ಯೋಗವೆಂದರೆ ಬರಿಯ ಆಸನವಲ್ಲ

7

ಯೋಗವೆಂದರೆ ಬರಿಯ ಆಸನವಲ್ಲ

Published:
Updated:

ಆ ತ್ಮ ಮತ್ತು ಪರಮಾತ್ಮನಲ್ಲಿ ಐಕ್ಯವನ್ನು ಸಾಧಿಸುವ ಮಾರ್ಗವೇ ಯೋಗ. ಮನುಷ್ಯನ ಸರ್ವತೋಮುಖ ಬೆಳವಣಿಗೆಗೆ ಸಹಾಯಕವಾದ ನಿಲುವೇ ಯೋಗ. ಯೋಗದಲ್ಲಿ ರಾಜಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಹಠಯೋಗ, ಅಷ್ಟಾಂಗಯೋಗ ಎಂಬ ಹಲವು ಭಾಗಗಳಿವೆ.

ಪತಂಜಲಿ ಮಹರ್ಷಿಯು 195 ಸೂತ್ರಗಳ ಮೂಲಕ ಅಷ್ಟಾಂಗಯೋಗದ ವಿಧಾನವನ್ನು ವಿವರಿಸಿದ್ದಾರೆ. ‘ಯೋಗಃ ಚಿತ್ತವೃತ್ತಿ ನಿರೋಧಃ’ ಎನ್ನುವುದು ಮಹರ್ಷಿಯ ಸೂತ್ರ.  ಯೋಗ ಎಂದರೆ ಸಂಚರಿಸುವ ಮನಸ್ಸು(ಚಿತ್ತ)ನ್ನು ನಿಯಂತ್ರಿಸುವುದು (ನಿರೋಧ) ಎನ್ನುವುದು ಈ ಮಾತಿನ ಅರ್ಥ.  ಆಧುನಿಕ ಮನುಕುಲಕ್ಕೆ ಸರಳ ಪದ್ಧತಿಯ ಅಷ್ಟಾಂಗಯೋಗದ ಸಾಧನಾಪಥವನ್ನು ಪತಂಜಲಿ ಮಹರ್ಷಿ ವಿವರಿಸಿದ್ದಾರೆ. ಈ ಅಂಗಗಳೆಂದರೆ, ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ.

* ಯಮ (ಮಾಡಬಾರದ್ದು): ಹಿಂಸೆ, ಅಸತ್ಯ, ಅತಿಆಸೆ, ಕಳವು, ಕೆಟ್ಟದ್ದನ್ನು ನುಡಿಯುವುದು.

* ನಿಯಮ (ಮಾಡಬೇಕಾದ ವಿಧಿಗಳು): ಪರಿಶುದ್ಧತೆ, ಸಂತುಷ್ಟಿ, ಸಂಯಮ, ಸ್ವಾಧ್ಯಾಯ, ದೈವದಲ್ಲಿ ಶರಣಾಗತಿ ಭಾವ.

* ಆಸನ (ಶಾರೀರಿಕ ಭಂಗಿಗಳು): ವ್ಯಾಯಾಮದ ಪ್ರಕ್ರಿಯೆ, ಧ್ಯಾನಕ್ಕೆ ಪೂರಕವಾದ ಆಸನಗಳು.

* ಪ್ರಾಣಾಯಾಮ (ಉಸಿರಿನ ಮೇಲೆ ಹಿಡಿತ): ಕ್ರಮಬದ್ಧವಾದ ಉಸಿರಾಟ/ಉಸಿರಾಟವನ್ನು ನಿಯಂತ್ರಣದಲ್ಲಿರಿಸುವುದು.

* ಪ್ರತ್ಯಾಹಾರ (ನಿಗ್ರಹಶಕ್ತಿ): ಇಂದ್ರಿಯಗಳನ್ನು ನಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು.

* ಧಾರಣ (ಏಕಾಗ್ರತೆ): ಮನಸ್ಸಿನ ಗಮನವನ್ನು ಕೇಂದ್ರೀಕರಿಸುವುದು.

* ಧ್ಯಾನ (ಧ್ಯಾನ): ಕೇಂದ್ರೀಕೃತವಾದ ವಿಷಯದ ಮೇಲೆ ಧ್ಯಾನ.

* ಸಮಾಧಿ (ಐಕ್ಯ): ಧ್ಯಾನದ ಗುರಿಯಲ್ಲಿಯೇ ಲೀನವಾಗುವ ಸ್ಥಿತಿ.

ಇಂದು ಮಹಿಳೆಯರಿಗೆ ತಮ್ಮ ಆರೋಗ್ಯದೆಡೆಗೆ ಅರಿವಿಲ್ಲದಿರುವುದು ನಿಜಕ್ಕೂ ವಿಷಾದನೀಯ ಸಂಗತಿ. ಎಷ್ಟೋ ಮಹಿಳೆಯರು ಯೋಗಾಭ್ಯಾಸವು ಕೇವಲ ಮುದುಕರಿಗೆ, ಮಕ್ಕಳಿಗೆ, ರೋಗಿಗಳಿಗೆ ಮಾತ್ರ ಎಂಬ ಬಗ್ಗೆ ತಪ್ಪು ತಿಳಿವಳಿಕೆಯಿಂದ ಯೋಗ ಮಾಡಲು ಮನಸ್ಸು ಮಾಡುತ್ತಿಲ್ಲ. ಕೆಲವರಂತೂ ‘ಯೋಗಾಭ್ಯಾಸ ಮಾಡಿ ಸನ್ಯಾಸಿಯಾಗಬೇಕೆ’ – ಎಂದು ವ್ಯಂಗ್ಯದ ಮಾತನ್ನು ಆಡುತ್ತಾರೆ. ಯುವಜನತೆ ಕೂಡ ಯೋಗ ಎಂದರೆ ಮೂಗು ಮುರಿಯುತ್ತಾರೆ. ಈ ಧಾವಂತದ ಯುಗದಲ್ಲಿ ಎಲ್ಲವೂ ಕ್ಷಿಪ್ರವಾಗಿಯೇ ಸಿಗಬೇಕು ಎನ್ನುವುದೇ ಎಲ್ಲರ ಬಯಕೆ. ಎಂದರೆ, ‘ಯೋಗ ಮಾಡಿದ ತಕ್ಷಣ ಸಣ್ಣ ಆಗಬೇಕು, ಕಾಯಿಲೆಗಳು ತತ್‌ಕ್ಷಣದಲ್ಲಿ ವಾಸಿಯಾಗಬೇಕು’ ಎಂದು ಹಾತೊರೆಯುವವರೇ ಹೆಚ್ಚು. ಆದರೆ ನೆನಪಿಡಿ: ಕ್ಷಿಪ್ರ ಪರಿಣಾಮ ಬಹಳ ಅಪಾಯಕಾರಿ!

ಪ್ರತಿದಿನ 30ರಿಂದ 40 ನಿಮಿಷ ಯೋಗಾಭ್ಯಾಸ ಮಾಡುವುದರಿಂದ ಯಾವುದೇ ಪ್ರಸಾದನಗಳ ಬಳಕೆಯಿಲ್ಲದೆಯೂ ಅತಿ ಸುಂದರವಾಗಿ ಕಾಣಬಹುದು. ಜೊತೆಗೆ ಆರೋಗ್ಯವಂತರಾಗಿ ಚಿರಯೌವನದಿಂದ ಪ್ರತಿಕ್ಷಣವೂ ಉಲ್ಲಾಸದಿಂದ ಇರಬಹುದು.

ಯೋಗಾಭ್ಯಾಸಿಗಳು ಅಭ್ಯಾಸದ ಜೊತೆಗೆ ಆಹಾರಕ್ರಮಗಳ ಕಡೆಗೂ ಗಮನನಿಸಬೇಕಾಗುತ್ತದೆ. ಸಮತೋಲನ ಆಹಾರವು ಯೋಗಾಭ್ಯಾಸಿಗಳಿಗೆ ಸಮಂಜಸ ಆಹಾರ. ಪ್ರತಿದಿವಸ ಆಹಾರಕ್ರಮಗಳಲ್ಲಿ ಹಸಿ ತರಕಾರಿಗಳ ಬಳಕೆ, ತರಕಾರಿಗಳ ರಸ, ಹಸಿಸೊಪ್ಪುಗಳು ಹಾಗೂ ಅದರ ರಸವನ್ನು ಬಳಕೆ ಮಾಡುವ ವಿಧಾನವನ್ನು ಯೋಗಾಭ್ಯಾಸಿಗಳು ಅಳವಡಿಸಿಕೊಂಡರೆ ಸರ್ವರೋಗಗಳಿಗೂ ಸಿದ್ಧೌಷಧ ದೊರೆಯುತ್ತದೆ. ಯೋಗಸಾಧನೆಯ ಮಹತ್ವವನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಕಾಣಬಹುದು.

ಅಲ್ಲದೆ ಪ್ರತಿದಿನ ಯೋಗಾಸನ ಮತ್ತು ಪ್ರಾಣಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ದೇಹದಲ್ಲಿ ರಕ್ತಪರಿಚಲನೆ ಸುಗಮವಾಗುವುದು; ರಕ್ತ ಶುದ್ಧಿಯಾಗುವುದು; ರಕ್ತದೊತ್ತಡದ ಏರಿಳಿತಗಳು ಹಿಡಿತಕ್ಕೆ ಬರುತ್ತವೆ. ಅಲ್ಲದೆ ರಕ್ತದ ಸಕ್ಕರೆ ಅಗತ್ಯದಷ್ಟೇ ಮಿತಿಯಲ್ಲಿರುತ್ತದೆ. ಕಾಯಿಲೆಗಳನ್ನು ಸುಲಭವಾಗಿ ಮಂಡಿನೋವು, ಕಾಲು ಸೆಳೆತ, ಮಾನಸಿಕ ಒತ್ತಡ, ಏಕಾಗ್ರತೆಯ ಸಮಸ್ಯೆ, ಮಾನಸಿಕ ಖಿನ್ನತೆ, ಅನಿಯಮಿತ ಉಸಿರಾಟದ ತೊಂದರೆಯಿಂದ ನಿದ್ರಾಹೀನತೆ, ಮುಟ್ಟಿನ ತೊಂದರೆ, ಬೊಜ್ಜು, ರಕ್ತದೊತ್ತಡದ ಏರಿಳಿತ, ಕೀಲುನೋವು, ಮಂಡಿನೋವು, ಅರ್ಧ ತಲೆನೋವು, ಆಲಸ್ಯ, ಗ್ಯಾಸ್ಟ್ರಿಕ್ ತೊಂದರೆ, ಬಲಹೀನತೆ, ರಕ್ತಹೀನತೆ, ಸೊಂಟನೋವು , ಸಕ್ಕರೆಕಾಯಿಲೆ, ಅಲ್ಸರ್ 
ಇತ್ಯಾದಿ ನಿವಾರಣೆಗೆ ಯೋಗಾಸನಗಳು ತುಂಬಾ ಸಹಕಾರಿಯಾಗಿವೆ.

‘ಪ್ರಾಣಾಯಾಮ’ ಎಂದರೆ ಪ್ರಾಣವನ್ನು ಹತೋಟಿಯಲ್ಲಿಡುವುದು ಅಥವಾ ಉಸಿರಾಡುವುದು ಎಂದು. ಪ್ರಾಣಾಯಾಮವನ್ನು ಬಹಳ ಎಚ್ಚರಿಕೆಯಿಂದ ಕಲಿಯಬೇಕು; ಗುರುಗಳ ಮಾರ್ಗದರ್ಶನದಿಂದಲೇ ಅಭ್ಯಾಸ ಮಾಡಬೇಕು.

ಯೋಗಾಭ್ಯಾಸಕ್ಕೆ ಶ್ರೇಷ್ಠ ಸಮಯವೆಂದರೆ ಬ್ರಾಹ್ಮೀಮುಹೂರ್ತ. ಆದರೆ ಯೋಗವನ್ನು ಮಾಡಲು ಬೆಳಗಿನ ಜಾವವೇ ಆಗಬೇಕೆಂದೇನಿಲ್ಲ. ಅವರ ಶಾರೀರಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಮಧ್ಯಾಹ್ನ ಹನ್ನೆರಡು ಗಂಟೆಯ ಒಳಗೆ, ಸಾಯಂಕಾಲ ನಾಲ್ಕರ ನಂತರ ಸುಮಾರು ಎಂಟು ಗಂಟೆಯ ಒಳಗೆ ಅಭ್ಯಾಸವನ್ನು ಮಾಡಬಹುದು. ಏಕೆಂದರೆ ಈಗಿನ ಧಾವಂತದ ಜೀವನದಲ್ಲಿ ಯೋಗವನ್ನು ಮಾಡಲು ಒಂದರಿಂದ ಒಂದೂವರೆ ಗಂಟೆಯಷ್ಟು ಸಮಯದ ಹೊಂದಾಣಿಕೆ ಮಾಡಿಕೊಳ್ಳುವುದು ಅನೇಕರಿಗೆ ಕಷ್ಟ. ಯೋಗವನ್ನು ಅಭ್ಯಾಸ ಮಾಡತಕ್ಕವರು ಫಲಹಾರ ಸೇವೆನೆಯ ಅರ್ಧಗಂಟೆಯ ನಂತರ ಮತ್ತು ಊಟದ 3 ಗಂಟೆಯ ನಂತರ ಅಭ್ಯಾಸ ಮಾಡಬೇಕು. ಸೂಕ್ತ ಗುರುಗಳ ಮಾರ್ಗದರ್ಶನದಲ್ಲಿ ಕ್ರಮ ಹಾಗೂ ನಿಯಮವಾಗಿ ಉಸಿರಾಟದ ಶಾಸ್ತ್ರೀಯ ಕ್ರಮವನ್ನು ಆಸನದ ಜೊತೆ ಅಳವಡಿಸಿ ದಿನದಲ್ಲಿ 5ರಿಂದ 10 ಆಸನಗಳನ್ನು ಮತ್ತು ಪ್ರಾಣಾಯಾಮ ಮತ್ತು ಧ್ಯಾನ ಓಂಕಾರವನ್ನು ಮಾಡುವುದರ ಮೂಲಕ ಶಾರೀರಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !