ಮದುವೆ ಅನ್ನುವುದೇ ಒಂದು ಸಂಭ್ರಮ. ಆ ಸಂಭ್ರಮದಲ್ಲಿ ತಾರೆಯಂತೆ ಕಂಗೋಳಿಸಬೇಕೆಂಬುದು ಎಲ್ಲರ ಆಸೆ. ಅದಕ್ಕಾಗಿ ಮಾಡುವ ಪೂರ್ವ ತಯಾರಿಗಳೇಷ್ಟೋ. ಬಟ್ಟೆ, ಒಡವೆ ಸೇರಿದಂತ ಅನೇಕ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಎಷ್ಟೇ ಚಂದದ ಅಥವಾ ದುಬಾರಿ ಬಟ್ಟೆ, ಒಡವೆ ಹಾಕಿಕೊಂಡರೂ ಮುಖದ ಅಂದ ಹೆಚ್ಚಿಸುವುದು ಮಾತ್ರ ಮೇಕಪ್. ಹೌದು, ಈಗಿನ ಕಾಲದಲ್ಲಿ ಪ್ರತಿಯೊಂದು ಮದುವೆಯಲ್ಲಿಯೂ ವಧುವಿಗೆ ಅಷ್ಟೇ ಅಲ್ಲದೆ ವರನಿಗೂ ಮೇಕಪ್ ಮಾಡುವುದು ಟ್ರೆಂಡ್ ಆಗಿದೆ. ವಧು, ವರರಷ್ಟೇ ಅಲ್ಲದೆ ಮದುವೆಗೆ ಬರುವ ಸಂಬಂಧಿಕರು ಅದರಲ್ಲಿಯೂ ವಿಶೇಷವಾಗಿ ಹುಡುಗಿಯರು, ಮಹಿಳಾ ಮಣಿಯರು ಮೇಕಪ್ ಇಲ್ಲದೆ ಬರುವುದಿಲ್ಲ.
ಮುಖಕ್ಕೆ ಮೇಕಪ್ ಮಾಡಿಕೊಳ್ಳುವುದರಷ್ಟೇ ಅದನ್ನು ತೆಗೆಯುವುದು ಬಹಳ ಮುಖ್ಯ. ಸೂಕ್ತ ರೀತಿಯಲ್ಲಿ ಮೇಕಪ್ ತೆಗೆಯದೆ ಹೋದರೆ ಮುಖದಲ್ಲಿ ಮೊಡವೆಗಳು, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದಾಗಿ ಮುಖದ ಅಂದ ಹಾಳಾಗುತ್ತದೆ. ಮೇಕಪ್ ಅನ್ನು ದೀರ್ಘ ಸಮಯ ಮುಖದ ಮೇಲೆ ಬಿಡುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೇಕಪ್ ಹಾಕಿಸಿಕೊಳ್ಳುವ ಪ್ರತಿಯೊಬ್ಬರೂ ಅದನ್ನು ತೆಗೆಯುವ ವಿಧಾನವನ್ನು ತಿಳಿದಿರಲೇಬೇಕು.
ಮೇಕಪ್ ತೆಗೆಯುವ ವಿಧಾನ:
ಮೇಕಪ್ ತೆಗೆಯಲು ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ಗಳ ಮೇಕಪ್ ರಿಮೂವರ್‌ಗಳು ಲಭ್ಯವಿದೆ. ಮೇಕಪ್ ರಿಮೂವರ್ ಆಯ್ಕೆಯ ವಿಚಾರದಲ್ಲೂ ಬಹಳ ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ, ಪ್ರತಿಯೊಬ್ಬರ ಚರ್ಮದ ವಿಧಗಳು ಬೇರೆ ಬೇರೆಯಾಗಿರುತ್ತವೆ. ನಿಮ್ಮ ನಿಮ್ಮ ಚರ್ಮಕ್ಕನುಗುಣವಾಗುವ ರಿಮೂವರ್ ಅನ್ನು ಮಾಡಿಕೊಳ್ಳುವುದು ಸೂಕ್ತ.
ಮೊದಲಿಗೆ ಮೇಕಪ್ ರಿಮೂವರ್ ಜೊತೆಗೆ ಒಂದು ಕಾಟನ್ ಪ್ಯಾಡ್ (ಹತ್ತಿಯ ಪ್ಯಾಡ್) ಅನ್ನು ತೆಗೆದುಕೊಂಡು ಕಣ್ಣಿನ ಸುತ್ತ ಮಾಡಿರುವ ಮೇಕಪ್ ಅನ್ನು ಒರೆಸಬೇಕು. ಬಳಿಕ ತುಟಿಗಳಿಗೆ ಹಚ್ಚಿರುವ ಲಿಪ್‌ಸ್ಟಿಕ್ ತೆಗೆಯಬೇಕು. ನಂತರ ಮತ್ತೊಂದು ಕಾಟನ್ ಪ್ಯಾಡ್‌ಗೆ ರಿಮೂವರ್ ಹಾಕಿಕೊಂಡು ಮುಖದ ಮೇಲಿರುವ ಫೌಂಡೇಶನ್ ಕ್ರೀಮ್, ಪೌಡರ್ ಇತರ ಮೇಕಪ್ ಅನ್ನು ಒರೆಸಬೇಕು. ಇಷ್ಟಾದರೂ ಮುಖದಲ್ಲಿ ಅಲ್ಪಸ್ವಲ್ಪ ಮೇಕಪ್ ಉಳಿದೇ ಇರುತ್ತದೆ. ಇದನ್ನು ತೆಗೆಯಲು ಮೇಕಪ್ ರಿಮೂವರ್ ವೈಪ್ಸ್ ಇಲ್ಲವೇ ವೆಟ್ ವೈಪ್ಸ್‌ಗಳನ್ನು ಬಳಸಬೇಕು. ಒಂದು ವೆಟ್ ವೈಪ್ಸ್ ತೆಗೆದುಕೊಂಡು ಮುಖವನ್ನು ಸಂಪೂರ್ಣವಾಗಿ ಒರೆಸಬೇಕು. ಇಷ್ಟು ವಿಧಾನಗಳನ್ನು ಅನುಸರಿಸಿದ ಬಳಿಕ ಮುಖವನ್ನು ಸ್ವಚ್ಚವಾಗಿ ನೀರಿನಲ್ಲಿ ತೊಳೆಯಬೇಕು.
ಮೇಕಪ್ ತೆಗೆಯಲು ಕೆಲವರು ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಎಣ್ಣೆಯನ್ನು ಮುಖಕ್ಕೆ ಹಚ್ಚಿ, ಹತ್ತಿಯ ಸಹಾಯದಿಂದ ಮೇಕಪ್ ತೆಗೆಯುತ್ತಾರೆ. ಆದರೆ, ಇದು ಎಲ್ಲರಿಗೂ ಸೂಕ್ತವಾಗುವುದಿಲ್ಲ. ಕೊಬ್ಬರಿ ಎಣ್ಣೆ ಒಳ್ಳೆಯದೇ ಆದರೂ, ಕೆಲವರ ಚರ್ಮ ಸೂಕ್ಷ್ಮವಾಗಿರುತ್ತದೆ. ಅಲ್ಲದೆ ಕೆಲವರಿಗೆ ಕೊಬ್ಬರಿ ಎಣ್ಣೆ ಬಳಸುವುದರಿಂದ ಮುಖ ಕಪ್ಪಾಗುತ್ತದೆ. ಇನ್ನೂ ಪ್ರತಿನಿತ್ಯ ಸಿಂಪಲ್ ಮೇಕಪ್ ಮಾಡುವವರು ಮೊದಲು ಒಂದು ವೆಟ್ ವೈಪ್ಸ್‌ನಿಂದ ಮುಖವನ್ನು ಒರೆಸಿ ಬಳಿಕ ಮುಖ ತೊಳೆಯುವುದರಿಂದ ಮೇಕಪ್ ಅನ್ನು ಸುಲಭವಾಗಿ ತೆಗೆಯಬಹುದು.
ಕೋಟ್,
ಮುಖಕ್ಕೆ ಯಾವುದೇ ಮೇಕಪ್ ಉತ್ಪನ್ನಗಳನ್ನು ಬಳಸುವ ಮುನ್ನ ಅದು ನಿಮ್ಮ ಚರ್ಮಕ್ಕೆ ಹೊಂದುತ್ತದೆಯೇ ಎಂದು ಪ್ಯಾಚ್ ಟೆಸ್ಟ್ (Patch Test) ಮಾಡುವುದು ಉತ್ತಮ. ಅದು ನಿಮ್ಮ ಚರ್ಮಕ್ಕೆ ಹೊಂದಿಕೆಯಾದರೆ ಮೇಕಪ್ ಮಾಡಿಕೊಳ್ಳಬಹುದು.