ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಯಿಲಿ ಬರೀ ಬುರುಡೆ ಸಾಹಿತಿ: ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಂದಿ ಆಂಜನಪ್ಪ ಆರೋಪ

Last Updated 5 ಮೇ 2018, 10:33 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಹೋದ ಕಡೆಗಳಲ್ಲಿ ನಾನೊಬ್ಬ ಸಾಹಿತಿ ಎಂದು ಬುರುಡೆ ಬಿಡುವ ಸಂಸದ ವೀರಪ್ಪ ಮೊಯಿಲಿ ಅವರಿಗೆ ಸರಿಯಾಗಿ ಕನ್ನಡ ವ್ಯಾಕರಣ ಗೊತ್ತಿಲ್ಲ. ಕಠಿಣ ಶಬ್ದಗಳನ್ನು ಬರೆಯಲು ಬರುವುದಿಲ್ಲ. ಮಂಗಳೂರಿನ ವಾಸುದೇವ್‌ ಎಂಬುವರ ಕೈಯಲ್ಲಿ ಬರವಣಿಗೆ ಮಾಡಿಸಿ, ಅದರಲ್ಲೇ ಸ್ಪಲ್ಪ ತಿದ್ದಿದಂತೆ ಮಾಡಿ ನಾನೊಬ್ಬ ಸಾಹಿತಿ ಹೇಳಿಕೊಳ್ಳುತ್ತಾರೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಂದಿ ಆಂಜನಪ್ಪ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊಯಿಲಿ ಅವರು ಪರಿಜ್ಞಾನವಿಲ್ಲದ ಮನುಷ್ಯ. ಬೇಕಿದ್ದರೆ ಅವರು ಬರೆದಿರುವ ಪುಸ್ತಕಗಳಲ್ಲಿ ಎಷ್ಟು ತಪ್ಪು ಅಕ್ಷರಗಳಿವೆ ಹುಡುಕಿ ನೋಡಿ. ಇಂತಹವರು ಸಾಹಿತಿಗಳಾಗಲು ಹೇಗೆ ಸಾಧ್ಯ? ಅವರೊಬ್ಬ ಮಹಾನ್‌ ಸುಳ್ಳುಗಾರ. ಕಾಂಗ್ರೆಸ್‌ ಹೈಕಮಾಂಡ್‌ ಚಾಕರಿ ಮಾಡಿ ರಾಜಕೀಯ ಸೌಲಭ್ಯಗಳನ್ನು ಪಡೆದ ಅವಕಾಶವಾದಿ. ಅವರಿಗೆ ದೇವೇಗೌಡರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ’ ಆಕ್ರೋಶ ವ್ಯಕ್ತಪಡಿಸಿದರು.

‘ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮೊಯಿಲಿ ಅವರು ಜೆಡಿಎಸ್‌ ವರಿಷ್ಠ ದೇವೇಗೌಡರು ತಮ್ಮ ಪಿತೂರಿಗಳಿಂದಲೇ ಪ್ರಧಾನಿ ಸ್ಥಾನ ಕಳೆದುಕೊಂಡರು. ಬರೀ ರಾಜಕಾರಣ ಮಾಡುವ ಅವರಿಗೆ ಸಂಸ್ಕಾರವಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ದೇವೇಗೌಡರು ಪಿತೂರಿ ಮಾಡಿ ಪ್ರಧಾನಿಯಾದವರಲ್ಲ. ಕಾಂಗ್ರೆಸ್ ಮಾಡಿದ ಪಿತೂರಿ ಫಲವಾಗಿ ಅವರಿಗೆ ಆ ಹುದ್ದೆ ಅರಸಿ ಬಂತು ಎನ್ನುವುದು ಮೊಯಿಲಿ ಮೊದಲು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಅಧಿಕಾರ ಅನುಭವಿಸಿದರು. ಆದರೆ ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಅಹಿಂದ ವರ್ಗದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ ಎಂದು ಮೊಯಿಲಿ ತಿಳಿಸಬೇಕು. ಜೆಡಿಎಸ್‌ ಗೌರಿಬಿದನೂರು, ಬಾಗೇಪಲ್ಲಿಯಲ್ಲಿ ಅಹಿಂದ ವರ್ಗದವರಿಗೆ ಟಿಕೆಟ್‌ ನೀಡಿದೆ. ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಹೇಗಿದೆ ಎಂದು ಜನ ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಎರಡು ವರ್ಷಗಳಲ್ಲಿ ಎತ್ತಿನಹೊಳೆ ನೀರು ಜಿಲ್ಲೆಗೆ ತರುತ್ತೇವೆ ಎಂದು ಸುಳ್ಳಿನ ಪುಂಗಿ ಊದುತ್ತಲೇ ಮೊಯಿಲಿ ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಅನುಭವಿಸಿದರು. ಇದೀಗ ಮತ್ತೆ ಲೋಕಸಭೆ ಚುನಾವಣೆ ಸಮೀಪಿಸಿದ ಕಾರಣಕ್ಕೆ ಒಂದೂವರೆ ವರ್ಷದಲ್ಲಿ ಎತ್ತಿನಹೊಳೆ ನೀರು ಬರುತ್ತದೆ ಎಂದು ತಮಟೆ ಬಾರಿಸಲು ಮುಂದಾಗಿದ್ದಾರೆ’ ಎಂದು ವ್ಯಂಗ್ಯ ಮಾಡಿದರು.

‘ಮೊಯಿಲಿ ಮತ್ತು ಶಾಸಕ ಡಾ.ಕೆ.ಸುಧಾಕರ್‌ ಅವರು ನೀರಾವರಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರಗಳನ್ನು ಮಾಡಿಸಿ, ಅನೇಕ ಪ್ರಕರಣಗಳನ್ನು ದಾಖಲಿಸಲು ಕಾರಣರಾಗಿದ್ದಾರೆ. ಎತ್ತಿನಹೊಳೆ ಮತ್ತು ಏತನೀರಾವರಿ ಯೋಜನೆಗಳ ಪೈಪ್‌ಲೈನ್ ಖರೀದಿ ಹೆಸರಿನಲ್ಲಿ ಕೋಟಿಗಟ್ಟಲೇ ಲೂಟಿ ಮಾಡಿದ್ದಾರೆ. ಕೆಲವೆ ದಿನಗಳಲ್ಲಿ ಇವರು ಕೂಡ ನೀರವ್‌ ಮೋದಿ, ವಿಜಯ ಮಲ್ಯ ಅವರಂತೆ ದೇಶ ಬಿಟ್ಟು ಓಡಿ ಹೋಗಲಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT