ಜಿ.ಪಂ ಸಾಮಾನ್ಯ ಸಭೆ ಮುಂದೂಡಿಕೆ

7
ಆರು ಇಲಾಖೆಗಳ ಅಧಿಕಾರಿಗಳು ಗೈರುಹಾಜರಿ ನೆಪ, ಸದಸ್ಯರ ಅಸಮಾಧಾನ

ಜಿ.ಪಂ ಸಾಮಾನ್ಯ ಸಭೆ ಮುಂದೂಡಿಕೆ

Published:
Updated:
Prajavani

ಚಾಮರಾಜನಗರ: ಕೃಷಿ, ಆರೋಗ್ಯ ಇಲಾಖೆ ಸೇರಿದಂತೆ ಆರು ಪ್ರಮುಖ ಇಲಾಖೆಗಳ ಅಧಿಕಾರಿಗಳು ಸಭೆಗೆ ಗೈರು ಆಗಿದ್ದಾರೆ ಎಂಬ ಕಾರಣವೊಡ್ಡಿ ಶುಕ್ರವಾರ ಜಿಲ್ಲಾ ಪಂಚಾಯಿತಿಯ ಸಾಮಾನ್ಯಸಭೆಯನ್ನು ಮುಂದೂಡಲಾಯಿತು. 

ಸಭೆಯ ಆರಂಭದಲ್ಲಿ ಹನೂರು ತಾಲ್ಲೂಕಿನ ಸುಳ್ವಾಡಿ ಕಿಚ್ಚುಗುತ್ತು ಮಾರಮ್ಮ ದೇವಾಲಯದಲ್ಲಿ ಸಂಭವಿಸಿದ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದೂವರೆ ಗಂಟೆ ಕಾಲ ಸುಳ್ವಾಡಿ ಪ್ರಕರಣದ ಬಗ್ಗೆಯೇ ಚರ್ಚೆ ನಡೆಯಿತು.

ಅದರ ನಂತರ ಹಿಂದಿನ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಬಗ್ಗೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ಅನುಪಾಲನಾ ವರದಿ ಮಂಡನೆ ಆರಂಭವಾಗುವ ಮುನ್ನವೇ ಉಪಾಧ್ಯಕ್ಷ ಜೆ.ಯೋಗೇಶ್‌ ಅವರು ಸಭೆಗೆ ಆಧಿಕಾರಿಗಳು ಗೈರು ಆಗಿರುವ ವಿಷಯ ಪ್ರಸ್ತಾಪಿಸಿದರು.

‘ನಮಗೆ ಬಂದಿರುವ ಮಾಹಿತಿ ಪ್ರಕಾರ ಆರರಿಂದ ಎಂಟು ಇಲಾಖೆಗಳ ಅಧಿಕಾರಿಗಳು ಸಭೆಗೆ ಬಂದಿಲ್ಲ. ಅವರು ಯಾರು ಎಂಬುದು ಗೊತ್ತಾಗಬೇಕು’ ಎಂದರು.

ಹಾಜರಾತಿ ಪರಿಶೀಲಿಸಿದಾಗ ಕೃಷಿ ಇಲಾಖೆ ಜಂಟಿ ನಿರ್ದೇಶಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸೆಸ್ಕ್‌ನ ಕೊಳ್ಳೇಗಾಲ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ಸಹಕಾರ ಇಲಾಖೆಯ ಉಪ ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ, ಯುವ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ, ಬಿಸಿಯೂಟ ಯೋಜನೆಯ ಜಿಲ್ಲಾ ಸಮನ್ವಯಾಧಿಕಾರಿ ಬಂದಿರಲಿಲ್ಲ. ಆದರೆ, ಆ ಇಲಾಖೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಆದರೆ, ಆಡಳಿತ ಪಕ್ಷದ ಸದಸ್ಯರು ಹಾಗೂ ಬಿಜೆಪಿಯ ಸದಸ್ಯರಿಗೆ ಇದು ಸರಿ ಕಾಣಲಿಲ್ಲ. ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಯಾರ ಅನುಮತಿ ತೆಗೆದುಕೊಂಡು ಗೈರಾಗಿದ್ದಾರೆ ಎಂದು ಪ್ರಶ್ನಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ಮುತ್ತುರಾಜು ಮಾತನಾಡಿ, ‘ವಿಶ್ವ ಬ್ಯಾಂಕ್‌ ವತಿಯಿಂದ ನೀರಿಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಲು ಬೆ‌ಂಗಳೂರಿಗೆ ತೆರಳಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಮಾತನಾಡಿ‌, ‘ಲೋಕಾಯುಕ್ತದ ಸಮನ್ಸ್‌ ಬಂದಿದೆ, ಅಲ್ಲಿಗೆ ಹೋಗುವುದಾಗಿ ಹೇಳಿದ್ದರು. ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತರುವಂತೆ ಸೂಚಿಸಿದ್ದೇನೆ. ಗೈರುಹಾಜರಾಗಲು ನಾನು ಯಾರಿಗೂ ಅನುಮತಿ ಕೊಟ್ಟಿಲ್ಲ’ ಎಂದರು.

‘ಸುಳ್ವಾಡಿಗೆ ಆರೋಗ್ಯ ಇಲಾಖೆಯ ಆಯುಕ್ತರು ಭೇಟಿ ನೀಡುತ್ತಿರುವುದರಿಂದ ಇಲಾಖೆಯ ಜಿಲ್ಲಾ ಅಧಿಕಾರಿ ಅಲ್ಲಿಗೆ ಭೇಟಿ ನೀಡಿದ್ದಾರೆ. ಬಿಸಿಯೂಟ ಸಮನ್ವಯಾಧಿಕಾರಿ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಸಭೆಯ ಗಮನಕ್ಕೆ ತಂದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಾತನಾಡಿ, ‘ನನ್ನ ಬಳಿ ಮೂವರು ಮಾತ್ರ ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ’ ಎಂದರು.

‘ಕೃಷಿ, ಆರೋಗ್ಯ ಮತ್ತು ವಿದ್ಯುತ್‌ ಪೂರೈಕೆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳೇ ಇಲ್ಲದಿದ್ದರೆ ಚರ್ಚೆ ನಡೆಸುವುದಾದರೂ ಹೇಗೆ?, ಪ್ರತಿ ಬಾರಿಯೂ ಅಧಿಕಾರಿಗಳು ಗೈರಾದರೆ ಸಭೆ ನಡೆಸುವ ಉದ್ದೇಶವಾದರೂ ಏನು?, ಸಭೆಗೆ ಅವರನ್ನು ಕರೆಸಿ, ಇಲ್ಲದಿದ್ದರೆ ಮುಂದೂಡಿ’ ಎಂದು ಸದಸ್ಯರಾದ ಬಾಲರಾಜು, ಎಂ.ರಾಮಚಂದ್ರ, ನಾಗರಾಜು, ಚೆನ್ನಪ್ಪ. ಸದಾಶಿವಮೂರ್ತಿ ಸೇರಿದಂತೆ ಹಲವು ಸದಸ್ಯರು ಒತ್ತಾಯಿಸಿದರು.

‘ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಬೇಕು. ಉದ್ದೇಶಪೂರ್ವಕವಾಗಿ ಗೈರುಹಾಜರಾಗುವ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಸಭೆ ನಿರ್ಣಯ ಕೈಗೊಳ್ಳಬೇಕು’ ಎಂದು ಅಧ್ಯಕ್ಷರನ್ನು ಒತ್ತಾಯಿಸಿದರು.

ಉದ್ದೇಶಪೂರ್ವಕ ಗೈರಾದರೆ ಅಮಾನತು
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ ಕುಮಾರ್‌ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರರಿಬೇಕು ಎಂಬುದು ನನ್ನ ನಿಲುವು. ಆ ದಿನಕ್ಕೆ ಇಲಾಖೆಯ ಬೇರೆ ಕೆಲಸಗಳಿದ್ದರೆ, ಮೇಲಿನ ಅಧಿಕಾರಿಗಳಿಗೆ ಸಾಮಾನ್ಯಸಭೆ ಇರುವ ಬಗ್ಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಬೇಕು’ ಎಂದರು.

‘ಈ ಬಾರಿ ಗೈರಾದವರಿಗೆ ನೋಟಿಸ್‌ ಕೊಟ್ಟು ವಿವರ ಪಡೆಯೋಣ. ಮುಂದಿನ ಸಲದಿಂದ ಉದ್ದೇಶಪೂರ್ವಕವಾಗಿ, ಉದ್ಧಟತನದಿಂದ ಸಭೆಗೆ ಬರದೆ ಇರುವವರನ್ನು ಅಮಾನತಿನಂತಹ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗಬೇಕು’ ಎಂದರು. ಎಲ್ಲ ಸದಸ್ಯರು ಇದ್ದಕ್ಕೆ ಸಮ್ಮತಿಸಿದರು.

ಸಭೆಯ ನಿರ್ಣಯವನ್ನು ಪ್ರಕಟಿಸಿದ ಜೆ. ಯೋಗೇಶ್‌ ಅವರು, ‘ಇಂದಿನ ಸಭೆಗೆ ಹಾಜರಾಗದವರಿಗೆ ಎಚ್ಚರಿಕೆ ನೀಡಲಾಗುವುದು. ಮುಂದೆ ಯಾರಾದರೂ ಅಧಿಕಾರಿಗಳು ಸಕಾರಣವಿಲ್ಲದೆ, ಉದ್ದೇಶಪೂರ್ವಕವಾಗಿ ಗೈರಾದರೆ ಅವರನ್ನು ಅಮಾನತು ಮಾಡಲಾಗುವುದು’ ಎಂದು ಹೇಳಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೆ.ಯೋಗೇಶ್‌, ‘ನಾವು ಸುಳ್ವಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಬಯಸಿದ್ದೆವು. ಅವರೇ ಇಲ್ಲದಿರುವುದರಿಂದ ಸಭೆ ನಡೆಸುವುದು ಸರಿಯಲ್ಲ ಎಂದು ಮುಂದೂಡಲಾಯಿತು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !