ಶುಕ್ರವಾರ, ನವೆಂಬರ್ 22, 2019
26 °C
ಕಾರು ಖರೀದಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ * ಕಾಯ್ದೆ ಜಾರಿಯಾದ ಬಳಿಕ ದೇಶದಲ್ಲೇ ಮೊದಲ ಪ್ರಕರಣ * ಸಿಐಡಿ ತನಿಖೆ ಚುರುಕು

‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ’ ವಿರುದ್ಧ ‘ಬುಡ್ಸ್’ ಅಸ್ತ್ರ

Published:
Updated:

ಬೆಂಗಳೂರು: ಕಾರು ಖರೀದಿಸಿ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆಗೆ ಕೊಟ್ಟು ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದೆ ಎನ್ನಲಾದ ‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ವಿರುದ್ಧ ‘ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ (ಬಿಯುಡಿಎಸ್‌) ಕಾಯ್ದೆ 2019’ ಅಸ್ತ್ರ ಪ್ರಯೋಗಿಸಲಾಗಿದೆ.

ನೆಲಮಂಗಲ ಹಾಗೂ ಬೆಂಗಳೂರಿನ ಹಲವು ಠಾಣೆಗಳಲ್ಲಿ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ತನಿಖೆ ಚುರುಕುಗೊಳಿಸಿರುವ ಸಿಐಡಿ ಆರ್ಥಿಕ ವಿಭಾಗದ ಅಧಿಕಾರಿಗಳು, ಕಂಪನಿ ಕಚೇರಿಗಳ ಮೇಲೂ ದಾಳಿ ಮಾಡಿ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ದಾಖಲೆಗಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು, ಕಾನೂನು ತಜ್ಞರ ಅಭಿಪ್ರಾಯ ಪಡೆದು ಇದೀಗ ಕಂಪನಿ ವಿರುದ್ಧ ಬಿಯುಡಿಎಸ್‌ ಕಾಯ್ದೆಯಡಿ ಪ‍್ರಕರಣ ಸಹ ದಾಖಲಿಸಿಕೊಂಡಿದ್ದಾರೆ. ಕಾಯ್ದೆ ಜಾರಿಯಾದ ಬಳಿಕ ಅದರಡಿ ದಾಖಲಾದ ದೇಶದ ಮೊದಲ ಪ್ರಕರಣ ಇದಾಗಿದೆ ಎಂದು ಸಿಐಡಿ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಂಚಕ ಕಂಪನಿಗಳ ಕೃತ್ಯಕ್ಕೆ ಕಡಿವಾಣ ಹಾಕುವ ಹಾಗೂ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೆಲ ತಿಂಗಳ ಹಿಂದಷ್ಟೇ ಬಿಯುಡಿಎಸ್‌ ಕಾಯ್ದೆ ಜಾರಿಗೆ ತರಲಾಗಿದೆ. ‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ಎಸಗಿರುವ ಕೃತ್ಯವು ಈ ಕಾಯ್ದೆ ವ್ಯಾಪ್ತಿಗೆ ಬರುತ್ತದೆ’ ಎಂದು ಅವರು ಹೇಳಿದರು.

‘ಕರ್ನಾಟಕ ಹಾಗೂ ಕೇರಳದಲ್ಲಿ ವಹಿವಾಟು ನಡೆಸುತ್ತಿದ್ದ ಕಂಪನಿ, ಸಾವಿರಾರು ಹೂಡಿಕೆದಾರರಿಂದ ₹ 60 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿರುವ ಮಾಹಿತಿ ಇದೆ. ಕೇರಳದಲ್ಲೂ ಕಂಪನಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಅಲ್ಲಿಯ ಪೊಲೀಸರಿಂದ ಮಾಹಿತಿ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದರು.

ಎರಡೂ ಕಚೇರಿಯಲ್ಲೂ ಪರಿಶೀಲನೆ: ‘ಮತ್ತೀಕೆರೆಯ ಗೋಕುಲ್ ಹಾಗೂ ನೆಲಮಂಗಲದ ಜಕ್ಕಸಂದ್ರ ರಸ್ತೆಯಲ್ಲಿರುವ ಕಂಪನಿಯ ಎರಡೂ ಕಡೆಗಳಲ್ಲೂ ದಾಳಿ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಸಿಬ್ಬಂದಿಯಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

‘ಕಾರು ಹೊಂದಿ ಮತ್ತು ಗಳಿಸಿ’ ಘೋಷವಾಕ್ಯದೊಂದಿಗೆ ಕಂಪನಿಯು ‘ಯಲ್ಲೊ ಎಕ್ಸ್‌ಪ್ರೆಸ್’ ಸೇರಿದಂತೆ ಹಲವು ಯೋಜನೆಗಳನ್ನು ಆರಂಭಿಸಿತ್ತು. ಹೂಡಿಕೆದಾರರ ಹೆಸರಿನಲ್ಲಿ ಕಾರುಗಳನ್ನು ಖರೀದಿಸಿ ಉಬರ್ ಸೇರಿದಂತೆ ವಿವಿಧ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆಗೆ ನೀಡುವ ಹಾಗೂ ಪ್ರತಿ ತಿಂಗಳು ಹೆಚ್ಚಿನ ಲಾಭಾಂಶ ಮತ್ತು ಕೆಲ ವರ್ಷಗಳ ನಂತರ ಕಾರಿನ ಸಮೇತ ಅಸಲನ್ನು ಮರಳಿಸುವ ಭರವಸೆಯನ್ನು ಕಂಪನಿ ಪ್ರತಿನಿಧಿಗಳು ನೀಡುತ್ತಿದ್ದರು. ಅದನ್ನು ನಂಬಿ ಸಾವಿರಾರು ಮಂದಿ ಹಣ ಹೂಡಿಕೆ ಮಾಡಿದ್ದರು.’

‘ಹಣ ಪಡೆಯುವ ಮುನ್ನ ಹೂಡಿಕೆದಾರರ ಜೊತೆ ಒಪ್ಪಂದ ಮಾಡಿಕೊಂಡು 40 ಷರತ್ತುಗಳ ಪತ್ರಕ್ಕೆ ಪ್ರತಿನಿಧಿಗಳು ಸಹಿ ಪಡೆದುಕೊಳ್ಳುತ್ತಿದ್ದರು’ ಎಂದು ಅಧಿಕಾರಿ ವಿವರಿಸಿದರು.

ಮಾರಾಟ ಪ್ರತಿನಿಧಿಗಳ ವಿಚಾರಣೆ: ‘ಹೂಡಿಕೆದಾರರನ್ನು ಸೆಳೆಯಲು ಕರ್ನಾಟಕ ಹಾಗೂ ಕೇರಳದಲ್ಲಿ 200ಕ್ಕೂ ಹೆಚ್ಚು ಮಾರಾಟ ಪ್ರತಿನಿಧಿಗಳನ್ನು ಕಂಪನಿ ನೇಮಕ ಮಾಡಿಕೊಂಡಿತ್ತು. ಆ ಪೈಕಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆಯಲಾಗಿದೆ’ ಎಂದು ಸಿಐಡಿ ಅಧಿಕಾರಿ ಹೇಳಿದರು.

‘ಹೂಡಿಕೆದಾರರನ್ನು ತರುವ ಪ್ರತಿನಿಧಿಗಳಿಗೆ ವೇತನ ಜೊತೆ ಕಮಿಷನ್ ಸಹ ನೀಡಲಾಗುತ್ತಿತ್ತು. ಕಂಪನಿಯ ಆಡಳಿತ ಮಂಡಳಿ ಸದಸ್ಯರ ಜೊತೆಯಲ್ಲಿ ಕೆಲ ಪ್ರತಿನಿಧಿಗಳೂ ತಲೆಮರೆಸಿಕೊಂಡಿದ್ದಾರೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)