ತೆರಿಗೆ ಸಂಗ್ರಹ ಕುಂಠಿತ: ಮಾಹಿತಿ ಕೊರತೆ ಕಾರಣ– ಜಿ.ಪಂ. ಸಿಇಒ ಲತಾಕುಮಾರಿ

ಶನಿವಾರ, ಮೇ 25, 2019
22 °C
ಗ್ರಾಮ ಪಂಚಾಯಿತಿಗಳ ಅರ್ಥಿಕ ಸದೃಢತೆಗೆ ತೆರಿಗೆ ಸಂಗ್ರಹಣೆ ಅವಶ್ಯ

ತೆರಿಗೆ ಸಂಗ್ರಹ ಕುಂಠಿತ: ಮಾಹಿತಿ ಕೊರತೆ ಕಾರಣ– ಜಿ.ಪಂ. ಸಿಇಒ ಲತಾಕುಮಾರಿ

Published:
Updated:
Prajavani

ಚಾಮರಾಜನಗರ: ಗ್ರಾಮ ಪಂಚಾಯಿತಿಗಳ ತೆರಿಗೆ ಸಂಗ್ರಾಹಕರು (ಬಿಲ್‌ ಕಲೆಕ್ಟರ್‌) ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳಿಗಿರುವ ಮಾಹಿತಿ ಕೊರತೆಯಿಂದಾಗಿ ಜಿಲ್ಲೆಯ ಗ್ರಾಮ‍ ಪಂಚಾಯಿತಿಗಳಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಲತಾಕುಮಾರಿ ಪ್ರತಿಪಾದಿಸಿದರು. 

14ನೇ ಹಣಕಾಸು ಯೋಜನೆಯ ಅಡಿಯಲ್ಲಿ ತಂತ್ರಾಂಶಗಳ ನಿರ್ವಹಣೆ ಮತ್ತು ತೆರಿಗೆ ನಿರ್ಧಾರ, ಪರಿಷ್ಕರಣೆ ಹಾಗೂ ವಸೂಲಾತಿ ಕುರಿತು ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್‌ಗಳು ಹಾಗೂ ಡಾಟಾ ಎಂಟ್ರಿ ಅಪರೇಟರ್‌ಗಳಿಗೆ ಶುಕ್ರವಾರ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

‘ಪ್ರತಿ ಆರ್ಥಿಕ ವರ್ಷದಲ್ಲಿ ಎಲ್ಲ ಪಂಚಾಯಿತಿಗಳಿಗೆ ಕರ ವಸೂಲಾತಿಗೆ ನಿಗದಿತ ಗುರಿ ನಿಗದಿಪಡಿಸಲಾಗುತ್ತದೆ. 2018–19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ 26ರಷ್ಟು ಮಾತ್ರ ತೆರಿಗೆ ಸಂಗ್ರಹಿಸಲಾಗಿದೆ. ಅದು ಅತ್ಯಂತ ಕಡಿಮೆಯಾಗಿದೆ’ ಎಂದು ಅವರು ಹೇಳಿದರು.

ಪಂಚಾಯಿತಿಗಳು ಆರ್ಥಿಕವಾಗಿ ಸದೃಢವಾಗಲು ತೆರಿಗೆ ಸಂಗ್ರಹಣೆ ಅವಶ್ಯಕ. ಗ್ರಾಮೀಣ ಭಾಗದಲ್ಲಿ ವಾಸಿಸುವ ಎಲ್ಲರೂ ಯಾವುದಾದರೊಂದು ತೆರಿಗೆ ಕಟ್ಟಲೇಬೇಕು. ಮನೆ, ನೀರು, ನಿವೇಶನ ಸೇರಿದಂತೆ ಎಲ್ಲದಕ್ಕೂ ಆಸ್ತಿಗಳಿಗೆ ಪ್ರತಿಯೊಬ್ಬರೂ ತೆರಿಗೆ ಪಾವತಿಸಬೇಕು’ ಎಂದರು.

‘ವಸೂಲಾದ ತೆರಿಗೆ ಹಣವನ್ನು ಗ್ರಾಮಗಳಲ್ಲಿ ಜನೋಪಯೋಗಿ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಮೂಲ ಸೌಕರ್ಯ ಒದಗಿಸಲು ಬಳಸಿಕೊಳ್ಳಲಾಗುವುದು’ ಎಂದು ಅಭಿಪ್ರಾಯಪಟ್ಟರು.

ಸಂಪನ್ಮೂಲ ವ್ಯಕ್ತಿಗಳಾದ ಮೈಸೂರಿನ ಅಬ್ದುಲ್ ನಜೀರ್‌ಸಾಬ್ ಗ್ರಾಮೀಣಾಭಿವೃದ್ಧಿ (ಎಸ್.ಐ.ಆರ್.ಡಿ) ಸಂಸ್ಥೆಯ ಬೋಧಕರಾದ ಡಾ.ಜಿ.ಎಸ್. ಗಣೇಶ್‌ಪ್ರಸಾದ್, ಜಿ.ಮಲ್ಲಿಕಾರ್ಜುನಸ್ವಾಮಿ, ಗಿರಿಧರ್ ಅವರು 14ನೇ ಹಣಕಾಸು ಯೋಜನೆಯಡಿ ತಂತ್ರಾಂಶಗಳ ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರದ ಮನಃಶಾಸ್ತ್ರಜ್ಞರಾದ ಡಾ.ಭರತ್ ಅವರು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆಯಲ್ಲಿ ಒತ್ತಡ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹನುಮನರಸಯ್ಯ, ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ್ ಪಾಂಡೆ ಇದ್ದರು.

‘ಕರ ವಸೂಲಿ: ಶೇ 100ರಷ್ಟು ಸಾಧಿಸಿ’

‘ತೆರಿಗೆ ಸಂಗ್ರಹಣೆಯನ್ನು ಸುಲಭ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಪರಿಷ್ಕೃತ ನಿರ್ದೇಶನ, ಸುತ್ತೋಲೆಗಳನ್ನು ಹೊರಡಿಸಿವೆ. ನಮ್ಮ ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿ ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಜವಾಬ್ದಾರಿ ಅರಿತು ಈ ಬಾರಿ ತೆರಿಗೆ ಸಂಗ್ರಹಣೆಯಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಲು ಕಾರ್ಯೋನ್ಮುಖವಾಗಬೇಕು’ ಎಂದು ಲತಾಕುಮಾರಿ ಹೇಳಿದರು.

14ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯಿತಿಗಳು ವಾರ್ಷಿಕ ಲೆಕ್ಕ ಪರಿಶೋಧನೆ ಮಾಡಿಸಿರಬೇಕು. ತಮ್ಮ ವ್ಯಾಪ್ತಿಯಲ್ಲಿ ನಿಗದಿತ ಗುರಿಗಿಂತ ಹೆಚ್ಚಿನ ಕರ ವಸೂಲಾತಿಯಾಗಿರಬೇಕು. ಬಯಲು ಶೌಚಮುಕ್ತ ಗ್ರಾಮವಾಗಿಬೇಕು. ಮಗುವಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಉತ್ತಮ ಪ್ರಗತಿ ಸಾಧಿಸಿರಬೇಕು. ಆಗ ಮಾತ್ರ ಸರ್ಕಾರದಿಂದ ಕಾರ್ಯಕ್ಷಮತೆ ನಿಧಿಯನ್ನು ಪ್ರೋತ್ಸಾಹಧನ ರೂಪದಲ್ಲಿ ಪಡೆಯಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು’ ಎಂದು ಅವರು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !