ಯೆಸ್‌ ಮ್ಯಾಡಮ್

ಮಂಗಳವಾರ, ಜೂನ್ 25, 2019
22 °C

ಯೆಸ್‌ ಮ್ಯಾಡಮ್

Published:
Updated:

‘ನಮ್ಮ ಬಾಸ್‌ ತುಂಬಾ ಸ್ಟ್ರಿಕ್ಟ್‌. ಕಚೇರಿಗೆ ಹೋಗುವುದು ಐದು ನಿಮಿಷ ತಡವಾದರೂ ಸಾಕು, ಕೂಗಾಡಿಬಿಡ್ತಾರೆ. ಮನೆ ಸಮಸ್ಯೆಗಳನ್ನ ಕಚೇರಿಗೆ ತರಬಾರದು ಎಂಬ ಉಪದೇಶ ಬೇರೆ’ ಖಾಸಗಿ ಹಣಕಾಸು ಸಂಸ್ಥೆಯ ಉದ್ಯೋಗಿ ನೀನಾ ಕುಮಾರ್‌ ದೂರಿನಲ್ಲಿ ಕಿರಿಕಿರಿಗಿಂತ ಹೆಚ್ಚಾಗಿ ಕೋಪವಿತ್ತು. ‘ನಿಮ್ಮ ಬಾಸ್‌ಗೇನು ಗೊತ್ತು ಮಹಿಳೆಯರ ಸಮಸ್ಯೆ’ ಎಂದರೆ ‘ನಮಗೆ ಲೇಡಿ ಬಾಸ್‌’ ಎಂಬ ನೀನಾ ಮಾತಿನಲ್ಲಿ ಅಣಕಿಸುವ ಭಾವ ಇಣುಕಿತ್ತು.

ಈ ಕೋಪ, ವ್ಯಂಗ್ಯ, ಅಡ್ಡ ಹೆಸರು ಇಟ್ಟು ಕರೆದು ಒಳಗೊಳಗೇ ವಿಕೃತ ಖುಷಿಪಡುವ ಮನೋಭಾವ ಸಾಮಾನ್ಯವಾಗಿ ಕಚೇರಿ ಮುಖ್ಯಸ್ಥರ ಬಗೆಗಿದ್ದರೂ, ‘ಮುಖ್ಯಸ್ಥೆ’ಯಾದರೆ ಇನ್ನೂ ಜಾಸ್ತಿ. ಪುರುಷರ ವಿಷಯ ಬಿಡಿ, ಮಹಿಳಾ ಉದ್ಯೋಗಿಗಳೂ ಪರಸ್ಪರ ಗಾಸಿಪ್‌ ಮಾತನಾಡುವಾಗ ತಮ್ಮ ಲೇಡಿ ಬಾಸ್‌ ಬಗ್ಗೆ ಆಡಿಕೊಂಡು ನಗುವುದು ರೂಢಿ. ‘ಹೆಣ್ಣಿಗೆ ಹೆಣ್ಣೇ ಶತ್ರು’ ಎಂಬ ಮಾತು ಇಂತಹ ಸಂದರ್ಭದಲ್ಲಿ ಪ್ರಸ್ತುತ ಇರಲೂಬಹುದು.

ಸಿನಿಮಾಗಳಲ್ಲೂ ಹಾಗೇ. ಇದೇ ಸ್ಟೀರಿಯೊಟೈಪ್‌ ಲೇಡಿ ಬಾಸ್‌ ಪಾತ್ರವೇ ವಿಜೃಂಭಿಸುತ್ತದೆ. ಆಕೆಯನ್ನು ದುಷ್ಟ ಹೆಂಗಸಿನಂತೆ, ಕಪಟಿಯಂತೆ, ಆ ಸ್ಥಾನಕ್ಕೇರಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲಳು ಎಂಬಂತೆ ಚಿತ್ರಿಸದಿದ್ದರೆ ಅಂತಹ ಚಿತ್ರಕಥೆ ಫ್ಲಾಪ್‌ ಆಗಿಬಿಡುತ್ತದೆ ಎಂಬಂತಹ ಸಾಮಾನ್ಯ ನಂಬಿಕೆ ಬೇರೂರಿಬಿಟ್ಟಿದೆ. ‘ಲಾಡ್ಲಾ’ದ ಶ್ರೀದೇವಿ, ‘ಜುದಾಯಿ’ಯ ಊರ್ಮಿಳಾ ಮಾತೋಂಡ್ಕರ್‌, ‘ಖಿಲಾಡಿಯೋಂಕಾ ಖಿಲಾಡಿ’ಯ ರೇಖಾ ಕೆಲವು ಉದಾಹರಣೆಗಳು.

ಆಕೆಯಾದರೆ ‘ಬಾಸಿ’, ಆತನಾದರೆ ‘ನಾಯಕ’
ಕಂಪನಿಯಲ್ಲಿ ಒಳ್ಳೆಯ ಸ್ಥಾನಕ್ಕೇರಲು ಆಕೆ ಕಷ್ಟಪಟ್ಟು ದುಡಿದರೂ, ಉಳಿದ ಉದ್ಯೋಗಿಗಳಿಂದ ಕೆಲಸ ತೆಗೆದರೂ ‘ಬಾಸಿ’ ಎಂಬ ನಾಮಕರಣ. ಅದೇ ಒಬ್ಬ ಪುರುಷ ಬಾಸ್‌ಗೆ ‘ನಾಯಕತ್ವದ ಗುಣವಿದೆ’ ಎಂಬ ಹೊಗಳಿಕೆ.

ಮಹಿಳೆ ಉನ್ನತ ಸ್ಥಾನಕ್ಕೇರಿದಂತೆ ‘ನೀವು ಮನೆ, ಮಕ್ಕಳು, ಆಫೀಸೆಂದು ಹೇಗೆ ನಿಭಾಯಿಸುತ್ತೀರಿ?’ ಎಂಬ ಪ್ರಶ್ನೆ ಮಹಿಳೆಯರ ಮುಂದಿರಿಸುತ್ತಾರೆ. ಅಂತಹ ಪ್ರಶ್ನೆಗಳನ್ನು ಪುರಷರಿಗೇಕೆ ಕೇಳುವುದಿಲ್ಲ. ಆಕೆ ಕಚೇರಿಯಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಿದರೆ, ‘ಗಂಡ, ಮಕ್ಕಳು, ಮನೆಯನ್ನು ಕಡೆಗಣಿಸುತ್ತಾಳೆ’ ಎಂಬ ಟೀಕೆ.

‘ಒಂದು ದಿನ ಬೇಗ ಮನೆಗೆ ಹೊರಟರೆ ಸಾಕು, ‘‘ಎಷ್ಟೆಂದರೂ ಹೆಂಗಸಲ್ಲವೇ? ಇದೆಲ್ಲಾ ಬಹಳ ಸುಲಭ’’ ಎಂದು ಸಹೋದ್ಯೋಗಿಗಳು ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಕೆಲಸ ಜಾಸ್ತಿ ಇದೆ ಎಂದು ಉದ್ಯೋಗಿಗೆ ರಜ ಕೊಡದಿದ್ದರೆ ಎಷ್ಟೆಲ್ಲಾ ಕೆಟ್ಟ ಬೈಗುಳಗಳನ್ನು ಹಿಂದಿನಿಂದ ಕೇಳಿಸಿಕೊಳ್ಳಬೇಕು’ ಎನ್ನುತ್ತಾರೆ ಮುಂಬಯಿಯಲ್ಲಿ ಬ್ಯಾಂಕ್‌ ಒಂದರಲ್ಲಿ ಪ್ರಧಾನ ವ್ಯವಸ್ಥಾಪಕಿಯಾಗಿರುವ ಗಿರಿಜಾ ಭಟ್‌.

ಎಲ್ಲಾ ಕಡೆಯೂ ‘ಒಳ್ಳೆಯ, ಕೆಟ್ಟ ಹಾಗೂ ಅತಿ ಕೆಟ್ಟ’ ಉದ್ಯೋಗಿಗಳಿರುತ್ತಾರೆ ಎಂದು ನಾವೇಕೆ ಒಪ್ಪಿಕೊಳ್ಳಲು ತಯಾರಿಲ್ಲ! ಅದರ ಬದಲು, ಲಿಂಗ ತಾರತಮ್ಯ ಇಣುಕಿ ಹಾಕುತ್ತದೆ.

‘ನಾವು ಪುರುಷರಿಂದ ಕನಿಷ್ಠ ಗೌರವ, ಸೌಜನ್ಯ ಬಯಸುತ್ತೇವೆ. ಆದರೆ ಅವರು ಬೇರೆ ಆಯ್ಕೆ ಇಲ್ಲವಲ್ಲ ಎಂದು ಎದುರಿಗೆ ತೋರಿಸಿಕೊಳ್ಳುತ್ತಾರೆ. ಹೊಸ ತಲೆಮಾರಿನ ಹೆಚ್ಚು ಉದಾರ ಭಾವನೆಗಳುಳ್ಳ ಯುವಕರೂ ಕೂಡ ಮಹತ್ವಾಕಾಂಕ್ಷೆಯಿರುವ ಮಹಿಳೆಯರನ್ನು ಎದುರಿಗೆ ಹೊಗಳುತ್ತಾರೆ. ಆದರೆ ಅವೆಲ್ಲ ನಾಟಕಗಳು. ಎಲ್ಲಿ ನಮ್ಮನ್ನು ಅವಮಾನ ಮಾಡಲು ಅವಕಾಶ ಸಿಗುತ್ತದೆ ಎಂದು ಕಾದುಕೊಂಡಿರುತ್ತಾರೆ. ಹಿಂದೆ ಬಿಟ್ಟು ಅಶ್ಲೀಲ ಹಾಸ್ಯ. ನಮ್ಮ ನಡೆನುಡಿ, ಕೊನೆಗೆ ನಾವು ಹಾಕಿಕೊಂಡ ಉಡುಪಿನ ಬಗ್ಗೆಯೂ ಕೆಳಮಟ್ಟದ ಮಾತುಗಳು’ ಎನ್ನುವ ಗಿರಿಜಾ ಅವರ ಮಾತಿನಲ್ಲಿ ಲೇಡಿ ಬಾಸ್‌ ಬಗ್ಗೆ ಪುರುಷ ಉದ್ಯೋಗಿಗಳಿಗಿರುವ ಪೂರ್ವಾಗ್ರಹಪೀಡಿತ ಭಾವನೆಗಳ ವಿವರವಿತ್ತು.

ಅಸಹಕಾರ?
ಕಚೇರಿಯಲ್ಲಿ ಕಂಪ್ಯೂಟರ್‌ ಕೈ ಕೊಟ್ಟಿದೆಯೇ? ಲೆಡ್ಜರ್‌ ಟ್ಯಾಲಿ ಆಗುತ್ತಿಲ್ಲವೇ, ಇಲ್ಲ ಇನ್ನಾವುದೋ ಸಮಸ್ಯೆ ಪರಿಹಾರವಾಗದೇ ಒದ್ದಾಡುತ್ತಿದ್ದೀರಾ? ನಿಮಗೆ ಸಹಾಯ ಮಾಡುವವರು ಸಿಕ್ಕಾರು, ಆದೇ ಬಾಸ್ ಆಗಿ ‘ಯೆಸ್‌ ಮ್ಯಾಡಂ’ ಎನ್ನಬೇಕಾದ ಸೀಟಿನಲ್ಲಿ ಕುಳಿತುಕೊಂಡಾಗ ಒಂದು ರೀತಿಯ ಬಹಿಷ್ಕಾರ, ಅಸಹಕಾರ ಚಳವಳಿ ಎದುರಿಸಬೇಕಾಗಬಹುದು. ಇಂತಹ ತೊಂದರೆಗಳು ತಕ್ಷಣಕ್ಕೆ ಕಣ್ಣಿಗೆ ಕಾಣುವಂತಹದಲ್ಲ, ಆ ಸೀಟಿನಲ್ಲಿ ಕೂತವರಿಗೇ ಗೊತ್ತು.

ಈ ಅಸಹಕಾರ ಗಂಡಸರಿಂದ ಮಾತ್ರ ಅಲ್ಲ, ಮಹಿಳೆಯರಿಂದಲೂ ಬರಬಹುದು. ಮಹಿಳೆಯ ನಾಯಕತ್ವದ ಬಗ್ಗೆ ತಿರಸ್ಕಾರವೇಕೆ? ಮಹಿಳೆಯನ್ನು ಬಾಸ್‌ ಎಂದು ಒಪ್ಪಿಕೊಳ್ಳುವುದು ಪುರುಷರ ಅಂತಸ್ತಿಗೆ ಕಡಿಮೆಯೇ?

ಇದು ಆ ದೇಶ, ಈ ದೇಶ ಅಂತ ಅಲ್ಲ, ಎಲ್ಲಾ ಕಡೆ ಈ ‘ಚಳವಳಿ’ಯಿದೆ ಎಂದು ಹೇಳಬಹುದು. ನಾನು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಅರ್ಹತೆಯಿದ್ದರೂ ನನ್ನ ಸ್ನೇಹಿತೆಯ ಬಯೊಡೇಟಾವನ್ನು ಲೀಡ್‌ ಎಂಜಿನಿಯರ್‌ ಆಗಿ ಗ್ರಾಹಕರು ಒಪ್ಪುತ್ತಿರಲಿಲ್ಲ, ಏನಾದರೂ ಕ್ಷುಲ್ಲಕ ಕಾರಣ ಕೊಟ್ಟು ತಿರಸ್ಕರಿಸುತ್ತಿದ್ದರು. 

ಪುರುಷರೇ ಮೇಲಧಿಕಾರಿಯಾಗಿ ಬೇಕಂತೆ!
ಒಂದು ಸಮೀಕ್ಷೆಯ ಪ್ರಕಾರ ವಿಶ್ವದಲ್ಲಿ ಸುಮಾರು ಶೇ 65ರಷ್ಟು ಉದ್ಯೋಗಿಗಳಿಗೆ ಪುರುಷರೇ ಮೇಲಧಿಕಾರಿಯಾಗಿ ಬೇಕಂತೆ, ಅದೇ ಸಿಂಗಪುರದಂತಹ ಮುಂದುವರಿದ ದೇಶದಲ್ಲಿ ಇದು
ಶೇ 76ಕ್ಕೆ ಏರಿದೆ.

ಸ್ಯಾಪ್‌ ಏಷ್ಯ ಪೆಸಿಫಿಕ್‌ ಅಧ್ಯಕ್ಷರ ಪ್ರಕಾರ ‘ಮಹಿಳಾ ಮುಖಂಡರನ್ನು, ಅಧಿಕಾರಿಗಳನ್ನು ಪುರುಷರಿಗಿಂತ ಅಧಿಕವಾಗಿ, ಹಲವಾರು ಕೋನಗಳಿಂದ ಅಳೆಯಲಾಗುತ್ತದೆ. ಹಾಕುವ ಬಟ್ಟೆ, ಮೇಕಪ್‌, ತಲೆಕೂದಲೂ ಟೀಕೆಗೊಳಗಾಗುತ್ತವೆ. ಈ ಎಲ್ಲಾ ಅಳತೆಗೋಲು ಗಂಡಸರಿಗೆ ಅನ್ವಯಿಸುವುದಿಲ್ಲ’. ಇದು ಸತ್ಯ ಅಲ್ಲವೇ? ಮಹಿಳಾ ಅಧಿಕಾರಿಗಳನ್ನು ನೋಡುವ ದೃಷ್ಟಿಯೇ ಬೇರೆ, ಅಳೆಯುವ ಮಾಪನವೇ ಬೇರೆ.

ಇಂತಹ ಇದ್ದೂ ಇಲ್ಲದಂತೆ ತೋರುವ ಸಮಸ್ಯೆಗಳಿಗೆ ಪರಿಹಾರ ಸುಲಭವಲ್ಲ. ಮಹಿಳಾ ಅಧಿಕಾರಿಗಳು ಇಂತಹ ತೊಂದರೆಗಳು ಇರುತ್ತವೆ ಎಂದು ಮೊದಲೇ ಅರಿತಿದ್ದರೆ ಒಳ್ಳೆಯದು. ತೊಂದರೆಗಳು ಬಂದಾಗ ಹಿಮ್ಮೆಟ್ಟಲೂ ಬಾರದು. ತೊಂದರೆಗಳನ್ನು ದಿಟ್ಟತನದಿಂದ ಎದುರಿಸಿದಾಗ, ಚಾಣಾಕ್ಷತೆಯಿಂದ ನಿಭಾಯಿಸಿದಾಗ ಅಸಹಕಾರ ಪರಿಸ್ಥಿತಿ ಕೆಲವು ಕಾಲವಷ್ಟೇ ಇರುತ್ತದೆ.

‘ಮಹಿಳೆಯೆಂದರೆ ಟೀ ಬ್ಯಾಗ್‌ ಇದ್ದಂತೆ. ಬಿಸಿ ನೀರಿನಲ್ಲಿ ಅದ್ದುವತನಕ ಎಷ್ಟು ತೀಕ್ಷ್ಣ ಎಂಬುದು ಗೊತ್ತಾಗುವುದಿಲ್ಲ’ ಎಂಬ ರೂಸ್‌ವೆಲ್ಟ್‌ ಮಾತಿನಂತೆ ಕಠಿಣ ಸಂದರ್ಭಗಳಲ್ಲೂ ತಾಳ್ಮೆ ಕಾಯ್ದುಕೊಂಡು ನಿಭಾಯಿಸಿದ ಲೇಡಿ ಬಾಸ್‌ಗಳಿದ್ದಾರೆ, ಪೆಪ್ಸಿಕೊ ಮುಖ್ಯಸ್ಥೆ ಇಂದ್ರಾ ನೂಯಿ ತರಹ. ಉದ್ಯೋಗ, ಕುಟುಂಬ ಎರಡನ್ನೂ ಬೇರೆ ಬೇರೆಯಾಗಿಟ್ಟು, ಎರಡನ್ನೂ ಸರಿದೂಗಿಸಿಕೊಂಡು ಹೋದವರಿದ್ದಾರೆ.

ಪ್ರತಿಯೊಂದು ಮಾತಿಗೂ ‘ಯೆಸ್‌ ಮ್ಯಾಡಮ್‌’ ಎನ್ನುವ ಶ್ರಮ ಬೇಡ. ಆದರೆ ಅಧಿಕಾರಸ್ಥ ಸ್ಥಾನದಲ್ಲಿರುವವರು ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಅಹಂಭಾವ ಅಡಗಿ ಕೂರುತ್ತದೆ.

* ಎಲ್ಲವನ್ನೂ ಎದುರಿಸುವ ಛಾತಿ ಬೆಳೆಸಿಕೊಳ್ಳಿ.

* ವೃತ್ತಿ ಮತ್ತು ಕುಟುಂಬದ ಮಧ್ಯೆ ಸಮತೋಲನ ಸಾಧಿಸಿ.

* ಅನಾರೋಗ್ಯಕರ ಟೀಕೆಗಳಿಗೆ ಕಿವಿಗೊಡಬೇಡಿ.

* ಕುಟುಂಬದವರ ಬೆಂಬಲ ಪಡೆಯಿರಿ.

* ಸಹೋದ್ಯೋಗಿಗಳ ಜೊತೆಗೆ ಸೌಹಾರ್ದ ಬೆಳೆಸಿಕೊಳ್ಳಿ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !