ವಧು - Bride

ಕ್ರೀಮ್‌ಗಳಿಂದ ಸೌಂದರ್ಯದ ಮರುಪೂರಣ

MH-Team

ಎಷ್ಟೇ ಬೆಳ್ಳಗಿರುವವರು ಕೂಡ ಅಲಂಕಾರ ಶುರು ಮಾಡುವಾಗ ಒಂದಿಷ್ಟು ಫೌಂಡೇಷನ್, ಮಾಯಿಶ್ಚರೈಸರ್, ಕ್ರೀಮ್ ಹಚ್ಚಿಕೊಳ್ಳದೇ ಇರಲಾರರು. ಅದರಲ್ಲೂ ಈ ಚಳಿಗಾಲದಲ್ಲಂತೂ ಕ್ರೀಮ್‌ಗಳಿಗೆ ಎಲ್ಲಿಲ್ಲದ ಬೇಡಿಕೆ. ಮಹಿಳೆಯರು ಮಾತ್ರವಲ್ಲ, ಈಗೀಗ ಮಕ್ಕಳಲ್ಲೂ ಸೌಂದರ್ಯಪ್ರಜ್ಞೆ ಜಾಗೃತವಾಗಿದೆ. ‘ಚಂದ ಕಾಣಾಕ’ ಯುವತಿಯರೂ ಹರಸಾಹಸ ಮಾಡುತ್ತಿದ್ದಾರೆ. ಸೌಂದರ್ಯವರ್ಧಕಗಳ ಮೊರೆ ಹೋಗುತ್ತಿದ್ದಾರೆ, ಬ್ಯೂಟಿ ಪಾರ್ಲರ್‌ಗಳ ಕದ ತಟ್ಟುತ್ತಿದ್ದಾರೆ, ಹರ್ಬಲ್‌ ಉತ್ಪನ್ನಗಳಿಗೆ ಮುಗಿ ಬಿದ್ದಿದ್ದಾರೆ, ಅಡುಗೆ ಮನೆಯ ಸೌಂದರ್ಯ ಸಾಧನಗಳನ್ನು ಹಚ್ಚಿ, ಉಜ್ಜಿ, ತೊಳೆದು ಬಳಿದು ಸುಂದರವಾಗಿ ಕಾಣಲು ಹಪಹಪಿಸುತ್ತಿದ್ದಾರೆ.
ಸೌಂದರ್ಯವರ್ಧಕಗಳಾದ ಕ್ರೀಮ್‌, ಲೋಷನ್‌, ಪೌಡರ್‌, ಸುಗಂಧದ್ರವ್ಯ, ಲಿಪ್‌ಸ್ಟಿಕ್‌, ಐ ಲೈನರ್, ಮಸ್ಕರಾ, ನೇಲ್‌ ಪಾಲಿಶ್... ಎಲ್ಲವೂ ಅಂದ ಹೆಚ್ಚಿಸಲು ಬಳಸುವ ಸಾಧನಗಳೇ. ಜೊತೆಗೆ ಹೇರ್‌ ಕಲರ್‌, ಸ್ಪ್ರೇಗಳು, ಡಿಯೊಡರೆಂಟ್‌, ಜೆಲ್‌ಗಳು, ಮಸಾಜ್‌ ಆಯಿಲ್‌ಗಳು ಸೌಂದರ್ಯವರ್ಧಕಗಳಾಗಿ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ. ಕಾಲಕ್ಕೆ ತಕ್ಕಂತೆ ಕ್ರೀಮ್‌ಗಳ ಬಳಕೆ ಸೌಂದರ್ಯಪ್ರಿಯರ ಆಪ್ತ ಸಾಧನವಾಗಿದೆ. ಚಳಿಗಾಲದಲ್ಲಿ ಮಾಯಿಶ್ಚರೈಸರ್‌, ಲೋಷನ್‌ಗಳು, ಜೆಲ್‌ಗಳ ಉಪಯೋಗ ಹೆಚ್ಚು.‌ ತ್ವಚೆಯ ಆರೈಕೆಗೆ ಈ ಎಲ್ಲ ಉತ್ಪನ್ನಗಳು ಅಗತ್ಯವಾಗಿ ಬೇಕಿದ್ದರೂ ಗುಣಮಟ್ಟದವುಗಳನ್ನು ಬಳಸುವುದೇ ಒಳ್ಳೆಯದು.
ಬೇಡಿಕೆ ಹೆಚ್ಚು ಈ ಕ್ರೀಮ್‌ಗಳಿಗೆ...
ಸೌಂದರ್ಯವರ್ಧನೆಗಾಗಿ ಹಲವು ಕಂಪೆನಿಗಳು ವಿವಿಧ ರೀತಿಯ ಕ್ರೀಮ್, ಬಾಮ್, ಲಿಕ್ವಿಡ್‌, ಆ್ಯಂಟಿ ಏಜಿಂಗ್‌ ಸಲಕರಣೆಗಳನ್ನು ಮಾರುಕಟ್ಟೆಗೆ ತಂದಿವೆ. ಅಪ್ಪಟ ಗಿಡಮೂಲಿಕೆಗಳಿಂದ ತಯಾರಿಸಿದ್ದು, ಆಯುರ್ವೇದ ಸಸ್ಯಗಳಿಂದ ಮಾಡಿದ್ದು, ಸಂಪೂರ್ಣ ಹರ್ಬಲ್‌... ಎಂಬೆಲ್ಲ ಲೇಬಲ್‌ ಅಂಟಿಸಿ ಬಂದಿರುವ ತರಾವರಿ ಕ್ರೀಮ್‌ಗಳು ಸೌಂದರ್ಯಪ್ರಿಯರನ್ನು ಸೆಳೆಯುತ್ತಿವೆ.
ಮದುವೆ ಹೆಣ್ಣಿಗೆ ಪಾರ್ಲರ್ ಒಡತಿ ಕ್ರೀಮ್‌ಗಳನ್ನು ತಂದು ಹಚ್ಚಿ, ಉಜ್ಜಿ ಫಳಫಳ ಎನಿಸುತ್ತಾಳೆ. ಇದನ್ನು ಕಂಡ ಮದುಮಗಳ ಸಂಬಂಧಿ ಬಳಗ ಕ್ರೀಮ್‌ಗಳನ್ನು ಹಚ್ಚಿ, ಪರಿಮಳ ನೋಡಿ ಬಳಸುವುದು ಸಾಮಾನ್ಯ ದೃಶ್ಯವೇ ಆಗಿರುತ್ತದೆ.
ಆ್ಯಂಟಿ ಏಜಿಂಗ್ ಪರಿಕಲ್ಪನೆ ಸೌಂದರ್ಯ ಜಗತ್ತಿನಲ್ಲಿ ಬಂದಾಗಿಲಿಂದ ಕ್ರೀಮ್‌ಗಳಲ್ಲೂ ಆ್ಯಂಟಿ ಏಜಿಂಗ್ ಗುಣ ಇರುವಂಥವು ಮಾರುಕಟ್ಟೆಗೆ ಹರಿದು ಬಂದಿವೆ. ತ್ವಚೆಯ ಆರೈಕೆಗಾಗಿ ಹಾಗೂ ಹೆಚ್ಚು ವಯಸ್ಸಾದರೂ ಆಗದಂತೆ ಕಾಣುತ್ತದೆ ಎಂದು ಹೇಳಲಾಗುವ ‘ಯುತ್‌ ಎಟರ್ನಿಟಿ’ ಎಂಬ ಕ್ರೀಮ್‌ ಅನ್ನು ಹೆಸರಾಂತ ಕಂಪನಿಯೊಂದು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಸುದ್ದಿಯಾಗಿತ್ತು. ಈ ಕ್ರೀಮ್‌ ತಯಾರಿಕೆಗೆ ಸ್ವಿಟ್ಜರ್ಲೆಂಡ್‌ನ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ‘ಎಡಲ್ವೀಸ್‌’ ಎಂಬ ಸಸ್ಯದ ಕಾಂಡವನ್ನು ಬಳಸಲಾಗಿದೆ. ಇದು ಬಹಳ ಅಪರೂಪದ ಸಸ್ಯವಾಗಿದ್ದು, ವಿಶ್ವದ ಬೇರೆ ಯಾವ ಭಾಗದಲ್ಲೂ ಸುಲಭವಾಗಿ ಕಾಣಸಿಗುವುದಿಲ್ಲ. ಈ ಸಸ್ಯದ ಕಾಂಡದಲ್ಲಿ ತ್ವಚೆಯನ್ನು ಸಂಪೂರ್ಣವಾಗಿ ಕಾಪಾಡುವ ಅಂಶವಿದ್ದು, ಇದರಿಂದ ತಯಾರಿಸಿದ ಕ್ರೀಮ್‌ ತ್ವಚೆಯ ನಯಕ್ಕೆ, ಆರೋಗ್ಯಕ್ಕೆ ಯೋಗ್ಯವಾದದ್ದು. ಹಲವಾರು ವರ್ಷಗಳ ಸಂಶೋಧನೆಗಳ ಬಳಿಕ ಈ ಸಸ್ಯವನ್ನು ಬಳಸಿ ಕ್ರೀಮ್‌ ತಯಾರಿಸಿದೆ.
ಏನೇ ಆದರೂ ಚಂದ ಕಾಣಾಕ ಒಂದೀಟು ಕ್ರೀಮ್ ಹಚ್ಚಿಕೊಂಡರೆ ಹೆಣ್ಣಿಗೆ ಮನಸ್ಸಿಗೂ ಹಿತ, ದೇಹಕ್ಕೂ ಸಮಾಧಾನ...!