ಫಾರಿನ್‌ನಲ್ಲೂ ಪ್ರಯಾಣ ಸಲೀಸು; ಹೇಗೆ ಗೊತ್ತಾ?

7

ಫಾರಿನ್‌ನಲ್ಲೂ ಪ್ರಯಾಣ ಸಲೀಸು; ಹೇಗೆ ಗೊತ್ತಾ?

Published:
Updated:
Deccan Herald

ಆ ವ್ಯಕ್ತಿಗೆ ಬಹುಶಃ ಐವತ್ತರ ಪ್ರಾಯ ಇದ್ದಿರಬೇಕು. ಪ್ಯಾರಿಸ್‍ನ ಜೂಲ್ಸ್ ಫೆರಿ ಯೂತ್ ಹಾಸ್ಟೆಲ್‍ನ ಕ್ಯಾಂಟೀನಿನಲ್ಲಿ ಬ್ರೆಡ್‍ಗೆ ಜಾಮ್ ಹಚ್ಚಿಕೊಳ್ಳುತ್ತ ನನ್ನತ್ತ ನೋಡುತ್ತಿದ್ದ ಹಾಗೆ ಅನಿಸಿತು. ನಾನು ಮುಗುಳ್ನಕ್ಕರೂ ಆತ ಪ್ರತಿಕ್ರಿಯಿಸಲಿಲ್ಲ. ಬ್ರೆಡ್ ಖಾಲಿಯಾದ ಬಳಿಕ ಫ್ರೂಟ್ ಸಾಲಡ್ ತೆಗೆದುಕೊಳ್ಳಲು ಎದ್ದಾಗಲೇ ಗೊತ್ತಾಗಿದ್ದು- ಆತ ಅಂಧ ಎಂದು. ನನ್ನ ತಟ್ಟೆ ಸದ್ದು ಕೇಳಿ ‘ಹಾಯ್’ ಅಂದ. ಕುಶಲೋಪರಿ ನಡೆದಾಗ ಗೊತ್ತಾಗಿದ್ದು ಆತ ಟರ್ಕಿ ಪ್ರಜೆ. ‘ನಿಮ್ಮ ದೇಶಕ್ಕೂ ಬಂದು, ಆ ಬಳಿಕ ನೇಪಾಳ, ಪಾಕಿಸ್ತಾನಕ್ಕೂ ಹೋಗುತ್ತೇನೆ’ ಎಂದಾಗ ಅಚ್ಚರಿಯಾಯಿತು.

ವರ್ಷದಲ್ಲಿ ಎರಡೂವರೆ ತಿಂಗಳು ಯೂತ್ ಹಾಸ್ಟೆಲ್‍ಗಳೇ ಆತನಿಗೆ ಮನೆ ಇದ್ದಂತೆ. ರಜಾ ಅವಧಿಯಲ್ಲಿ ಜಗತ್ತನ್ನು ಸುತ್ತುವುದು, ಅನುಭವದ ಮೂಲಕ ‘ನೋಡುವುದು’ ಆತನ ಆಸೆ. ‘ದುಬಾರಿ ಹೋಟೆಲ್, ರೆಸ್ಟೊರೆಂಟ್ ನನಗೆ ಆಗಿ ಬರುವುದಿಲ್ಲ; ಅದಕ್ಕಿಂತ ಹೆಚ್ಚಾಗಿ ನನ್ನ ಜೇಬಿಗೂ ಹೊಂದುವುದಿಲ್ಲ’ ಎಂದು ಜೋರಾಗಿ ನಕ್ಕ.

ಯೂತ್ ಹಾಸ್ಟೆಲ್‍ಗಳ ವೈಶಿಷ್ಟ್ಯವೇ ಅದು. ‘ನಿಮ್ಮ ಬಜೆಟ್ ಕಡಿಮೆ ಇರಬಹುದು; ಆದರೆ ನಮ್ಮ ಗುಣಮಟ್ಟದಲ್ಲಿ ಕಡಿಮೆಯೇನಿಲ್ಲ’ ಎಂಬುದು ಅದರ ಧ್ಯೇಯ. ಹೋಟೆಲಿನ ಶೇ 20ರಷ್ಟು ವೆಚ್ಚದಲ್ಲಿ ಅಚ್ಚುಕಟ್ಟಾದ ವಸತಿ ವ್ಯವಸ್ಥೆಯನ್ನು ಯೂತ್ ಹಾಸ್ಟೆಲ್‍ಗಳು ಒದಗಿಸುತ್ತವೆ. ಅಂದಹಾಗೆ, ಯೂತ್ ಹಾಸ್ಟೆಲ್ ಸೌಲಭ್ಯ ಪಡೆಯಲು ವಯಸ್ಸಿನ ಮಿತಿ ಇಲ್ಲ. ಜಗತ್ತು ಸುತ್ತುವ ಪ್ರತಿಯೊಬ್ಬನೂ ಯುವಕನೇ!

ಮೆಡಿಟರೇನಿಯನ್ ಸಾಗರತೀರದ ನೇಪಲ್ಸ್, ಯೂರೋಪಿನ ಮಾಯಾನಗರಿ ಎಂದೇ ಪ್ರಸಿದ್ಧ. ಹೋಟೆಲ್ ಶುಲ್ಕ ಕೈಗೆಟುಕದಷ್ಟು ಎತ್ತರಕ್ಕೆ. ಅಗ್ಗದ ಹೋಟೆಲ್‍ಗಳ ಮೊರೆಹೋದರೆ ಸುರಕ್ಷತೆ ಎಷ್ಟರ ಮಟ್ಟಿಗೆ ಇದೆಯೋ ಎಂಬ ಆತಂಕ. ಅಲ್ಲಿನ ‘ಲೆ ಸ್ಟಾಂಜ್’ ಯೂತ್ ಹಾಸ್ಟೆಲ್ ಮಾತ್ರ ಪ್ರವಾಸಿಗರ ಎಲ್ಲ ಆತಂಕಗಳನ್ನೂ ಪರಿಹರಿಸುತ್ತದೆ. ಇಡೀ ವಾರ ತಿರುಗಾಡಿದರೂ ಮುಗಿಯದಷ್ಟು ಪ್ರವಾಸಿ ತಾಣಗಳನ್ನು ಹೊಂದಿ
ರುವ ಪ್ಯಾರಿಸ್‍ನಲ್ಲಿ ದಿನವೊಂದಕ್ಕೆ ಎಂಟು ನೂರು ಅಥವಾ ಸಾವಿರ ರೂಪಾಯಿ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ವಸತಿ ವ್ಯವಸ್ಥೆ ಕಲ್ಪಿಸುವ ಹಲವು ಯೂತ್ ಹಾಸ್ಟೆಲ್‍ಗಳಿವೆ. ಆ ಪೈಕಿ ಸಾಕಷ್ಟು ಹಾಸ್ಟೆಲ್‍ಗಳು ನಗರದ ಹೃದಯ ಭಾಗದಲ್ಲೇ ಇವೆ.

‘ಆಸ್ತೆಲೋ ವೆನಿಜಿಯಾ’- ತೇಲುವನಗರಿ ವೆನಿಸ್‍ನಲ್ಲಿನ ಜನಪ್ರಿಯ ಯೂತ್ ಹಾಸ್ಟೆಲ್. ಡಾರ್ಮೆಟರಿ ಶೈಲಿಯ ವಸತಿ ವ್ಯವಸ್ಥೆಯನ್ನು ಸಾವಿರ ರೂಪಾಯಿ ಒಳಗೇ ಒದಗಿಸುತ್ತದೆ. ಬೆಳಿಗ್ಗೆ ಕೊಡುವ ‘ಕಾಂಪ್ಲಿಮೆಂಟರಿ ಬ್ರೇಕ್‍ಫಾಸ್ಟ್’ ಹೊಟ್ಟೆ ತುಂಬಾ ತಿಂದು ಹೊರಟರೆ ಮಧ್ಯಾಹ್ನದವರೆಗೂ ಸುತ್ತುತ್ತಲೇ ಇರಬಹುದು. ಬೇಕಿದ್ದರೆ, ಬೈಕ್ ಟ್ಯಾಕ್ಸಿ, ಬಸ್ ಪಾಸ್, ಫೆರಿ ಪಾಸ್‍ಗಳನ್ನು ಹಾಸ್ಟೆಲ್ ಸಿಬ್ಬಂದಿಯೇ ಒದಗಿಸಿಕೊಡುತ್ತಾರೆ; ಜತೆಗೆ ಎಲ್ಲೆಲ್ಲಿ ಹೇಗೆ ಹೋಗಬೇಕು ಹಾಗೂ ಎಷ್ಟು ಸಮಯ ಎಲ್ಲಿ ಕಳೆಯಬೇಕು ಎಂಬ ಮಾಹಿತಿಯನ್ನೂ.

* * *
“ಡೂ ಯೂ ವಾಂಟ್ ‘ಬೀಟ್ ದಿ ನೈಟ್’ ಪಾರ್ಟಿ ಟೋಕನ್’’ ಎಂದು ಮೋಹಕ ನಗುವಿನೊಂದಿಗೆ ಸಿಪೆರಾ ಕೇಳಿದಾಗ ಅದೇನೆಂದು ಗೊತ್ತಾಗದೇ ‘ಬೇಡ’ ಎಂದುಬಿಟ್ಟೆ. ಆಮೇಲೆ ಗೊತ್ತಾಗಿದ್ದು- ಅದು ಎರಡು ವಾರಕ್ಕೊಮ್ಮೆ ಹಾಸ್ಟೆಲ್‍ನ ಆಡಳಿತ ಮಂಡಳಿ ಆಯೋಜಿಸುವ ಉಚಿತ ವೆಚ್ಚದ (ಒಂದು ಮಿತಿಯೊಳಗೆ) ಪಾರ್ಟಿ. ರೋಮ್‍ನ ಮುಖ್ಯ ರೈಲು ನಿಲ್ದಾಣಕ್ಕೆ ಇನ್ನೂರು ಮೀಟರ್ ದೂರದಲ್ಲಿನ ‘ಡೌನ್‍ಟೌನ್’ ಹಾಸ್ಟೆಲ್ ಒಂದರ್ಥದಲ್ಲಿ ಮಿನಿ ಭೂಮಂಡಲ! ಇಲ್ಲಿಗೆ ಬಾರದ ದೇಶಗಳ ಪ್ರವಾಸಿಗರೇ ಇಲ್ಲ!! ಕುತೂಹಲಕ್ಕೆಂದು ಪ್ರವಾಸಿಗರ ಡೈರಿ ತೆಗೆದು ನೋಡಿದಾಗ, ಅವತ್ತು ನಾನು ಉಳಿದುಕೊಂಡಿದ್ದ 16 ಬೆಡ್ ಡಾರ್ಮೆಟರಿಯಲ್ಲಿ 13 ದೇಶಗಳ ಪ್ರವಾಸಿಗರು ಇದ್ದರು!!

ನಾಲ್ಕು ಅಂತಸ್ತುಗಳ ಈ ಯೂತ್ ಹಾಸ್ಟೆಲ್ ಬಲು ಜನಪ್ರಿಯ. ಎರಡು ದಿನಕ್ಕೆ ನಾನು ನೀಡಿದ ವೆಚ್ಚ 1600 ರೂಪಾಯಿ ಮಾತ್ರ. ಬೇಕೆನಿಸಿದಷ್ಟು ತರಹೇವಾರಿ ಹಣ್ಣುಗಳು, ಬ್ರೆಡ್, ಬನ್, ಜ್ಯೂಸ್, ಚಹಾ- ಕಾಫಿ ಆತಿಥ್ಯ ಕಾಂಪ್ಲಿಮೆಂಟರಿ. ಪ್ರವಾಸಿ ತಾಣಗಳ ಬಗ್ಗೆ ಏನೇನೂ ಗೊತ್ತಿಲ್ಲದ ನಮ್ಮಂಥವರಿಗೆ ಆ ಹಾಸ್ಟೆಲ್‍ನ ಸಿಬ್ಬಂದಿ ನೀಡುವ ಮಾರ್ಗದರ್ಶನವೇ ಅದ್ಭುತ. ಅತಿ ಕಡಿಮೆ ವೆಚ್ಚದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸ್ಥಳ ನೋಡಬೇಕು ಎಂಬುವವರಿಗೆ ಅವರೇ ‘ಗೈಡ್’.

ಸ್ವಿಟ್ಜರ್ಲೆಂಡ್‌ ಎಂದರೇನೇ ಅಲ್ಲಿನ ದುಬಾರಿ ವೆಚ್ಚಕ್ಕೆ ಎದೆ ‘ಡಬ್’ ಎಂದುಬಿಡುತ್ತದೆ. ಸುಮ್ಮನೇ ಸುತ್ತು ಹಾಕಿ ಬರುವುದಕ್ಕೂ ಹತ್ತಾರು ಸಾವಿರ ಖರ್ಚಾಗುತ್ತದೆ. ಆಲ್ಫ್ಸ್ ಪರ್ವತ ಶ್ರೇಣಿ ನೋಡಲೇಬೇಕೆಂಬ ಕನಸನ್ನು ನನಸು ಮಾಡಿದ್ದು ಅಲ್ಲಿನ ‘ಸೇಂಟ್ ಮೊರಿಜ್’ ಯೂತ್ ಹಾಸ್ಟೆಲ್’. ದುಡ್ಡಿದ್ದವರಿ
ಗೇನೋ ಐಶಾರಾಮಿ ಹೋಟೆಲ್‍ಗಳು ಸಾಕಷ್ಟಿವೆ. ಆದರೆ ಸಾಮಾನ್ಯ ಪ್ರವಾಸಿಗರಿಗೆ ಯೂತ್ ಹಾಸ್ಟೆಲ್ ಆ ಗಗನಕುಸುಮವನ್ನೇ ತಂದು ಕೈಗಿಡುತ್ತದೆ. ವಸತಿ, ಊಟ, ಪ್ರಯಾಣಕ್ಕೆಂದು ಒಂದು ದಿನದಲ್ಲಿ ಮಾಡಿದ ಖರ್ಚು ರೂಪಾಯಿ ಐದು ಸಾವಿರಕ್ಕಿಂತ ಕಡಿಮೆ. ‘ಯೂರೋಪಿನ ಪ್ರವಾಸಿ ತಾಣಗಳೆಂದರೆ ದುಬಾರಿ ಎಂಬ ಭಾವನೆ ಜನರಲ್ಲಿ ಇದೆ. ಹಾಗೆಂದು ಪ್ರವಾಸದಿಂದ ಸಾಮಾನ್ಯ ಪ್ರವಾಸಿಗರು ವಂಚಿತರಾಗಬೇಕೆ? ನಮ್ಮಲ್ಲಿಗೆ ಹೆಚ್ಚಾಗಿ ಬರುವ ಏಷ್ಯಾದ ಪ್ರವಾಸಿಗರು ಇಲ್ಲಿನ ಆತಿಥ್ಯ ಸವಿದು ವಾಪಸು ತೆರಳುವಾಗ ಪದೇ ಪದೇ ಥ್ಯಾಂಕ್ಸ್ ಹೇಳಿ ಹೋಗುತ್ತಾರೆ’ ಎನ್ನುತ್ತಾರೆ, ‘ಸೇಂಟ್ ಮೊರಿಜ್’ನ ಪ್ರವಾಸಿ ಮಾರ್ಗದರ್ಶಿ ಇಯೋರಾ.

* * *

ಸುರಕ್ಷತೆ ಹಾಗೂ ನೈರ್ಮಲ್ಯದೊಂದಿಗೆ ಉತ್ತಮ ಗುಣಮಟ್ಟದ ಸೇವೆ ಕೊಡುವುದು ಯೂತ್ ಹಾಸ್ಟೆಲ್‍ಗಳ ವೈಶಿಷ್ಟ್ಯ. ಜಾಗತಿಕವಾಗಿ ಬೃಹತ್ ಜಾಲ ಹೊಂದಿರುವ ‘ಹಾಸ್ಟೆಲಿಂಗ್ ಇಂಟರ್‌ನ್ಯಾಷನಲ್‌ ’, ಬಹುತೇಕ ಎಲ್ಲ ದೇಶಗಳ ಮಹಾನಗರಗಳಲ್ಲಿನ ಯೂತ್ ಹಾಸ್ಟೆಲ್‍ಗಳ ಸಂಪರ್ಕ ಕಲ್ಪಿಸುತ್ತದೆ. ಭಾರತದಲ್ಲಿ ಕಾರ್ಯನಿರ್ವಹಿಸುವ ‘ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ’ದ ಸದಸ್ಯರು ‘ಹಾಸ್ಟೆಲಿಂಗ್ ಇಂಟರ್‌ನ್ಯಾಷನಲ್‌’ ಸಹಯೋಗದಲ್ಲಿ ಜಗತ್ತಿನ ವಿವಿಧೆಡೆ ಇರುವ ಹಾಸ್ಟೆಲ್‍ಗಳ ಸೌಲಭ್ಯ ಪಡೆಯಲು ಅರ್ಹರು.

ಯೂತ್ ಹಾಸ್ಟೆಲ್‍ಗಳಲ್ಲಿ ಲಭ್ಯವಿರುವ ಸೇವೆಗಳು ಹಲವು. ವೈಫೈ, ಕುಡಿಯುವ ನೀರು, ಸ್ನಾನದ ಸೋಪ್- ಶಾಂಪೂ, ಟವಲ್ಸ್, ಕಂಪ್ಯೂಟರ್ ಬಳಕೆ ಉಚಿತ. ಜತೆಗೆ ಅಡುಗೆ ಕೋಣೆಯೂ ಇರುತ್ತದೆ! ಅಲ್ಲೆಲ್ಲ ಈಗ ಕಾಣುವ ‘ಇಂಡಿಯನ್ ಸ್ಟೋರ್’ಗಳಲ್ಲಿ ಬೇಕೆನಿಸಿದ ಪದಾರ್ಥ ತಂದು ನಾವೇ ಅಡುಗೆ ಮಾಡಿಕೊಳ್ಳಬಹುದು. ಊಟ ಮಾಡುತ್ತ ವಿಡಿಯೊ ಕಾಲ್ ಮಾಡಿ ಕುಟುಂಬದವರ ಜತೆ ಮಾತಾಡಬಹುದು. ನಿಮ್ಮಂತೆಯೇ ಬೇರೆ ದೇಶದವರು ಅಡುಗೆ ಮಾಡಿ, ಟೇಬಲ್ ಮೇಲೆ ತಂದಿಟ್ಟರೆ ಪರಸ್ಪರ ಹಂಚಿಕೊಂಡು ಊಟ ಮಾಡಬಹುದು. ಸೌಂದರ್ಯಕ್ಕೆ ಸಾಟಿಯೇ ಇಲ್ಲವಂತೆ ಕಂಗೊಳಿಸುವ ಫ್ಲಾರೆನ್ಸ್ ಆಗಲೀ, ಆಲ್ಫ್ಸ್ ಪರ್ವತಗಳ ಬುಡದಲ್ಲಿರುವ ಟ್ಯುರಿನ್ ಆಗಲೀ ಕೈಗೆಟುಕುವ ದರದಲ್ಲಿ ಇಲ್ಲ ಎನ್ನುವಂತಿಲ್ಲ. ಎಲ್ಲೆಡೆಯೂ ಯೂತ್ ಹಾಸ್ಟೆಲ್‍ಗಳು ಪ್ರವಾಸಿಗರ ಕನಸನ್ನು ನನಸು ಮಾಡುತ್ತವೆ. ಇಟಲಿಯ ಮಿಲಾನ್‍ನ ಯೂತ್ ಹಾಸ್ಟೆಲ್‍ನಲ್ಲಿ ಪರಿಚಯವಾದ ಭೂತಾನ್‍ನ ಯುವರೈತನೊಬ್ಬ ತನ್ನ ವರ್ಷದ ಬಜೆಟ್ಟಿನಲ್ಲಿ ಒಂದು ಪಾಲನ್ನು ವಿದೇಶ ಸುತ್ತಲೆಂದೇ ತೆಗೆದಿಡುವುದನ್ನು ಹೇಳಿಕೊಂಡ; ಮತ್ತು ಆತ ಎಲ್ಲ ಕಡೆ ವಾಸ್ತವ್ಯ ಮಾಡುವುದು ಯೂತ್ ಹಾಸ್ಟೆಲ್‍ನಲ್ಲೇ ಆಗಿತ್ತು.

ಪ್ರತಿ ಮೂರು ವರ್ಷಗಳಿಗೊಮ್ಮೆ ಸಮೀಕ್ಷೆ- ಪರಿಶೀಲನೆ ಮಾಡಿ ಅರ್ಹವಾದವುಗಳಿಗೆ ಮಾತ್ರ ಪ್ರಮಾಣಪತ್ರ ಕೊಡುವುದನ್ನು ‘ಹಾಸ್ಟೆಲಿಂಗ್ ಇಂಟರ್‌ನ್ಯಾಷನಲ್‌’ ಮಾಡುತ್ತ ಬಂದಿದೆ. ಪ್ರವಾಸಿಗರ ಅಭಿಪ್ರಾಯ, ಟೀಕೆ- ಟಿಪ್ಪಣಿಗಳೇ ಇದಕ್ಕೆ ಮಾನದಂಡ. ಹೀಗಾಗಿ ಯೂತ್ ಹಾಸ್ಟೆಲ್‍ಗಳು ಸ್ಪರ್ಧೆಗೆ ಇಳಿದಂತೆ ಸೌಲಭ್ಯ ಕೊಡುತ್ತವೆ ಹಾಗೂ ತಮ್ಮ ಹಾಸ್ಟೆಲ್ ಬಗ್ಗೆ ಪ್ರಚಾರ ಮಾಡುತ್ತಲೇ ಇರುತ್ತವೆ. ಕಡಿಮೆ ದರದಲ್ಲಿ ಒಳ್ಳೆಯ ಸೌಲಭ್ಯ ಕೊಡುವ ಹಾಸ್ಟೆಲ್‍ಗಳತ್ತ ಪ್ರವಾಸಿಗರು ಧಾವಿಸುವುದು ಸಹಜ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತ, ನೇಪಾಳ ಇತರ ದೇಶಗಳು ತಮ್ಮಲ್ಲಿನ ಯೂತ್ ಹಾಸ್ಟೆಲ್‍ಗಳ ಪ್ರಚಾರಕ್ಕೆ ಯಾಕೋ ಆದ್ಯತೆ ಕೊಡುತ್ತಿಲ್ಲ.

* * *

ಯುವಜನತೆಗೆ ಪ್ರವಾಸ ಈಗ ಬರೀ ಸುತ್ತಾಟವಾಗಿ ಉಳಿದಿಲ್ಲ. ಮನರಂಜನೆ ಜತೆಗೆ ಅಧ್ಯಯನ, ಕಲಾಸಕ್ತಿ, ಸಂಸ್ಕೃತಿ ಪರಿಚಯ, ಚಾರಣ, ಇತಿಹಾಸ ಅರಿಯುವುದು ಇತ್ಯಾದಿಗಳೆಲ್ಲ ಅದರಲ್ಲಿ ಸೇರಿವೆ. ಪ್ರವಾಸದಲ್ಲಿ ವಸತಿ ವ್ಯವಸ್ಥೆಯೇ ಅತಿ ದೊಡ್ಡ ಖರ್ಚು. ಅದೊಂದೇ ಪ್ರವಾಸಕ್ಕೆ ಪ್ರಮುಖ ಅಡ್ಡಿ ಎಂದಾದರೆ, ಅದಕ್ಕೆ ‘ಯೂತ್ ಹಾಸ್ಟೆಲ್’ಗಳು ಒಂದಷ್ಟು ಪರಿಹಾರ ಕೊಡುತ್ತವೆ. ನಾಲ್ಕೈದು ತಿಂಗಳು ಮೊದಲೇ ಕರಾರುವಾಕ್ಕಾದ ಯೋಜನೆ ಸಿದ್ಧಪಡಿಸಿದರೆ ಕಡಿಮೆ ಖರ್ಚಿನಲ್ಲೇ ಬೇಕೆನಿಸಿದ ಕಡೆ ಸುತ್ತಾಡಲು ಸಾಧ್ಯ.
(ಜಗತ್ತಿನ ವಿವಿಧ ನಗರಗಳಲ್ಲಿನ ಯೂತ್ ಹಾಸ್ಟೆಲ್‍ಗಳ ಮಾಹಿತಿಗೆ: www.hihostels.com)⇒ಚಿತ್ರಗಳು: ಅಂತರ್ಜಾಲದಿಂದ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !