ಜಿಲ್ಲೆಯಾದ್ಯಂತ ಯುಗಾದಿ ಸಡಗರಕ್ಕೆ ಸಜ್ಜು

ಶನಿವಾರ, ಏಪ್ರಿಲ್ 20, 2019
31 °C
ಬೇವು, ಬೆಲ್ಲ ಸವಿಯಲು ಹಾಗೂ ಹೊಸ ಬಟ್ಟೆ ತೊಟ್ಟು ಸಂಭ್ರಮಾಚರಣೆಗೆ ಸಜ್ಜು

ಜಿಲ್ಲೆಯಾದ್ಯಂತ ಯುಗಾದಿ ಸಡಗರಕ್ಕೆ ಸಜ್ಜು

Published:
Updated:
Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಚಾಂದ್ರಮಾನ ಯುಗಾದಿ ಹಬ್ಬದ ಸಂಭ್ರಮಕ್ಕೆ ಜನರು ಸಜ್ಜುಗೊಂಡಿದ್ದಾರೆ. ಹಿಂದೂ ಧಾರ್ಮಿಕ ಕ್ಯಾಲೆಂಡರ್‌ ಪ್ರಕಾರ ಯುಗಾದಿಯಂದು ಹೊಸ ವರ್ಷ ಆರಂಭ.

ಹೊಸ ಯುಗದ ಆದಿಯೇ ಯುಗಾದಿ. ಹಿಂದೂ ಧರ್ಮದಲ್ಲಿ ಈ ಹಬ್ಬಕ್ಕೆ ವಿಶಿಷ್ಟ ಸ್ಥಾನವಿದೆ. ವರ್ಷದ ಮೊದಲ ಹಬ್ಬ ಇದು. ಯುಗಾದಿಯಂದು ಬೇವು –ಬೆಲ್ಲಕ್ಕೆ ಎಲ್ಲಿಲ್ಲದ ಮಹತ್ವ. ಸಿಹಿಯ ಬೆಲ್ಲ ಮತ್ತು ಕಹಿ ಬೇವು, ಜೀವನದ ಕಷ್ಟ–ಸುಖ, ನೋವು–ನಲಿವುಗಳ ಸಂಕೇತ.

ಯುಗಾದಿ ಅಂಗವಾಗಿ ಶನಿವಾರ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮ ನಡೆಯಲಿದೆ. ಮನೆಗಳಲ್ಲಿ ಜನರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಸಂಬಂಧಿಕರು, ಸ್ನೇಹಿತರೊಂದಿಗೆ ಬೇವು– ಬೆಲ್ಲ ಸವಿಯಲಿದ್ದಾರೆ. ವಿಶೇಷ ಅಡುಗೆಗಳನ್ನು ಸಿದ್ಧಪಡಿಸಿ ನೆಂಟರಿಷ್ಟರಿಗೆ ಬಡಿಸಲಿದ್ದಾರೆ. 

ಖರೀದಿ ಜೋರು: ಹಬ್ಬದ ಪ್ರಯುಕ್ತ ಪಟ್ಟಣಗಳಲ್ಲಿ ಜನರ ಖರೀದಿ ಭರಾಟೆ ಜೋರಾಗಿತ್ತು. ಹೊಸ ಬಟ್ಟೆ ಬರೆ, ಹೂವು ಹಣ್ಣು, ತರಕಾರಿಗಳನ್ನು ಖರೀದಿಸಲು ಜನರು ಅಂಗಡಿಗಳಿಗೆ ದಾಂಗುಡಿ ಇಟ್ಟರು. 

ನಗರದ ದೊಡ್ಡಂಗಡಿ, ಚಿಕ್ಕ ಅಂಗಡಿ ಬೀದಿಗಳು, ಚಾಮರಾಜೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಅಂಗಡಿಗಳು, ಹಳೆ ಖಾಸಗಿ ಬಸ್‌ ನಿಲ್ದಾಣ, ತರಕಾರಿ ಮಾರುಕಟ್ಟೆಗಳಲ್ಲಿ ಶುಕ್ರವಾರ ಜನಸಂದಣಿ ಹೆಚ್ಚಿತ್ತು. ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಕಂಡು ಬಂದರು.  ಹೂವು, ಬಾಳೆ ಹಣ್ಣು, ಬಾಳೆ ಎಲೆ, ಮಾವಿನ ಸೊಪ್ಪು ಖರೀದಿ ಭರಾಟೆ ಹೆಚ್ಚಾಗಿತ್ತು. ರಸ್ತೆ ಬದಿಯ ಅಂಗಡಿಗಳಲ್ಲೂ ವ್ಯಾಪಾರ ಜೋರಾಗಿತ್ತು.

ಜೋಡೆತ್ತಿಗೆ ಪೂಜೆ: ಯುಗಾದಿಯಂದು ಮುಂಜಾನೆಯೇ ಜೋಡೆತ್ತುಗಳಿಗೆ ಅಲಂಕಾರ ಮಾಡಿ (ಹೊನ್ನೇರು ಕಟ್ಟುವುದು) ಪೂಜೆ ಸಲ್ಲಿಸಿ ಹೊಲದಲ್ಲಿ ಒಂದು ಸುತ್ತು ಉಳುಮೆ ಮಾಡುತ್ತಾರೆ. ರೈತರೆಲ್ಲರೂ ಒಗ್ಗೂಡಿ ತಮ್ಮ ಎತ್ತುಗಳನ್ನು ಒಟ್ಟುಗೂಡಿಸಿ ಹೊನ್ನೇರು ಕಟ್ಟಿ ಸಂಭ್ರಮದಿಂದ ಪೂಜೆ ಸಲ್ಲಿಸುತ್ತಾರೆ. 

ಹೂವು ದುಬಾರಿ: ಹಬ್ಬದ ಪ್ರಯುಕ್ತ ಹೂವುಗಳ ಬೆಲೆ ಹೆಚ್ಚಾಗಿದೆ. ಹಾರಕ್ಕೆ ₹ 80ರಿಂದ ₹ 200ರ ವರೆಗೆ ಬೆಲೆ ಇದೆ. ಉಳಿದಂತೆ (ಮೊಳ ಲೆಕ್ಕದಲ್ಲಿ) ಮರಲೆ ಮತ್ತು ಮಲ್ಲಿಗೆ ₹ 30ರಿಂದ ₹ 40, ಚೆಂಡು ಹೂವು ₹ 15ರಿಂದ ₹ 20, ಕನಕಾಂಬರ ₹ 30 ಧಾರಣೆ ಇದೆ.

‘ಹಬ್ಬದ ಮುನ್ನಾದಿನ ಹೂವಿಗೆ ಬೇಡಿಕೆ ಇರುತ್ತದೆ. ಆದ್ದರಿಂದ ಬೆಲೆ ಹೆಚ್ಚಳವಾಗಿದೆ. ಸಂಜೆ ಸಮಯಕ್ಕೆ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ. ಭಾನುವಾರದಿಂದ ಹಿಂದಿನ ಬೆಲೆ ಮುಂದುವರಿಯಲಿದೆ’ ಎಂದು ಹೂವಿನ ವ್ಯಾಪಾರಿ ರಾಘವೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದಿರು.

ತರಕಾರಿ, ಹಣ್ಣು ಯಥಾಸ್ಥಿತಿ: ನಿಂಬೆ ದುಬಾರಿ: ತರಕಾರಿ ಮಾರುಕಟ್ಟೆಯಲ್ಲಿ ಕ್ಯಾರೆಟ್‌ ₹ 20,  ಮೂಲಂಗಿ ಮತ್ತು ಆಲೂಗೆಡ್ಡೆ ₹ 30, ಬೆಂಡೆಕಾಯಿ ₹ 60, ಬೀನ್ಸ್‌ ₹ 80ರಿಂದ 90, ಸೊಪ್ಪುಗಳ ಕಂತೆ ₹ 20 ಧಾರಣೆ ಇದೆ. ಹಣ್ಣುಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ದ್ರಾಕ್ಷಿ ₹ 80ರಿಂದ 100, ಸೇಬು ₹ 120, ಅನಾನಸ್‌ ₹ 60, ದಾಳಿಂಬೆ ₹ 80ರಿಂದ ₹ 100, ಕಿತ್ತಲೆ ಮತ್ತು ಮೊಸಂಬಿ ₹ 80, ನಿಂಬೆಹಣ್ಣು (ಒಂದಕ್ಕೆ)  ₹ 5ರಿಂದ  ₹ 8 ಇದೆ.

ಬೆಲ್ಲದ ಬೆಲೆ ಹೆಚ್ಚಳ

ಗುರುವಾರದವರೆಗೂ (ಮಾರುಕಟ್ಟೆಯಲ್ಲಿ ಸಾವಿರ ಬೆಲ್ಲದ ಅಚ್ಚು) ₹ 3 ಸಾವಿರದಿಂದ ₹ 4 ಸಾವಿರದವರೆಗೆ ಇದ್ದ ದರ ಈಗ ₹ 200 ಹೆಚ್ಚಳವಾಗಿದೆ. ಈಗ  ₹ 3000ದಿಂದ ₹ 4,200ರವರೆಗೆ ಧಾರಣೆ ಇದೆ.

‘ಗುರುವಾರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ಶನಿವಾರ ಮಾರುಕಟ್ಟೆ ಇಲ್ಲದಿರುವುದರಿಂದ ಹಾಗೂ ಯುಗಾದಿ ಹಬ್ಬದ ಪರಿಣಾಮ ಶುಕ್ರವಾರವೇ ಬೆಲೆ ಹೆಚ್ಚಳವಾಗಿದೆ’ ಎಂದು ಬೆಲ್ಲದ ವ್ಯಾಪಾರಿ ವಿ.ಗುರುಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !