ಯೆಲ್ಲೋಸ್ಟೋನ್ ಪಾರ್ಕ್‌-ಹೀಗೊಂದು ಗಂಧರ್ವಲೋಕ...

ಮಂಗಳವಾರ, ಜೂನ್ 25, 2019
29 °C

ಯೆಲ್ಲೋಸ್ಟೋನ್ ಪಾರ್ಕ್‌-ಹೀಗೊಂದು ಗಂಧರ್ವಲೋಕ...

Published:
Updated:
Prajavani

1872ರಲ್ಲಿ ಹುಟ್ಟಿದ ಅಮೆರಿಕದ ಯೆಲ್ಲೋಸ್ಟೋನ್‌ ನ್ಯಾಷನಲ್‌ ಪಾರ್ಕ್‌ (yellow stone national park), ವಿಶ್ವದ ಮೊದಲ ರಾಷ್ಟ್ರೀಯ ಪಾರ್ಕ್‌ ಎಂಬ ಹೆಗ್ಗಳಿಕೆ ಪಡೆದಿದೆ. ಇದು ‘ವಂಡರ್‌ಲ್ಯಾಂಡ್’ ಎಂಬ ಪದಕ್ಕೆ ನಿಜವಾದ ಅರ್ಥ ತುಂಬಿರುವ ಸ್ಥಳ. ಹಲವು ಅದ್ಭುತಗಳಿಂದ ತುಂಬಿರುವ ಈ ವ್ಯವಸ್ಥಿತ ಪಾರ್ಕ್‌ನ ‘ವೆಸ್ಟ್‍ಥಂಬ್’ ಮತ್ತು ‘ಗ್ರಾಂಡ್ ಟೇಟನ್’ ಎಂಬ ಭಾಗಗಳು ನಿಜಾರ್ಥದಲ್ಲಿ ಅದ್ಭುತ ತಾಣಗಳೇ ಹೌದು.

ಎಂಟು ಸಾವಿರ ಅಡಿ ಎತ್ತರದ ರಾಕಿ ಪರ್ವತಶ್ರೇಣಿಗಳ ಮಡಿಲಲ್ಲಿರುವ ಈ ಪಾರ್ಕ್‌ ಅಮೆರಿಕದ ವ್ಯೋಮಿಂಗ್, ಇದಾಹೊ ಮತ್ತು ಮೊಂಟಾನಾ ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿದೆ. ಅದರಲ್ಲೂ ಅತಿಹೆಚ್ಚು ಪಾಲು ಪಡೆದುಕೊಂಡಿರುವುದು ವ್ಯೋಮಿಂಗ್‌ ರಾಜ್ಯದಲ್ಲಿ.

ಇಂಥ ಗಂಧರ್ವಲೋಕದ ಚೆಲುವಿನ ‘ಯೆಲ್ಲೋಸ್ಟೋನ್‌ ಉದ್ಯಾನ’ ನೋಡಲು ಸ್ಯಾನ್‌ಫ್ರಾನ್ಸಿಸ್ಕೊದಿಂದ ಹೊರಟೆವು. ಉದ್ಯಾನದ ‘ಗ್ರ್ಯಾಂಟ್ ಟೇಟನ್’ ಭಾಗಕ್ಕೆ ತಲುಪಿದಾಗ ಬೆಳಿಗ್ಗೆ 8 ಗಂಟೆಯಾಗಿತ್ತು. ಕೊರೆವ ಚಳಿ. ಇಲ್ಲಿಯ ಚೆಲುವಿಗೆ ಥಳಥಳ ಕನ್ನಡಿ ಹಿಡಿದು ನಮ್ಮನ್ನು ಮರಳುಗೊಳಿಸಲಷ್ಟೇ ಸೂರ್ಯನ ಬೆಳಕಿತ್ತು. ಪ್ರವೇಶ ದ್ವಾರದೊಂದಿಗೆ ಒಳ ಹೋದಾಗ ನಮಗೆ ಎದುರಾಗಿದ್ದು ಅಕ್ಷರಶಃ ಮಾಯಾಲೋಕ. ಎಲ್ಲಿ ನೋಡಲಿ, ಅಳ್ಳಕ ನೆಲದಲ್ಲಿ (ಗುಂಡಿಬಿದ್ದ ಜಾಗ) ಚಿತ್ರಪಟದಂತೆ ನಿಂತ ಗೆರೆಗಳಾಕಾರದ ಬೋಳುಮರಗಳು, ವೃತ್ತಾಕಾರದ ಮರದ ಕಟಕಟೆಯೊಳಗೆ ಕುದಿಯುತ್ತಿರುವ ನೆಲ, ಮಡಕೆಗಳನ್ನು ಹೂಳಿಟ್ಟಂತೆ ಕಾಣುವ ನೆಲದ ಬಾಯಲ್ಲಿ ಕೊತಕೊತನೆ ಕುದಿವ ನೀರು, ದೊಡ್ಡ ದೊಡ್ಡ ವೃತ್ತದೊಳಗೆ ಏಳುವ ಬಿಸಿನೀರ ಬುಗ್ಗೆಗಳು, ವಿಶಿಷ್ಠ ವಾಸನೆಯ ಬಿಳುಪಿನ ಧೂಮ ಏಳುತ್ತಿರುವ ವೃತ್ತಗಳು, ಒಂದಿಷ್ಟು ಸೂಚಿಪರ್ಣಮರಗಳು.. ಓಹ್‌ ! ಎಲ್ಲ ಯಕ್ಷಕಿನ್ನರಲೋಕದಂತೇ ಇತ್ತು.

ಸೂರ್ಯನ ಬೆಳಕು ನೆಲದ ಮೇಲೆ ಹಿತವಾಗಿ ಹರಡಿಕೊಂಡಿತ್ತು. ನೆಲದಲ್ಲಿ ಮಡಕೆ ಯಾಕಾರದ ಗುಂಡಿಯಲ್ಲಿ ಕೊತಕೊತ ಕುದಿಯುತ್ತಿದ್ದ ನೀರು ತೋರಿಸಿ ನಾನು ಹೇಳಿದೆ, ‘ಸೀ, ಮದರ್ ಅರ್ಥ ಈಸ್ ಕುಕ್ಕಿಂಗ್ ಬ್ರೇಕ್‍ಫಾಸ್ಟ್ ಫಾರ್ ಅಸ್...’ ಎಂದು. ಅದನ್ನು ಕೇಳಿ ನಮ್ಮೊಡನಿದ್ದ ಜರ್ಮನ್‌ ಪ್ರಜೆಯ ಮುಖ ಹಿಗ್ಗಿನಿಂದ ಅರಳಿತು. ‘ಯಾ...ಯಾ...ಈ ಜಾಗ, ನಿನ್ನ ಕಲ್ಪನೆ ಎರಡೂ ಸೂಪರ್’ ಎನ್ನುವಾಗ, ನಾವೆಲ್ಲರೂ ಈ ಭೂವಿಸ್ಮಯಕ್ಕೆ ಮರುಳಾಗಿ ನಮ್ಮ ಕ್ಯಾಮೆರಾದಲ್ಲಿ ಸೌಂದರ್ಯ ಸೆರೆಹಿಡಿಯಲು ಸಾಹಸ ಪಡುತ್ತಿದ್ದವು.

ಈ ಪಾರ್ಕ್‌ನಲ್ಲಿ ಕೇವಲ ಮರದ ರಚನೆಯ ವಾಕ್‍ ವೇಗಳಲ್ಲಿ (ನಡೆಯುವ ದಾರಿ) ಮಾತ್ರ ನಡೆಯಬೇಕು. ಅದು ಬಿಟ್ಟು ನೆಲಕ್ಕೆ ಕಾಲಿಟ್ಟಿರೋ ಏನು ದುರಂತ ಬೇಕಾದರೂ ಸಂಭವಿಸಬಹುದು. ನೆಲದ ತುಂಬ ತೇವ, ಅಲ್ಲಲ್ಲಿ ಕುದಿಯುವಿಕೆ, ಹೊಗೆಯಾಡು ವಿಕೆಯಿಂದ ಬುಸುಗುಡುವ ನೆಲಗರ್ಭದಲ್ಲಿ ಭಯಂಕರ ತಳಮಳವಿರಬಹುದು.

ನಾವಿಲ್ಲಿ ಓಡಾಡುವಾಗಲೇ ಚಳಿಯನ್ನು ಇಲ್ಲಿನ ವಾತಾವರಣದ ಬಿಸಿ ಮಣಿಸುತ್ತಿದ್ದು ದನ್ನು ಅನುಭವಿಸುತ್ತಿದ್ದೆವು. ದಶಲಕ್ಷಗಟ್ಟಲೆ ವರ್ಷಗಳ ಹಿಂದೆ ಇಲ್ಲಿ ಸಿಡಿದೆದ್ದ ವಾಲ್ಕೆನೋಗಳು, ಭೂಕಂಪಗಳಿಂದಲೇ ಈ ಭೂಭಾಗ ಇಷ್ಟು ವರ್ಣಮಯವಾಗಿರಲು ಕಾರಣ. ಇಲ್ಲಿನ ನೆಲದಾಳದಲ್ಲಿದ್ದ ಗಂಧಕದ ಪರಿಣಾಮದಿಂದ ತುಂಬಿಕೊಂಡ ನೀರಿನಹಬೆ ಒಂದು ಕನಸಿನಲೋಕದಂತೆ ಕಂಡರೆ, ಭೂಗರ್ಭಶಾಸ್ತ್ರಜ್ಞರಿಗೆ ಇದರ ಮೂಲ ಕಂಡುಹಿಡಿವ ಜ್ಞಾನದಾಹ. ಅದಕ್ಕೇ ಅವರು ಇದರ ತಳಬುಡ ಶೋಧಿಸಿ, ‘ಇಲ್ಲಿ ಇನ್ನೂ ಉಸಿರಾಡುತ್ತಿರುವ ಅಗ್ನಿಪರ್ವತಗಳಿವೆ. ಇವು ಎಂದಾದರೂ ತಮ್ಮ ಅಸಹನೆ ಯನ್ನು ಕಕ್ಕಿಬಿಡಬಹುದು’ ಎನ್ನುತ್ತಾರೆ. ಇದನ್ನು ಕೇಳಿ ಚೂರು ಕೈಕಾಲು ಕಂಪಿಸಿದರೂ, ಈ ಕ್ಷಣದ ಈ ಪ್ರಾಕೃತಿಕ ಸೌಂದರ್ಯದ ಸೆಳೆತ ಸೀಮಾತೀತವಾಗಿ, ‘ಅಯ್ಯೋ, ಮುಂದೆಂದೋ ಘಟಿಸಬಹುದಾದ ವಿಕೋಪಕ್ಕೆ ಈಗೇಕೆ ತಲ್ಲಣ’ ಎಂದು ಮನಸ್ಸು ನಿರ್ಭೀತವಾಗಿ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾ, ಮೈಮರೆತಿದ್ದಂತೂ ಸುಳ್ಳಲ್ಲ.

ಪ್ರಕೃತಿಯ ನಿಗೂಢಗಳು ಮನುಷ್ಯನನ್ನು ಎಂದಿಗೂ ಪ್ರಶ್ನಾರ್ಥಕವಾಗಿಯೇ ಇಟ್ಟುಬಿಡುತ್ತವೆ. ನಾವು ಅಲ್ಲಿವರೆಗೆ ನೋಡಿದ ‘ಗ್ರಾಂಟ್ ವಿಲೇಜ್’ ಭಾಗದ ಭೂವೈ ವಿಧ್ಯದ ಮುಂದುವರಿಕೆಯಾಗಿ ಮುಂದೆ ಹೋಗಿದ್ದು ‘ವೆಸ್ಟ್ ಥಂಬ್ ಗೀಸರ್ ಬೇಸಿನ್’ ಮತ್ತು ‘ಯೆಲ್ಲೋಸ್ಟೋನ್ ಸರೋವರ’ದತ್ತ. ಈ ಭಾಗಗಳು ಮತ್ತೂ ವರ್ಣರಂಜಿತವಾಗಿ, ವಿಭಿನ್ನವಾದ ಅನುಭಗಳನ್ನು ನೀಡಿ, ಮನಸ್ಸನ್ನು ರೋಮಾಂಚಿತಗೊಳಿಸಿತು.

ಪ್ರಾಚೀನದಲ್ಲಿ ಸಿಡಿದ ಅಗ್ನಿಪರ್ವತವೊಂದು ಉಂಟುಮಾಡಿದ ಕುಳಿಯೇ ಇಂದಿಲ್ಲಿ ಬಹುದೊಡ್ಡ ಸರೋವರವಾಗಿದೆ. ಈ ನೀಲ ಸರೋವರದ ಅಂಚು ಕೂಡ ನೆಲಕುಡಿಕೆಗಳಿಂದ ಕೂಡಿದ್ದು, ಪಕ್ಕದಲ್ಲಿ ನೀಲಿ ನೀರು ಜುಳುಜುಳು ಎಂದು ಹರಿಯುತ್ತಿತ್ತು. ಅಂಚಿನಲ್ಲಿದ್ದ ಈ ಕುಡಿಕೆಯ ನೀರು ಕೊತ ಕೊತ ಕುದಿಯುತ್ತಿತ್ತು.

ಮುಂದೆ ಹರಿಯುತ್ತಿರುವ ನದಿಗೆ ಕಟ್ಟಿರುವ ಸೇತುವೆಯ ಮೇಲೆ ಮುಂದಿನ ತಾಣಕ್ಕೆ ಹೊರಟಾಗ ಎದುರಿಗೇ ಅದ್ಭುತ ಜಲಪಾತವೊಂದು ಎದಿರಾಯಿತು. ಈ ಜಲಪಾತದ ವೈಶಿಷ್ಟ್ಯವೇನು ಗೊತ್ತಾ? ಇದು ತನ್ನೊಂದಿಗೆ ಮೇಲಿನ ಭೂಭಾಗದ ಕುದಿಕುದಿ ನೀರನ್ನೂ ಹೊತ್ತು ತಂದು ನದಿಗೆ ಸುರಿಯುವಾಗ ಈ ಭಾಗ ಬೆಳ್ಳನೆಯ ಧೂಮದಿಂದ ತುಂಬಿ ಕಾಣುವ ಸೊಬಗು ವರ್ಣನಾತೀತ. ಸೇತುವೆ ಮೇಲೆ ನಿಂತಾಗ ಸ್ವರ್ಗದಲ್ಲಿರುವಂತೆ, ಇನ್ನೇನೂ ಬೇಡವೆನ್ನುವಂತೆ ಮನಸ್ಸು ಭ್ರಮಾಧೀನವಾಗಿಬಿಟ್ಟಿತು.

ಪಾರ್ಕ್‌ ಮೇಲೇರಿದಾಗ ವಿಶಾಲ ಬಯಲಿನಂಥ ಜಾಗ. ಇಲ್ಲಿಯೂ ಯಥಾಪ್ರಕಾರ ವಾಕ್‍ವೇನಲ್ಲಿ ಮಾತ್ರ ನಡೆಯಬೇಕು. ಕಣ್ಣು ಹಾಯಿಸಿದಷ್ಟೂ ದೂರ ಬಯಲು, ಬಯಲು, ಬಯಲು. ಒಡಲ ತುಂಬ ಆದ್ರವಾದ ಸಡಿಲಮಣ್ಣು. ಕೆಂಪು-ಕೇಸರಿ-ಹಳದಿ-ಹಸಿರು-ನೀಲ ಬಣ್ಣಗಳ ಪಟ್ಟೆಪಟ್ಟೆಯಲ್ಲಿ ಅಸಮಾನ್ಯ ರೂಪದಲ್ಲಿ ಕಾಣುವ ಈ ನೆಲದಲ್ಲಿ ಅಲ್ಲಲ್ಲಿ ನೀರು ಉಕ್ಕುತ್ತ, ಕುದಿಯುತ್ತ, ಹಬೆಯಾಡುತ್ತ ಮತ್ತದೇ ಸುರಲೋಕದ ಬೆಡಗನ್ನೇ ಫಲಿಸುತ್ತದೆ.

ಮಡ್‌ಪಾಟ್ಸ್‌ ತಾಣ

ಇನ್ನು ಯೆಲ್ಲೋಸ್ಟೋನ್‌ ಸರೋವರದ ಸುತ್ತಮುತ್ತ ಹೇರಳವಾಗಿ ‘ಮಡ್ ಪಾಟ್ಸ್’ (ನೆಲದಲ್ಲಿ ಮಡಕೆ ಹೂಳಿಟ್ಟಂತೆ ಕಾಣುವ ವಿಸ್ಮಯ)ಗಳಿದ್ದು ನೀರು ಕುದಿಯುತ್ತಲೇ ಇರುತ್ತದೆ. ಪುಟ್ಟಪುಟ್ಟ ಕೊಳಗಳಲ್ಲಿ ನೀಲಿ, ಹಸಿರು, ತಿಳಿಗೆಂಪಿನ ನೀರು ಸ್ವಚ್ಛವಾಗಿದ್ದೂ ಕುದಿಯುವುದನ್ನು ನೋಡುವುದೇ ಒಂದು ಅದ್ಭುತ.

ನೆಲದಾಳದಲ್ಲಿ ಹುದುಗಿರುವ ಅಗ್ನಿಪರ್ವತಗಳಿಂದ, ಅಲ್ಲಿಂದ ಬಿಡುಗಡೆಯಾಗುವ ಅನಿಲಗಳಿಂದ, ಗಂಧಕ, ಆರ್ಸೆನಿಕ್, ಐರನ್ ಸಲ್ಫೈಡ್‍ಗಳೆಂಬ ಖನಿಜಗಳಿಂದ, ಅಗ್ನಿಪರ್ವತ - ಕಾಳ್ಗಿಚ್ಚುಗಳು ತಂದು ಹರಡಿದ ಬೂದಿಯಿಂದ ನೀರು, ಮಣ್ಣಿನ ಪದರಗಳು ಕಾಮನಬಿಲ್ಲಿನ ಈ ವರ್ಣಗಳನ್ನು ಪಡೆದಿದ್ದವು. ಇಲ್ಲಿಯ ಬಿಸಿನೀರ ಬುಗ್ಗೆಗಳು, ನೆಲದ ಮೇಲ್ಮೈ ತಾಪಮಾನ 38 ಡಿಗ್ರಿ ಸೆಲ್ಷಿಯಸ್‌ನಿಂದ 93 ಡಿಗ್ರಿ ಸೆಲ್ಷಿಯಸ್‌ವರೆಗೂ ಇರುತ್ತವಂತೆ.

ಈ ನ್ಯಾಷನಲ್ ಪಾರ್ಕ್‌, ನಯನ ಮನೋಹರ ತಾಣವಾಗುವುದರ ಜತೆ ಜತೆಗೆ ಅಪರೂಪದ ಪ್ರಾಣಿ, ಸಸ್ಯಸಂಕುಲಗಳ ತವರೂ ಆಗಿದೆ. ಇಲ್ಲಿ ದಟ್ಟ ಕಾಡಿದೆ. ಅದರೊಳಗೆ ಬೂದುತೋಳ, ಕೆಂಪು-ಕಪ್ಪುಕರಡಿ, ಬೈಸನ್, ಎಲ್ಕ್, ಮೂಸ್, ಮ್ಯೂಲ್, ಗೋಟ್‍ಗಳ ಅಭಯಾರಣ್ಯವೂ ಆಗಿದೆ. ಪಾರ್ಕ್‌ ಸುತ್ತಾಡುವಾಗ, ಇಂಥ ಪ್ರಾಣಿಗಳು ನಿರಾತಂಕವಾಗಿ ಓಡಾಡುವುದನ್ನೂ ಕಾಣಬಹುದು.

ಈ ಪಾರ್ಕ್‌ನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಗೊಳಿಸಿ, ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತಿರುವ ಅಮೆರಿಕದ ಸಾಧನೆಯೇನೂ ಸಣ್ಣದಲ್ಲ. ಹೀಗಿದ್ದೂ ಇಲ್ಲಿಯ ನೆಲದಾಳದ ಬಿಸಿ, ಕಂಪನಕ್ಕೆ ಸಾಕಷ್ಟು ಮರಗಳು ಸುಟ್ಟು ಕಳಚಿರುವುದನ್ನೂ ಕಂಡಾಗ ಸಂಕಟವಾಯ್ತು. ಈ ದುರ್ಭರತೆ ಪ್ರಾಕೃತಿಕ ಸತ್ಯದ ಫಲಿತಾಂಶವೇ ಹೊರತು, ಮಾನವನ ದುರಾಸೆಯ ಫಲದ್ದಂತೂ ಅಲ್ಲವಲ್ಲ ಎನ್ನುವ ಅನ್ನಿಸಿಕೆಯಲ್ಲಿ ಸಮಾಧಾನವೂ ಆಯ್ತು. ಈ ನಿಟ್ಟಿನಲ್ಲಿ ಸರ್ಕಾರದ ಕಾಳಜಿಯ ಕುರಿತು ಹ್ಯಾಟ್ಸ್‌ ಅಪ್ ಹೇಳಲೇಬೇಕು.

ಹೋಗುವುದು ಹೇಗೆ?

ನಾವು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊ ನಗರದಿಂದ ಪ್ಯಾಕೇಜ್ ಟೂರ್ ಹೋಗಿದ್ದೆವು. ಅದರಲ್ಲಿ ಈ ಯೆಲ್ಲೋಸ್ಟೋನ್‌ ನ್ಯಾಷನಲ್ ಪಾರ್ಕ್ ಕೂಡ ಸೇರಿತ್ತು.

ದೆಹಲಿಯಿಂದ ಸಿಂಗಪುರ ಅಥವಾ ಹಾಂಗ್‌ಕಾಂಗ್ ಮುಖಾಂತರ ಸ್ಯಾನ್‌ಫ್ರಾನ್ಸಿಸ್ಕೊ ನಗರಕ್ಕೆ ನೇರವಾಗಿ ವಿಮಾನ ಸೌಲಭ್ಯವಿದೆ.

ಸ್ಯಾನ್‌ಫ್ರಾನ್ಸಿಸ್ಕೋದಿಂದ ಯೆಲ್ಲೋಸ್ಟೋನ್‌ ನ್ಯಾಷನಲ್ ಪಾರ್ಕ್‌ಗೆ 1500 ಕಿ.ಮೀ. ಕಾರ್‌ನಲ್ಲಿ ಹೋಗಬಹುದು. ವಿಮಾನ ಸೌಲಭ್ಯವೂ ಇದೆ. ವಿಮಾನದಲ್ಲಿ ಊಟ್ಹಾ ರಾಜ್ಯದ ‘ಸಾಲ್ಟ್ ಲೇಕ್’ ಸಿಟಿಗೆ ಹೋದರೆ ಈ ಜಾಗ ಸಮೀಪವಾಗುತ್ತದೆ.

ಪ್ರವಾಸಕ್ಕೆ ಹೋಗುವ ಮುನ್ನ ಹೆಚ್ಚಿನ ಮಾಹಿತಿಗಾಗಿ www.tours-USA.com ವೆಬ್‌ಸೈಟ್‌ಗೆ ಭೇಟಿ ನೀಡಿ, ‘ವೆಸ್ಟರ್ನ್‌ ನ್ಯಾಷನಲ್‌ ಪಾರ್ಕ್‌’ ಆಯ್ಕೆ ಮಾಡಿಕೊಳ್ಳಿ. ಪಾರ್ಕ್‌ ಜತೆಗೆ ಇನ್ನಷ್ಟು ಅದ್ಭುತ ಜಾಗಗಳು ಅಲ್ಲಿ ಸಿಗುತ್ತವೆ.

ಪ್ರವೇಶ ದರ

ಪಾರ್ಕ್ ಬಹಳ ವಿಸ್ತಾರವಾಗಿದೆ. ಇಲ್ಲಿಗೆ ಬಹುತೇಕರು ವಾಹನಗಳಲ್ಲಿ ಬರುತ್ತಾರೆ. ಹಾಗಾಗಿ ಒಬ್ಬರಿಗೆ, ವಾಹನ ಪ್ರವೇಶವೂ ಸೇರಿ 25 ಡಾಲರ್‌  ಅಥವಾ ಸ್ವಲ್ಪ ಆಚೀಚೆಯಾಗಬಹುದು.

ಭೇಟಿಗೆ ಸೂಕ್ತ ಸಮಯ

ಏಪ್ರಿಲ್–ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್-ನವೆಂಬರ್ ಈ ತಿಂಗಳುಗಳಲ್ಲಿ ಪಾರ್ಕ್ ನೋಡಲು ಚೆನ್ನಾಗಿರುತ್ತೆ. ಸ್ವಲ್ಪ ಹೆಚ್ಚೆನ್ನುವಂತೆ ಬಿಸಿಲಿದ್ದರೂ, ಬೆಳಗಿಗೆ ಒಂದು ಸ್ವೆಟರ್ ಅಗತ್ಯವಿರುತ್ತದೆ. ಪಾರ್ಕ್‌ನಲ್ಲಿ ತುಂಬಾ ಸುತ್ತಾಡಬೇಕಿರುವುದರಿಂದ ಚಪ್ಪಲಿ ಬದಲಿಗೆ ಶೂ ಬಳಸುವುದು ಅಗತ್ಯ. ಜುಲೈ-ಆಗಸ್ಟ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ.

ಊಟ- ವಸತಿ ವ್ಯವಸ್ಥೆ

ಈ ಪಾರ್ಕ್‌ಗೆ ಹತ್ತಿರದಲ್ಲಿ ಜ್ಯಾಕ್‌ಸನ್, ಗ್ರಾಂಟ್ ವಿಲೇಜ್, ಕ್ಯಾನ್ಯನ್ ವಿಲೇಜ್ ಎನ್ನುವ ಸಣ್ಣ ಸಣ್ಣ ಊರುಗಳಿವೆ. ಇಲ್ಲಿ ಹೋಟೆಲ್‌ಗಳು ಲಭ್ಯ. ಸ್ವಂತವಾಗಿ ಹೋಗುವುದಾದರೆ ಎಲ್ಲವನ್ನೂ ಆನ್‌ಲೈನ್‌ ಮೂಲಕ ಬುಕ್ ಮಾಡಿಸಿಕೊಂಡು ಹೋಗಬೇಕು.

ವಿದೇಶಿ ಕಂಪನಿಗಳು ಪ್ರವಾಸದ ಪ್ಯಾಕೇಜ್ ನಡೆಸುತ್ತವೆ. ಹೀಗಾಗಿ ಮಧ್ಯಾಹ್ನದ ಊಟ ಇರಲ್ಲ. ಕೆಲವು ಡಿನ್ನರ್ ಇರುತ್ತೆ. ಬೆಳಗಿನ ಉಪಾಹಾರ ಹೋಟೆಲ್‌ಗಳಲ್ಲೇ ವ್ಯವಸ್ಥೆಯಾಗಿರುತ್ತದೆ. ನಾನು ಮನೆಯಿಂದ ಸ್ವಲ್ಪ ಆಹಾರ ಸಿದ್ಧ ಮಾಡಿಕೊಂಡು ಹೋಗಿದ್ದೆ. ರೆಡಿ ಉಪ್ಪಿಟ್ಟು ಮಿಕ್ಸ್, ಅನ್ನ-ಪುಳಿಯೋಗರೆ ಗೊಜ್ಜು, ಡ್ರೈಫ್ರೂಟ್ಸ್ ಲಡ್ಡು, ಮಸಾಲಾ ಅವಲಕ್ಕಿ, ಚಿಕ್ಕ ರೈಸ್ ಕುಕ್ಕರ್ ಜತೆಗಿತ್ತು. ಹೋಟೆಲ್‌ಗಳಲ್ಲಿ ಹತ್ತು ನಿಮಿಷದಲ್ಲಿ ಕುಕ್ ಮಾಡಿ ಆಹಾರ ಸಿದ್ಧ ಮಾಡಿಕೊಳ್ಳುತ್ತಿದ್ದೆ. ಹೀಗೆ 20 ದಿವಸ ಆರಾಮವಾಗಿ ಪ್ರವಾಸ ಮಾಡಿಬಂದೆ.

ಒಂದು ವಾರ ನೋಡಬಹುದು

ಯೆಲ್ಲೋಸ್ಟೋನ್‌ ಪಾರ್ಕ್‌ ಕಿರು ಪರಿಚಯ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕು. ಈ ಪಾರ್ಕ್ ಅನ್ನು ವಿಸ್ತೃತವಾಗಿ ನೋಡಲು ವಾರವೆಲ್ಲಾ ಉಳಿದು ವಿಹಾರ ಮಾಡಬೇಕು. ಇಲ್ಲಿ ಪ್ರವಾಸಿಗರಿಗಾಗಿಯೇ ಕುದುರೆ ಸವಾರಿ, ಟ್ರೆಕ್ಕಿಂಗ್, ರ‍್ಯಾಫ್ಟಿಂಗ್, ವೈಲ್ಡ್‌ಲೈಫ್ ಫೋಟೊಗ್ರಫಿಯಂತಹ ಹತ್ತಾರು ಚಟುವಟಿಕೆಗಳಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !