ನಂದಿದ ‘ಜ್ಞಾನ ಜ್ಯೋತಿ’; ಭಕ್ತ ಸಮೂಹದಲ್ಲಿ ದಿಗ್ಭ್ರಾಂತಿ

7
ಬಸವ ಜನ್ಮಭೂಮಿಯೊಂದಿಗೆ ಒಡನಾಟ ಬೆಸೆದುಕೊಂಡಿದ್ದ ನಡೆದಾಡುವ ದೈವ

ನಂದಿದ ‘ಜ್ಞಾನ ಜ್ಯೋತಿ’; ಭಕ್ತ ಸಮೂಹದಲ್ಲಿ ದಿಗ್ಭ್ರಾಂತಿ

Published:
Updated:
Prajavani

ವಿಜಯಪುರ: ಉತ್ತರ ಕರ್ನಾಟಕದ ಬಡವರ ಪಾಲಿನ ಕಾಮಧೇನು, ಕಲ್ಪವೃಕ್ಷದಂತಿದ್ದ ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ ಅಸ್ತಂಗತರಾದರು ಎಂಬ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಪಸರಿಸುತ್ತಿದ್ದಂತೆ, ಅಶ್ರುತರ್ಪಣದ ಮಹಾಪೂರವೇ ಹರಿಯಿತು.

ಸುಕ್ಷೇತ್ರ ಸಿದ್ಧಗಂಗೆಯಲ್ಲಿ ಕಲಿತವರು, ಸ್ವಾಮೀಜಿ ಜತೆ ಒಡನಾಟ ಹೊಂದಿದವರು ದುಃಖ ಸಾಗರದಲ್ಲೇ ತಮ್ಮ ಗುರುವಿನ ಅಂತಿಮ ದರ್ಶನಕ್ಕಾಗಿ ತುಮಕೂರಿನತ್ತ ದೌಡಾಯಿಸಿದರು.

ವಿಜಯಪುರದಿಂದ ಹೊರಟ ಪ್ರತಿ ಬಸ್‌, ರೈಲು ಸಹ ಕಿಕ್ಕಿರಿದ ಜನರಿಂದ ತುಂಬಿ ತುಳುಕಿತು. ಬಸ್‌, ರೈಲ್ವೆ ಪ್ರಯಾಣಕ್ಕೆ ಅವಕಾಶ ಸಿಗದ ಭಕ್ತ ಸಮೂಹ ಖಾಸಗಿ ವಾಹನಗಳನ್ನು ಬಾಡಿಗೆ ಪಡೆದು, ಗುರುವಿನ ಸನ್ನಿಧಾನಕ್ಕೆ ಪಯಣ ಬೆಳೆಸಿದ ಚಿತ್ರಣ ಸೋಮವಾರ ಮುಸ್ಸಂಜೆಯಿಂದ ಗೋಚರಿಸಿತು.

ಶರಣರ ನಾಡಿನ ಒಡನಾಟ

ಶರಣರ ನಾಡಿನೊಂದಿಗೆ ಸಿದ್ಧಗಂಗಾ ಪೀಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಆತ್ಮೀಯ ಒಡನಾಟ ಹೊಂದಿದ್ದರು. ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿದ್ದರು. ತಮ್ಮ ಮಠದಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳ ಶಿಷ್ಯ ಪಡೆಯನ್ನೇ ಜಿಲ್ಲೆಯಲ್ಲಿ ಸ್ವಾಮೀಜಿ ಹೊಂದಿದ್ದಾರೆ.

ಈಚೆಗಿನ ದಶಕದಲ್ಲಿ ಸ್ವಾಮೀಜಿ ವಿಜಯಪುರಕ್ಕೆ ಭೇಟಿ ನೀಡಿದ್ದು ಅಪರೂಪ. 2006ರ ಬಳಿಕ ಈ ಭಾಗಕ್ಕೆ ಬರಲಿಲ್ಲ. ಅದಕ್ಕೂ ಮುನ್ನ ಹಲವು ಬಾರಿ ಬಂದು, ಆಶೀರ್ವಚನ ನೀಡಿದ್ದನ್ನು ಹಲವರು ಇಂದಿಗೂ ಸ್ಮರಿಸುತ್ತಾರೆ.

ಅವಿಭಜಿತ ವಿಜಯಪುರ ಜಿಲ್ಲೆಯ ಶೈಕ್ಷಣಿಕ ಹರಿಕಾರ ಬಂಥನಾಳದ ಸಂಗನಬಸವ ಶಿವಯೋಗಿಗಳ ಜನ್ಮ ಶತಮಾನೋತ್ಸವ ಸಮಾರಂಭ 2000ನೇ ಇಸ್ವಿಯ ಫೆಬ್ರುವರಿಯಲ್ಲಿ ನಡೆದಿತ್ತು. ಇದರಲ್ಲಿ ಸಿದ್ಧಗಂಗಾ ಪೀಠಾಧಿಪತಿಯೂ ಭಾಗಿಯಾಗಿ, ಮಾಜಿ ಶಾಸಕ ಆರ್‌.ಆರ್‌.ಕಲ್ಲೂರ ಅವರ ವಿಜಯಪುರದ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದು ವಿಶೇಷ.

ಉತ್ಸವದ ಸಂಘಟಕರು ಮಾಜಿ ಶಾಸಕರಿಗೆ ಸಿದ್ಧಗಂಗಾ ಪೀಠಾಧೀಶರ ವಾಸ್ತವ್ಯದ ಬಗ್ಗೆ ತಿಳಿಸಿದಾಗ, ಕಲ್ಲೂರ ಈ ವಿಷಯವನ್ನು ಸಿದ್ಧೇಶ್ವರ ಸ್ವಾಮೀಜಿ ಅವಗಾಹನೆಗೆ ತಂದರು. ತಕ್ಷಣವೇ ಸಿದ್ಧೇಶ್ವರರು, ‘ಸಾಕ್ಷಾತ್ ಪರಮಾತ್ಮನೇ ನಿಮ್ಮ ಮನೆಗೆ ಬರುತ್ತಿದ್ದಾನೆ’ ಎಂದು ಪ್ರತಿಕ್ರಿಯಿಸಿದ್ದರು ಎಂದು ಕಲ್ಲೂರ ದಂಪತಿ ಗದ್ಗದಿತರಾದರು.

‘ಕಾರ್ಯಕ್ರಮ ಮುಗಿಸಿಕೊಂಡು ಮಧ್ಯಾಹ್ನ ನಮ್ಮ ಮನೆಗೆ ಶ್ರೀಗಳು ಬಂದರು. ಪಾದಪೂಜೆ ಮಾಡಿದೆವು. ಸ್ವಾಮೀಜಿ ಇಷ್ಟಲಿಂಗ ಪೂಜೆ ಮಾಡಿಕೊಂಡರು. ಅಪಾರ ಜನರು ಬಂದು ದರ್ಶನ ಪಡೆದರು. ಪ್ರಾತಃ ಕಾಲದ ಪೂಜೆಗೆ ಪಾರಿಜಾತ ಪುಷ್ಪ ಹೊಂದಿಸಿದ್ದು ಇಂದಿಗೂ ಮರೆಯಲಾಗದ ಘಟನೆ. ಮೂರು ತಾಸು ಶ್ರೀಗಳ ಇಷ್ಟಲಿಂಗ ಪೂಜೆಯನ್ನು ನಮ್ಮನೆಯಲ್ಲೇ ಕಣ್ತುಂಬಿಕೊಂಡಿದ್ದು, ನಮ್ಮ ಜೀವನದ ಸೌಭಾಗ್ಯ’ ಎಂದು ಕಲ್ಲೂರ ತಿಳಿಸಿದರು.

ಸ್ವಾಮೀಜಿ ಭೇಟಿ ನೀಡಿದ ಸಂದರ್ಭ ನಮ್ಮ ಮನೆ ಆವರಣದಲ್ಲಿ ಕಲ್ಪವೃಕ್ಷವೊಂದನ್ನು ನೆಟ್ಟು ನೀರೆರಿದ್ದರು. ಅದೀಗ ಬೃಹತ್‌ ಮರವಾಗಿ ಫಸಲು ನೀಡುತ್ತಿದೆ ಎಂದು ಶ್ರೀಗಳ ಭೇಟಿಯನ್ನು ನೆನಪು ಮಾಡಿಕೊಂಡರು.

ಬಿ.ಎಲ್‌.ಡಿ.ಇ ನಂಟು

ವಚನಗುಮ್ಮಟ ಡಾ.ಫ.ಗು.ಹಳಕಟ್ಟಿ ಹೆಸರಿನಲ್ಲಿ ಬಿಎಲ್‌ಡಿಇ ಸಂಸ್ಥೆ ನಿರ್ಮಿಸಿದ್ದ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭ (2003, ಜುಲೈ 2)ದಲ್ಲೂ ಸ್ವಾಮೀಜಿ ಭಾಗಿಯಾಗಿದ್ದರು.

ಸಂಸ್ಥೆಯ ಅಧ್ಯಕ್ಷರಾಗಿದ್ದ ಎಂ.ಬಿ.ಪಾಟೀಲ ಅಪೇಕ್ಷೆಯಂತೆ ಸ್ವಾಮೀಜಿಯ ಅಮೃತ ಹಸ್ತದಿಂದ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಲಾಗಿತ್ತು. ಆಗ 96ರ ಹರೆಯದ ಶ್ರೀಗಳು ರಸ್ತೆ ಮಾರ್ಗದಲ್ಲೇ ವಿಜಯಪುರಕ್ಕೆ ಬಂದಿದ್ದರು. ಬಿ.ಎಲ್.ಡಿ.ಇ ಸಂಸ್ಥೆಯ ಉಪಾಧ್ಯಕ್ಷ ವಿದ್ಯಾಧರ ನಿಂಬಾಳ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

2012ರಲ್ಲಿ ಸಿದ್ಧಗಂಗಾ ಮಠಕ್ಕೆ ತೆರಳಿ ಬೆಳ್ಳಿಯ ಬಸವೇಶ್ವರರ ಮೂರ್ತಿಯನ್ನು ಸಂಸ್ಥೆಯ ವತಿಯಿಂದ ಕಾಣಿಕೆಯಾಗಿ ನೀಡಲಾಗಿತ್ತು ಎಂದು ಸಂಸ್ಥೆಯ ಪ್ರಚಾರಾಧಿಕಾರಿ ಡಾ.ಮಹಾಂತೇಶ ಬಿರಾದಾರ ನೆನಪಿಸಿಕೊಂಡರು.

ಕರ್ನಾಟಕ ರತ್ನಗೆ ಬೆಳ್ಳಿಯ ಸಿಂಹಾಸನ

2005ರಲ್ಲಿ ಮುದ್ದೇಬಿಹಾಳ, 2006ರಲ್ಲಿ ತಾಳಿಕೋಟೆಯಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಗುರುವಂದನೆ ಸಮಾರಂಭ ಆಯೋಜಿಸಿ, ಸಿದ್ಧಗಂಗಾ ಶ್ರೀಗಳ ತುಲಾಭಾರ ನಡೆಸಿದ್ದರು. 2007ರಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಲ್ಲಿ ಸಾಮೂಹಿಕ ವಿವಾಹ ನಡೆಸಿದ್ದರು.

ಈ ಕಾರ್ಯಕ್ರಮಕ್ಕೆ ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಂದಿದ್ದರು. ನಡಹಳ್ಳಿ ಕುಮಾರಸ್ವಾಮಿಗೆ 111 ಕೆ.ಜಿ. ತೂಕದ ಬೆಳ್ಳಿಯ ಸಿಂಹಾಸನವನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಸ್ವೀಕರಿಸಿದ ಎಚ್‌ಡಿಕೆ, ಒಂದು ಕ್ಷಣವೂ ಕೂರಲಿಲ್ಲ.

ಆಗಷ್ಟೇ ಶತಾಯುಷಿಗೆ ಕರ್ನಾಟಕ ರತ್ನ ಘೋಷಿಸಲಾಗಿತ್ತು. ವಿಧಾನಸೌಧದ ಮುಂಭಾಗ ನಡೆದ ಬೃಹತ್‌ ಸಮಾರಂಭದಲ್ಲಿ ತಮಗೆ ಕಾಣಿಕೆಯಾಗಿ ನಡಹಳ್ಳಿ ನೀಡಿದ್ದ ರಜತ ಸಿಂಹಾಸನವನ್ನು ಕುಮಾರಸ್ವಾಮಿ ಸಿದ್ಧಗಂಗಾ ಮಠಾಧೀಶರಿಗೆ ಅರ್ಪಿಸಿದರು. ಈ ಬೆಳ್ಳಿಯ ಸಿಂಹಾಸನ ಇಂದಿಗೂ ಶ್ರೀಮಠದಲ್ಲಿದೆ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಿಳಿಸಿದರು.

ವೈಯಕ್ತಿಕ ನೋವಾಗುತ್ತೆ

‘ನಾನು ಸಮಾಜ ಕಲ್ಯಾಣ ಸಚಿವನಿದ್ದೆ. ಆಗ ಒಮ್ಮೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದೆ. ಪರಮಪೂಜ್ಯರ ಆಶೀರ್ವಾದ ಪಡೆದಿದ್ದೆ. ಅಲ್ಲಿನ ಸ್ಥಿತಿಗತಿ ಅರಿತೆ. ಮಠದ ಆಡಳಿತ ಮಂಡಳಿಯ ಕೋರಿಕೆಯಂತೆ ವಿದ್ಯಾರ್ಥಿಗಳ ಊಟದ ಭತ್ಯೆ ಹೆಚ್ಚಿಸುವ ನಿರ್ಧಾರ ಕೈಗೊಂಡು, ಬೆಂಗಳೂರಿಗೆ ಮರಳಿದ್ದೆ.

ಅದರಂತೆ ರಾಜ್ಯದ ಎಲ್ಲೆಡೆಯ ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಹೆಚ್ಚಿಸಿದ್ದೆ. ಮರು ದಿನವೇ ಮಠದ ಆಡಳಿತ ಮಂಡಳಿಯವರು ನನ್ನನ್ನು ಹುಡುಕಿಕೊಂಡು ಬೆಂಗಳೂರಿನ ಮನೆಗೆ ಬಂದರು. ನನಗೆ ಗಾಬರಿಯಾಯ್ತು. ಏನೆಂದು ವಿಚಾರಿಸಿದೆ. ಆ ಸಂದರ್ಭ ಅವರೇಳಿದ ಮಾತು ನನ್ನಲ್ಲೇ ದಿಗ್ಭ್ರಮೆ ಮೂಡಿಸಿತು.

‘ನೀವು ಮಠದಿಂದ ಮರಳಿದ ನಂತರ ಶ್ರೀಗಳು ನಮ್ಮ ಬಳಿ ಅತ್ಯಾಪ್ತವಾಗಿ ಮಾತನಾಡಿದರು. ಈತ ಎತ್ತರಕ್ಕೆ ಬೆಳೆಯದಿದ್ದರೆ, ಯಾರಿಗೆ ನೋವಾಗುತ್ತೋ ? ಬಿಡುತ್ತೋ ಗೊತ್ತಿಲ್ಲ. ನನಗಂತೂ ತುಂಬಾ ದುಃಖವಾಗುತ್ತೆ ಎಂದರು’ ಎಂದು ಹೇಳುತ್ತಿದ್ದಂತೆ ನಾನು ಮೂಕವಿಸ್ಮಿತನಾದೆ’ ಎಂದು ಕೇಂದ್ರ ಸಚಿವ ರಮೇಶ ಜಿಗಜಿಣಗಿ ಹಳೆಯ ಘಟನೆಯೊಂದನ್ನು ಸ್ಮರಿಸಿಕೊಂಡು, ಸ್ವಾಮೀಜಿಯ ವ್ಯಕ್ತಿತ್ವ ಬಲು ದೊಡ್ಡದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !