ತೆರೆಯದ ಅಂಗನವಾಡಿ ಕೇಂದ್ರ; ಮಕ್ಕಳಿಗೆ ಆಟವಿಲ್ಲ, ಪಾಠವಿಲ್ಲ

7
ಯರಕನಗದ್ದೆ ಕಾಲೊನಿಯಲ್ಲಿ ಮುಚ್ಚಿದ ಬಾಲವಾಡಿ ಕೇಂದ್ರ

ತೆರೆಯದ ಅಂಗನವಾಡಿ ಕೇಂದ್ರ; ಮಕ್ಕಳಿಗೆ ಆಟವಿಲ್ಲ, ಪಾಠವಿಲ್ಲ

Published:
Updated:
Deccan Herald

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಯರಕನಗದ್ದೆ ಕಾಲೊನಿಯಲ್ಲಿ ಇರುವ ಅಂಗನವಾಡಿ ಕೇಂದ್ರ ಶಿಥಿಲಗೊಂಡು ಬಾಗಿಲು ಮುಚ್ಚಲಾಗಿದೆ. ಇದರ ಪಕ್ಕದಲ್ಲೇ ಇರುವ ಸಮುದಾಯ ಭವನಕ್ಕೆ ಕೇಂದ್ರವನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಸಹಾಯಕಿಯರು ಇಲ್ಲದ ಕಾರಣ ಕೇಂದ್ರವನ್ನು ತೆರೆಯುತ್ತಿಲ್ಲ.

ಬುಡಕಟ್ಟು ಮಕ್ಕಳು ರಸ್ತೆಯಲ್ಲೇ ಅಡ್ಡಾಡುವ ದೃಶ್ಯ ಇಲ್ಲಿ ಸಾಮಾನ್ಯ. ಸೋಲಿಗ ಜನಾಂಗದವರು ವಾಸವಾಗಿರುವ ಯರಕನಗದ್ದೆ ಹಾಡಿಯನ್ನು ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಉದ್ಘಾಟನೆ ಮಾಡಿದ್ದರು.

ಇದರ ನೆನಪಿಗಾಗಿ ಸಿಂಹ ಮುಖದ ಕಂಬವನ್ನು ನೆಡಲಾಗಿದೆ. ಸಮೀಪದಲ್ಲೇ ಅಂಗನವಾಡಿ ಕಟ್ಟಡ ಇದೆ. ಆದರೆ, ಮಳೆ–ಗಾಳಿಗೆ ಶಿಥಿಲವಾದ ಕೊಠಡಿಯಲ್ಲಿ ನೀರು ಸೋರುತ್ತದೆ. ದುರಸ್ತಿಗೆ ಇಲಾಖೆಯು ಗಮನ ಹರಿಸಿಲ್ಲ. ಹಲವು ತಿಂಗಳಿಂದ ಸೋಲಿಗ ಸಮುದಾಯ ಭವನದಲ್ಲಿ ಅಂಗನವಾಡಿಗೆ ಚಾಲನೆ ನೀಡಲಾಗಿತ್ತು. ನಂತರ ಇದೂ ಬಾಗಿಲು ಮುಚ್ಚಿತ್ತು. ಇದರಿಂದ ಮಕ್ಕಳು ಅಂಗನವಾಡಿಯಿಂದ ದೂರ ಉಳಿಯುವಂತಾಗಿದೆ.

ಅಂಗನವಾಡಿ ಮುಚ್ಚಿ ವರ್ಷವೇ ಕಳೆದಿದೆ. ಬೇರೆ ಕಡೆ ಇದ್ದರೂ, ಯಾರೂ ತೆರೆಯುವುದಿಲ್ಲ. ಅಂಗನವಾಡಿ ಸಹಾಯಕಿ ಕಾಣಸಿಗುವುದು ಅಪರೂಪ. ಇದರಿಂದ ಮಧ್ಯಾಹ್ನದ ಊಟದಿಂದ ಮಕ್ಕಳು ವಂಚಿತರಾಗಿದ್ದಾರೆ ಎಂದು ಸ್ಥಳೀಯ ನಿವಾಸಿಗಳಾದ ಸರೋಜಾ ಹಾಗೂ ಮಾದಮ್ಮ ಅಳಲುತೋಡಿಕೊಂಡರು.

ಬೀದಿಗೆ ಬಿದ್ದ ಮಕ್ಕಳು: ‘ಅಂಗನವಾಡಿ ತೆರೆಯದೇ ಇರುವುದರಿಂದ ಬಹತೇಕ ಚಿಣ್ಣರು ಮನೆಯ ಮುಂದೆ ಚಾಪೆ ಹಾಕಿ ಕುಳ್ಳಿರಿಸುತ್ತೇವೆ. ಮನೆಗಳು ಎತ್ತರದ ಪ್ರದೇಶದಲ್ಲಿ ಇರುವುದರಿಂದ ಎಳೆ ಮಕ್ಕಳು ಜಾರಿ ಬೀಳುವ ಸಂಭವ ಇದೆ. ಅಂಗನವಾಡಿ ಮುಚ್ಚಿದ್ದರೂ ಪೌಷ್ಟಿಕಾಂಶದ ಆಹಾರ ಪೂರೈಸಿಲ್ಲ. ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕೂಲಿ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಜಡೇಗೌಡ ಮತ್ತು ಸಂದ್ರಮ್ಮ ಅಲವತ್ತುಕೊಂಡರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !