಿದ್ದೇವೆ. ಬಿರುಕು ಇನ್ನಷ್ಟು ಜಾಸ್ತಿಯಾದರೆ, ಕೃಷಿಕರಿಗೆ ತೊಂದರೆ ಆಗುತ್ತದೆ. ಹಾಗಾಗಿ, ಏರಿಯನ್ನು ಸದೃಢಗೊಳಿಸಬೇಕು’ ಎಂದು ಬಸವಪುರ ಮಹಿಳಾ ಮೀನುಗಾರಿಕಾ ಸಂಘದ ಕಾರ್ಯದರ್ಶಿ ಭಾಗ್ಯಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಲಾಶಯದ ಸುತ್ತಲ ಪರಿಸರ ನಿರ್ವಹಣೆ ಇಲ್ಲದೆ ಸೊರಗಿದೆ. ಗಿಡಗಂಟಿಗಳು ಬೆಳೆದಿವೆ. ಆದರೂ ಪ್ರವಾಸಿಗರು ಇಲ್ಲಿ ಅಡ್ಡಾಡುತ್ತಾರೆ. ಹಾಗಾಗಿ, ಬಿರುಕನ್ನು ಮುಚ್ಚಿ ಭೇಟಿ ನೀಡುವವರಿಗೆ ಬೆಟ್ಟದ ಸೌಂದರ್ಯ ವೀಕ್ಷಿಸಲು ಅವಕಾಶ ನೀಡಬೇಕು’  ಎಂದು ಪ್ರವಾಸಿ ಖೈರುನ್ನಿಸಾ‌ ಹೇಳಿದರು.

ಸ್ಥಳ ಪರಿಶೀಲನೆ: ‘ಕೃಷ್ಣಯ್ಯನಕಟ್ಟೆ ವ್ಯಾಪ್ತಿಯ ಸ್ಥಳ ನಿರ್ವಹಣೆ ಮಾಡುತ್ತಿದ್ದ ಎಂಜಿನಿಯರ್‌ ನಿವೃತ್ತರಾಗಿದ್ದಾರೆ. ಈಗ ಎಂಜಿನಿಯರ್‌ ಒಬ್ಬರನ್ನು ಹೊಸದಾಗಿ ನಿಯುಕ್ತಿಗೊಳಿಸಲಾಗಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆದಿದೆ. ತುರ್ತು ಕೆಲಸ ಮಾಡಬೇಕಿರುವ ಕಾರಣದಿಂದ ಹೊಸದಾಗಿ ಟೆಂಡರ್‌ ಕರೆದು, ಶೀಘ್ರದಲ್ಲೇ ಕೆಲಸಕ್ಕೆ ಚಾಲನೆ ನೀಡಲಾಗುವುದು’ ಎಂದು ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್ ಪ್ರತೀಕ್  ‘ಪ್ರಜಾವಾಣಿ’ಗೆ ತಿಳಿಸಿದರು. 

 

Post Comments (+)