ಯುವ ಸಮೂಹದ ಅಂತರಾಳ: ಭಿನ್ನ ಧ್ವನಿ–ಒಂದೇ ಭಾವ

ಭಾನುವಾರ, ಏಪ್ರಿಲ್ 21, 2019
32 °C

ಯುವ ಸಮೂಹದ ಅಂತರಾಳ: ಭಿನ್ನ ಧ್ವನಿ–ಒಂದೇ ಭಾವ

Published:
Updated:

ತಮ್ಮ ಒಂದು ಮತ ದೇಶದಲ್ಲಿ ಏನೆಲ್ಲ ಬದಲಾವಣೆಗೆ ಕಾರಣವಾಗಬಹುದು ಎಂಬ ಸಹಜ ಕುತೂಹಲದೊಂದಿಗೆ ಯುವ ಸಮೂಹ ಮೊದಲ ಬಾರಿಗೆ ಮತ ಚಲಾಯಿಸಲು ತುದಿಗಾಲ ಮೇಲೆ ನಿಂತಿದೆ. ಮತದಾನ ಸಂವಿಧಾನದತ್ತ ಹಕ್ಕು ಮತ್ತು ಆದ್ಯ ಕರ್ತವ್ಯ ಎಂಬ ಪ್ರೌಢಿಮೆ ಇವರ ಮಾತುಗಳಲ್ಲಿ ಸ್ಪಷ್ಟ. ಪಕ್ಷ ಮತ್ತು ವ್ಯಕ್ತಿಗಳಿಗಿಂತ ದೇಶದ ಪ್ರಸ್ತುತ ರಾಜಕೀಯ ವಾತಾವರಣ, ಜನಪ್ರತಿನಿಧಿಗಳ ಕಾರ್ಯವೈಖರಿ, ನಿರುದ್ಯೋಗ, ಉದ್ಯೋಗ ಸೃಷ್ಟಿಯಂತಹ ಜ್ವಲಂತ ಸಮಸ್ಯೆ ಮತ್ತು ಪರಿಹಾರದಂತಹ ಗಂಭೀರ ವಿಷಯಗಳ ಕುರಿತು ಮಾತನಾಡುವ ಪ್ರೌಢಿಮೆಯನ್ನೂ ಮೆರೆದಿದ್ದಾರೆ. ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರಸಕ್ತ ಚುನಾವಣೆಯಲ್ಲಿ ತಮ್ಮ ಪಾತ್ರದ ಬಗ್ಗೆ ‘ಮೆಟ್ರೊ’ ಜತೆ ಅನಿಸಿಕೆ ಹಂಚಿಕೊಂಡಿದ್ದಾರೆ. 

ಬದಲಾವಣೆ ಸಾಧ್ಯ

ನನ್ನದೊಂದು ಮತದಿಂದ ಏನು ಮಹಾ ಬದಲಾವಣೆ ಸಾಧ್ಯ ಎಂಬ ಸಿನಿಕತತನ ಬೇಡ. ಎಲ್ಲರೂ ಮತ ಹಾಕಿದರೆ ಖಂಡಿತ ಬದಲಾವಣೆ ಸಾಧ್ಯ.ಮತದಾನವನ್ನು ಯುವ ಜನಾಂಗ ಸಾಕಷ್ಟು ಗಂಭೀರವಾಗಿ ತೆಗೆದುಕೊಂಡಿದೆ. ಉತ್ತರ ಭಾರತದ ವಿವಿಧ ರಾಜ್ಯಗಳ ನನ್ನ ಸಹಪಾಠಿಗಳೆಲ್ಲ ರಜೆ ಹಾಕಿ ಮತ ಹಾಕಲು ತೆರಳುತ್ತಿದ್ದಾರೆ.  ರಾಜಕೀಯ ಎಂದರೆ ಮೂಗು ಮುರಿಯಬೇಕಾಗಿಲ್ಲ. ರಾಜಕೀಯ ಪಕ್ಷಗಳು ಯುವ ಜನತೆಗೆ ಅವಕಾಶ ಮಾಡಿಕೊಡಬೇಕು. ಅವರಲ್ಲಿ ಹೊಸ ಆಲೋಚನೆಗಳಿವೆ. ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಬಲ್ಲ ಹೊಸ ವಿಚಾರಗಳ ನಾಯಕರು ನಮಗೆ ಬೇಕಾಗಿದೆ. ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಿಗಿಂತ ನಮ್ಮ ಕ್ಷೇತ್ರದ ಬೇಕು, ಬೇಡಿಕೆಗಳಿಗೆ ಸ್ಪಂದಿಸುವ ಮತ್ತು ದೆಹಲಿಯಲ್ಲಿ ನಮ್ಮ ಧ್ವನಿಯಾಗಬಲ್ಲ ಜನಪ್ರತಿನಿಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಬೇಕಿದೆ. 

–ಸಹನಾ ದೇಸಾಯಿ, ವೈದ್ಯಕೀಯ ವಿದ್ಯಾರ್ಥಿನಿ, ಕೆಂಪೇಗೌಡ ವೈದ್ಯಕೀಯ ಕಾಲೇಜು 

ನಿರಾಶಾಭಾವ ಬೇಡ

ಸಂಸದರನ್ನು ಆಯ್ಕೆ ಮಾಡಲು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದರಿಂದ ಸಹಜವಾಗಿ ಕುತೂಹಲ ಇದೆ. ಯುವ ಜನಾಂಗದ ಧ್ವನಿಯಾಗಬಲ್ಲ ಅಭ್ಯರ್ಥಿ ನಮ್ಮ ಪ್ರತಿನಿಧಿಯಾಗಬೇಕು ಎಂಬುವುದು ನಮ್ಮ ಆಶಯ. ನಮ್ಮ ಒಂದು ಮತ ಏನು ಮಾಡಬಲ್ಲದು ಎಂಬ ನಿರಾಶಭಾವ ಬೇಡ. ಮತದಾನ ನಮ್ಮ ಕರ್ತವ್ಯ. ಒಂದು ಮತದ ಶಕ್ತಿ ಏನು ಎಂಬುವುದು ನಮಗೆ ಗೊತ್ತು. ಉದ್ಯೋಗ ಅವಕಾಶಗಳು ಕಡಿಮೆಯಾಗುತ್ತಿವೆ. ಹೊಸ ಉದ್ಯೋಗ ಸೃಷ್ಟಿಯಾದಾಗ ಮಾತ್ರ ಯುವ ಜನಾಂಗದ ಭವಿಷ್ಯ ಉಜ್ವಲವಾಗಬಲ್ಲದು. ಸದ್ಯ ನಮ್ಮನ್ನು ಪ್ರತಿನಿಧಿಸುವ ಸಂಸದರು ಯಾರು ಎಂಬುವುದು ನಮಗೆ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಅವರ ಮುಖ ನೋಡಿದ ನೆನಪು. ಅದಾದ ನಂತರ ಅವರು ಕ್ಷೇತ್ರದತ್ತ ಸುಳಿದಿಲ್ಲ. ನಡುವೆ ಒಂದು ಅಂಗಡಿ ಉದ್ಘಾಟನೆಗೆ ಮುಖ ತೋರಿಸಿದ್ದರು. ಮತ್ತೆ ಈಗ ಮತ ಕೇಳಲು ಬಂದಿದ್ದಾರೆ. ಇಂತಹ ಜನಪ್ರತಿನಿಧಿಗಳಿದ್ದರೆ ಏನು ಪ್ರಯೋಜನ? 

– ರಕ್ಷಿತಾ ಎಸ್‌., ಅಪೂರ್ವ ಡಿ. ನಾಯಕ್ ಮತ್ತು ಅಮೃತಾ ಪಿ., ಬಿ.ಕಾಂ ವಿದ್ಯಾರ್ಥಿಗಳು, ಎಂ.ಇ.ಎಸ್‌ ಕಾಲೇಜು

ಪಕ್ಷ, ವ್ಯಕ್ತಿ ಮುಖ್ಯವಲ್ಲ, ಅಭಿವೃದ್ಧಿ ಮುಖ್ಯ

ಇದು ನನ್ನ ಮೊದಲ ಮತದಾನ. ಚುನಾವಣೆಯಲ್ಲಿ ಗೆದ್ದ ಬಳಿಕ ಸಂಸದರು ದೆಹಲಿಯಲ್ಲಿ ಸೆಟಲ್‌ ಆಗಿ ಬಿಡ್ತಾರೆ. ಕ್ಷೇತ್ರದ ಬಗ್ಗೆ ಗಮನ ಹರಿಸುವುದಿಲ್ಲ. ಇಲ್ಲಿ  ನರೇಂದ್ರ ಮೋದಿ ಅಥವಾ ರಾಹುಲ್‌ ಗಾಂಧಿ, ಬಿಜೆಪಿ ಅಥವಾ ಕಾಂಗ್ರೆಸ್‌ ಮುಖ್ಯವಲ್ಲ. ಕ್ಷೇತ್ರ ಮತ್ತು ದೇಶದ ಅಭಿವೃದ್ಧಿ ಮುಖ್ಯ. ನಮ್ಮ ಧ್ವನಿಯನ್ನು ಸಮರ್ಥವಾಗಿ ಪ್ರತಿನಿಧಿಸುವ ಪ್ರತಿನಿಧಿಗಳು ನಮಗೆ ಬೇಕು. ಅಭಿವೃದ್ಧಿ ನಿಂತ ನೀರಾಗಬಾರದು. ಅಭಿವೃದ್ಧಿ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಶಾಸಕರ ಮತ್ತು ಸಂಸದರ ವಿಶೇಷ ಕ್ಷೇತ್ರ ಅಭಿವೃದ್ಧಿ ನಿಧಿ ಸಮರ್ಪಕ ಬಳಕೆಯಾಗಬೇಕು. ಬಹಳಷ್ಟು ಜನರ ಸಂಸದರ ನಿಧಿ ಬಳಕೆಯಾಗದೆ ಮರಳಿ ಹೋಗಿದೆ. ಇದು ನಿಜಕ್ಕೂ ವಿಪರ್ಯಾಸ. ಬಹಳಷ್ಟು ನನ್ನ ಸ್ನೇಹಿತರು ‘ನೋಟಾ’ ಮತ ಚಲಾಯಿಸುವುದಾಗಿ ನಿರ್ಧಿರಿಸಿದ್ದಾರೆ. ಮತ ಹಾಕದಿದ್ದರೆ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನೂ ಕಳೆದುಕೊಳ್ಳುತ್ತೇವೆ. ಮತದಾರರು ಕೂಡ ಹಣ, ಮದ್ಯದಂತಹ ಆಮಿಷಗಳಿಗೆ ಬಲಿಯಾಗಿ ಮತವನ್ನು ಮಾರಿಕೊಳ್ಳಬಾರದು. ಸೇವಾ ಮನೋಭಾವ ಮತ್ತು ನಾಯಕತ್ವಕ್ಕೆ ನನ್ನ ಮತ.   

-ಸಾತ್ವಿಕ್‌ ವಿ. ಹಿರೇಮಠ, ಎಂಜಿನಿಯರಿಂಗ್‌ ವಿದ್ಯಾರ್ಥಿ, ಆರ್‌.ವಿ. ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ 

ಸರ್ಕಾರಿ ಶಾಲೆ ಸುಧಾರಿಸಿ

ದೇಶದ ರಾಜಕೀಯ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಬೇಕು. ಹೊಸಬರಿಗೆ, ಯುವ ಜನಾಂಗಕ್ಕೆ ಅವಕಾಶ ಸಿಗಬೇಕು. ಯಾವ ಪಕ್ಷಗಳೂ ಯುವಕರಿಗೆ ಪ್ರೋತ್ಸಾಹ ನೀಡುತ್ತಿಲ್ಲ. ರಾಜಕೀಯ ಎಂದರೆ ಹಣ ಮಾಡುವ ದಂದೆಯಾಗಿದೆ. ಸಭ್ಯರು ಯಾರೂ ಇತ್ತ ಸುಳಿಯುತ್ತಿಲ್ಲ. ದೇಶದ ಕೊಳೆಯನ್ನು ಸ್ವಚ್ಛಗೊಳಿಸಲು ರಾಜಕೀಯ ಕ್ಷೇತ್ರಕ್ಕಿಂತ ಸರಿಯಾದ ಕ್ಷೇತ್ರ ಬೇರೊಂದು ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಇಂದಲ್ಲ, ನಾಳೆ ದೇಶಕ್ಕೆ ಒಳ್ಳೆಯದಾಗುತ್ತದೆ ಎಂಬ ಭರವಸೆ ಇದೆ. ಸರ್ಕಾರಿ ಶಾಲೆ, ಸರ್ಕಾರಿ ಆಸ್ಪತ್ರೆಗಳು ಸುಧಾರಿಸಬೇಕಿದೆ. ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸುವ ಕೆಲಸ ಮೊದಲು ಆಗಬೇಕಿದೆ. ಉದ್ಯೋಗ ಸೃಷ್ಟಿ, ಯುವಕರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ವಾತಾವರಣ ನಿರ್ಮಾಣವಾಗಬೇಕಿದೆ.  

-ಚರಣ್‌ ಸೂರ್ಯ ಬಿಸಿಎ ವಿದ್ಯಾರ್ಥಿ, ಶೇಷಾದ್ರಿಪುರಂ ಕಾಲೇಜು

ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಯಾವಾಗ?

ಸ್ವಚ್ಛ, ದಕ್ಷ ಮತ್ತು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ಮಾತ್ರ ರಾಜಕೀಯ ಮತ್ತು ರಾಜಕಾರಣದ ಬಗ್ಗೆ ಜನರಲ್ಲಿ ವಿಶ್ವಾಸ ಚಿಗುರೊಡೆಯಬಹುದು. ಜನಪ್ರತಿನಿಧಿಗಳಾದವರು ಚುನಾವಣೆಯಲ್ಲಿ ಮಾತ್ರ ಕಾಣಿಸಿಕೊಂಡರೆ ಸಾಲದು. ಸದಾ ಜನರ ಮಧ್ಯೆ ಇದ್ದರೆ ಮಾತ್ರ ಅವರ ಸಮಸ್ಯೆ ಅರ್ಥ ಮಾಡಿಕೊಳ್ಳಬಲ್ಲರು. ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ, ಪರಿಸರ ಮಾಲಿನ್ಯ, ನೀರಿನ ಸಮಸ್ಯೆ ಬಗ್ಗೆ ಯಾವ ಜನಪ್ರತಿನಿಧಿಯೂ ಇದುವರೆಗೂ ಗಂಭೀರವಾಗಿ ಚಿಂತಿಸಿ, ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿಲ್ಲ. ಬೆಂಗಳೂರು ಸಿಂಗಾಪುರದಂತೆ ಸ್ವಚ್ಛ ನಗರವಾಗಬೇಕು. ಇಲ್ಲಿಯ ಟ್ರಾಫಿಕ್‌ ಸಮಸ್ಯೆ ಬಗೆ ಹರಿಯಬೇಕು. ಅಂಥವರಿಗೆ ನನ್ನ ಮತ ಹಾಕುತ್ತೇನೆ. 

-ರಾಹುಲ್‌ ಶ್ರೀರಾಮ್‌, ಬಿ.ಎ ವಿದ್ಯಾರ್ಥಿ, ಎಂಇಎಸ್‌ ಕಾಲೇಜು 

ಹನಿ, ಹನಿಗೂಡಿದರೆ ಹಳ್ಳ

ಹನಿ, ಹನಿಗೂಡಿದರೆ ಹಳ್ಳ ಎಂಬಂತೆ ನಮ್ಮ ಒಂದೊಂದು ಮತವೂ ದೇಶದ ಭವಿಷ್ಯ ರೂಪಿಸುವ ನಿರ್ಣಾಯಕ ಪಾತ್ರವಹಿಸುತ್ತವೆ. ಶಿಕ್ಷಣ ಮತ್ತು ರಾಜಕೀಯ ವ್ಯವಸ್ಥೆಗಳು ಆಮೂಲಾಗ್ರವಾಗಿ ಬದಲಾಗಬಹುದು. ಅಂದಾಗ ಮಾತ್ರ ದೇಶದ ಭವಿಷ್ಯ ಬದಲಾಗಲು ಸಾಧ್ಯ. ನಮ್ಮ ಪ್ರತಿನಿಧಿಸುವ ಜನಪ್ರತಿನಿಧಿಗಳು ಜವಾಬ್ದಾರಿಯಿಂದ ವರ್ತಿಸಬೇಕು. ಅನಾಗರಿಕರಂತೆ ವರ್ತಿಸುವ ನಾಯಕರನ್ನು ಕಂಡು ಅವರ ಮೇಲೆ ಭರವಸೆ ಹೊರಟು ಹೋಗಿದೆ. ರಾಜಕೀಯ ಪ್ರವೇಶಕ್ಕೆ ಕನಿಷ್ಠ ವಿದ್ಯಾರ್ಹತೆಯನ್ನು ಮಾನದಂಡವಾಗಿ ನಿಗದಿ ಮಾಡಬೇಕು. ದೇಶ ಎಂದರೆ ಭೂಪಟದಲ್ಲಿ ಕಾಣವ ನಕ್ಷೆ ಅಲ್ಲ. ನನ್ನೊಂದಿಗೆ ಇರುವ ಜನರು. ದೇಶದ ಪ್ರಗತಿ ಎಂದರೆ ಜನರ ಕಲ್ಯಾಣ ಎಂದು ತಿಳಿದ ಜನನಾಯಕರು ನಮಗೆ ಬೇಕಾಗಿದೆ. ನಕಾರಾತ್ಮಕ ಧೊರಣೆಯ ನಮ್ಮ ಜನಪ್ರತಿನಿಧಿಗಳನ್ನು ಕಂಡರೆ ನಮಗೆ ನಿರಾಸೆಯಾಗುತ್ತದೆ. ನಮ್ಮ ಜನಪ್ರತಿನಿಧಿ ಯಾರು ಎಂಬ ಬಗ್ಗೆ ನಮಗೆ ಗೊತ್ತಿಲ್ಲ.  

-ಕೃತಿ ಎಂ.ಎಸ್‌., ವೈಷ್ಣವಿ ಎಂ.ಆರ್., ಬಿ.ಕಾಂ ವಿದ್ಯಾರ್ಥಿನಿಯರು, ಎಂ.ಇ.ಎಸ್‌ ಕಾಲೇಜು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !