ನಾಯಕರ ಮುಂದಷ್ಟೇ ಪಕ್ಷ ನಿಷ್ಠೆ..!

7
ವಿಪ್‌ ಜಾರಿಗೊಳಿಸಿದ ಕಾಂಗ್ರೆಸ್‌, ಬಿಜೆಪಿ; ಜೆಡಿಎಸ್‌ನಲ್ಲಿ ಒಗ್ಗಟ್ಟಿಲ್ಲ–ಕುತೂಹಲ ಕೆರಳಿಸಿದ ಚುನಾವಣೆ

ನಾಯಕರ ಮುಂದಷ್ಟೇ ಪಕ್ಷ ನಿಷ್ಠೆ..!

Published:
Updated:

ವಿಜಯಪುರ: ವಿಜಯಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನದ ಚುನಾವಣೆ ಅಖಾಡ ರಂಗೇರಿದೆ. ಅಧಿಕಾರದ ಚುಕ್ಕಾಣಿಗಾಗಿ ಕೈ–ಕಮಲ ಪಡೆ ತೀವ್ರ ಸೆಣೆಸಾಟ ನಡೆಸಿವೆ.

ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದ ಅಪೇಕ್ಷಿತ ಶಿವಯೋಗೆಪ್ಪ ನೇದಲಗಿ ಉರುಳಿಸಿದ ದಾಳಕ್ಕೆ ಸಿಲುಕಿರುವ, ಕಮಲ ಪಡೆಯ ಕಾಲಾಳುಗಳು ಇದೀಗ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ.

‘ಬಿಜೆಪಿ ಅಗ್ರೇಸರ ಬಿ.ಎಸ್‌.ಯಡಿಯೂರಪ್ಪ ಕಠಿಣ ಸಂದೇಶ ರವಾನಿಸಿದ್ದಾರೆ. ನೇದಲಗಿ ಜತೆ ‘ಕೈ’ ಜೋಡಿಸಿರುವ ಸದಸ್ಯರು ಪಕ್ಷದ ನಿಷ್ಠೆಗೆ ಬದ್ಧರಾಗಬೇಕು. ಇಲ್ಲದಿದ್ದರೇ ಸದಸ್ಯತ್ವ ರದ್ದಿಗೆ ಸಿದ್ದರಿರಿ ಎಂಬ ಸೂಚನೆಯನ್ನು ಮುಧೋಳ ಶಾಸಕ ಗೋವಿಂದ ಕಾರಜೋಳ ಮೂಲಕ ನೀಡಿದ್ದಾರೆ.’

‘ಈ ಸೂಚನೆ ಬಿಜೆಪಿ ಸದಸ್ಯರಲ್ಲಿ ತಳಮಳ ಸೃಷ್ಟಿಸಿದೆ. ಇದು ಸಿಂದಗಿಯ ಮಾಜಿ ಶಾಸಕ ರಮೇಶ ಭೂಸನೂರಗೂ ನುಂಗಲಾರದ ಬಿಸಿ ತುಪ್ಪವಾಗಿದೆ. ಎರಡ್ಮೂರು ದಿನದಿಂದ ಭೂಸನೂರ ನಿವಾಸವೇ ಜಿಲ್ಲಾ ಪಂಚಾಯ್ತಿ ಬಿಜೆಪಿ ರಾಜಕಾರಣದ ಪಡಸಾಲೆಯಾಗಿ ಮಾರ್ಪಟ್ಟಿದೆ.

ಬಿಜೆಪಿಯ 20 ಸದಸ್ಯರು ಈಗಾಗಲೇ ಖಾಲಿ ವಿಪ್‌ಗೆ ಸಹಿ ಹಾಕಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದರೂ; ಯಾರು ಅಭ್ಯರ್ಥಿಯಾಗಬೇಕು ಎಂಬುದು ಸೋಮವಾರ ನಡೆಯಲಿರುವ ಚುನಾವಣೆಗೂ ಮುನ್ನ ಘೋಷಣೆಯಾಗಲಿದೆ.

ಭೂಸನೂರ ನಿವಾಸದೊಳಗೆ ಬಿಜೆಪಿ ಸದಸ್ಯರು, ಪಕ್ಷದ ನಿರ್ಧಾರ ಪಾಲಿಸುವುದಾಗಿ ಪಕ್ಷ ನಿಷ್ಠೆ ಮೆರೆದರೆ; ಹೊರಗೆ ಗುಂಪುಗೂಡಿ ಮಾತನಾಡುವುದೇ ಬೇರೆಯಿದೆ. ‘ನೇದಲಗಿ ಅಪಾಯಕಾರಿ ಮನುಷ್ಯ. ಈಗಾಗಲೇ ಆತನ ಕಮಿಟ್‌ಮೆಂಟ್‌ ಒಪ್ಪಿಕೊಂಡಿದ್ದೇವೆ. ಆ ಪ್ರಕಾರ ನಡೆದುಕೊಳ್ಳದಿದ್ದರೇ ಕಷ್ಟವಾಗುತ್ತೆ.

ಈ ಹಿಂದೆ ಸಹ ಪಕ್ಷದ ನಿರ್ದೇಶನ ಉಲ್ಲಂಘಿಸಿದ ಯಾರೊಬ್ಬರ ಸದಸ್ಯತ್ವ ರದ್ದಾದ ಇತಿಹಾಸವಿಲ್ಲ. ನೋಡೋಣ. ಮುಂಜಾನೆ ಗಟ್ಟಿ ನಿರ್ಧಾರ ತೆಗೆದುಕೊಳ್ಳೋಣ’ ಎಂಬ ಮಾತು ಕೇಳಿ ಬರುತ್ತಿದ್ದಂತೆ; ಕಾರಜೋಳ ಕುಪಿತರಾಗಿದ್ದಾರೆ’ ಎಂಬುದು ತಿಳಿದು ಬಂದಿದೆ.

‘ಬಿಜೆಪಿ ಸದಸ್ಯರು ಒಗ್ಗಟ್ಟಿನಿಂದ ಇರುವಂತೆ ವರಿಷ್ಠರ ನಿರ್ದೇಶನವಿದೆ. ಮುದ್ದೇಬಿಹಾಳ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ತಮ್ಮ ಸಂಬಂಧಿಕನ ಮತ ತರುವುದು ಖಾತ್ರಿಯಾಗಿದೆ. ಪಕ್ಷೇತರನ ಮತದ ಜವಾಬ್ದಾರಿ ನನಗೆ ಬಿಡಿ. ಈ ವಿಷಯದಲ್ಲಿ ಯಾರೂ ಬಸನಗೌಡ ಪಾಟೀಲ ಯತ್ನಾಳ ಜತೆ ಚರ್ಚಿಸಬೇಡಿ. ಎಲ್ಲಿಯೂ ಪ್ರಸ್ತಾಪಿಸಬೇಡಿ. ನಾನೇ ಯತ್ನಾಳ ಜತೆ ಚರ್ಚಿಸಿ, ಜಿಲ್ಲಾ ಪಂಚಾಯ್ತಿಯಲ್ಲಿ ಕಮಲ ಅರಳಿಸೋಣ ಎಂಬ ಸೂಚನೆಯನ್ನು ಯಡಿಯೂರಪ್ಪ ರವಾನಿಸಿದ್ದಾರೆ. ಅದರಂತೆ ಕಾರ್ಯಸೂಚಿ ಸಿದ್ಧವಾಗುತ್ತಿದೆ’ ಎಂದು ಜಿಲ್ಲಾ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು.

ಒಗ್ಗಟ್ಟಿನ ಮಂತ್ರ; ಅವಿರೋಧ ..?

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ವಿಜಯಪುರದಲ್ಲೇ ಬೀಡು ಬಿಟ್ಟು ಪಕ್ಷದ ಸದಸ್ಯರು ಸೇರಿದಂತೆ ಜೆಡಿಎಸ್‌ ಸದಸ್ಯರು, ಪಕ್ಷೇತರ ಸದಸ್ಯನ ಬೆಂಬಲವನ್ನು ಕೋರಿದ್ದಾರೆ ಎನ್ನಲಾಗಿದೆ.

ಚುನಾವಣಾ ತಂತ್ರಗಾರಿಕೆ ಯಶಸ್ವಿಯಾಗಿದ್ದು, ನಿರೀಕ್ಷೆಯಂತೆ ನೇದಲಗಿ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬ ಆತ್ಮವಿಶ್ವಾಸ ‘ಕೈ’ ಪಾಳೆಯದಿಂದ ವ್ಯಕ್ತವಾಗಿದೆ. ಎಲ್ಲವೂ ನಿಗದಿಯಾಗಿದ್ದಂತೆ ನಡೆಯಲಿದೆ. ಯಾರು ಎಷ್ಟೇ ರಣತಂತ್ರ ರೂಪಿಸಿದರೂ; ಪ್ರಯೋಜನವಾಗದು. ಅವಿರೋಧ ಆಯ್ಕೆ ನಡೆದರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತು ಕಾಂಗ್ರೆಸ್‌ ಪಾಳೆಯದ್ದು.

ಜೆಡಿಎಸ್‌ನ ಮೂವರು ಸದಸ್ಯರು ಜಿಲ್ಲಾ ಪಂಚಾಯ್ತಿಯಲ್ಲಿದ್ದಾರೆ. ಸಚಿವ–ಶಾಸಕರಿದ್ದರೂ ಈ ಸಂಬಂಧ ಇದೂವರೆಗೂ ಯಾವುದೇ ಸಭೆ ನಡೆಸಿಲ್ಲ. ಯಾರಿಗೆ ಬೆಂಬಲಸಲಿದ್ದೇವೆ ಎಂಬುದನ್ನು ಯಾವೊಬ್ಬ ಜೆಡಿಎಸ್‌ ಮುಖಂಡ ಸ್ಪಷ್ಟಪಡಿಸಿಲ್ಲ. ಅಗತ್ಯ ಬಿದ್ದರೆ ಕಾಂಗ್ರೆಸ್‌ ಬೆಂಬಲಿಸುವಂತೆ ವಿಪ್‌ ಜಾರಿಗೊಳಿಸಲಿದ್ದೇವೆ ಎಂದು ಜಿಲ್ಲಾ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಹಿರೇಮಠ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !