ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತನ ಉಡುಗೆಯಲ್ಲಿ ನಾಗೇಶ್‌ ನಡಿಗೆ

Last Updated 22 ಫೆಬ್ರುವರಿ 2020, 9:20 IST
ಅಕ್ಷರ ಗಾತ್ರ

ರೂಪದರ್ಶಿಗಳು ರ‍್ಯಾಂಪ್‌ನಲ್ಲಿ ಆಧುನಿಕ ಶೈಲಿ, ನವೀನ ವಿನ್ಯಾಸಗಳ ಉಡುಪು ಧರಿಸಿ ಹೆಜ್ಜೆ ಹಾಕುವುದು ಸಾಮಾನ್ಯ. ಆದರೆ, ಮೈಸೂರಿನ ಮಾಡೆಲ್‌ ಡಿ.ಸಿ.ನಾಗೇಶ್‌ ಅವರು ರೈತನ ಉಡುಗೆ ತೊಟ್ಟು ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಮಂಜರಿ ನೇಪಾಳ್‌ ಪ್ರೈವೇಟ್‌ ಲಿಮಿಟೆಡ್‌ ವತಿಯಿಂದ ಜ.31ರಿಂದ ಫೆ.7ರವರೆಗೆ ನೇಪಾಳದಲ್ಲಿ ಅಯೋಜಿಸಿದ್ದ ಮಿಸ್ಟರ್‌ ಏಷ್ಯಾ ಮಾಡೆಲ್‌ ಸ್ಪರ್ಧೆಯಲ್ಲಿ ನಾಗೇಶ್‌ ಮೂರು ಪ್ರಶಸ್ತಿಗಳೊಂದಿಗೆ ಮಿಂಚಿದರು. ಮಿಸ್ಟರ್ ಏಷ್ಯಾ ಅಡ್ವೆಂಚರ್, ಮಿಸ್ಟರ್‌ ಏಷ್ಯಾ ಕಲ್ಚರ್‌ ಮತ್ತು ಮಿಸ್ಟರ್‌ ಏಷ್ಯಾ ಸೌತ್‌ ಇಂಡಿಯಾ ವಿಭಾಗಗಳಲ್ಲಿ ಅವರಿಗೆ ಕಿರೀಟ ಒಲಿದಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕು ದೇವನೂರು ಗ್ರಾಮದ ರೈತ ಚಿನ್ನಬುದ್ದಿ ಮತ್ತು ರೇಣುಕಾ ಇವರ ಪುತ್ರ ನಾಗೇಶ್‌ ಅವರು ನೇಗಿಲಯೋಗಿಯ ಧಿರಿಸು ತೊಟ್ಟು ಪಾಲ್ಗೊಂಡಿದ್ದರು. ತೀರ್ಪುಗಾರರು ಒಳಗೊಂಡಂತೆ ಸಹ ಸ್ಪರ್ಧಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

‘ರೈತರಿಂದಾಗಿಯೇ ನಾವು ಇಂದು ಊಟ ಮಾಡುತ್ತಿದ್ದೇವೆ. ರೈತರ ಮಗನಾಗಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ರೈತರ ಉಡುಪು ಧರಿಸಿ ಪಾಲ್ಗೊಂಡೆ. ರೈತರು ದೇಶದ ಬೆನ್ನೆಲುಬು ಎಂಬ ಸಂದೇಶವನ್ನು ಸಾರುವುದು ನನ್ನ ಉದ್ದೇಶವಾಗಿತ್ತು’ ಎಂದು ಅವರು ತಮ್ಮ ಹೊಸ ‘ಥೀಮ್‌’ ಬಗ್ಗೆ ಹೇಳುವರು.

‘ಫ್ಯಾಷನ್‌ ಶೋ ಸ್ಪರ್ಧೆಗಳಲ್ಲಿ ಆಧುನಿಕ ಶೈಲಿಯ ವೇಷಭೂಷಣಗಳನ್ನು ಹೆಚ್ಚಾಗಿ ಪ್ರದರ್ಶಿಸಲಾಗುತ್ತಿದೆ. ಆದರೆ, ರೈತರು ಧರಿಸುವ ಸಾಂಪ್ರದಾಯಿಕ ಉಡುಗೆಗಳನ್ನು ಪರಿಚಯಿಸಬೇಕಿದೆ. ಮುಂದಿನ ದಿನಗಳಲ್ಲಿ ಅಂತಹ ಕೆಲಸ ಮಾಡುವುದು ನನ್ನ ಉದ್ದೇಶ’ ಎನ್ನುವರು.

‘ಫ್ಯಾಷನ್‌ ಉದ್ದಿಮೆ ಈಗ ಬೆಳೆದಿದೆ. ಫ್ಯಾಷನ್‌ ಶೋ ಮತ್ತು ಸೌಂದರ್ಯ ಸ್ಪರ್ಧೆಗಳಲ್ಲಿ ನೋಡುಗರು ವಸ್ತ್ರವಿನ್ಯಾಸಗಾರ ಮತ್ತು ರೂಪದರ್ಶಿಯಿಂದ ಸಾಕಷ್ಟು ನಿರೀಕ್ಷೆ ಮಾಡುವರು. ನಾನು ರೈತನ ಉಡುಗೆ ತೊಟ್ಟಿದ್ದು ಹಲವರಿಗೆ ವಿಶೇಷವಾಗಿ ಕಾಣಿಸಿದೆ’ ಎಂದು ಸ್ಪರ್ಧೆಯಲ್ಲಿ ತಮಗಾದ ಅನುಭವ ಹಂಚಿಕೊಂಡರು.

ಭಾರತ ಅಲ್ಲದೆ ನೇಪಾಳ, ಶ್ರೀಲಂಕಾ, ಪಾಕಿಸ್ತಾನ ಮತ್ತು ಫಿಲಿಪ್ಪೀನ್ಸ್‌ ಒಳಗೊಂಡಂತೆ ವಿವಿಧ ರಾಷ್ಟ್ರಗಳ ರೂಪದರ್ಶಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಮಾಡಿರುವ ನಾಗೇಶ್‌ ಅವರು ಕೆಲವು ಸಮಯ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಆದರೆ, ನಟನೆ ಮತ್ತು ಮಾಡೆಲಿಂಗ್‌ ಮೇಲಿನ ಆಕರ್ಷಣೆಯಿಂದ ಆ ಕೆಲಸ ಬಿಟ್ಟರು. ಇದೀಗ ಮಾಡೆಲಿಂಗ್‌ನಲ್ಲಿ ಪೂರ್ಣಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

28 ವರ್ಷ ವಯಸ್ಸಿನ ಅವರು 2017ರಿಂದಲೂ ವಿವಿಧ ಫ್ಯಾಷನ್‌ ಶೋಗಳಲ್ಲಿ ಹೆಜ್ಜೆಯಿಟ್ಟಿದ್ದಾರೆ. ಮಿ.ಎಲೈಟ್‌ ಇಂಡಿಯಾ ಸ್ಪರ್ಧೆ, 2018ರಲ್ಲಿ ನಡೆದಿದ್ದ ಮಿ.ರಾಯಲ್‌ ಮೈಸೂರು, 2018ರಲ್ಲಿ ಮಿ.ಹ್ಯಾಂಡ್‌ಸಮ್‌ ಮತ್ತು 2019ರಲ್ಲಿ ಮಿ.ಕರ್ನಾಟಕ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಮೈಸೂರು ಯೂತ್‌ ಫೆಸ್ಟಿವಲ್, ಪುತ್ತೂರು ಯುವ ದಸರಾ ಒಳಗೊಂಡಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಚಾರ ರಾಯಭಾರಿಯಾಗಿ ಪಾಲ್ಗೊಂಡಿದ್ದರು.

ಚಲನಚಿತ್ರದಲ್ಲಿ ನಟಿಸುವ ಬಯಕೆ ಹೊಂದಿರುವ ನಾಗೇಶ್‌ ಅವರಿಗೆ ಕೆಲವು ಅವಕಾಶಗಳು ಕೂಡಾ ಬಂದಿವೆ. ಕಿರು ಚಿತ್ರಗಳಲ್ಲಿ ನಟಿಸಿದ್ದಾರೆ. ಮಾಡೆಲಿಂಗ್‌ ಜತೆ ನಟನೆಯಲ್ಲೂ ಎತ್ತರಕ್ಕೇರಬೇಕು ಎಂಬ ಕನಸು ಅವರದ್ದು. ಹಲವು ಫ್ಯಾಷನ್‌ ಶೋಗಳನ್ನು ಆಯೋಜಿಸಿರುವ ಅವರು ಮೈಸೂರಿನಲ್ಲಿ ಮಾಡೆಲಿಂಗ್‌ ಅಕಾಡೆಮಿ ಆರಂಭಿಸಿ ಯುವ ರೂಪದರ್ಶಿಗಳಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT