ಬಿಜೆಪಿ ಚಟುವಟಿಕೆಯ ತಾಣವಾದ ಭೂಸನೂರ ನಿವಾಸ..!

7
ಮೈ ಕೊರೆವ ಚಳಿಯಲ್ಲೂ ಬಿಸಿ ಹೆಚ್ಚಿಸಿದ ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚುನಾವಣೆ

ಬಿಜೆಪಿ ಚಟುವಟಿಕೆಯ ತಾಣವಾದ ಭೂಸನೂರ ನಿವಾಸ..!

Published:
Updated:
Prajavani

ವಿಜಯಪುರ: ರಾಜೀನಾಮೆಯಿಂದ ತೆರವಾದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ (ಜ.7) ಚುನಾವಣೆ ನಡೆಯಲಿದೆ. ಅಧಿಕಾರದ ಚುಕ್ಕಾಣಿಗಾಗಿ ಕೈ–ಕಮಲ ಪಡೆ ಅಖಾಡಕ್ಕಿಳಿದು ತೀವ್ರ ಪೈಪೋಟಿ ನಡೆಸಿವೆ.

ಚುನಾವಣೆ ಘೋಷಣೆಗೂ ಮುನ್ನವೇ ‘ಕೈ’ ಕರಾಮತ್ತಿನ ಆಂತರಿಕ ಒಪ್ಪಂದಕ್ಕೆ, ಕಮಲ ಪಡೆ ಸಂಪೂರ್ಣ ಶರಣಾಗತವಾಗಿತ್ತು. ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ ಬಳಿಕ ಚಿತ್ರಣ ಕೊಂಚ ಬದಲಾಗಿದೆ ಎನ್ನಲಾಗಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮುಧೋಳ ಶಾಸಕ ಗೋವಿಂದ ಕಾರಜೋಳ ಶುಕ್ರವಾರ ಜಿಲ್ಲಾ ಪಂಚಾಯ್ತಿ ಚುನಾವಣೆ ಸಂಬಂಧ ಮಾಜಿ ಶಾಸಕ ರಮೇಶ ಭೂಸನೂರ ಜತೆ ಸುದೀರ್ಘ ಮಾತುಕತೆ ನಡೆಸಿದ್ದು, ಯಡಿಯೂರಪ್ಪ ನೀಡಿದ ಹುಕುಂ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಭೂಸನೂರ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬುದು ಗೊತ್ತಾಗಿದೆ.

ಎರಡೂ ಪಕ್ಷಗಳಲ್ಲಿ ತಳಮಳ
‘ಇದೀಗ ಬಿಜೆಪಿಯಲ್ಲಿ ವಾತಾವರಣ ಕೊಂಚ ಬದಲಾಗಿದೆ. ಈಗಾಗಲೇ ಕಾಂಗ್ರೆಸ್‌ನ ಹುರಿಯಾಳು ಇಂಡಿ ತಾಲ್ಲೂಕಿನ ಸಾಲೋಟಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಸದಸ್ಯ ಶಿವಯೋಗೆಪ್ಪ ನೇದಲಗಿ ಬೆಂಬಲಿಸುವುದಾಗಿ ಬಿಜೆಪಿಯ ಅರ್ಧಕ್ಕೂ ಹೆಚ್ಚು ಜಿಲ್ಲಾ ಪಂಚಾಯ್ತಿ ಸದಸ್ಯರು ವಾಗ್ದಾನ ನೀಡಿದ್ದಾರೆ. ಪ್ರತಿಫಲವನ್ನು ಪಡೆದಿರುವುದು ಗೊತ್ತಾಗಿದೆ.

ಈ ವಿಷಯ ವರಿಷ್ಠರ ಗಮನಕ್ಕೆ ಬರುತ್ತಿದ್ದಂತೆ, ಯಡಿಯೂರಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ ಮೂಲಕ ವಿಪ್‌ ಕೊಡಲು ಸೂಚಿಸಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಶನಿವಾರ ಬೆಳಿಗ್ಗೆ 12 ಸದಸ್ಯರಿಂದ ಖಾಲಿ ವಿಪ್‌ಗೆ ಸಹಿ ಪಡೆದಿದ್ದೇವೆ. ಪಕ್ಷಕ್ಕೆ ನಿಷ್ಠವಾಗಿರುವಂತೆ ಎಲ್ಲ ಸದಸ್ಯರಿಗೂ ಕಠಿಣ ಸೂಚನೆ ರವಾನಿಸಲಾಗಿದೆ’ ಎಂದು ಜಿಲ್ಲಾ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕರಾದ ಎ.ಎಸ್‌.ಪಾಟೀಲ ನಡಹಳ್ಳಿ, ಸೋಮನಗೌಡ ಪಾಟೀಲ ಸಾಸನೂರ ರಂಗ ಪ್ರವೇಶಿಸಿದ್ದಾರೆ. ಇವರಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡ ವಿಜುಗೌಡ ಪಾಟೀಲ ಸಾಥ್‌ ನೀಡಿದ್ದಾರೆ. ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಸದಸ್ಯರ ಸರಣಿ ಸಭೆ ಸಿಂದಗಿಯ ಮಾಜಿ ಶಾಸಕ ರಮೇಶ ಭೂಸನೂರ ನಿವಾಸದಲ್ಲಿ ಶನಿವಾರ ರಾತ್ರಿಯಿಡಿ ನಡೆದಿದೆ. ಭಾನುವಾರ ಪಕ್ಷದ ಅಭ್ಯರ್ಥಿ ಅಖೈರುಗೊಳಿಸಿ ಜಿಲ್ಲಾ ಪಂಚಾಯ್ತಿಯಲ್ಲಿ ಕಮಲ ಅರಳಿಸಲು ರಣತಂತ್ರ ಹೆಣೆಯಲಾಗುತ್ತಿದೆ’ ಎಂದು ಹೆಸರು ಬಹಿರಂಗಗೊಳಿಸಲಿಚ್ಚಿಸದ ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದರು.

ಬಿಜೆಪಿ ಸದಸ್ಯರಲ್ಲೇ ವಿಶ್ವಾಸವಿಲ್ಲ..!
ಕಮಲ ಪಾಳೆಯದ ಮುಖಂಡರು ಒಂದೆಡೆ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿದ್ದರೆ, ಇನ್ನೊಂದೆಡೆ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಬಿಜೆಪಿ ಸದಸ್ಯರಲ್ಲೇ ಗೆಲುವಿನ ವಿಶ್ವಾಸವಿಲ್ಲದಾಗಿದೆ.

‘ನಮ್ಮಲ್ಲಿ ಕೆಲವರು ಈಗಾಗಲೇ ನೇದಲಗಿಗೆ ಕಮಿಟ್‌ಮೆಂಟ್‌ ಆಗಿದ್ದಾರೆ. ನಾವೆಷ್ಟೇ ಪ್ರಯತ್ನಿಸಿದರೂ ಅಧಿಕಾರ ಸಿಗೋದು ಅನುಮಾನ. ಸಿಂದಗಿ ವಿಧಾನಸಭಾ ಕ್ಷೇತ್ರದ ಐವರು ಜಿಲ್ಲಾ ಪಂಚಾಯ್ತಿ ಸದಸ್ಯರು ಸೇರಿದಂತೆ ಒಟ್ಟು ಎಂಟು ಜನ ಪಕ್ಷದ ನಿರ್ಧಾರದಿಂದ ದೂರ ಉಳಿಯೋದು ಬಹುತೇಕ ಖಚಿತ’ ಎಂದು ಜಿಲ್ಲಾ ಪಂಚಾಯ್ತಿಯ ಸದಸ್ಯೆಯ ಪತಿಯೊಬ್ಬರು, ಕಮಲ ಪಾಳೆಯದಲ್ಲಿನ ಆಂತರಿಕ ಬೆಳವಣಿಗೆಯ ಮಾಹಿತಿ ನೀಡಿದರು.

ಕಾಂಗ್ರೆಸ್‌ ಸಭೆ ಇಂದು
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಶತಾಯ–ಗತಾಯ ಈ ಬಾರಿ ತಮ್ಮ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನ ಬೇಕು ಎಂದು ವರಿಷ್ಠರ ಬಳಿ ಪಟ್ಟು ಹಿಡಿದಿದ್ದರು. ಇದರ ಪ್ರತಿಫಲವಾಗಿ ಇದೀಗ ಶಿವಯೋಗೆಪ್ಪ ನೇದಲಗಿ ಕಾಂಗ್ರೆಸ್‌ನ ಹುರಿಯಾಳಾಗಿದ್ದಾರೆ.

ನೇದಲಗಿ ಸಹ ಅಧ್ಯಕ್ಷ ಗಾದಿಗೇರಲು ತಮ್ಮದೇ ರಣತಂತ್ರ ಪ್ರಯೋಗಿಸಿದ್ದಾರೆ. ಎಲ್ಲರ ವಿಶ್ವಾಸ ಗಳಿಸಲು ಸಕಲ ತಂತ್ರ ಬಳಸಿದ್ದಾರೆ ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ 3 ಗಂಟೆಗೆ ಕೆಪಿಸಿಸಿ ವೀಕ್ಷಕರು, ಯಶವಂತರಾಯಗೌಡ ಪಾಟೀಲ ಕಾಂಗ್ರೆಸ್‌ ಜಿಲ್ಲಾ ಪಂಚಾಯ್ತಿ ಸದಸ್ಯರ ಸಭೆ ನಡೆಸಲಿದ್ದಾರೆ. ಚುನಾವಣೆ ದಿನ ಗೆಲುವಿಗೆ ಅನುಸರಿಸಬೇಕಾದ ಬಹುಮತ ಗಿಟ್ಟಿಸಲು ಯಾವ್ಯಾವ ತಂತ್ರ ಬಳಸಬೇಕು ಎಂಬುದರ ಕುರಿತು ನೀಲನಕ್ಷೆ ರೂಪಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಗೃಹ ಸಚಿವ ಎಂ.ಬಿ.ಪಾಟೀಲ ಶುಕ್ರವಾರವೇ ಚಾಂದಕವಠೆ ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಪಕ್ಷೇತರ ಸದಸ್ಯ ಗುರುರಾಜ ಪಾಟೀಲ ಜತೆ ಮಾತುಕತೆ ನಡೆಸಿ, ಬೆಂಬಲಿಸುವಂತೆ ಸೂಚಿಸಿದ್ದಾರೆ. ಇದರ ಜತೆಯಲ್ಲೇ ಜೆಡಿಎಸ್ ಸದಸ್ಯರನ್ನು ಸಂಪರ್ಕಿಸಿ ಬೆಂಬಲಿಸುವಂತೆ ಕೋರಿದ್ದಾರೆ. ತಮ್ಮ ಅತ್ಯಾಪ್ತ ಕಾಂಗ್ರೆಸ್‌ ಸದಸ್ಯರಿಗೂ ಚುನಾವಣೆ ಕುರಿತಂತೆ ಸೂಚನೆ ನೀಡಿದ್ದು, ಬಿಜೆಪಿಯ ಕೆಲ ಸದಸ್ಯರಿಗೂ ತಮ್ಮ ಪ್ರಭಾವ ಬಳಸಿ, ಒಲಿಸಿಕೊಳ್ಳುವ ಯತ್ನ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

*
ಕಾಂಗ್ರೆಸ್‌ ಪಕ್ಷದ ಸಭೆ ಭಾನುವಾರ ನಡೆಯಲಿದೆ. ನಮ್ಮ ಪ್ರಯತ್ನ ನಾವು ಮಾಡುತ್ತೇವೆ. ಬಿಜೆಪಿಯವರ ಪ್ರಯತ್ನ ಅವರಿಗೆ ಸೇರಿದ್ದು
-ಶಿವಯೋಗೆಪ್ಪ ನೇದಲಗಿ, ಅಧ್ಯಕ್ಷ ಸ್ಥಾನದ ಕಾಂಗ್ರೆಸ್‌ ಅಭ್ಯರ್ಥಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !