ಶನಿವಾರ, ಜೂನ್ 19, 2021
27 °C
ಕೈಕೊಟ್ಟ ಸ್ನೇಹಿತರು; ಬೆಂಬಲಕ್ಕೆ ನಿಂತ ನಟೀಮಣಿಯರು

ಯೋಗರಾಜ ಭಟ್ಟರ ಎಲೆಕ್ಷನ್‌ ಮಂತ್ರ: ‘ಚಂದನವನ’ದಲ್ಲಿ ಹಗ್ಗ ಜಗ್ಗಾಟ!

ಗೌರಿ Updated:

ಅಕ್ಷರ ಗಾತ್ರ : | |

ಒಂದೆಡೆ ‘ಪಂಚತಂತ್ರ’ ಸಿನಿಮಾ ಚಿತ್ರಮಂದಿರಗಳಲ್ಲಿ ರೇಸ್‌ ಮಾಡುತ್ತಿದೆ. ಇತ್ತ ನಿರ್ದೇಶಕ ಯೋಗರಾಜ ಭಟ್ಟರು ಸಿನಿಮಾ ರೇಸ್‌ನ ರಸ್ತೆ ಬಿಟ್ಟು ಎಲೆಕ್ಷನ್‌ ಹೆದ್ದಾರಿಗೆ ತಮ್ಮ ಕಾರನ್ನು ಇಳಿಸಿದ್ದಾರೆ. 2019ರ ಚುನಾವಣೆಗೆ ಧಾರಾವಾಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವುದಲ್ಲದೇ ತಮ್ಮ ಆಪ್ತರ ಜತೆಗೆ ತೆರಳಿ ನಾಮಪತ್ರವನ್ನೂ ಸಲ್ಲಿಸಿ ಬಂದಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡೂ ರೇಸ್‌ಗಳನ್ನು ಒಟ್ಟೊಟ್ಟಿಗೇ ಆಡಹೊರಟ ಅವರ ಪಾಡು ಎರಡು ದೋಣಿ ಮೇಲೆ ಕಾಲಿಟ್ಟ ನಾವಿಕನ ಹಾಗಾಗುತ್ತದೆಯೇ? ಅಥವಾ ಸಿನಿಮಾ ಕ್ಷೇತ್ರದಲ್ಲಿ ಮೂಡಿಸಿದ ವಿಶಿಷ್ಟ ಛಾಪನ್ನು ರಾಜಕೀಯ ರಂಗದಲ್ಲಿಯೂ ಮೂಡಿಸಲಿದ್ದಾರೆಯೇ? ಈ ಪ್ರಶ್ನೆಗೆ ಚುನಾವಣಾ ಫಲಿತಾಂಶವೇ ಉತ್ತರ ನೀಡಬೇಕು.

ಚುನಾವಣೆಗೆ ನಿಂತ ಸುಮಲತಾಗೆ ಚಿತ್ರರಂಗ ಬೆಂಬಲ ಕೊಟ್ಟಹಾಗೆ ತನಗೂ ಇಡೀ ಚಿತ್ರರಂಗ ಬೆನ್ನಿಗೆ ನಿಂತುಕೊಳ್ಳುತ್ತದೆ ಎಂಬ ಭಟ್ಟರ ಎಣಿಕೆಗೆ ಆರಂಭಿಕ ಹಂತದಲ್ಲಿಯೇ ಹೊಡೆತ ಬಿದ್ದಿದೆ. ಅವರ ಆಪ್ತಬಳಗದಲ್ಲಿ ಗುರ್ತಿಸಿಕೊಂಡಿದ್ದ ಸೂರಿ ತಾನು ಚುಣಾವಣಾ ಪ್ರಚಾರಕ್ಕೂ ಬರಲಾರೆ ಎಂದು ಕೈಯೆತ್ತಿದ್ದಾರೆ. ಅನಂತ್‌ನಾಗ್‌ ಅಡ್ಡಗೋಡೆಯ ಮೇಲೆ ದೀಪವಿಟ್ಟು ನಸುನಗುತ್ತಿದ್ದಾರೆ. ಜಗ್ಗೇಶ್‌ ಅವರಂತೂ ಭಟ್ಟರ ವಿರುದ್ಧ ವ್ಯಂಗ್ಯದ ಪಟಾಕಿಯನ್ನೇ ಸಿಡಿಸಿದ್ದಾರೆ. ಈ ವಿರೋಧದ ನಡುವೆಯೂ ಭಟ್ಟರಿಗೆ ಯೋಗದ ರೂಪದಲ್ಲಿ ಒದಗಿಬಂದವರು ನಾಯಕಿಯರು. ಭಟ್ಟರ ಚುನಾವಣೆಗೆ ನಿಂತಿರುವ ಸುದ್ದಿ ಖಚಿತಗೊಳ್ಳುತ್ತಿದ್ದ ಹಾಗೆಯೇ ಬಹುತೇಕ ಎಲ್ಲ ನಾಯಕಿಯರು ಅವರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಷಯಕ್ಕೆ ಸಬಂಧಿಸಿದಂತೆ ‘ಸುಧಾ’ ಚಿತ್ರರಂಗದ ಕೆಲವರನ್ನು ಮಾತನಾಡಿಸಿದಾಗ ವ್ಯಕ್ತಗೊಂಡ ಅಭಿಪ್ರಾಯ ಹೀಗಿದೆ


ಜಗ್ಗೇಶ್

ಭಟ್ಟರ ಹೊಸ ಅವತಾರಕ್ಕೆ ಚಿತ್ರರಂಗದಲ್ಲಿ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಚಿತ್ರರಂಗದ ಹಿತದೃಷ್ಟಿಯಿಂದಲೇ ಚುನಾವಣೆಗೆ ನಿಲ್ಲುವುದಾದರೆ, ಈಗಾಗಲೇ ಸ್ಪರ್ಧೆಗೆ ನಿಂತಿರುವ ಸುಮಲತಾ ಅವರಿಗೆ ಬೆಂಬಲ ಸೂಚಿಸಿದರೆ ಸಾಕಿತ್ತು. ಅದನ್ನು ಬಿಟ್ಟು ತಾನೇನೋ ಕಡಿದು ಗುಡ್ಡೆ ಹಾಕ್ತೀನಿ ಅಂತ ಹೋದ್ರೆ ಮಣ್ಣು ಮುಕ್ಕುವುದು ಗ್ಯಾರಂಟಿ. ಗುರುರಾಘವೇಂದ್ರನ ಆಶೀರ್ವಾದ ಖಂಡಿತ ಭಟ್ಟರ ಮೇಲಿರುವುದಿಲ್ಲ’ ಎಂದು ಯೋಗರಾಜ ಭಟ್ಟರ ಆಪ್ತರೂ ಆಗಿರುವ ನಟ ಜಗ್ಗೇಶ್‌ ಅವರೇ ವ್ಯಂಗ್ಯವಾಡಿದ್ದಾರೆ.

 

 


ಅನಂತ್‌ನಾಗ್‌

ಇನ್ನೋರ್ವ ಹಿರಿಯ ನಟ ಅನಂತ್‌ನಾಗ್‌ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದ್ರೂ ಚುನಾವಣೆಗೆ ನಿಲ್ಲಬಹುದು. ನಿರ್ದೇಶಕ ಭಟ್ಟರು ರಾಜಕೀಯ ಮುಖಂಡನಾಗಲು ಹೊರಟಿದ್ದಾರೆ. ಎರಡೂ ಕ್ಷೇತ್ರ ಬೇರೆ ಬೇರೆ. ಆದ್ರೆ ಸ್ಕ್ರೀನ್‌ಪ್ಲೆ ಸರಿಯಿದ್ದರೆ ಎರಡೂ ಕಡೆ ಗೆಲ್ಲಬಹುದು. ಆದರೆ ಭಟ್ಟರನ್ನು ನಾನು ಇದುವರೆಗೆ ನೋಡಿರುವ ಹಾಗೆ ಸೆಟ್‌ನಲ್ಲಿ ಹೋಗಿ ಡೈಲಾಗ್‌ ಬರೆಯುವುದು ಅವರ ಜಾಯಮಾನ. ಈ ಸ್ವಭಾವ ರಾಜಕೀಯ ರಂಗದಲ್ಲಿ ಎಷ್ಟರ ಮಟ್ಟಿಗೆ ಕ್ಲಿಕ್‌ ಆಗುತ್ತದೆ ನೋಡಬೇಕು’ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ‘ಚುನಾವಣೆಗೆ ನಿಲ್ಲುತ್ತಿರುವುದು ಒಳ್ಳೆಯದೇ. ಆದರೆ ಈಗಾಗಲೇ ಮೋದಿ ದೇಶದಲ್ಲಿ ಬಹಳಷ್ಟು ಬದಲಾವಣೆ ತಂದಿದ್ದಾರೆ. ಬದಲಾವಣೆಯ ಕುರಿತು ಭಟ್ಟರಿಗೆ ಕಾಳಜಿ ಇದ್ದರೆ ಬಿಜೆಪಿಯಿಂದ ಸ್ಪರ್ಧಿಸಬಹುದಿತ್ತು. ಟಿಕೆಟ್‌ ಸಿಕ್ಕಿಲ್ಲದಿದ್ದರೆ ಮೋದಿ ಅವರ ಕುರಿತು ಒಂದು ಸಿನಿಮಾ ನಿರ್ದೇಶಿಸಿ ದೇಶಪ್ರೇಮ ಮೆರೆದು ಮುಂದಿನ ಚುನಾವಣೆಗೆ ಪ್ರಯತ್ನಿಸಬಹುದಿತ್ತು’ ಎಂದೂ ಹೇಳಿದ್ದಾರೆ.

ಗಾಳಿ ಊದಿದ ರಾಧಿಕಾ ಪಂಡಿತ್:

ನಟರಿಂದ ಹೀಗೆ ಟೀಕೆಯನ್ನು ಎದುರಿಸುತ್ತಿರುವ ಭಟ್ಟರಿಗೆ ಚಂದನವನದ ನಟೀಮಣಿಯರಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ‘ಡ್ರಾಮಾ’ ಕ್ವೀನ್‌ ರಾಧಿಕಾ ಪಂಡಿತ್‌ ಅವರಂತೂ ಪ್ರಚಾರದಲ್ಲಿಯೂ ಪಾಲ್ಗೊಳ್ಳುವ ಉತ್ಸಾಹ ತೋರಿಸಿದ್ದಾರೆ.

ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಯೋಗರಾಜ್ ಭಟ್ ಸ್ಪ‍ರ್ಧೆ

‘ಡ್ರಾಮಾ’ ಟೈಮಿಂದ್ಲೂ ನಾನು ಭಟ್ಟರನ್ನು ನೋಡ್ತಾ ಬಂದಿದೀನಿ. ಅವ್ರೇನಾದ್ರೂ ಡಿಫರೆಂಟಾಗಿ ಮಾಡ್ತಾನೇ ಇರ್ತಾರೆ. ಅವ್ರು ಏನಾದ್ರೂ ಮಾಡ್ತಿದಾರೆ ಅಂದ್ರೆ ಅದರಲ್ಲಿ ಅರ್ಥ ಇರತ್ತೆ. ಯಶ್‌ ಹೇಗೆ ಸುಮಲತಾ ಆಂಟಿಗೆ ಬೆಂಬಲವಾಗಿ ನಿಂತಿದಾರೋ ನಾನೂ ಹಾಗೆ ಯೋಗರಾಜ್‌ ಭಟ್ಟರಿಗೆ ಬೆಂಬಲ ಕೊಡ್ತೀನಿ. ಯಾಕೆಂದರೆ ಇಡೀ ಚಿತ್ರರಂಗ ಒಂದು ಕುಟುಂಬ ಇದ್ದ ಹಾಗೆ. ಚಿತ್ರರಂಗಕ್ಕಿಂತಲೂ ಪರಿಣಾಮಕಾರಿಯಾಗಿ ರಾಜಕೀಯದ ಮೂಲಕ ಸಮಾಜವನ್ನು ಬದಲಿಸಬಹುದು. ಇಂಥ ಪ್ರಯತ್ನಕ್ಕೆ ಯಾರೋ ಮುಂದಾಗಿದಾರೆ ಅಂದ್ರೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಮಗುವನ್ನು ನೋಡಿಕೊಂಡು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಕ್ಕೆ ಕಷ್ಟ. ಆದ್ರೂ ಜವಾಬ್ದಾರಿಯುತ ನಾಗರಿಕಳಾಗಿ ಇದು ನನ್ನ ಕರ್ತವ್ಯ ಎಂದು ಭಾವಿಸಿಕೊಂಡು ಪ್ರಚಾರದಲ್ಲಿ ಭಾಗವಹಿಸುತ್ತೇನೆ’ ಎಂದು ಹೇಳಿದ್ದಾರೆ.


ಪೂಜಾ ಗಾಂಧಿ

‘ಮುಂಗಾರು ಮಳೆ’ ಹುಡುಗಿ ಪೂಜಾ ಗಾಂಧಿ ಈಗಾಗಲೇ ಒಂದು ರಾಜಕೀಯ ಪಕ್ಷದ ಜತೆ ಗುರ್ತಿಸಿಕೊಂಡವರು. ಆದರೆ ಯೋಗರಾಜ ಭಟ್ಟರು ರಾಜಕೀಯ ಅಖಾಡಕ್ಕೆ ಇಳಿಯುತ್ತಿರುವ ಸುದ್ದಿ ಹೊರಬೀಳುತ್ತಿರುವಂತೆಯೇ ಅವರು ತಾವಿದ್ದ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಜತೆಗೆ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಭಟ್ಟರ ನಡೆಯನ್ನು ಸ್ವಾಗತಿಸಿರುವ ಅವರು ‘ಯೋಗರಾಜ ಭಟ್ಟರೊಬ್ಬರಿಗೆ ಮಾತ್ರವಲ್ಲ, ಚಿತ್ರರಂಗದ ಹಲವರಿಗೆ ರಾಜಕೀಯ ನಾಯಕರಾಗಿ ಮಿಂಚುವ ಸಾಮರ್ಥ್ಯವಿದೆ. ಹಾಗಾಗಿ ನಾವೆಲ್ಲರೂ ಸೇರಿಕೊಂಡು ‘ಚಂದನವನ ಪಕ್ಷ’ ಕಟ್ಟಿ ವ್ಯವಸ್ಥೆಯ ಸುಧಾರಣೆಗಾಗಿ ಹೋರಾಡಬೇಕು’ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.


ಮಯೂರಿ

‘ಮೂಲತಃ ಧಾರವಾಡದವರೇ ಆಗಿರುವ ಮಯೂರಿ, ‘ಭಟ್ಟರ ಸಿನಿಮಾದಲ್ಲಿ ನಟಿಸಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ಅದು ಇದುವರೆಗೆ ಈಡೇರಿಲ್ಲ. ರಾಜಕೀಯವೂ ಒಂದು ಬಗೆಯಲ್ಲಿ ಸಿನಿಮಾವೇ. ಆ ಕ್ಷೇತ್ರದಲ್ಲಿ ಅವರು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ನನ್ನ ಕೊಡುಗೆಯನ್ನೂ ಕೊಡುವ ಕಾಲ ಕೂಡಿ ಬಂದಿರುವುದಕ್ಕೆ ಸಂತೋಷವಿದೆ. ನನ್ನೂರ ಜನರ ಮನೆಮನೆಗೆ ತೆರಳಿ ಗಾಳಿಪಟಕ್ಕೆ ವೋಟು ಒತ್ತುವಂತೆ ಬೇಡಿಕೊಳ್ಳುತ್ತೇನೆ’ ಎಂದು ಭಾವುಕಳಾಗಿ ನುಡಿದಿದ್ದಾರೆ. ಇನ್ನು ‘ಪಂಚತಂತ್ರ’ ಚಿತ್ರದ ನಾಯಕಿ ಸೋನಲ್‌, ‘ಪಂಚರಂಗಿ’ ನಾಯಕಿ ನಿಧಿ ಸುಬ್ಬಯ್ಯ, ಆಶಿಕಾ ರಂಗನಾಥ್‌, ಹಿರಿಯ ನಟಿಯರಾದ ಸುಧಾ ಬೆಳವಾಡಿ ಎಲ್ಲರೂ ಭಟ್ಟರ ಬೆನ್ನಿಗೆ ನಿಂತಿದ್ದಾರೆ.

ಐಟಿ ಸೆಲ್‌ಗೆ ಪವನ್‌ ಕುಮಾರ್‌ ಶೆಲ್‌!:

ಭಟ್ಟರ ಗರಡಿಯಲ್ಲಿಯೇ ಪಳಗಿದ ಪವನ್‌ ಕುಮಾರ್‌ ಈ ಎಲೆಕ್ಷನ್‌ ಸಮಯದಲ್ಲಿ ಸಾಮಾಜಿಕ ಜಾಲತಾಣ ಮತ್ತು ಅಂತರ್ಜಾಲದಲ್ಲಿ ವಿಭಿನ್ನವಾಗಿ ಪ್ರಚಾರ ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಭಟ್ಟರ ಸಿನಿಮಾಗಳಿಗೆ ಸಹನಿರ್ದೇಶಕ ನಟನಾಗಿ ಕೆಲಸ ಮಾಡಿ ಅನುಭವ ಇರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಚಾರಕಲೆಯಲ್ಲಿ ಪರಿಣತರು. ಅವರ ತಂಡ ಈಗಾಗಲೇ ಧಾರವಾಡದಲ್ಲಿ ಬೀಡುಬಿಟ್ಟಿದ್ದು ಅಲ್ಲಿನ ಜನರ ಮನಸ್ಥಿತಿ, ಅವರು ರಾಜಕೀಯದಿಂದ ಬಯಸುತ್ತಿರುವುದು ಏನು ಎನ್ನುವುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಇದರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷ ಸಂವಾದಗಳನ್ನು ನಡೆಸುವುದು ಮತ್ತು ಸಣ್ಣ ಸಣ್ಣ ಕಿರುಚಿತ್ರಗಳನ್ನು ತಯಾರಿಸಿ ಅದರ ಮೂಲಕ ಗಮನ ಸೆಳೆಯುವುದು ಅವರ ಉದ್ದೇಶವಂತೆ. 

‘ಬೆಂಗಳೂರಲ್ಲಾದ್ರೆ ಇಂಟಲೆಕ್ಚುವಲ್ಸ್‌ ಜಾಸ್ತಿ ಇದಾರೆ. ಇವ್ರು ನನ್ನ ಸಿನಿಮಾಗಳನ್ನು ಗೆಲ್ಲಿಸಿಕೊಡುವ ಮಲ್ಟಿಪ್ಲೆಕ್ಸ್‌ ಆಡಿಯನ್ಸ್‌. ಅವ್ರಿಗೆ ತಮ್ಮ ಮನೆಗೆ ನೀರು ಬರ್ತಿದ್ರೆ ಸಾಕು. ತಮ್ಮ ಮನೆ ಎದುರಿನ ರಸ್ತೆ ಸರಿ ಇದ್ರೆ ಸಾಕು. ತಮ್ಮ ಮನೆಯ ಕಸ ತೆಗೆದುಕೊಂಡ್ರೆ ಹೋದ್ರೆ ಸಾಕು. ಫೇಸ್‌ಬುಕ್‌ನಲ್ಲಿ ದೇಶಪ್ರೇಮ ತೋರಿಸ್ತಾ ಆರಾಮಾಗಿ ಇದ್ದು ಬಿಡ್ತಾರೆ. ಇಂಥವರನ್ನು ದೇಶವನ್ನು ರಾತ್ರಿ ಬೆಳಗಾಗೂದ್ರೊಳಗೆ ಬದಲಾಯಿಸ್ತೀವಿ ಅಂತ್ಹೇಳಿ ಮತ ಕೇಳೋದು, ಕನ್ವಿನ್ಸ್ ಮಾಡುವುದು ಸುಲಭ. ಆದ್ರೆ ಧಾರವಾಡ ತುಂಬ ಬೇರೆ ಥರದ ಪ್ಲೇಸ್‌. ಅಲ್ಲಿ ಜನರ ಮೆಂಟಾಲಿಟಿ ಪೂರ್ತಿ ಡಿಫರೆಂಟ್‌ ಆಗಿರ್ತದೆ. ಅವ್ರಿಗೆ ಈಗಾಗ್ಲೆ ಸೆಟ್‌ ಆಗಿರುವ ರಾಜಕಾರಣಿಗಿಂತ ಬೇರೆಯವ್ರು ಬರ್ತಾರೆ ಅಂದ್ರೆ ಒಪ್ಪಲ್ಲ. ಅಂಥವರನ್ನು ಮೆಂಟಾಲಿಟಿ ಚೇಂಜ್‌ ಮಾಡಲಿಕ್ಕೆ ಬೇರೆಯದೇ ಪರ್ಪಸ್ಟೆಕ್ಟೀವ್‌ ಬೇಕಾಗುತ್ತದೆ. ಅದನ್ನು ಮನಸಲ್ಲಿಟ್ಟುಕೊಂಡು ಪ್ಲ್ಯಾನ್‌ ಮಾಡ್ತಾ ಇದ್ದೇವೆ. ಭಟ್ಟರಿಗೆ ಧಾರವಾಡ ಭಾಷೆ ಮೇಲೆ ಹಿಡಿತ ಇರೋದು ನಮಗೆ ದೊಡ್ಡ ಅಡ್ವಾಂಟೇಜ್‌. ಇದಕ್ಕೆಲ್ಲ ಬಜೆಟ್‌ ಸ್ವಲ್ಪ ಜಾಸ್ತಿ ಆಗತ್ತೆ. ಬಟ್‌ ಅದಕ್ಕಾಗಿ ಕ್ರೌಡ್‌ ಫಂಡಿಂಗ್ ಮಾಡುವ ಬಗ್ಗೆಯೂ ಯೋಚಿಸ್ತಿದ್ದೇವೆ. ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ಗೆ ಹೋದಾಗ ಸುಮಾರು ಮಲ್ಟಿನ್ಯಾಷನಲ್‌ ಕಂಪನಿಗಳು ಪರಿಚಯ ಆಗಿವೆ. ಅವುಗಳನ್ನು ಸ್ಪಾನ್ಸರ್‌ಗಾಗಿ ಸಂಪರ್ಕ ಮಾಡ್ತಾ ಇದ್ದೇವೆ. 40 ಪರ್ಸೆಂಟ್‌ ಮತಗಳನ್ನು ಸೆಳೆಯಲು ಸಾಧ್ಯ ಆದ್ರೆ ಸಾಕು. ಭಟ್ಟರು ಪಾರ್ಲಿಮೆಂಟಿನಲ್ಲಿ ಎಲ್ಲರ ಪಿಚ್ಚರ್‌ ಬಿಡಿಸೋದು ಗ್ಯಾರಂಟಿ’ ಎಂದು ತಮ್ಮ ಲೆಕ್ಕಾಚಾರಗಳನ್ನು ಬಿಚ್ಚಿಡುತ್ತಾರೆ ಪವನ್‌ ಕುಮಾರ್‌.

ಆದರೆ ಪವನ್‌ ಲೆಕ್ಕಾಚಾರಗಳಷ್ಟೇ ಚುನಾವಣೆಯನ್ನು ನಿರ್ಧರಿಸುವುದಿಲ್ಲವಲ್ಲ. ಧಾರವಾಡದ ಜನರು ಯೋಗರಾಜ ಭಟ್ಟರಿಗೆ ಶಿರಾ ಕೊಡ್ತಾರೋ ಅಥವಾ ಮಿರ್ಚಿ–ಮಂಡಕ್ಕಿ ಇಡ್ತಾರೋ ಎನ್ನುವುದು ನಿಚ್ಛಳವಾಗಲಿಕ್ಕೆ ಫಲಿತಾಂಶದ ದಿನದವರೆಗೆ ಕಾಯಲೇಬೇಕು.

ಸೂಚನೆ: ಈ ಬರಹ ಏಪ್ರಿಲ್‌ 1ರ ‘ನಗೆ ದಿನ’ದ ಹಿನ್ನೆಲೆಯಲ್ಲಿ ರೂಪುಗೊಂಡ ಕಾಲ್ಪನಿಕ ಬರಹ. 

(ಕೃಪೆ: ಸುಧಾ, ಏಪ್ರಿಲ್‌ 4ರ ಸಂಚಿಕೆ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು