ವಧು - Bride

ವಧುವಿನ ನಾನಾ ಕೇಶವಿನ್ಯಾಸಗಳು

MH-Team

Author: ಗೌರಮ್ಮ ಕಟ್ಟಿಮನಿ

ಈ ಸೀರೆ ಅಥವಾ ಆ ಡ್ರೆಸ್‌ಗೆ ಯಾವ ತರಾ ಹೇರ್ ಸ್ಟೈಲ್ ಮಾಡಿದ್ರೆ ಚಂದ, ಯಾವ ಹೂವು ಹಾಕಬೇಕು, ಕೂದಲು ಬಿಟ್ಟರೆ ಚೆನ್ನಾಗಿ ಕಾಣುತ್ತಾ ಅಥವಾ ಜೆಡೆ ಹಾಕೋದಾ... 

ಹೀಗೆ ಸಾಲು ಸಾಲು ಗೊಂದಲಗಳು ವಧುವಿನ ಮನದಲ್ಲಿ ಮೂಡುವುದು ಸಹಜ. ಮದುವೆ ಎಂದರೆ ಕೇವಲ ಶಾಪಿಂಗ್, ಆಭರಣ ಖರೀದಿಸುವುದು ಮಾತ್ರವಲ್ಲ, ಕೇಶವಿನ್ಯಾಸ ಯಾವ ತರ ಮಾಡಿಸಬೇಕು ಎನ್ನುವುದು ಇತ್ತೀಚೆಗೆ ಮುಖ್ಯವಾಗಿದೆ. 

ಮದುವೆಯ ವಿವಿಧ ಶಾಸ್ತ್ರಗಳಲ್ಲಿ ವಧು ವಿಭಿನ್ನ ಲುಕ್‌ನಲ್ಲಿ ಕಾಣಿಸಲು ಕೇಶವಿನ್ಯಾಸ (ಹೇರ್‌ ಸ್ಟೈಲ್) ಸಹ ಮುಖ್ಯವಾಗುತ್ತದೆ. ಅದಕ್ಕೂ ಮುನ್ನ ಮಾಡಿಸುವ ಪ್ರಿ ವೆಡ್ಡಿಂಗ್ ಶೂಟ್‌ ಇತ್ತೀಚಿನ ಟ್ರೆಂಡ್‌ ಆಗಿದ್ದು, ವಿವಿಧ ರೀತಿಯ ಕೇಶವಿನ್ಯಾಸಗಳು ಚಾಲ್ತಿಯಲ್ಲಿವೆ. 

ಸಾಂಪ್ರಾದಾಯಿಕ ಶೈಲಿಯ ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ಉದ್ದ ಜೆಡೆ, ಅಥವಾ ತುರುಬು ಹಾಕಲಾಗುತ್ತದೆ. ಪಾಶ್ಚಾತ್ಯ ಶೈಲಿಯಲ್ಲಾದರೆ ಪ್ರಿ ಹೇರ್ಸ್‌ (ಕೂದಲು ಬಿಡುವುದು),  ಕರ್ಲಿ (ಗುಂಗುರು ಅಥವಾ ಸುರುಳಿ) ಹೇರ್‌ಸ್ಟೈಲ್‌ ಮಾಡಲಾಗುತ್ತದೆ. 

ವಧುವಿನ ಉಡುಪಿಗೆ ತಕ್ಕಂತೆ ಕೇಶವಿನ್ಯಾಸ ಮಾಡಲಾಗುತ್ತದೆ. ಮೆಹೆಂದಿ ಶಾಸ್ತ್ರ ಮಾಡುವಾಗ ಸಾಮಾನ್ಯವಾಗಿ ಲೆಹೆಂಗಾ ಅಥವಾ ಸ್ಲೀವ್ ಲೆಸ್ ಪ್ಲಾಜೂ ಧರಿಸುವುದು ಇಂದಿನ ಟ್ರೆಂಡ್‌. 

ಸಂಗೀತ ಸಮಾರಂಭದಲ್ಲಿ ವಧು ಸಹ ನೃತ್ಯ ಮಾಡುವುದರಿಂದ ಹಾಗೂ ಕ್ಯಾಂಡಿಡ್‌ ಫೋಟೊ ಸೆರೆ ಹಿಡಿಯಲು ಸುಲಭವಾಗುವಂತೆ ಹಾಗೂ ಸುಂದರವಾಗಿ ಕಾಣಲು ಚಿಕ್ಕ ಕ್ಲಿಪ್‌ನಿಂದ ಸ್ವಲ್ಪ ಕೂದಲನ್ನು ಹಿಡಿದು, ಹಿಂಭಾಗದಲ್ಲಿ ಕೂದಲು ಬಿಡಲಾಗುತ್ತದೆ. ಅಂದರೆ ಓಪನ್ ಹೇರ್‌ಸ್ಟೈಲ್‌ ಇದಕ್ಕೆ ಸೂಕ್ತವಾಗಿದೆ. 

ಬಹುತೇಕರು ಮೂರು ರೀತಿಯ ಕೇಶವಿನ್ಯಾಸ ಮಾಡಿಸಿಕೊಳ್ಳುತ್ತಾರೆ. ನಿಶ್ಚಿತಾರ್ಥ, ಮುಹೂರ್ತ ಹಾಗೂ ಆರತಕ್ಷತೆ. ನಿಶ್ಚಿತಾರ್ಥಕ್ಕೆ ಸಹಜವಾಗಿ ಗ್ರ್ಯಾಂಡ್‌ ಲೆಹೆಂಗಾ ಧರಿಸುವುದರಿಂದ ಅದಕ್ಕೆ ಹೊಂದುವಂತೆ ಪ್ರಿ ಹೇರ್‌ಸ್ಟೈಲ್ ಮಾಡಿದರೆ ಚಂದ. ಪ್ರಿ ಹೇರ್‌ಸ್ಟೈಲ್ ಅಂದರೆ ಮೊದಲಿಗೆ ಪಫ್ ಮಾಡಿ, ಒಂದೆರೆಡು ಕೂದಲನ್ನು ಮುಂದೆ ಬಿಟ್ಟು, ಹಿಂದಿನ ಕೂದಲುಗಳನ್ನು ಬಾಚಿ ಗುಂಗುರು ಅಥವಾ ಸುರುಳಿ(ಕರ್ಲಿ)ಮಾಡಿ, ಆರ್ಟಿಫಿಶಿಯಲ್ ಹೂವು ಹಾಗೂ ಮುತ್ತುಗಳಿಂದ ಸುಂದರಗೊಳಿಸಲಾಗುತ್ತದೆ. ಇದು ಅವರ ಡ್ರೆಸ್‌ ಹಾಗೂ ಮೇಕಪ್‌ಗೆ ಹೊಂದುವಂತಿದ್ದು, ವಧು ಸುಂದರವಾಗಿಯೂ, ಆಕರ್ಷಕವಾಗಿಯೂ ಕಾಣುತ್ತಾಳೆ ಎನ್ನುತ್ತಾರೆ ಹುಬ್ಬಳ್ಳಿಯ ಅಕ್ಷತ್‌ ಬ್ಯೂಟಿ ಪಾರ್ಲರ್‌ನ ಬ್ಯೂಟಿಷಿಯನ್ ಅಕ್ಷತಾ ವಿನೋದ. 

ಮೊದಲೆಲ್ಲ ತಾಳಿ ಕಟ್ಟುವ ಸಂದರ್ಭದಲ್ಲಿ ಜಡೆ ಅಥವಾ ಮೊಗ್ಗಿನ ಜಡೆ ಹಾಕಲಾಗುತ್ತಿತ್ತು. ತಾಳಿ ಕಟ್ಟುವಾಗ ಹಾಗೂ ಹಾರ ಬದಲಾಯಿಸುವಾಗ ಜಡೆ ಮೇಲೆ ಎತ್ತಿ ಹಿಡಿಯುವುದರಿಂದ ಜಡೆ, ಮೇಕಪ್ ಸಹ ಹಾಳಾಗುತ್ತಿತ್ತು. ಹಾಗಾಗಿ ಇತ್ತೀಚೆಗೆ ಈ ಸಂದರ್ಭದಲ್ಲಿ ಬನ್‌ ಹೇರ್‌ಸ್ಟೈಲ್ ಮಾಡಲಾಗುತ್ತಿದೆ. ಅಂದರೆ ತುರುಬು ಹಾಕಿ ಅದಕ್ಕೆ ಹೂವಿನ ಅಲಂಕಾರ ಮಾಡುವುದು. ಬನ್ ಹೇರ್‌ಸ್ಟೈಲ್ ಮಾಡುವುದರಿಂದ ಶಾಸ್ತ್ರಗಳನ್ನು ಮಾಡುವಾಗ ವಧುವಿಗೆ ಕಿರಿ ಕಿರಿಯಾಗುವುದಿಲ್ಲ ಎನ್ನುತ್ತಾರೆ ಅವರು. 

ಇಡೀ ಮದುವೆ ಸಮಾರಂಭದಲ್ಲಿ ವಧು ಹೆಚ್ಚು ಹೊತ್ತು ಸ್ಟೇಜ್‌ ಮೇಲೆ ನಿಲ್ಲುವುದು ಮದುವೆ ನಂತರದ ವೇದಿಕೆ ಕಾರ್ಯಕ್ರಮ ಅಥವಾ ಆರತಕ್ಷತೆಯಲ್ಲಿ. ಹಾಗಾಗಿ ಅವರಿಗೆ ಕಿರಿಕಿರಿಯಾಗದಂತೆ ಇಡೀ ಫೋಟೊ ಶೂಟ್‌ ಮುಗಿಯುವವರೆಗೂ ಕೂದಲು ಹಾಳಾಗದಂತೆ ಜೊತೆಗೆ ಸುಂದರವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡಲು ಮೆಸ್ಸಿ ಜೆಡೆ ಹಾಕಲಾಗುತ್ತದೆ. ಮುಂಭಾಗದಲ್ಲಿ ಒಂದರೆಡು ಕೂದಲನ್ನು ಎಳೆ ಎಳೆಯಾಗಿ ಬಿಟ್ಟು, ಪಫ್‌ ಮಾಡಿ, ಕೆಳಗಡೆ ಕೂದಲನ್ನು ಸಡಿಲವಾಗಿ ಎಣಿಯುತ್ತಾ, ಅಗಲ ಮಾಡುತ್ತ ಮೂರು ಅಥವಾ ನಾಲ್ಕು ಎಣಿಕೆಯಲ್ಲಿ ಎಣಿಯಲಾಗುತ್ತದೆ. ಸಹಜವಾಗಿಯೇ ಈ ಸಂದರ್ಭದಲ್ಲಿ ಉದ್ದ ಜೆಡೆ ಇದ್ದರೆ ಚೆನ್ನಾಗಿ ಕಾಣಿಸುವುದರಿಂದ ಸಪ್ಲಿಮೆಂಟ್‌ ಜೋಡಿಸಲಾಗುತ್ತದೆ. ನಂತರ ಮಲ್ಲಿಗೆ, ಕನಕಾಂಬರ, ಗುಲಾಬಿ, ದುಂಡು ಮಲ್ಲಿಗೆಯಿಂದ ಸಿಂಗರಿಸಲಾಗುತ್ತದೆ. ಅಲ್ಲಲ್ಲಿ  ಮುತ್ತು, ಜೆಡೆ ಬಿಲ್ಲೆಗಳಿಂದ ಜೆಡೆಯನ್ನು ಸುಂದರಗೊಳಿಸುತ್ತದೆ ಎನ್ನುವುದು ಅವರ ಅಭಿಪ್ರಾಯ. 

ಯಾವುದೇ ಹೇರ್‌ಸ್ಟೈಲ್‌ ಮಾಡುವಾಗ ತಲೆಸ್ನಾನ ಮಾಡಿದ ನಂತರ ಕಡಿಮೆ ಶಾಖದಲ್ಲಿ ಒಣಗಿಸಬೇಕು. ನಂತರ ಹೇರ್‌ಸ್ಪ್ರೆ ಮಾಡಿ, ಕೇಶವಿನ್ಯಾಸಕ್ಕೆ ತಕ್ಕಂತೆ ಕೂದಲನ್ನು ಸೆಟ್ಟಿಂಗ್ ಮಾಡಿಕೊಳ್ಳಲಾಗುತ್ತದೆ. ಇಡೀ ಮದುವೆ ಮೇಕಪ್ ಪ್ಯಾಕೇಜ್‌ಗೆ ಗ್ರಾಹಕರ ಬೇಡಿಕೆಗೆ ತಕ್ಕಂತೆ ₹6 ಸಾವಿರದಿಂದ ₹12 ಸಾವಿರದವರೆಗೆ ದರ ನಿಗದಿಪಡಿಸಲಾಗಿದೆ. ಹೇರ್‌ಸ್ಟೈಲ್‌ ಮಾತ್ರವಾಗಿದ್ದಲ್ಲಿ ₹750 ರಿಂದ ₹1000 ಪಡೆಯಲಾಗುತ್ತದೆ ಎನ್ನುತ್ತಾರೆ ಅಕ್ಷತಾ.   

ಇದಷ್ಟೇ ಅಲ್ಲದೆ ಇನ್ನು ಹಲವು ಹೇರ್‌ಸ್ಟೈಲ್‌ಗಳಿವೆ.  ಗಜ್ರಾ ಬನ್ ಅಂದರೆ  ಕೂದಲನ್ನು ಹಿಂದಕ್ಕೆ ಬಾಚಿ ಬನ್ ಮಾಡಿ, ಗಜ್ರಾ (ಹೂವಿನ ಹಾರ)ದಿಂದ ಅಲಂಕರಿಸುವುದು.  ಸಾಂಪ್ರದಾಯಿಕ ಬನ್ (ಕೂದಲನ್ನು ಚೆನ್ನಾಗಿ ಬಾಚಿ, ಪೋನಿಟೇಲ್ ಮಾಡಿ, ಎರಡು ಭಾಗಗಳಾಗಿ ವಿಂಗಡಿಸಿ ಬನ್ ರಚಿಸಿ, ಬಾಬಿ ಪಿನ್‌ ಹಾಕುವುದು). ಇದಕ್ಕೆ ಹೂವುಗಳು, ಮುತ್ತುಗಳು ಅಥವಾ ಹೇರ್ ನೆಟ್ ಸೇರಿಸಬಹುದು) ನೈಸರ್ಗಿಕ ಅಥವಾ ಕೃತಕ ಹೂವುಗಳಿಂದ ಅಲಂಕರಿಸಿದ ಫ್ಲೋರಲ್ ಬನ್. ಓಪನ್ ಕರ್ಲ್‌ ಹೇರ್‌ಸ್ಟೈಲ್, ಫಿಶ್‌ಟೇಲ್, ರಿಲ್ಯಾಕ್ಸಡ್‌ ಫಿಶ್‌ಟೇಲ್, ಫ್ರೆಂಚ್‌, ಕರ್ಲಡ್‌ ಪ್ಲೇಟ್‌, ಬನ್‌ ಪ್ಲೇಟ್‌, ಪೋನಿಟೇಲ್ ಪ್ಲೇಟ್‌, ವಾಟರ್‌ಫಾಲ್‌ ಬ್ರೇಡ್‌ ಸೇರಿದಂತೆ ಅನೇಕ ಕೇಶವಿನ್ಯಾಸಗಳಿವೆ.  ಜಡೆಗಳ ಸುತ್ತಲೂ ಗಜ್ರಾ, ಹರಳು ಅಥವಾ ಸ್ಟೋನ್‌ ಹೇರ್‌ಪಿನ್‌ಗಳು, ಮಾಂಗ್ ಟಿಕಾ ಮತ್ತು ಹೆಡ್‌ಬ್ಯಾಂಡ್‌ಗಳನ್ನು ಬಳಸಲಾಗುತ್ತದೆ.