ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಬಡಮಕ್ಕಳ ಕಲ್ಯಾಣಕ್ಕಾಗಿ ಬೀದಿಗಳಿಗಿಳಿಯುವ ಸ್ಪೈಡರ್‌ಮ್ಯಾನ್, ಏಲಿಯನ್ಸ್

Last Updated 19 ಸೆಪ್ಟೆಂಬರ್ 2019, 9:58 IST
ಅಕ್ಷರ ಗಾತ್ರ

ಶ್ರೀ ಕೃಷ್ಣ ಜನ್ಮಾಷ್ಟಮಿ ಬಂದರೆ ಸಾಕು ಹಾಲಿವುಡ್ ಸಿನಿಮಾಗಳ ಸ್ಪೈಡರ್‌ಮ್ಯಾನ್, ಮಮ್ಮಿ, ಅವತಾರ್‌ನ ಏಲಿಯನ್‌ಗಳೆಲ್ಲ ಉಡುಪಿಯ ಬೀದಿಗಳಿಗಿಳಿಯುತ್ತಾರೆ. ಡಾನ್ಸ್ ಮಾಡುತ್ತಾರೆ. ನಟನೆ ಮಾಡುತ್ತಾರೆ. ಕೆಲಕಾಲ ಜನರನ್ನು ರಂಜಿಸುತ್ತಾರೆ. ಒಮ್ಮೊಮ್ಮೆ ಅಚ್ಚರಿಯನ್ನೂ ಮೂಡಿಸುತ್ತಾರೆ..!

ಅರೆ! ಇವರೆಲ್ಲ ಉಡುಪಿಗೆ ಯಾಕೆ ಬರ್ತಾರೆ, ಹೇಗೆ ಬರ್ತಾರೆ, ಕೃಷ್ಣಜನ್ಮಾಷ್ಟಮಿ ದಿನವೇ ಯಾಕೆ ಬರ್ತಾರೆ… ಎಂತೆಲ್ಲ ತಲೆಯಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಿದ್ದೀರಲ್ಲವಾ?

ನಿಜ. ಕೃಷ್ಣಜನ್ಮಾಷ್ಟಮಿ ದಿನ ಉಡುಪಿಯ ಬೀದಿಗಳಲ್ಲಿ ಇಂಥವರೆಲ್ಲ ಓಡಾಡುತ್ತಾರೆ. ಆದರೆ, ಅವರು ನಿಜವಾದ ಹೀರೊಗಳಲ್ಲ. ರವಿ ಕಟಪಾಡಿಯವರು ಅಂಥವರ ವೇಷ ಧರಿಸಿ ಜನರನ್ನು ರಂಜಿಸುತ್ತಾರೆ. ಈ ಬಣ್ಣ ಬಣ್ಣದ ವೇಷದ ಹಿಂದೆ ಕೇವಲ ರಂಜನೆಯಷ್ಟೇ ಇಲ್ಲ. ಬದಲಿಗೆ ಬಹುದೊಡ್ಡ ಸಾಮಾಜಿಕ ಕಾಳಜಿ, ಕಳಕಳಿಯೂ ಇದೆ.

ಅದೇನಪ್ಪಾ ಅಂಥ ಸೇವೆ ಎನ್ನುತ್ತೀರಾ?
ಹೌದು, ರವಿ ಕಟಪಾಡಿ ಹತ್ತುವರ್ಷಗಳಿಂದ ವೇಷ ಹಾಕುತ್ತಿದ್ದಾರೆ. ಮೊದಲು ನಾಲ್ಕು ವರ್ಷ ಜನರನ್ನು ರಂಜಿಸಲು ವೇಷ ಹಾಕುತ್ತಿದ್ದರು. ಆರು ವರ್ಷಗಳಿಂದೀಚೆಗೆ ವೇಷ ಹಾಕಿ, ಜನರಿಂದ ಹಣ ಸಂಗ್ರಹಿಸಿ, ಆ ಹಣವನ್ನು ಬಡ ಮಕ್ಕಳ ಕಲ್ಯಾಣಕ್ಕಾಗಿ ವಿನಿಯೋಗಿಸುತ್ತಿದ್ದಾರೆ. ಹೀಗೆ ಮಾಡುವುದಕ್ಕೆ ಒಂದು ಕಾರಣವೂ ಇದೆ.

ನಾಲ್ಕೈದು ವರ್ಷಗಳ ಹಿಂದೆ ಟಿವಿಯಲ್ಲಿ ಬಡತಾಯಿಯೊಬ್ಬಳು ತನ್ನ ಮಗುವಿನ ಕಾಯಿಲೆಯ ಚಿಕಿತ್ಸೆಗಾಗಿ ಹಣ ಹೊಂದಿಸಲಾಗದೆ ಅಳುವಂತಹ ದೃಶ್ಯವನ್ನು ನೋಡಿದ್ದರು. ಬಡತನದ ನೋವು ಎಂಥದ್ದು ಎಂದು ಗೊತ್ತಿರುವ ರವಿಗೆ, ಆ ತಾಯಿಯ ನೋವು ಹೃದಯ ತಟ್ಟಿತು. ತನ್ನ ವೇಷದಾಟದಿಂದ ಆಕೆಯ ಮಗುವಿಗೆ ಸಹಾಯವಾಗಬಹುದೇ ಎಂದು ಯೋಚಿಸಿದರು. ಆ ವರ್ಷದಿಂದಲೇ ವೇಷ ಹಾಕುತ್ತಾ ಹಣ ಸಂಗ್ರಹಿಸಲು ಶುರು ಮಾಡಿದರು. ಆ ವರ್ಷ ವೇಷ ಹಾಕಿ ಊರೂರು ಸುತ್ತಿದಾಗ ಅವರಿಗೆ ಸಂಗ್ರಹವಾಗಿದ್ದು ಬರೋಬ್ಬರಿ ₹1,40,810. ಇಷ್ಟೂ ಹಣವನ್ನು ಟಿವಿಯಲ್ಲಿ ಕಂಡಿದ್ದ ಮಗುವಿನ ತಾಯಿಯ ಕೈಗಿತ್ತರು. ಅಷ್ಟೊ ಇಷ್ಟೋ ಸಾವಿರ ಸಿಗಬಹುದು ಎಂದುಕೊಂಡಿದ್ದ ಆ ತಾಯಿಗೆ, ಲಕ್ಷದಷ್ಟು ಹಣ ನೋಡಿದಾಗ ಮೂಕವಿಸ್ಮಿತರಾಗಿದ್ದರು. ಹಣ ಪಡೆದ ತಾಯಿಯ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ಇಡೀ ಘಟನೆ ರವಿಯವರನ್ನು ವಿಚಲಿತರನ್ನಾಗಿಸಿತ್ತು. ಅದೇ ದಿನ ‘ನಾನು ಇನ್ನು ಮುಂದೆ ಪ್ರತಿವರ್ಷ ವೇಷ ಹಾಕಿ, ಅದರಿಂದ ಬರುವ ಹಣವನ್ನೆಲ್ಲ ಬಡ ಮಕ್ಕಳ ಕಲ್ಯಾಣಕ್ಕೆ ಬಳಸುತ್ತೇನೆ’ ಎಂದು ಸಂಕಲ್ಪ ಮಾಡಿದರು. ಅಂದಿನಿಂದ ಇಂದಿನವರೆಗೂ (ಆರು ವರ್ಷಗಳಿಂದ) ವೇಷ ಧರಿಸಿ ಸಂಗ್ರಹಿಸಿದ ಹಣವನ್ನು ಬಡಮಕ್ಕಳ ಕ್ಷೇಮಾಭಿವೃದ್ಧಿಗಾಗಿಯೇ ಮೀಸಲಿ ರಿಸಿದ್ದಾರೆ. ಮೊದಲ ವರ್ಷ ₹1ಲಕ್ಷದಷ್ಟು ಹಣ ಸಂಗ್ರಹವಾಗಿತ್ತು. 2ನೇ ವರ್ಷಕ್ಕೆ ಅದು ₹3ಲಕ್ಷವಾಯಿತು. ಮೂರನೇ ವರ್ಷ ₹4.65 ಲಕ್ಷ, ಹೀಗೆ ಇಲ್ಲಿಯವರೆಗೆ ₹44,55,587 ಸಂಗ್ರವಾಗಿದ್ದು, ಈ 6 ವರ್ಷದಲ್ಲಿ ಒಟ್ಟು 28 ಮಕ್ಕಳಿಗೆ ಈ ಹಣ ನೀಡಿದ್ದಾರೆ.

ಬಡತನದ ಬದುಕು
ಇಷ್ಟೆಲ್ಲ ಸಾಮಾಜಿಕ ಕಳಕಳಿ ಹೊಂದಿರುವ ಕಟಪಾಡಿ ಮೂಲದ ರವಿ, ಬಡತನದಲ್ಲೇ ಬೆಳೆದವರು. ಹಣವಿಲ್ಲದ ಕಾರಣಕ್ಕೆ ಒಂಬತ್ತನೇ ತರಗತಿಗೆ ಶಾಲೆ ಬಿಟ್ಟರು. ಜೀವನಕ್ಕಾಗಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನಕ್ಕೆ ದಾರಿ ಕಂಡುಕೊಂಡಿದ್ದರು. ಹೀಗಿದ್ದಾಗ ಒಮ್ಮೆ ಕೃಷ್ಣಜನ್ಮಾಷ್ಟಮಿಗೆ ವೇಷ ಹಾಕುವ ಮನಸ್ಸಾಯಿತು. ತಂದೆ ಹಾಗೂ ಮನೆಯವರ ಬಳಿ ಕೇಳಿದಾಗ ಅವರು ಸಂತಸದಿಂದ ಒಪ್ಪಿದ್ದರು. ಮೊದಲು ಸ್ಪೈಡರ್‌ಮ್ಯಾನ್ ವೇಷದ ಮೂಲಕ ಅಷ್ಟಮಿಯ ಸಮಯದಲ್ಲಿ ಜನರ ಗಮನ ಸೆಳೆದಿದ್ದರು. ಈಗಲೂ ಉಡುಪಿಯ ಮಂದಿ ರವಿ ಅವರನ್ನು ಸ್ಪೈಡರ್‌ಮ್ಯಾನ್ ಎಂದೇ ಕರೆಯುತ್ತಾರೆ.

ಅಷ್ಟಮಿ ಸಮಯದಲ್ಲಿ ಹುಲಿ ವೇಷ ಹಾಕಿ ಜನರನ್ನು ರಂಜಿಸುವುದು ಉಡುಪಿಯಲ್ಲಿ ಸಾಮಾನ್ಯ. ಆದರೆ ರವಿ ಹಾಕುತ್ತಿದ್ದದ್ದೆಲ್ಲವೂ ಹಾಲಿವುಡ್‌ ಸಿನಿಮಾಗಳಲ್ಲಿ ಬರುವ ಭಿನ್ನ ವಿಭಿನ್ನ ಪಾತ್ರಧಾರಿ
ಗಳ ವೇಷಗಳನ್ನು. ಇದಕ್ಕೆ ಕಾರಣ ಅವರಲ್ಲಿದ್ದ ಇಂಗ್ಲಿಷ್ ಸಿನಿಮಾ ಪ್ರೀತಿ. ಇವರು ಹೆಚ್ಚಾಗಿ ಇಂಗ್ಲಿಷ್ ಸಿನಿಮಾಗಳನ್ನೇ ನೋಡುತ್ತಿದ್ದು, ತಮ್ಮ ವೇಷಕ್ಕೂ ಹಾಲಿವುಡ್‌ ಸಿನಿಮಾಗಳ ವಿಚಿತ್ರ ಪಾತ್ರಗಳನ್ನೇ ಆರಿಸಿಕೊಳ್ಳುತ್ತಾರೆ.

ದುಬಾರಿ ಖರ್ಚು
‍ಪ್ರತಿ ವರ್ಷ ರವಿ ಹಾಕುವ ವೇಷಕ್ಕೆ ಸುಮಾರು ₹1.50 ಲಕ್ಷದಷ್ಟು ಖರ್ಚು ಬರುತ್ತದೆ. ಹಾಲಿವುಡ್ ರೇಂಜ್ ನಟರನ್ನು ಮೀರಿಸುವ ಸೌಂದರ್ಯ ಅವರದ್ದು. ಇವರ ರೂಪಕ್ಕೆ ಬೇಕಾಗುವ ಬಣ್ಣ, ಲೆನ್‌, ಬಟ್ಟೆಯಂತಹ ಸಾಮಗ್ರಿಗಳನ್ನು ಹಾಂಕಾಂಗ್, ಕ್ಯಾಲಿಪೋನಿರ್ಯಾಗಳಿಂದ ತರಿಸುತ್ತಾರೆ.

‘ವೇಷ ಹಾಕುವುದು ನೀವು, ನಿಮಗೂ ಸಾಕಷ್ಟು ಖರ್ಚಿರುತ್ತದೆ. ಬಂದ ಹಣದಲ್ಲಿ ಸ್ವಲ್ಪ ನಿಮಗಾಗಿ ಇಟ್ಟಕೊಳ್ಳಬಹುದಲ್ಲವೇ?’ ಎಂದರೆ ‘ನಾನು ಇಟ್ಟುಕೊಂಡರೆ ನಾನು ಮಾಡಿದ ಕೆಲಸ ಸ್ವಾರ್ಥಕ್ಕೆ ಎಂಬಂತಾಗುತ್ತದೆ. ನಾನು ವೇಷ ಹಾಕಿ ಹಣ ಸಂಗ್ರಹಿಸುತ್ತಿರುವುದೇ ಕಷ್ಟದಲ್ಲಿರುವ ಮಕ್ಕಳಿಗಾಗಿ. ಹಾಗೆಂ‌ದ ಮೇಲೆ ನನಗೆ ಹಣ ಬೇಡ. ನನಗೆ ಬೇಕಾದರೆ ಅಣ್ಣ ಕೊಡುತ್ತಾರೆ’ ಎಂದು ಮುಗ್ದತೆಯಿಂದ ಹೇಳುತ್ತಾರೆ.

ಮಸ್ಕತ್ ನಿವಾಸಿ, ತವರಿನ ಪ್ರೀತಿ
ಮೊದಲೆಲ್ಲಾ ‘ವೇಷ’ದವರು ಬಂದರೆ ಮನೆ ಬಾಗಿಲು ಹಾಕುತ್ತಿದ್ದ ಮಂದಿ ಈಗ ರವಿ ಕಟಪಾಡಿ ವೇಷ ಹಾಕುತ್ತಾರೆ ಎಂದರೆ ಮಧ್ಯರಾತ್ರಿ 12ಗಂಟೆಗೂ ಫೋನ್ ಮಾಡಿ ಹಣ ನೀಡುತ್ತಾರೆ.

ಈ ನಡುವೆ ಮಸ್ಕತ್‌ನಲ್ಲಿ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರವಿಗೆ, ಕಿರಣ್ ಎನ್ನುವವರು ಮಸ್ಕತ್‌ನಲ್ಲಿಯೇ ಉದ್ಯೋಗ ಕೊಡಿಸಿದ್ದಾರೆ. ಸದ್ಯ ಅಲ್ಲಿಯೇ ನೆಲೆಸಿದ್ದಾರೆ. ಆದರೂ ತಾಯ್ನೆಲದ ಪ್ರೀತಿ, ಅಷ್ಟಮಿ ವೇಷ, ಸಹಕಾರ ಮನೋಭಾವ ಅವರಲ್ಲಿ ಒಂದಿನಿತೂ ಕಡಿಮೆಯಾಗಿಲ್ಲ. ಈ ಬಾರಿ ಅಷ್ಟಮಿಗೆಂದೇ ಒಂದೂವರೆ ತಿಂಗಳು ರಜ ಹಾಕಿ ಬಂದು ವೇಷ ಧರಿಸಿ, ಹಣ ಸಂಗ್ರಹಿಸಿ ಬಡ ಮಕ್ಕಳಿಗೆ ನೆರವಾಗಿದ್ದಾರೆ.

ಪ್ರಶಸ್ತಿ, ಸನ್ಮಾನಗಳು
ಇಲ್ಲಿಯವರೆಗೂ ಸುಮಾರು 143 ಕಡೆ ಇವರನ್ನು ಕರೆದು ಸನ್ಮಾನ ಮಾಡಿದ್ದಾರೆ. ಇನ್ನೂ ಕೆಲವು ಕಡೆ ಸನ್ಮಾನಗಳಿಗೆ ಬುಕ್ಕಿಂಗ್ ಇದೆ. ಇದಲ್ಲದೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ನಾಡ ಗೌರವ, ಯವ ಸೇವಾ ಪ್ರಶಸ್ತಿ, ಸಾಧಕ ರತ್ನ, ಹೀಗೆ ಇನ್ನೂ ಅನೇಕ ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಧರಿಸಿದ ವೇಷಗಳು
ಸ್ಪೈಡರ್ ಮ್ಯಾನ್, ಅವತಾರ್, ಜಾನ್ ಕಾರ್ಟರ್, ಅಕ್ಟೋಪಸ್, ಮಮ್ಮಿ, ಲಿರ್ಝಡ್ ಮ್ಯಾನ್, ಅಮೇಜಿಂಗ್ ಮೋನ್ ಸ್ಟಾರ್, ವಾಮ್ ಪೇಯರ್ ವೇಷಗಳನ್ನು ಧರಿಸಿದ್ದಾರೆ. ಈ ಎಲ್ಲಾ ವೇಷಗಳನ್ನು ಇವರು ಗೂಗಲ್ ನಲ್ಲಿ ಹುಡುಕಿ ತಮಗೆ ವೇಷ ಹಾಕುವ ದಿನೇಶ್ ಮಟ್ಟು ಅವರಿಗೆ ನೀಡುತ್ತಾರೆ. ಅವರು ಅದಕ್ಕೆ ಬೇಕಾದ ಸಾಮಗ್ರಿಗಳನ್ನು ಪಟ್ಟಿ ಮಾಡಿಕೊಂಡು ದೇಶ ವಿದೇಶಗಳಿಂದ ತರಿಸುತ್ತಾರೆ.

ವೇಷದ ಹಿಂದಿನ ನೋವು
ಬಣ್ಣ ಬಣ್ಣದ ವೇಷ ತೊಟ್ಟು ನರ್ತಿಸುವವರನ್ನು ಕಂಡು ನಾವು ಖುಷಿ ಪಡುತ್ತೇವೆ. ಆದರೆ, ಆ ವೇಷ ಹಾಕುವ ಹಿಂದಿನ ನೋವು ಹೇಳತೀರದು. ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಹಬ್ಬಕ್ಕೆ ವೇಷ ಹಾಕಬೇಕಾದರೆ, ಒಂದು ದಿನ ಮೊದಲೇ ಸಿದ್ಧತೆ ಬೇಕು. ವೇಷ ಹಾಕಿದ ಮೂರು ದಿನವೂ ಬರೀ ನೀರು ಕುಡಿದೇ ಜೀವಿಸಬೇಕು. ಏಕೆಂದರೆ ಮೈಗೆ ಹಚ್ಚಿಕೊಂಡ ಬಣ್ಣ ಅಂಟುತ್ತಿರುತ್ತದೆ. ‘ಬಣ್ಣದ ಅಂಟಿನಿಂದಾಗಿ ಊಟ ತಿಂಡಿ ತಿನ್ನಲಾಗುವುದಿಲ್ಲ.. ಅಷ್ಟೇ ಏಕೆ, ರೆಸ್ಟ್ ರೂಮಿಗೆ ಹೋಗಲು ಕಷ್ಟ’ ಎನ್ನುತ್ತಾರೆ ರವಿ. ಮುಖ- ಮೈಗೆ ಬಳಿದುಕೊಂಡ ಪೇಂಟ್ ತೊಳೆದುಕೊಳ್ಳುವಾಗ ಚರ್ಮ ಕಿತ್ತು ಬರುತ್ತದೆ. ಕೆಲವೊಮ್ಮೆ ಅಲರ್ಜಿಯಾದಂತಹ ಉದಾಹರಣೆಗಳಿವೆಯಂತೆ.

‘ಬಡ ಮಕ್ಕಳ ನೋವಿಗೆ ನನ್ನಿಂದ ಸಹಾಯವಾಗುತ್ತದೆ ಎಂಬ ಕಾರಣಕ್ಕೆ ಆ ನೋವನ್ನೆಲ್ಲ ಮರೆತುಬಿಡುತ್ತೇನೆ’ ಎನ್ನುತ್ತಾರೆ ರವಿ.

ತಾಯ್ನೆಲದಲ್ಲಿ ಕೆಲಸ ಮಾಡುವ ಹಂಬಲ
ಖ್ಯಾತಿ ಬಂದ ಮೇಲೆ ಮನುಷ್ಯನ ಕಾಲು ನೆಲದ ಮೇಲೆ ಊರುವುದಿಲ್ಲ ಎಂಬ ಮಾತೊಂದಿದೆ. ಆದರೆ ಇವರು ಕತೆಯಲ್ಲಿ ಇದು ತದ್ವಿರುದ್ದ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ರವಿಗೆ ಸನ್ಮಾನ ಪ್ರಶಸ್ತಿಗಳು ಬಂದು ಮೇಲೆ ಎಲ್ಲರೂ ಕೆಲಸ ನೀಡಲು ಹಿಂಜರಿಯುತ್ತಿದ್ದಾರೆ. ತಾಯ್ನೆಲದಲ್ಲಿ ಕೆಲಸ ಮಾಡುವ ಹಂಬಲವಿದ್ದರೂ ದೂರದ ಮಸ್ಕತ್‌ನಲ್ಲಿ ದುಡಿಯುವ ಅನಿವಾರ್ಯತೆ ಅವರದ್ದು. ಈಗಲೂ ನನಗೆ ಬೇಕಿರುವುದು ಸನ್ಮಾನ ಪ್ರಶಸ್ತಿಗಳಲ್ಲ, ನನ್ನ ತಾಯ್ನೆಲದಲ್ಲಿ ಕೆಲಸ. ನನ್ನನ್ನು ಮೊದಲಿನಂತೆಯೇ ಜನ ನೋಡಬೇಕು, ಸೆಲೆಬ್ರೆಟಿಯಂತೆ ನೋಡುವುದು ಬೇಡ, ನನಗೆ ನನ್ನ ತಾಯಿಯ ಜೊತೆಗೆ ಇರುವ ಆಸೆ. ಒಮ್ಮೆ ನನ್ನ ತಾಯಿ ‘ಮಗಾ ಇಲ್ಲಿಯೇ ಇರು’ ಎಂದರೆ ಖಂಡಿತ ಮಸ್ಕತ್‌ಗೆ ಹೋಗುವುದಿಲ್ಲ ಎನ್ನುತ್ತಾರೆ ರವಿ.

ವೇಷ, ಕುಣಿತದಂತಹ ಮನರಂಜನೆಯೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಕಟಪಾಡಿ ರವಿಯಂತಹವರ ಸಂತತಿ ಹೆಚ್ಚಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT