ವಧು - Bride

ವಧುವಿನ ಅಂದ ಹೆಚ್ಚಿಸುವ ಡಿಸೈನರಿ ಬ್ಲೌಜ್‌

MH-Team

ವಧುವಿನ ಅಂದ ಹೆಚ್ಚಿಸುವ ಡಿಸೈನರಿ ಬ್ಲೌಜ್‌

ಮದುವೆ ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ಅಂದುಕೊಂಡಂತೆಯೇ ಮದುವೆ ನಡೆಯಬೇಕು. ಇಷ್ಟದ ಸೀರೆಗೆ ಗ್ರ್ಯಾಂಡ್ ಎನಿಸುವ, ಡಿಸೈನರಿ ಬ್ಲೌಜ್‌ ತೊಡಬೇಕು ಎಂಬುದು ಬಹುತೇಕ ಮಹಿಳೆಯರ ಅಭಿಲಾಷೆ.

ಕನಿಷ್ಠ ನಾಲ್ಕರಿಂದ ಐದು ಸಾವಿರ ರೂಪಾಯಿ ಕೊಟ್ಟು ತರುವ ಸೀರೆಯಿಂದ ಹಿಡಿದು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುವ ಸೀರೆಗೂ ವರ್ಕ್‌ ಇರುವ ರವಿಕೆ ತೊಟ್ಟಾಗಲೇ ಅದರ ಅಂದ ದುಪ್ಪಟ್ಟಾಗೋದು ಎನ್ನುವ ಅಭಿಪ್ರಾಯ ಹೆಣ್ಮಕ್ಕಳದ್ದು. ಹೀಗಿರುವಾಗ ಮದುಮಗಳ ಸೀರೆ, ಬ್ಲೌಸ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ದುಬಾರಿ ಬೆಲೆ ತೆತ್ತು ಟ್ರೆಂಡ್‌ನಲ್ಲಿರುವ ವಿನ್ಯಾಸಗಳನ್ನು ಮಾಡಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಮನಸೂರೆಗೊಳಿಸುವಂಥ, ವ್ಹಾ! ಎಂದು ಉದ್ಗರಿಸುವ ರವಿಕೆಯ ಅಂದ ಹೆಚ್ಚಿಸುವ ಕಸೂತಿ, ಆರಿ ವರ್ಕ್, ಜರದೋಷಿಶಿ ವರ್ಕ್‌, ಕಟ್‌ ವರ್ಕ್‌, ಚೈನ್ ಸ್ಟಿಚ್, ಕುಂದನ್ ವರ್ಕ್, ಥ್ರೆಡ್ ವರ್ಕ್, ಗಂಟನ್ ವರ್ಕ್, ಬೀಟ್ಸ್, ಕವರಿಂಗ್, ಕಟಿಂಗ್ ವರ್ಕ್, ನೆಟ್‌ ಕ್ಲಾಥ್‌ ವರ್ಕ್‌, ಲಕ್ಷ್ಮಿ ಪೆಂಡೆಂಟ್, ಕಾಯಿನ್ಸ್ ವರ್ಕ್ ಸದ್ಯ ಟ್ರೆಂಡಿಂಗ್‌ನಲ್ಲಿವೆ. ಹೆವಿ ವರ್ಕ್ ಡಿಸೈನರಿ ಬ್ಲೌಜ್‌ಗಳಿಗೆ ಈ ಮಾದರಿಯ ವಿನ್ಯಾಸಗಳು ಹೆಚ್ಚು ಸೂಕ್ತ ಎನಿಸುತ್ತವೆ.

ಯಂತ್ರದ ಮೂಲಕ ಮತ್ತು ಕೈಯಿಂದಲೇ ವಿನ್ಯಾಸ ಮಾಡುವ ‘ಆರಿ ವರ್ಕ್’ ಸಹ ಇದೆ. ಕೈಯಿಂದ ಮಾಡುವ ವಿನ್ಯಾಸಗಳು ಹೆಚ್ಚು ಬಾಳಿಕೆ, ತಾಳಿಕೆ ಬರುವಂಥವು. ಹಾಗಾಗಿ ಇದಕ್ಕೆ ‌ಹೆಚ್ಚು ಬೇಡಿಕೆ. ಈ ಕಲಾತ್ಮಕ ವಿನ್ಯಾಸ ಮಾಡಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಕಡಿಮೆ ಅವಧಿ ಇರುವವರು ಯಂತ್ರದ ಮೂಲಕ ಮಾಡುವ ವಿನ್ಯಾಸಗಳನ್ನೇ ನೆಚ್ಚಿಕೊಳ್ಳಬೇಕಾಗುತ್ತದೆ.

ಮದುವೆಯಲ್ಲಿ ವಧುವಿನ ಅಲಂಕಾರ ಎಲ್ಲರ ಗಮನವನ್ನೂ ಸೆಳೆಯುವಂಥದ್ದು. ಹಾಗಾಗಿ, ವಧುವಿಗಾಗಿಯೇ ವಿಶಿಷ್ಟವಾದ ಆರಿ ವರ್ಕ್ ‌ ಬ್ಲೌಸ್ ವಿನ್ಯಾಸ ಮಾಡಲಾಗುತ್ತದೆ. ಈ ರೀತಿ ವಿಶೇಷ ವಿನ್ಯಾಸಕ್ಕೆ ಬಹು ಬೇಡಿಕೆಯೂ ಇದೆ. ಅಷ್ಟೇ ಅಲ್ಲ, ಬ್ಲೌಸ್‌– ಸೀರೆ ಮೆಲೆ ವಧುವರರ ಚಿತ್ರವಿರುವ, ಧಾರೆ ಎರೆಯುವ, ಅಂಬಾರಿ, ಪಲ್ಲಕ್ಕಿಯಲ್ಲಿ ವಧು, ವರರು ಬರುವಂತಹ ದೃಶ್ಯಗಳ ವಿನ್ಯಾಸವನ್ನೂ ಮಾಡಿಸಬಹುದು.

ಕ್ಲಾಸಿಕ್ ವಿನ್ಯಾಸಗಳು...

ಮಗ್ಗಂ ಮತ್ತು ಹ್ಯಾಂಡ್ ವರ್ಕ್ ಬ್ಲೌಸ್: ಈ ಬ್ಲೌಸ್‌ಗಳು ದಕ್ಷಿಣ ಭಾರತದ ವಧುಗಳ ಅಚ್ಚುಮೆಚ್ಚಿನ ಆಯ್ಕೆಗಳಾಗಿವೆ. ಇವುಗಳಲ್ಲಿ ಚಿನ್ನದ ದಾರ, ಮಣಿಗಳು ಮತ್ತು ಹರಳುಗಳಿಂದ ನೈಜ ಚಿತ್ರಗಳನ್ನು ಅಥವಾ ಸಂಕೀರ್ಣವಾದ ವಿನ್ಯಾಸಗಳನ್ನು ಕೈಯಿಂದ ಹೆಣೆಯಲಾಗುತ್ತದೆ.

ಪರ್ಲ್ ಹ್ಯಾಂಡ್ ವರ್ಕ್ ಬ್ಲೌಸ್: ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಮಿಶ್ರಣವನ್ನು ಹೊಂದಿರುವ ಮುತ್ತುಗಳಿಂದ ಮಾಡಲಾದ ಕಸೂತಿ ವರ್ಕ್‌ ಬ್ಲೌಸ್‌ಗೆ ರಿಚ್‌ ಲುಕ್‌ ನೀಡುತ್ತದೆ.

ಆರಿ ವರ್ಕ್ ಬ್ಲೌಸ್: ದಪ್ಪ ಮತ್ತು ಸುಂದರವಾದ ವಿನ್ಯಾಸಗಳನ್ನು ಒಳಗೊಂಡಿರುವ ಆರಿ ವರ್ಕ್, ವಧುವಿನ ಲುಕ್‌ಗೆ ಸಾಂಪ್ರದಾಯಿಕ ವೈಭವವನ್ನು ನೀಡುತ್ತದೆ. ಇದು ಸಾಮಾನ್ಯವಾಗಿ ಕಾಂಜೀವರಂ ಸೀರೆಗಳೊಂದಿಗೆ ಸುಂದರವಾಗಿ ಕಾಣಿಸುತ್ತದೆ.

ಸಾಧಾರಣ ವಿನ್ಯಾಸಗಳಿಗೆ ಕನಿಷ್ಟ ₹1,000 ದಿಂದ ₹ 4,000, ಅತ್ಯಧಿಕ ಅಲಂಕಾರಯುತ ವಿನ್ಯಾಸಗಳಿಗೆ ಗರಿಷ್ಟ ₹20,000 - ₹40,000 ವರೆಗೂ ದರವಿದೆ. ವಿನ್ಯಾಸದ ಆಯ್ಕೆ, ಬಳಸುವ ಸಾಮಗ್ರಿ, ಬೇಕಾಗುವ ಸಮಯದ ಮೇಲೆಯೂ ದರ ನಿರ್ಧಾರವಾಗುತ್ತದೆ ಎನ್ನುತ್ತಾರೆ ಬ್ಲೌಜ್‌ ಡಿಸೈನರ್‌ ಶೃತಿ.

ಈಗೀಗ ಅಂಗಡಿಗಳಲ್ಲೂ ರೆಡೆಮೇಡ್‌ ಆರಿ ವರ್ಕ್‌ ವಿನ್ಯಾಸದ ಸೀರೆ, ಬ್ಲೌಸ್‌ಗಳು ಸಿಗುತ್ತಿವೆ. ವೈವಿಧ್ಯಮಯ ವಿನ್ಯಾಸಗಳ ಬ್ಲೌಸ್‌ಗಳೂ ಸಿಗುತ್ತವೆ. ಅವುಗಳ ಗುಣಮಟ್ಟ ಆಧರಿಸಿ ಖರೀದಿಸುವುದು ಸೂಕ್ತ ಎನ್ನುವ ಸಲಹೆ ಅವರದ್ದು.

ಕಟ್‌ದಾನಾ ಎಂಬ್ರಾಯ್ಡರಿ: ಈ ವಿನ್ಯಾಸದಲ್ಲಿ ಸಣ್ಣ, ಹೊಳೆಯುವ ಕನ್ನಡಿಯ ತುಂಡುಗಳನ್ನು ಬಳಸಲಾಗುತ್ತದೆ. ಇದು ಬ್ಲೌಸ್‌ಗೆ ಹೊಸತನದ ಲುಕ್ ನೀಡುತ್ತದೆ ಮತ್ತು ಬೆಳಕಿಗೆ ಅದ್ಭುತವಾಗಿ ಹೊಳೆಯುತ್ತದೆ.

ಬ್ಲೌಜ್‌ ಪ್ಯಾಟರ್ನ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ...

ಕೋಲ್ಡ್- ಶೋಲ್ಡರ್ ಡಿಸೈನ್: ಟ್ರೆಂಡಿಂಗ್‌ನಲ್ಲಿರುವ ಈ ವಿನ್ಯಾಸವು ಆಧುನಿಕ ಮತ್ತು ಗ್ಲಾಮರಸ್ ನೋಟವನ್ನು ನೀಡುತ್ತದೆ. ಮದುವೆಗೆ ಸಂಬಂಧಿಸಿದ ಇತರ ಕಾರ್ಯಕ್ರಮಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಬೋಟ್ ನೆಕ್ ಬ್ಲೌಸ್: ಇದು ಭುಜಗಳ ಮೇಲೆ ಹೆಚ್ಚು ಆವರಿಸುವ ಮತ್ತು ಕುತ್ತಿಗೆಗೆ ಅಗಲವಾಗಿರುವ ವಿನ್ಯಾಸ. ಇದು ಆಕರ್ಷಕ ಮತ್ತು ನಯವಾದ ಲುಕ್ ನೀಡುತ್ತದೆ.

ಕೋಲರ್ ಬ್ಲೌಸ್: ಹೈ-ನೆಕ್ ಅಥವಾ ಕೋಲರ್ ಇರುವ ಬ್ಲೌಸ್‌ಗಳು ರಾಯಲ್‌ ಲುಕ್‌ ನೀಡುತ್ತವೆ.

ಹೈ-ನೆಕ್ ಬ್ಲೌಸ್: ಕ್ಯಾಪ್ ಸ್ಲೀವ್ಸ್ ಅಥವಾ ಉದ್ದನೆಯ ಸ್ಲೀವ್ಸ್‌ನೊಂದಿಗೆ ಹೈ-ನೆಕ್ ಬ್ಲೌಸ್ ಧರಿಸಿದರೆ ಗ್ರೇಸ್‌ಫುಲ್ ಲುಕ್‌ ನೀಡುತ್ತದೆ.

ಬ್ಲೌಸ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು...

* ನಿಮ್ಮ ಬ್ಲೌಸ್ ಡಿಸೈನ್ ಆಯ್ಕೆ ಮಾಡುವಾಗ, ಮುಖ್ಯವಾಗಿ ಉಡುವ ಸೀರೆಯ ಬಣ್ಣ, ವಿನ್ಯಾಸವನ್ನು ಗಮನದಲ್ಲಿಡಿ.

* ಬ್ಲೌಸ್ ಎಷ್ಟು ಸ್ಟೈಲಿಷ್ ಆಗಿದೆಯೋ ಅಷ್ಟೇ ಆರಾಮದಾಯಕವಾಗಿರಬೇಕು. ಮದುವೆಯ ಕಾರ್ಯಕ್ರಮಗಳು ಹೆಚ್ಚು ಸಮಯ ನಡೆಯುವುದರಿಂದ ನಿಮಗೆ ಹೆಚ್ಚು ತೊಂದರೆ ಕೊಡದ ವಿನ್ಯಾಸವನ್ನು ಆರಿಸಿಕೊಳ್ಳಿ.

* ಬ್ಲೌಸ್ ವಿನ್ಯಾಸವು ನಿಮ್ಮ ದೇಹದ ಆಕಾರಕ್ಕೆ ಸೂಕ್ತವಾಗಿರಬೇಕು. ಉದಾಹರಣೆಗೆ, ಉದ್ದನೆಯ ಸ್ಲೀವ್ಸ್ ಮತ್ತು ಕುತ್ತಿಗೆಯ ವಿನ್ಯಾಸವು ದೇಹದ ಭಾಗಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.