ಶುಕ್ರವಾರ, ನವೆಂಬರ್ 22, 2019
23 °C
ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಅಪಘಾತಕ್ಕೀಡಾಗಿದ್ದ ಅಧ್ಯಕ್ಷೆ ವಾಹನದ್ದೇ ಚರ್ಚೆ

ಕಾರು ದುರಸ್ತಿ ವೆಚ್ಚ ಪಾವತಿ: ಶಿವಮ್ಮ– ಸದಸ್ಯರ ವಾಕ್ಸಮರ

Published:
Updated:
Prajavani

ಚಾಮರಾಜನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಹಾಗೂ ಕುಟುಂಬ ವರ್ಗದವರು ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಕಳೆದ ಅಕ್ಟೋಬರ್‌ನಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ಬಳಿ ಅಪಘಾತಕ್ಕೀಡಾದ ಹಾಗೂ ಅದರ ದುರಸ್ತಿಗೆ ಆಗಿರುವ ವೆಚ್ಚದ ವಿಚಾರ ಬುಧವಾರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಯನ್ನು ಹುಟ್ಟುಹಾಕಿತು. 

ಕಾಂಗ್ರೆಸ್‌ ಹಾಗೂ ಬಿಜೆಪಿ ಸದಸ್ಯರು ಪಕ್ಷಭೇದ ಮರೆತು ಅಧ್ಯಕ್ಷೆ ಶಿವಮ್ಮ ಅವರನ್ನು ಇದೇ ವಿಷಯ ಮುಂದಿಟ್ಟುಕೊಂಡು ಖಾರವಾಗಿ ಪ್ರಶ್ನಿಸಿದರು. ಶಿವಮ್ಮ ಹಾಗೂ ಎರಡೂ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರವೂ ನಡೆಯಿತು.   

ಬಿಜೆಪಿಯ ಸದಸ್ಯ ಸಿ.ಎನ್‌.ಬಾಲರಾಜು ಅವರು ಸಭೆಯಲ್ಲಿ ಕಾರಿನ ವಿಚಾರವನ್ನು ಮೊದಲು ಪ್ರಸ್ತಾಪಿಸಿದರು.  ‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಸರ್ಕಾರಿ ಕಾರು ಅಪಘಾತ ಆಗಿ ಜಖಂಗೊಂಡಿದೆ. ಈ ವಿಚಾರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ, ಸರ್ಕಾರದಿಂದ ವರದಿ ಬಂದ ನಂತರ ಸಭೆಗೆ ತಿಳಿಸುತ್ತೇವೆ ಎಂದು ಹೇಳಿದ್ದೀರಿ. ಕಾರಿನ ದುರಸ್ತಿಗೆ ₹ 12,73,314 ಖರ್ಚಾಗಿದೆ. ವಿಮೆ ಕಂಪನಿಯು ಹಣ ₹ 5,88,661 ಭರಿಸಿದೆ. ಉಳಿದ ₹ 6,84,653 ಮೊತ್ತವನ್ನು ಯಾರು ಭರಿಸಬೇಕು? ಅಧ್ಯಕ್ಷರು ಭರಿಸಿದ್ದಾರೆಯೇ? ಈ ವಿಚಾರವನ್ನು ಸದಸ್ಯರ ಗಮನಕ್ಕೆ ಏಕೆ ತಂದಿಲ್ಲ’ ಎಂದು ಪ್ರಶ್ನಿಸಿದರು.

‘ಸರ್ಕಾರಿ ವಾಹನದ ಖರ್ಚುವೆಚ್ಚವನ್ನು ಅಧ್ಯಕ್ಷರೇ ಭರಿಸಬೇಕು ಎಂದು ರಾಜ್ಯ ಸರ್ಕಾರ ಫೆಬ್ರುವರಿಯಲ್ಲೇ ಆದೇಶ ಹೊರಡಿಸಿದೆ. ಕಾರು ರಿಪೇರಿಯಾಗಿ ಈಗ ಮೈಸೂರಿನ ಷೋರೂಂನಲ್ಲಿದೆ. ಷೋರೂಂನಲ್ಲಿ ಒಂದು ವಾರ ಉಚಿತವಾಗಿ ವಾಹನವನ್ನು ಇರಿಸಬಹುದು. ನಂತರ  ನಿಲುಗಡೆಗೆ ಪ್ರತಿ ದಿನ ₹ 200ರಂತೆ ಹಣ ಭರಿಸಬೇಕು. ಅಪಘಾತ ನಡೆದು 11 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ಖರ್ಚುಗಳನ್ನು ಭರಿಸುವುದು ಯಾರು’ ಎಂದು ಪ್ರಶ್ನಿಸಿದರು.  

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್‌ ಸದಸ್ಯೆ ಶಶಿಕಲಾ, ‘ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ಕಲ್ಪಿಸಲಾಗಿದೆ. ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗುವಾಗ ಸರ್ಕಾರಿ ವಾಹನ ಬಳಸಿದರೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ, ಅಧ್ಯಕ್ಷರು ಖಾಸಗಿ ಕಾರ್ಯಕ್ರಮಕ್ಕೆ ಸರ್ಕಾರದ ಆಸ್ತಿಯಾಗಿರುವ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅಧ್ಯಕ್ಷರೇ ಉತ್ತರ ನೀಡಬೇಕು’ ಎಂದು ಒತ್ತಾಯಿಸಿದರು.

ಇದರಿಂದ ಕೋಪ‍ಗೊಂಡ ಅಧ್ಯಕ್ಷೆ ಶಿವಮ್ಮ, ‘ಸರ್ಕಾರಿ ಕಾರು ಬಳಸಿರುವ ಬಗ್ಗೆ ಸಿಇಒ ಅವರಿಗೆ ಉತ್ತರ ನೀಡಿದ್ದೇನೆ. ನಾನು ಕಾರನ್ನು ದೇಶ ಬಿಟ್ಟು ಹೊರಗೆ ತೆಗೆದುಕೊಂಡು ಹೋಗಿಲ್ಲ. ಅಧ್ಯಕ್ಷರಿಗೆ ಸಚಿವ ಸ್ಥಾನಮಾನ ಕಲ್ಪಿಸಿರುವುದರಿಂದ ರಾಜ್ಯದ ಎಲ್ಲಿಗಾದರೂ ತೆಗೆದುಕೊಂಡು ಹೋಗಬಹುದು’ ಎಂದು ಹೇಳಿದರು. 

‘ಅದು ಸರ್ಕಾರದ ಆಸ್ತಿ. ಯಾರಪ್ಪನ ಆಸ್ತಿ ಅಲ್ಲ’ ಎಂದು ಶಶಿಕಲಾ ಹೇಳಿದಾಗ, ‘ನಿಮ್ಮಪ್ಪನ ಮನೆಯ ಆಸ್ತಿಯೂ ಅಲ್ಲ’ ಎಂದು ಸಿಟ್ಟಿನಿಂದ ಶಿವಮ್ಮ ತಿರುಗಿ ಬಿದ್ದರು.

ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಮಾತನಾಡಿ, ‘ಉಳಿದ ಮೊತ್ತವನ್ನು ಅಧ್ಯಕ್ಷರೇ ಭರಿಸಬೇಕು. ಒಂದೇ ಕಂತಿನಲ್ಲಿ ಇಷ್ಟು ಮೊತ್ತ ಭರಿಸಲು ಸಾಧ್ಯವಿಲ್ಲದೆ ಇರುವುದರಿಂದ ಪ್ರತಿ ತಿಂಗಳು ಕಂತಿನಲ್ಲಿ ಹಣ ಭರಿಸಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.  

ಮಧ್ಯಪ್ರವೇಶಿಸಿದ ಸದಸ್ಯ ಯೋಗೇಶ್ ಮಾತನಾಡಿ, ‘ಸರ್ಕಾರದ ಸೂಚನೆಯಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಕ್ರಮ ಕೈಗೊಳ್ಳಲಿದ್ದಾರೆ. ಈ ವಿಚಾರವನ್ನು ಅವರಿಗೆ ಬಿಟ್ಟು ಬಿಡಿ’ ಎಂದರು.

ಸಿಇಒ ಬಿ.ಎಚ್. ನಾರಾಯಣರಾವ್ ಮಾತನಾಡಿ, ‘ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳುತ್ತೇನೆ’ ಎಂದು ಸಭೆಗೆ ತಿಳಿಸಿದರು.

ವಿಳಂಬ: ಅಧ್ಯಕ್ಷರಿಗೆ ತರಾಟೆ

ಅಧ್ಯಕ್ಷೆ ಶಿವಮ್ಮ ಅವರು ಬರುವುದು ವಿಳಂಬವಾಗಿದ್ದರಿಂದ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ 50 ನಿಮಿಷ (11.50ಕ್ಕೆ) ತಡವಾಗಿ ಆರಂಭವಾಯಿತು.

ಶಿವಮ್ಮ ಸಭೆಗೆ ಬರುತ್ತಲೇ ಮಾತನಾಡಿದ ಕಾಂಗ್ರೆಸ್‌ನ ಶಶಿಕಲಾ ಅವರು, ‘ಅಧ್ಯಕ್ಷರು ಸರಿಯಾದ ಸಮಯಕ್ಕೆ ಹಾಜರಿದ್ದು, ಎಲ್ಲ ಸದಸ್ಯರು ಬಂದಿದ್ದಾರೆಯೇ ಎಂದು ಪರಿಶೀಲನೆ ನಡೆಸಬೇಕು. ನೀವೇ ತಡವಾಗಿ ಬಂದರೆ ನಮ್ಮನ್ನು ಯಾರು ಕೇಳುತ್ತಾರೆ? ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಹೇಗೆ’ ಎಂದು ಪ್ರಶ್ನಿಸಿದರು.

ಮಧ್ಯಪ್ರವೇಶಿಸಿದ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ‘ಕೊಳ್ಳೇಗಾಲದಲ್ಲಿ ಕ್ರೀಡಾಕೂಟ ಇದ್ದುದರಿಂದ ತಡವಾಯಿತು. ಕ್ಷಮೆ ಇರಲಿ’ ಎಂದರು.

ಇದನ್ನು ಒಪ್ಪದ ಶಶಿಕಲಾ, ‘ಉಪಾಧ್ಯಕ್ಷರೇ, ಅಧ್ಯಕ್ಷರೇ ಉತ್ತರ ಕೊಡಲಿ’ ಎಂದರು. ಬಿಜೆಪಿಯ ನಾಗರಾಜು ಕಮಲ್‌ ಕೂಡ ಇದೇ ಮಾತನ್ನು ಹೇಳಿದರು. 

ಶಿವಮ್ಮ ಅವರು ಸಿಟ್ಟಿನಿಂದ ಮೇಜನ್ನು ಕುಟ್ಟಿ, ಎರಡೂ ಕೈಗಳನ್ನು ಜೋಡಿಸಿ, ‘ನನ್ನಿಂದ ತಪ್ಪಾಯಿತು. ಎಲ್ಲರೂ ಕುಳಿತುಕೊಳ್ಳಿ’ ಎಂದು ಜೋರುಧ್ವನಿಯಲ್ಲಿ ಹೇಳಿದರು.

ಪ್ರತಿಕ್ರಿಯಿಸಿ (+)