ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Valentine Day | ಭವಿಷ್ಯ ಕಾಣಲಿ ಭಾವಗಳು

Last Updated 13 ಫೆಬ್ರುವರಿ 2020, 15:39 IST
ಅಕ್ಷರ ಗಾತ್ರ

ಪ್ರೀತಿ, ಎಂದ ಕೂಡಲೇ ಮೈಯಲ್ಲಿ ಏನೋ ಒಂದು ಪುಳಕ. ಏನೋ ಹಳೆಯ ನೆನಪುಗಳು... ಕಾಲೇಜಿನ ದಿನಗಳು ನೆನಪಾಗುತ್ತವೆ. ಅದೇನೋ ಒಂದು ಖುಷಿ. ಯಾವುದೋ ಚಲನಚಿತ್ರದ ನಾಯಕ– ನಾಯಕಿಯರ ಪಾತ್ರದಲ್ಲಿ ನಮ್ಮನ್ನು ನಾವು ಕಂಡು ಕೊಂಡಂತೆ ಭಾವ, ಕನಸು. ಗಗನಕ್ಕೇರಿದ ಆಸೆಗಳು.

ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ, ಕಣ್ಣಿಗೆ, ಮನಸ್ಸಿಗೆ ಒಪ್ಪುವ ಮನಸ್ಸಿನ ತಾಕಲಾಟ. ಇಬ್ಬರ ಮನಸ್ಸುಗಳು ಒಪ್ಪಿದಾಗ ಮಾತನಾಡುವ ತವಕ, ಜೊತೆಗೂಡಿ ಸಮಯ ಕಳೆಯುವ ಆಸೆ... ಹೀಗೆ ಅನೇಕ ರೀತಿಯ ಬದಲಾವಣೆಗಳನ್ನು ವರ್ತನೆಯಲ್ಲಿ ಕಂಡುಕೊಳ್ಳಬಹುದು. ಯಾವುದೂ ಅರ್ಥವಾಗುವುದಿಲ್ಲ. ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ, ಸದಾ ಚಡಪಡಿಕೆ. ಅಲಂಕಾರ ಮಾಡಿಕೊಂಡು, ತಿದ್ದಿ ತೀಡಿಕೊಂಡು, ಬಾಚಿದ ಕೂದಲನ್ನು ಸರಿಪಡಿಸುತ್ತ, ಸಂಕೋಚದ ನಗುವನ್ನು ಹೊರಸೂಸುತ್ತ, ಆಕಡೆ ಈಕಡೆ ಯಾವಕಡೆಯಿಂದ ಬರಬಹುದೆಂಬ ಮನದ ತುಡಿತ... ಇವೆಲ್ಲ ಮನಸ್ಸಿನ ತಳಮಳ, ಭಾವನೆಗಳನ್ನು ಹದಿಹರೆಯದ ಹಂತದಿಂದ ಪದವಿ ಹಂತದವರೆಗೂ ಕಾಣಬಹುದು.

ಹರೆಯದ ವಯಸ್ಸಿನಲ್ಲಿ ದೈಹಿಕ ಬದಲಾವಣೆಯ ಜೊತೆಗೆ ಮಾನಸಿಕ ಬದಲಾವಣೆ ಆಗುತ್ತಲೇ ಇರುತ್ತದೆ. ದೈಹಿಕವಾಗಿ ಆಗುವ ಬದಲಾವಣೆಗಳಿಂದ ವ್ಯಕ್ತಿಯು ತನ್ನಷ್ಟಕ್ಕೆ ತಾನೆ ನೋಡಿಕೊಂಡು ಮುಜುಗರದ ಜೊತೆಗೆ ಸಂಕೋಚ ಮತ್ತು ಸಂತೋಷವನ್ನು ಅನುಭವಿಸುತ್ತಾನೆ. ಮಾನಸಿಕ ಬದಲಾವಣೆಯಿಂದ ಉದ್ವೇಗ, ಭಯ, ಪ್ರೀತಿ, ಆತಂಕ, ಅಸೂಯೆ, ದ್ವೇಷ ಇನ್ನು ಮುಂತಾದವುಗಳು ವ್ಯಕ್ತಿಯ ಸಾಮಾನ್ಯ ಮತ್ತು ಅಸಾಮಾನ್ಯ ವರ್ತನೆಗೆ ಕಾರಣವಾಗುತ್ತವೆ. ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಹೊಂದಿದ ಸ್ನೇಹಿತರ ಸ್ವಭಾವ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಒಳಿತು ಕೆಡಕುಗಳನ್ನರಿಯದೇ ಮನಸ್ಸಿನ ಅಧೀನರಾದಾಗ ನಮ್ಮ ಮನಸ್ಸು ಕೇವಲ ನಮ್ಮತನದ ಸ್ವಾರ್ಥವನ್ನೇ ಬಯಸುತ್ತದೆ. ಸುತ್ತಮುತ್ತಲಿನ ಪರಿಸರ, ಮನೆಯ ಸದಸ್ಯರು, ಪ್ರೀತಿಯ ಮುಂದೆ ಕಾಣದವರಾಗುತ್ತಾರೆ. ಈ ಹಂತದಲ್ಲಿ ವಿಷಯಗಳನ್ನು ಗ್ರಹಿಸಿ, ಅರ್ಥೈಸಿಕೊಂಡು, ವಾಸ್ತವದಲ್ಲಿ ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳುವ ಹಂತದಲ್ಲಿ ಸ್ಥಿರವಾಗಿರುವುದಿಲ್ಲ. ಭಾವನೆಗಳಲ್ಲಿ ಏರುಪೇರುಗಳಗುತ್ತವೆ. ದೈಹಿಕ ಅವಶ್ಯಕತೆಗಳು ಹೆಚ್ಚಾಗಿರುತ್ತವೆ. ಹೇಗಾದರೂ ಮಾಡಿ ತಮ್ಮ ಅವಶ್ಯಕತೆಗಳ ಪೂರೈಕೆಗೆ ಮುಂದಾಗುತ್ತಾರೆ. ಸರಿ ತಪ್ಪುಗಳು ಅವರ ಹತ್ತಿರ ಸುಳಿಯುವುದಿಲ್ಲ.

ಕಾಲೇಜಿಗೆ ಹೋಗುತ್ತಿದ್ದ ಅವನು/ ಅವಳು ಸ್ನೇಹಿತರೊಂದಿರುವಾಗ, ಆತ/ಅವಳು ನಿನ್ನನ್ನೇ ನೋಡುತ್ತಿದ್ದಾನೆ/ಳೆ. ಯಾಕೋ ನಿನ್ನ ಕಡೆ ತುಂಬಾ ಗಮನವಿದೆ. ಯಾವಾಗಲೂ ನಿನ್ನ ಹತ್ತಿರ ನೋಟ್ಸ್‌, ಬುಕ್‌ ಕೇಳೋಕೆ ಬರುತ್ತಾನಲ್ಲ/ಳಲ್ಲ ಏನ ಸಮಾಚಾರ, ಲವ್ವ–ಡವ್ವ ನಡಿತಿದೆಯೋ ಹೇಗೆ ಎಂದು ಇತರ ಸ್ನೇಹಿತರು ಚುಡಾಯಿಸಿದಾಗ, ಹೌದು ಅವನ/ಳ ಮೇಲೆ ನನಗೆ ಲವ್ವ ಅನಸುತ್ತೆ. ಬಟ್ ಹೇಳೋಕಾಗಲ್ಲ. ಅಪ್ಪಾ ನಾವು ಕಲಿಯಾಕ ಬಂದಿವಿ, ಬಿಡ್ರೋ ಅವೆಲ್ಲ ಸರಿ ಅಲ್ಲ. ಆದ್ರ ಮನಸ್ಸು ಕೇಳಬೇಕಲ್ಲ. ಚಂಚಲ ಮನಸ್ಸು ಮತ್ತ ಅದನ್ನ ಬಯಸ್ತದ. ಹಾಗೆ ಹೀಗೆ ಅನ್ತಾ ಲವ್ವ ಮಾಡೇ ಬಿಟ್ಟ/ಳು. ಶುರು ಆಯ್ತು ನೋಡಿ ಪ್ರೇಮಿಗಳ ದರ್ಬಾರ್. ಪ್ರೀತಿ ಮಾಡಿದ್ರ ನಮ್ಮಿಂದ ಯಾರಿಗೂ ತೊಂದ್ರಿ ಆಗಬಾರದು ಮತ್ತು ತೊಂದ್ರಿ ಮಾಡ್ಕೋಬಾರ್‍ದ. ಎಲ್ಲ ಬಿಚ್ಚ ಮನಸ್ಸಿಂದ ಹೇಳಿದ್ರ ಮುಂದಿನ ಜೀವನಾ ಛಲೋ ಮಾಡ್ಕೋತಾರ ಇಲ್ಲಂದ್ರ ನೋಡಿದ್ದೇವಿ, ಕೇಳಿದ್ದೇವಿ. ಇತ್ತ ಸುತ್ತಮುತ್ತ ದಿನನಿತ್ಯ ನೋಡ್ತಾನ ಅದಿವಿ, ಅಲ್ಲಿ ಹಂಗ ಮಾಡಕೊಂಡ್ರು, ಇಲ್ಲಿ ಹಿಂಗ ಮಾಡ್ಕೊಂಡ್ರು, ಅಲ್ಲಿ ಕೊಲಿ ಮಾಡಿದ್ರು, ಇಲ್ಲಿ ಬೆಂಕಿ ಹಚ್ಚಿದ್ರು. ಯಾಕ ಬೇಕ ಅಂತೀನಿ. ನೀವಿಬ್ರು ಪ್ರೀತಿನ ಮಾಡತಿದ್ರ, ಮೊದಲ ನಿಮ್ಮನ್ನ ನೀವು ತಿಳಕೊಳ್ರಿ. ನಾನು ಯಾರು? ನನ್ನ ವಯಸ್ಸೆಷ್ಟು? ನಾನು ಏನ ಮಾಡಬೇಕು? ನಾನು ಏನ್ ಮಾಡಾಕತ್ತೇನಿ? ನನ್ನ ಮನ್ಯಾಗಿನ ಮಂದಿ ಹೆಂಗದಾರ? ನನ್ನಿಂದ ತೊಂದ್ರಿ ಆದ್ರ ಮನ್ಯಾನಗವರ ಮ್ಯಾಲ ಏನ್ ಪರಿಣಾಮ ಬೀರ್‍ತದ. ನಾನು ಹೀಂಗ ಮಾಡಾಕತ್ತದ ಸರಿ ಐತಾ? ನಾನು ಏನ್ ಸಾಧಿಸಬೇಕಾಗೈತಿ?

ಅಲ್ಕಾ ಪೋಸ್ಟ್‌ಗ್ರ್ಯಾಜುಯೇಷನ್ ಮಾಡಿ ಒಳ್ಳೆಯ ಉದ್ಯೋಗವನ್ನು ಮಾಡುತ್ತಿದ್ದಳು. ಅವಳನ್ನು ಶಾಲಾ ದಿನಗಳಿಂದಲೇ ಪ್ರೀತಿ ಮಾಡುತ್ತಿದ್ದ ಸೋಹನ್. ಕಾಲೇಜು ದಿನಗಳಲ್ಲಿ ಅದನ್ನು ವ್ಯಕ್ತಪಡಿಸಿದ್ದ. ಅವಳು ಅದಾವುದನ್ನು ಲೆಕ್ಕಿಸದೇ ತನ್ನ ಭವಿಷ್ಯವನ್ನು ರೂಪಿಸುಕೊಳ್ಳುವಲ್ಲಿ ನಿರತಳಾಗಿದ್ದಳು. ಪಟ್ಟು ಬಿದ್ದು, ಅವಳ ಪ್ರೀತಿ ಸಂಪಾದಿಸಿದ. ಅವಳೂ ಅವನ ಪ್ರೀತಿಗೆ ಸೋತು ಹೋದಳು. ಭವಿಷ್ಯದ ವಿಷಯವಾಗಿಯೂ ಚರ್ಚಿಸಿ, ಮನೆಯಲ್ಲಿ ಹೇಳುವ ತೀರ್ಮಾನವನ್ನು ಕೈಗೊಂಡರು. ಇಬ್ಬರ ಮನೆಯಲ್ಲೂ ಮೊದಮೊದಲು ಒಪ್ಪಿಗೆ ಸಿಗಲಿಲ್ಲ. ಆದರೂ ಮನೆಯವರನ್ನೆಲ್ಲ ಒಪ್ಪಿಸಿ ವಿಜೃಂಭಣೆಯಿಂದ ಮದುವೆಯಾದರು. ಸಂಸಾರದ ಜವಾಬ್ದಾರಿಯನ್ನು ಹೊತ್ತ ಅಲ್ಕಾ ಕೆಲವು ದಿನಗಳಲ್ಲಿಯೇ ಸೋತು ಹೋದಳು. ಕಾರಣ ಮನೆಯ ಪ್ರತಿಯೊಂದು ಜವಾಬ್ದಾರಿಯನ್ನು ಅವಳೇ ನಿರ್ವಹಿಸಬೇಕಿತ್ತು. ಅವಳದ್ದು ತುಂಬಾ ವಿದ್ಯಾವಂತ ಕುಟುಂಬ. ಮನೆಯಲ್ಲಿ ಅವಳಿಗೆ ಹೇಳಿಕೊಳ್ಳಲು ಮನಸ್ಸಾಗಲಿಲ್ಲ. ಅವಳು ದುಡಿಯುವ ಒಂದು ಯಂತ್ರವಾಗಿದ್ದಳು. ಅವಳಿಗೆ ತನ್ನ ಪ್ರೀತಿಯ ಗಂಡನಿಂದ ಹಿಡಿದು ಮನೆಯವರ ಯಾವುದೇ ಪ್ರೀತಿ, ಸಹಕಾರ ಸಿಗಲಿಲ್ಲ. ಅವಳಿಗೆ ಪಶ್ಚಾತ್ತಾಪವಿತ್ತು. ಯಾರೊಡನೆಯೂ ಹೇಳಿಕೊಳ್ಳದೇ ತನ್ನನ್ನೇ ಅಂತ್ಯ ಮಾಡಿಕೊಂಡಳು. ಅವಳು ಸೋಹನ್ ಮೇಲೆ ಇಟ್ಟಿದ್ದ ಪ್ರೀತಿ, ಭರವಸೆ ಎಲ್ಲವೂ ಅಂತ್ಯವಾದವು.

ಪ್ರೀತಿ ಪ್ರೇಮ ಎಲ್ಲೂ ಹೋಗಲ್ಲ. ಅದು ನಮ್ಮಲ್ಲಿಯೇ ಅಡಗಿರುತ್ತದೆ. ಅದರ ಆಳವನ್ನು ಅರಿತುಕೊಳ್ಳಲು, ನೆಲೆಗೊಳ್ಳಲು ನಮ್ಮ ವಯಸ್ಸು, ನಮ್ಮ ಮನಸ್ಸು ದೃಢವಾಗಿರಬೇಕು. ಸರಿತಪ್ಪುಗಳ ಅರಿವಿರಬೇಕು. ಏನೇ ಆಗಲಿ ಎಲ್ಲವನ್ನು ನಿಭಾಯಿಸುತ್ತೇನೆ ಎಂಬ ಸಾಮರ್ಥ್ಯವಿರಬೇಕು. ಮೊದಲು ಚೆನ್ನಾಗಿ ಕಲಿತು ಭವಿಷ್ಯವನ್ನು ರೂಪಿಸಿಕೊಳ್ಳಿ. ಅಸಹಾಯಕತೆ ಇರುವಲ್ಲಿ ಸಹಾಯ ಮಾಡಿ, ಅನಾಥಾಲಯ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ನಿಮ್ಮ ಪ್ರೀತಿಯನ್ನು ಹಂಚಿ. ನಮ್ಮ ಸಮಾಜ, ನಮ್ಮ ದೇಶ ಆರೋಗ್ಯವಾಗಿರುವಂಥ ಕಾರ್ಯಗಳಲ್ಲಿ ಮಾಡಿ, ನಿಮ್ಮ ಮನದಲ್ಲಿ ನಿಮ್ಮ ಮೇಲೆ ನಿಮಗೆ ಪ್ರೀತಿ ಹೆಚ್ಚಾಗುತ್ತದೆ. ಪ್ರೀತಿ ಪ್ರೇಮ ನಾವು ಮಾಡುವಂಥ ಕೆಲಸ, ನಮ್ಮ ಸುತ್ತಮುತ್ತಲಿರುವಂಥ ಪರಿಸರ, ಆರೋಗ್ಯವಾಗಿದ್ದಲ್ಲಿ, ನಾವು ಪ್ರತಿಯೊಂದರಲ್ಲಿ ಪ್ರೀತಿಯನ್ನು ಕಾಣಬಹುದು.

-ಶ್ರೀದೇವಿ ಬಿರಾದಾರ, ಡಿಮ್ಹಾನ್ಸ್, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT