‘ಕೈ’ಯಲ್ಲಿ ಮುದುಡಿದ ತಾವರೆ..!

7
ವಿಜಯಪುರ ಮಹಾನಗರ ಪಾಲಿಕೆ ರಾಜಕಾರಣದ ಹಾದಿಯಲ್ಲೇ ಜಿಲ್ಲಾ ಪಂಚಾಯ್ತಿ..!

‘ಕೈ’ಯಲ್ಲಿ ಮುದುಡಿದ ತಾವರೆ..!

Published:
Updated:
Prajavani

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾಗಿ ನಿರೀಕ್ಷೆಯಂತೆ, ಇಂಡಿ ತಾಲ್ಲೂಕಿನ ಸಾಲೋಟಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಶಿವಯೋಗೆಪ್ಪ ಅರ್ಜುನ ನೇದಲಗಿ, ಸೋಮವಾರ ಯಾವೊಬ್ಬ ಸದಸ್ಯರ ವಿರೋಧವಿಲ್ಲದೆ ಆಯ್ಕೆಯಾದರು.

ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿಯಿಂದ ತಿಕೋಟಾ ತಾಲ್ಲೂಕಿನ ಕನಮಡಿ ಜಿ.ಪಂ. ಕ್ಷೇತ್ರದ ಸಾಬು ಮಾಶ್ಯಾಳ, ಸಿಂದಗಿ ತಾಲ್ಲೂಕಿನ ಮೋರಟಗಿ ಜಿ.ಪಂ. ಕ್ಷೇತ್ರದ ಬಿಂದೂರಾಯ ಪಾಟೀಲ ಸ್ಪರ್ಧಿಸಿದ್ದರೂ; ಚುನಾವಣಾಧಿಕಾರಿ ನೇದಲಗಿ ವಿರೋಧಿಸುವವರು ಕೈ ಎತ್ತಿ, ನಡವಳಿ ಪುಸ್ತಕದಲ್ಲಿ ಸಹಿ ಮಾಡಿ ಎಂದು ಕೋರಿದಾಗ, ಈ ಇಬ್ಬರೂ ಸ್ಪರ್ಧಿಗಳು ತಮ್ಮ ವಿರೋಧವನ್ನೇ ದಾಖಲಿಸಲಿಲ್ಲ.

ನಿಕಟಪೂರ್ವ ಅಧ್ಯಕ್ಷೆ ನೀಲಮ್ಮ ಮೇಟಿ ರಾಜೀನಾಮೆಗೂ ಮುನ್ನವೇ, ಜಿಲ್ಲಾ ಪಂಚಾಯ್ತಿಯ ಸದಸ್ಯರ ನಡುವೆ ಪಕ್ಷಾತೀತವಾಗಿ ಏರ್ಪಟ್ಟಿದ್ದ ಒಡಂಬಡಿಕೆಯಂತೆ, ಯಾವೊಬ್ಬ ಸದಸ್ಯರು ಶಿವಯೋಗೆಪ್ಪ ನೇದಲಗಿ ಆಯ್ಕೆಗೆ ವಿರೋಧವನ್ನೇ ವ್ಯಕ್ತಪಡಿಸಿದೆ, ಜಿಲ್ಲಾ ಪಂಚಾಯ್ತಿ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಯೊಂದನ್ನು ದಾಖಲಿಸಿದರು.

ಇದರ ಜತೆಗೆ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಚುನಾವಣೆ ಚಾಳಿಯನ್ನು, ಜಿಲ್ಲಾ ಪಂಚಾಯ್ತಿ ಅಂಗಳಕ್ಕೂ ಪರಿಚಯಿಸಿದರು. ಪಾಲಿಕೆಯ ಮೊದಲ ಮೇಯರ್‌ ಆಯ್ಕೆ ಸಂದರ್ಭ ಚುನಾವಣಾ ಪ್ರಕ್ರಿಯೆಗೆ ಬಿಜೆಪಿಯ ಒಂಬತ್ತು ಸದಸ್ಯರು ಗೈರಾಗುವ ಮೂಲಕ, ವಿಜಯಪುರ ನಗರದ ಆಡಳಿತ ಸುಲಭವಾಗಿ ‘ಕೈ’ ತೆಕ್ಕೆಗೆ ಜಾರಲು ಸಹಕಾರ ನೀಡಿದ್ದರು.

ಇದೀಗ ಈ ಪರಂಪರೆ ಜಿಲ್ಲಾ ಪಂಚಾಯ್ತಿಯಲ್ಲೂ ಮರುಕಳಿಸಿತು. ಬಿಜೆಪಿಯ ನಾಲ್ವರು ಸದಸ್ಯರು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದು ಗೈರಾಗುವ ಮೂಲಕ, ಕಾಂಗ್ರೆಸ್‌ನ ಶಿವಯೋಗೆಪ್ಪ ಅರ್ಜುನ ನೇದಲಗಿ ‘ಕೈ’ಗೆ ಸುಲಲಿತವಾಗಿ ಅಧಿಕಾರದ ಚುಕ್ಕಾಣಿ ನೀಡಿದರು. ಇದರ ಜತೆಗೆ ಬಿಜೆಪಿಯ ಯಾವೊಬ್ಬ ಸದಸ್ಯರು ಸಹ ನೇದಲಗಿ ಆಯ್ಕೆಗೆ ವಿರೋಧ ವ್ಯಕ್ತಪಡಿಸದಿದ್ದುದು, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಅಧಿಕಾರಿ ಸಮೂಹದಲ್ಲೇ ಅಚ್ಚರಿ ಮೂಡಿಸಿತು.

‘ಕೈ’ ಪಡೆಯ ಚಾಣಾಕ್ಷ್ಯ ನಡೆ

ಬಿಜೆಪಿ ಅಗ್ರೇಸರ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿದ ಬಳಿಕ ಜಿಲ್ಲಾ ಪಂಚಾಯ್ತಿ ಚುನಾವಣೆಯ ಚಿತ್ರಣ ಸಾಕಷ್ಟು ಬದಲಾಗಿತ್ತು. ಚುನಾವಣೆ ಘೋಷಣೆಗೂ ಮುನ್ನವೇ ನಡೆದಿದ್ದ ನೇದಲಗಿ ಜತೆಗಿನ ಒಡಂಬಡಿಕೆಯನ್ನು ಪಕ್ಷದ ಸದಸ್ಯರು ತಿರಸ್ಕರಿಸಿ, ಕಮಲಕ್ಕೆ ನಿಷ್ಠೆಯಿಂದಿರಬೇಕು ಎಂಬ ಖಡಕ್‌ ಸೂಚನೆಗೆ ಸದಸ್ಯರು ತಲ್ಲಣಗೊಂಡಿದ್ದರು.

ಕಮಲ ಪಾಳೆಯದೊಳಗಿನ ಸೂಕ್ಷ್ಮ ಬೆಳವಣಿಗೆ ಗಮನಿಸಿದ ಕಾಂಗ್ರೆಸ್ ಸಚಿವರು, ಶಾಸಕ ಯಶವಂತರಾಯಗೌಡ ಪಾಟೀಲ ತಮ್ಮದೇ ತಂತ್ರಗಾರಿಕೆ ಹೂಡಿದರು. ಗೃಹ ಸಚಿವರ ಪ್ರಭಾವಕ್ಕೆ ಬಿಜೆಪಿಯೊಳಗಿನ ಎಂ.ಬಿ.ಪಾಟೀಲ ಅಭಿಮಾನಿಗಳ ಬಳಗ ಸಾಥ್‌ ನೀಡಿದ ಪರಿಣಾಮ, ಕಾಂಗ್ರೆಸ್‌ಗೆ ಮುಖಭಂಗ ತಪ್ಪಿದೆ ಎಂಬ ವಿಶ್ಲೇಷಣೆ ಜಿಲ್ಲಾ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ.

ಸಿಂದಗಿ ತಾಲ್ಲೂಕಿನ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಸದಸ್ಯರು ಸಾಮೂಹಿಕವಾಗಿ ಶಿವಯೋಗೆಪ್ಪ ನೇದಲಗಿ ಬೆನ್ನೆಲುಬಾಗಲಿದ್ದಾರೆ. ಎಂಥ ಸನ್ನಿವೇಶ ಬಂದರೂ; ತಮ್ಮ ನಿಲುವು ಬದಲಿಸಲ್ಲ ಎಂಬ ಸೂಕ್ಷ್ಮ ಬಿಜೆಪಿ ವರಿಷ್ಠರಿಗೆ ಅರಿವಾಗುತ್ತಿದ್ದಂತೆ; ಮಾಜಿ ಶಾಸಕ ರಮೇಶ ಭೂಸನೂರ ಮೇಲೆ ತೀವ್ರ ಒತ್ತಡ ಹಾಕಿದರು. ಭೂಸನೂರ ನಿವಾಸದಿಂದಲೇ ತಂತ್ರಗಾರಿಕೆ ರೂಪಿಸಲಾರಂಭಿಸಿದರು.

ಈ ವಿದ್ಯಮಾನ ಚುರುಕುಗೊಳ್ಳುತ್ತಿದ್ದಂತೆ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅಖಾಡಕ್ಕಿಳಿದರು. ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಸಿ.ಎಸ್‌.ನಾಡಗೌಡ ಬೆಂಬಲಿಸಿದರು. ಗೃಹ ಸಚಿವ ಎಂ.ಬಿ.ಪಾಟೀಲ ಸಹ ನಿರಂತರ ಸಂಪರ್ಕದಲ್ಲಿದ್ದು, ತಮ್ಮದೇ ನಿಗೂಢ ನಡೆಯ ನೀಲ ನಕ್ಷೆ ರೂಪಿಸಿದರು.

ಒಂದೇ ತಾಲ್ಲೂಕಿನ ಬಿಜೆಪಿಯ ಜಿಲ್ಲಾ ಪಂಚಾಯ್ತಿ ಸದಸ್ಯರನ್ನು ಸೆಳೆಯುವುದಕ್ಕಿಂತ, ಒಂದೊಂದು ತಾಲ್ಲೂಕಿನಿಂದ ಒಬ್ಬೊಬ್ಬರನ್ನು ತಮ್ಮ ಪ್ರಭಾವಳಿ ಬಳಸಿ, ಈಗಾಗಲೇ ನಡೆದಿದ್ದ ಕಮಿಟ್‌ಮೆಂಟ್‌ನಂತೆ ಮನವೊಲಿಸುವಲ್ಲಿ ಯಶಸ್ವಿಯಾದರು. ಬಿಜೆಪಿಯೊಳಗಿನ ತಮ್ಮ ಅತ್ಯಾಪ್ತರನ್ನು ರಕ್ಷಿಸಿ ಅವರಿಗೆ ಯಾವುದೇ ಕಪ್ಪುಚುಕ್ಕೆ ಮೆತ್ತದಂತೆ ನೋಡಿಕೊಂಡು, ಅಧಿಕಾರವನ್ನು ಸುಲಲಿತವಾಗಿ ತಮ್ಮ ‘ಕೈ’ ವಶಪಡಿಸಿಕೊಂಡರು.

ಈ ತಂತ್ರಗಾರಿಕೆಯ ಪರಿಣಾಮ ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಜಿಲ್ಲಾ ಪಂಚಾಯ್ತಿ ಸದಸ್ಯೆ ಶ್ರೀದೇವಿ ಐಹೊಳ್ಳಿ, ಸಿಂದಗಿ ತಾಲ್ಲೂಕಿನ ದೇವಣಗಾಂವ ಕ್ಷೇತ್ರದ ವಿಜಯಲಕ್ಷ್ಮೀ ಶ್ರೀಮಂತ ನಾಗೂರ, ಮುದ್ದೇಬಿಹಾಳ ತಾಲ್ಲೂಕಿನ ಹಿರೇಮುರಾಳ ಕ್ಷೇತ್ರದ ಪದ್ಮಾವತಿ ದೇವೇಂದ್ರ ವಾಲೀಕಾರ, ಇಂಡಿ ತಾಲ್ಲೂಕಿನ ಭತಗುಣಕಿ ಕ್ಷೇತ್ರದ ಪ್ರಭಾವತಿ ಮಳಸಿದ್ದಪ್ಪಗೌಡ ಪಾಟೀಲ ಚುನಾವಣಾ ಪ್ರಕ್ರಿಯೆಗೆ ಗೈರಾಗಿದ್ದರು.

ಸಾಸನೂರ ಮನೆಯಲ್ಲಿ ಸಭೆ

ಪಕ್ಷದ ಮಹಿಳಾ ಸದಸ್ಯರಿಂದಲೇ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿದ ಬಳಿಕ, ಶಾಸಕ ಸೋಮನಗೌಡ ಪಾಟೀಲ ಸಾಸನೂರ ನಿವಾಸದಲ್ಲಿ ಸ್ಥಳೀಯ ಮುಖಂಡರು ಸಭೆ ನಡೆಸಿದರು.

ಪಕ್ಷದ ಸೋಲಿಗೆ ಕಾರಣೀಭೂತರಾದ ನಾಲ್ವರು ಸದಸ್ಯರ ಸದಸ್ಯತ್ವ ರದ್ದಿಗೆ ರಾಜ್ಯ ವರಿಷ್ಠರು ಕ್ರಮ ತೆಗೆದುಕೊಳ್ಳಬೇಕು. ಸದಸ್ಯತ್ವ ರದ್ದಾಗಲ್ಲ ಎಂಬ ಭಂಡ ಧೈರ್ಯದಿಂದ, ಇಂಥ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಸಾಮೂಹಿಕವಾಗಿ ಆಗ್ರಹಿಸಿದರು ಎಂದು ಸಭೆಯಲ್ಲಿದ್ದ ಮುಖಂಡರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !