ವಧುವಿನ ಬಳೆ ಆಯ್ಕೆ ಹೀಗಿರಲಿ
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು ಒಳಗೆ ಬರಲು ಅಪ್ಪಣೆಯೇ ದೊರೆಯೇ ಅಂಥ ಜನಪದ ಹಾಡೊಂದಿದೆ. ನಮ್ಮ ಸಂಪ್ರದಾಯಗಳಲ್ಲಿ ಬಳೆಗೆ ಉನ್ನತ ಸ್ಥಾನ ನೀಡಲಾಗಿದೆ. ಅದರಲ್ಲಿಯೂ ಮದುವೆ ಮನೆಯಲ್ಲಿ ಬಳೆಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಸಾಮಾನ್ಯವಾಗಿ ನಾಂದಿಯಾಗುವ ದಿನವೇ ಬಳೆಶಾಸ್ತ್ರವೂ ನಡೆಯುತ್ತದೆ. ಮದುಮಗಳ ಕೈಗಳಿಗೆ ಎಂಥೆಂಥ ಬಳೆಗಳು ಇಡಬೇಕು. ಬಳೆಯು ಸಾಂಪ್ರದಾಯಿಕವಾಗಿಯೂ, ಫ್ಯಾಷನೇಬಲ್ ಆಗಿಯೂ ಕಾಣಿಸಬೇಕು. ಸಂಭ್ರಮಕ್ಕೂ, ಸಂಪ್ರದಾಯಕ್ಕೂ ಬಳೆಯ ಸದ್ದು ಜತೆಯಾಗಬೇಕು ಎಂಬುದು ಈಗೀಗ ಎಲ್ಲ ವಧುವಿನ ಆಶಯವೂ ಆಗಿರುತ್ತದೆ.
ಕೈತುಂಬಾ ಬಳೆ ತೊಟ್ಟ ಮದುಮಗಳ ಕೈಯಲ್ಲಿ ಚಿತ್ತ ಕದಿಯುವ ಮೆಹಂದಿಯ ವಿವಿಧ ವಿನ್ಯಾಸಗಳನ್ನು ನೋಡುವುದೇ ಚಂದ. ಕೆಂಪು ಮತ್ತು ಹಸಿರು ಬಣ್ಣದ ಗಾಜಿನ ಬಳೆಗಳನ್ನು ತೊಡುವುದು ಮಂಗಳಕರವೆಂದು ಭಾವಿಸಲಾಗಿದೆ. ಬಳೆಗಳನ್ನು ಧರಿಸುವುದರಿಂದ ಧರಿಸಿದವರ ದೇಹದಲ್ಲಿ ಸಕಾರಾತ್ಮಕ ಮನೋಭಾವ ಹೆಚ್ಚುತ್ತದೆ ಎಂದು ನಂಬಲಾಗಿದೆ. ಹಾಗಾಗಿ ಏಳು ತಿಂಗಳ ಬಸುರಿಗೂ ಬಳೆ ತೊಡಿಸುವ ಶಾಸ್ತ್ರವಿದೆ.
ವಧುವಿನ ಕೈಗಳಿಗೆ ಎಂಥ ಬಳೆ ಬೇಕು?
ಕೈಗಳಿಗೆ ಎಷ್ಟೇ ಆಭರಣಗಳಿದ್ದರೂ ಗಾಜಿನ ಬಳೆಗಳನ್ನು ತೊಡಿಸುವುದು ಹಿಂದಿನಿಂದಲೂ ಬಂದ ರಿವಾಜು. ಹಸಿರುಬಳೆ, ಕೆಂಪು ಗಚ್ಚಿನ ಬಳೆಗಳನ್ನು ತೊಡಿಸಲಾಗುತ್ತದೆ. ಇದರ ಜತೆಗೆ ಮದುಮಗಳು ಧಾರೆ ಸೀರೆಗೆ ಹೊಂದಿಕೆಯಾಗುವಂಥ ಗಾಜಿನ ಬಳೆಗಳನ್ನು ತೊಡಬಹುದು. ಎರಡು ಬಣ್ಣಗಳ ಶೇಡ್ ಹೊಂದಿರುವ ಬಳೆಗಳು ಹೆಚ್ಚು ಸೂಕ್ತ ಎನಿಸುತ್ತದೆ. ಗಾಜಿನ ಬಳೆಗಳ ಮಧ್ಯೆ ತೆಳು ಚಿನ್ನದ ಬಳೆಗಳನ್ನು ಧರಿಸಬಹುದು. ಗಾಜಿನ ಬಳೆಗಳ ಮಧ್ಯೆ ವಜ್ರದ ಹರಳುಗಳಿರುವ ಬಳೆಗಳು ಹೆಚ್ಚು ಸೂಕ್ತವೆನಿಸುತ್ತದೆ. ಇವೆಲ್ಲದ್ದಕ್ಕೂ ದೃಷ್ಟಿಯಾಗದಿರಲೆಂದು ಎರಡೆಡರು ಗೌರಿ ಬಳೆ (ಕಪ್ಪು ಬಳೆ)ಯನ್ನು ತೊಡಿಸಲಾಗುತ್ತದೆ. ಬಳೆಗಳ ಮಧ್ಯೆ ಬೆಳ್ಳಿಯ ಕುಸುರಿಗಳಿರುವ ಕಡಗಗಳು ಚೆನ್ನಾಗಿಯೇ ಕಾಣಿಸುತ್ತದೆ.
ವಿನ್ಯಾಸ ಹೀಗಿರಲಿ
ಗಾಜಿನ ಬಳೆಗಳಾದರೆ ಅವುಗಳ ಮೇಲೆ ಸಣ್ಣ ಸಣ್ಣ ಗಚ್ಚುಗಳಿದ್ದರೆ ಚೆನ್ನಾಗಿ ಕಾಣುತ್ತದೆ. ಸ್ವಲ್ಪ ಬಳೆಗಳನ್ನು ತೊಟ್ಟರೂ, ಗಚ್ಚುಗಳ ಕಾರಣದಿಂದಾಗಿ ಕೈತುಂಬಾ ಬಳೆಗಳು ಇರುವ ಹಾಗೆ ಕಾಣುತ್ತದೆ. ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬೇಕೆಂದರೆ ಬಳೆಗಳಲ್ಲಿ ಹೆಚ್ಚು ವಿನ್ಯಾಸಗಳಿರುವಂತೆ ನೋಡಿಕೊಳ್ಳಿ. ಸಣ್ಣ ಸಣ್ಣ ಕುಸುರಿ ಇರುವ ಬಳೆಗಳನ್ನು ತೊಡುವುದರಿಂದ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳಬಹುದು.
ಹೆಚ್ಚು ಫ್ಯಾಷನೇಬಲ್ ಆಗಿಯೂ ಸಮಕಾಲೀನ ದೃಷ್ಟಿಯಿಂದ ಸೂಕ್ತವಾಗಿರಬೇಕು ಎಂದುಕೊಂಡರೆ ಆದಷ್ಟು ಸರಳವಾದ ಬಳೆಗಳನ್ನು ಧರಿಸಿ. ಬಳೆಗಳು ಅಲೆಯಂಥೆ ಕಾಣಿಸಿಕೊಳ್ಳಲು ಎರಡು ಬಣ್ಣಗಳನ್ನು ಮಿಕ್ಸ್ ಆ್ಯಂಡ್ ಮ್ಯಾಚ್ ಮಾಡಿ. ಇದರ ಜತೆಗೆ ಚಿನ್ನ, ವಜ್ರ, ಪಚ್ಚೆ, ಮುತ್ತು ಹೀಗೆ ಬೇರೆ ಬೇರೆ ರತ್ನಗಳಿರುವ ಬಳೆಗಳನ್ನು ಧರಿಸಬಹುದು.