ಜಿ.ಪಂ ಅಧ್ಯಕ್ಷರ ಕಾರು ಅಪಘಾತ: ಸಭೆಯಲ್ಲಿ ಪ್ರತಿಧ್ವನಿ

7
ನಿಮಗೆ ಉತ್ತರಿಸಬೇಕಾದ ಅವಶ್ಯಕತೆ ಇಲ್ಲ; ಅಧಿಕಾರಿಗಳಿಗೆ ವಿವರಿಸಿದ್ದೇನೆ– ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದ ಶಿವಮ್ಮ

ಜಿ.ಪಂ ಅಧ್ಯಕ್ಷರ ಕಾರು ಅಪಘಾತ: ಸಭೆಯಲ್ಲಿ ಪ್ರತಿಧ್ವನಿ

Published:
Updated:
Prajavani

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಕುಟುಂಬ ವರ್ಗದವರು ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಕಳೆದ ವರ್ಷದ ಅಕ್ಟೋಬರ್‌ 28ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ಬಳಿ ಅಪಘಾತಕ್ಕೀಡಾದ ವಿಚಾರ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯಸಭೆಯಲ್ಲಿ ಪ್ರತಿಧ್ವನಿಸಿತು.

ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರು ರೇಗಾಡಿದ ಪ್ರಸಂಗವೂ ಜರುಗಿತು. ಈ ಪ್ರಕರಣದಲ್ಲಿ ಪಕ್ಷವನ್ನು ಎಳೆದು ತಂದಿದ್ದಕ್ಕೆ ಕಾಂಗ್ರೆಸ್‌ ಸದಸ್ಯರು, ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದ ಘಟನೆಯೂ ನಡೆಯಿತು.

ಸಭೆ ಪ್ರಾರಂಭವಾಗುತ್ತಲೇ ಅವರು ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸಿ.ಎನ್‌.ಬಾಲರಾಜು ಅವರು, ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕು. ಆದರೆ, ಬಳ್ಳಾರಿಯಲ್ಲಿ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಅಧ್ಯಕ್ಷರು ರಾಜಕೀಯ ಕಾರಣಕ್ಕೆ ಕಾರನ್ನು ಬಳಸಿದ್ದಾರೆ. ಕಾಂಗ್ರೆಸ್‌ನವರು ಹಣ ಬಲ, ತೋಳ್ಬಲದಿಂದ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಳ್ಳುತ್ತಲೇ ಬಂದಿದ್ದಾರೆ’ ಎಂದು ಆರೋಪಿಸಿದರು.

ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರಾದ ಚೆನ್ನಪ್ಪ ಹಾಗೂ ಕೆ.ಎಸ್‌.ಮಹೇಶ್‌ ಅವರು ಬಾಲರಾಜು ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇದು ಅಧ್ಯಕ್ಷರ ವಿಚಾರ. ಅವರನ್ನು ಕೇಳಿ. ಪಕ್ಷದ ಬಗ್ಗೆ ಮಾತನಾಡಬೇಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾತು ಮುಂದುವರಿಸಿದ ಬಾಲರಾಜು, ‘ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆಯಾಗಿದೆ. ಯಡಿಯೂರಪ‍್ಪ ನೇತೃತ್ವದ ಸರ್ಕಾರ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ತಂದಿತ್ತು. ಅಧ್ಯಕ್ಷರು ಈ ಬಗ್ಗೆ ಕಾಳಜಿ ತೋರಿಸಿಲ್ಲ. ಎಪಿಎಂಸಿಯಲ್ಲಿ ರೈತರಿಂದ ಕಮಿಷನ್‌ ಪಡೆಯದೆ ವ್ಯವಹಾರ ನಡೆಯುವುದಿಲ್ಲ. ನಾನು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದೆ. ನನ್ನ ಬಳಿಯಿಂದ ಶೇ 10ರಷ್ಟು ಕಮಿಷನ್‌ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿ ಅಧ್ಯಕ್ಷರು ಸರಿಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.

ಇದರಿಂದ ಮತ್ತೆ ಕೋಪಗೊಂಡ ಮಹೇಶ್‌ ಮತ್ತು ಚೆನ್ನಪ್ಪ ಅವರು, ‘ಎಲ್ಲ ವಿಚಾರಗಳನ್ನು ಈಗಲೇ ಪ್ರಸ್ತಾಪಿಸಿದರೆ ಹೇಗೆ? ಇಲಾಖೆಗಳ ಬಗ್ಗೆ ಚರ್ಚೆ ನಡೆಯುವಾಗ ಪ್ರಸ್ತಾಪಿಸಿ’ ಎಂದು ಹೇಳಿದರು.

ಚೆನ್ನಪ್ಪ ಮಾತನಾಡಿ, ‘ಅಧ್ಯಕ್ಷರ ಕಾರು ಅಪಘಾತದ ವಿಷಯ ಚರ್ಚೆಯಾಗಲಿ. ಆ ಬಗ್ಗೆ ಸ್ಪಷ್ಟನೆ ನೀಡಲಿ. ನಂತರ ಮುಂದಿನ ವಿಚಾರಗಳನ್ನು ಚರ್ಚಿಸೋಣ’ ಎಂದರು.

ಅಧ್ಯಕ್ಷೆ ಗರಂ: ಸಿ.ಎನ್‌. ಬಾಲರಾಜು ಮಾತನಾಡಿ, ‘ಯಾವ ಉದ್ದೇಶಕ್ಕೆ ಅಧ್ಯಕ್ಷರು ಸರ್ಕಾರಿ ಕಾರಿನಲ್ಲಿ ಹೋಗಿದ್ದರು ಎಂಬ ಬಗ್ಗೆ ಅವರು ಉತ್ತರಿಸಬೇಕು’ ಎಂದರು.

ಇದರಿಂದ ಕೆರಳಿದ ಅಧ್ಯಕ್ಷೆ ಶಿವಮ್ಮ ಅವರು, ‘ಸಚಿವರು ಮದುವೆಗೆ ಬರುವಂತೆ ಹೇಳಿದ್ದರು. ನನಗೆ ಹೋಗುವ ಅವಶ್ಯಕತೆ ಇತ್ತು. ನೀವಾಗಿದ್ದರೂ ಹೋಗುತ್ತಿದ್ದಿರಿ. ಯಾಕೆ ಹೋದೆ? ನಿಮಗೆ ಉತ್ತರ ಹೇಳಬೇಕಾದ ಅವಶ್ಯಕತೆ ಇಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ಇದಕ್ಕೆ ಕೋಪದಿಂದಲೇ ಪ್ರತಿಕ್ರಿಯಿಸಿದ  ಬಾಲರಾಜು, ‘ಜಿಲ್ಲಾ ಪಂಚಾಯಿತಿಯ ಸದಸ್ಯರ ಹಕ್ಕಿನ ಬಗ್ಗೆ ಗೊತ್ತಿಲ್ಲದೇ ಮಾತನಾಡುತ್ತಿದ್ದೀರಿ. ನನಗೆ ಪ್ರಶ್ನಿಸಲು ಹಕ್ಕಿಲ್ಲ ಎಂಬುದು ಸರಿ ಅಲ್ಲ. ಜಿಲ್ಲೆಯ ಹಿತ ಕಾಪಾಡಲು, ಅಭಿವೃದ್ಧಿಗಾಗಿ ಓಡಾಡಲು ನಿಮಗೆ ಸರ್ಕಾರಿ ಕಾರು ಕೊಡಲಾಗಿದೆಯೇ ವಿನಾ ಮದುವೆ, ದೇವಸ್ಥಾನ, ಹುಟ್ಟುಹಬ್ಬಕ್ಕೆ ಹೋಗಲು ಕೊಟ್ಟಿಲ್ಲ. ಅಪಘಾತದಿಂದಾಗಿ ಸರ್ಕಾರಕ್ಕೆ ನಷ್ಟ ಆಗಿದೆ. ಆ ಖರ್ಚನ್ನು ಅಧ್ಯಕ್ಷರೇ ಭರಿಸಬೇಕು. ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.

ಮತ್ತೆ ವ್ಯಗ್ರಗೊಂಡ ಶಿವಮ್ಮ ಅವರು, ‘ನನ್ನ ರಾಜೀನಾಮೆ ಕೇಳುವುದಕ್ಕೆ ನೀವು ಯಾರು? ನಮ್ಮ ಪಕ್ಷದವರು ಕೇಳಲಿ. ಕೊಟ್ಟು ಬಿಡುತ್ತೇನೆ’ ಎಂದರು.

ಚೆನ್ನಪ್ಪ ಅವರು ಮಾತನಾಡಿ, ‘ಅಧ್ಯಕ್ಷರು ಈ ವಿಚಾರವಾಗಿ ಸ್ಪಷ್ಟವಾಗಿ ಸಮಜಾಯಿಷಿ ನೀಡಬೇಕು’ ಎಂದರು.

ಅಧ್ಯಕ್ಷರ ಪರವಾಗಿ ಉಪಾಧ್ಯಕ್ಷ ಜೆ.ಯೋಗೇಶ್‌ ಅವರು ಮಾತನಾಡಲು ಮುಂದಾದಾಗ ಸಿ.ಎನ್‌. ಬಾಲರಾಜು ವಿರೋಧಿಸಿದರು. ಯಾವುದೇ ಕಾರಣಕ್ಕೂ ಉಪಾಧ್ಯಕ್ಷರು ಉತ್ತರ ನೀಡಬಾರದು ಎಂದು ಪಟ್ಟು ಹಿಡಿದರು.

ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇನೆ: ಹರೀಶ್‌ ಕುಮಾರ್‌

ಅಂತಿಮವಾಗಿ ಈ ವಿಷಯಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌, ‘ವಾಹನ ಅಪಘಾತದ ಬಗ್ಗೆ ಅಧ್ಯಕ್ಷರು ಲಿಖಿತವಾಗಿ ಹೇಳಿಕೆ ನೀಡಿದ್ದಾರೆ. ಬಳ್ಳಾರಿಗೆ ಮದುವೆ ಸಮಾರಂಭಕ್ಕೆ ಹೋಗುತ್ತಿದ್ದೆ ಎಂದು  ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಸರ್ಕಾರಕ್ಕೂ ವರದಿ ಸಲ್ಲಿಸಿದ್ದೇನೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೂ ಸಚಿವರ ಸ್ಥಾನಮಾನ ಇರುವುದರಿಂದ ಅವರು ಸರ್ಕಾರಿ ವಾಹನವನ್ನು ಜಿಲ್ಲೆಯಲ್ಲಿ ಮಾತ್ರ ಬಳಸಬಹುದೇ ಅಥವಾ ಹೊರಗಡೆಯೂ ಬಳಸಬಹುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ’ ಎಂದರು.

‘ವಾಹನದ ರಿಪೇರಿ ಖರ್ಚನ್ನೂ ಸರ್ಕಾರ ಭರಿಸಬೇಕೋ ಅಥವಾ ಅಧ್ಯಕ್ಷರು ಭರಿಸಬೇಕೋ ಎಂಬ ಬಗ್ಗೆ ಸರ್ಕಾರ ನೀಡುವ ಆದೇಶದಂತೆ ಕ್ರಮ ವಹಿಸಲಾಗುವುದು’ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.

ಅಂಬೇಡ್ಕರ್‌ ಭಾವಚಿತ್ರ ಇಲ್ಲದ್ದಕ್ಕೆ ಆಕ್ಷೇಪ

ಜಿಲ್ಲಾ ಪಂಚಾಯಿತಿ ಹೊರತಂದಿರುವ ದಿನಚರಿ ಪುಸ್ತಕದಲ್ಲಿ ಅಂಬೇಡ್ಕರ್‌ ಪ್ರತಿಮೆ ಇಲ್ಲದಿರುವ ಜಿಲ್ಲಾಡಳಿತ ಭವನದ ಚಿತ್ರ ಹಾಕಿದ್ದಕ್ಕೆ ಬಿಜೆಪಿ ಸದಸ್ಯ ನಾಗರಾಜು ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಮೂರು ವರ್ಷ ಆಯಿತು. ಪ್ರತಿ ವರ್ಷದ ದಿನಚರಿ ಪುಸ್ತಕ ಗಮನಿಸಿದಾಗ ಅದರಲ್ಲಿ ಜಿಲ್ಲಾಡಳಿತ ಭವನದ ಚಿತ್ರ ಇರುತ್ತದೆ. ಆದರೆ, ಭವನದ ಎದುರುಗಡೆ ಇರುವ ಅಂಬೇಡ್ಕರ್‌ ಪ್ರತಿಮೆಯ ಚಿತ್ರ ಇರುವುದಿಲ್ಲ. ದೇಶಕ್ಕೆ ಸಂವಿಧಾನ ನೀಡಿದ ವ್ಯಕ್ತಿಯನ್ನು ಈ ರೀತಿ ಕಡೆಗಣಿಸಬಾರದು. ಈ ವಿಚಾರವನ್ನು ಹಿಂದೆಯೂ ಗಮನ‌ಕ್ಕೆ ತಂದಿದ್ದೆ. 2016, 2017ರ ದಿನಚರಿ ಪುಸ್ತಕದಲ್ಲಿ ಅಂಬೇಡ್ಕರ್‌ ಫೋಟೊ ಇರಲಿಲ್ಲ. ಆದರೆ 2018ರಲ್ಲಿ ಇತ್ತು. ಆದರೆ, ಅದೇ ವರ್ಷ ತಂದಿರುವ ಕೈಪಿಡಿ ಪುಸ್ತಕದಲ್ಲಿ ಇರಲಿಲ್ಲ. ಈ ವರ್ಷದ ದಿನಚರಿ ಪುಸ್ತಕದಲ್ಲೂ ಇಲ್ಲ’ ಎಂದರು. 

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಯೋಜನಾಧಿಕಾರಿ ಪದ್ಮಾಶೇಖರ ಪಾಂಡೆ, ‘ನಾನು ಬಂದು ಐದು ತಿಂಗಳು ಆಯಿತಷ್ಟೆ. ಹಿಂದಿನ ಕಡತ ನೋಡಿ ಅದರಂತೆ ದಿನಚರಿ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಈ ವಿಚಾರ ಗಮನಕ್ಕೆ ಬಂದ ತಕ್ಷಣ ದಿನಚರಿ ಪುಸ್ತಕದ ಒಳ‌ಗಡೆ ಅಂಬೇಡ್ಕರ್‌ ಪ್ರತಿಮೆಯನ್ನು ಹೊಂದಿರುವ ಜಿಲ್ಲಾಡಳಿತ ಭವನದ ಭಾವಚಿತ್ರವನ್ನು ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ’ ಎಂದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‌ ಕುಮಾರ್‌ ಮಾತನಾಡಿ, ‘ಜಿಲ್ಲಾ ಪಂಚಾಯಿತಿಗೆ ಸಂಬಂಧಿಸಿದ ಎಲ್ಲ ಪ್ರಕಟಣೆಗಳಲ್ಲಿ ಬಳಸುವುದಕ್ಕಾಗಿ ಡ್ರೋಣ್ ಕ್ಯಾಮೆರಾ ಮೂಲಕ ಅಂಬೇಡ್ಕರ್‌ ಪ್ರತಿಮೆಯನ್ನೂ ಒಳಗೊಂಡಂತೆ ಜಿಲ್ಲಾಡಳಿತ ಭವನದ ಚಿತ್ರ ತೆಗೆಯುವುದಕ್ಕೆ ಕ್ರಮ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಉಪಾಧ್ಯಕ್ಷ ಜೆ.ಯೋಗೇಶ್‌ ಮಾತನಾಡಿ, ‘ಇನ್ನು ಮುಂದೆ ಯಾವುದೇ ಅಧಿಕಾರಿ ಅಂಬೇಡ್ಕರ್‌ ಪ್ರತಿಮೆ ಇಲ್ಲದ ಜಿಲ್ಲಾಡಳಿತ ಭವನದ ಚಿತ್ರ ಬಳಸಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ನಿರ್ಣಯವನ್ನು ಅಂಗೀಕರಿಸೋಣ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !