ವಿವಾಹ ಬಂಧನದ ಸಂಭ್ರಮಕ್ಕೂ ಮುನ್ನ ಮದುಮಗಳು ತನ್ನ ಆರೋಗ್ಯ ಹಾಗೂ ಚರ್ಮದ ಕಾಳಜಿ ವಹಿಸುವುದು ಕೂಡ ಮುಖ್ಯ.
ನಿಶ್ಚಿತಾರ್ಥ, ನೃತ್ಯ, ಫೋಟೊಶೂಟ್‌ನಂತಹ ಸುದೀರ್ಘ ಸಮಯವನ್ನು ಆಯಾಸವಿಲ್ಲದಂತೆ ಕಳೆಯಲು ಹಾಗೂ ಮೇಕಪ್ ಕಲಾವಿದರು ಬರುವ ಮುನ್ನ ನಿಮ್ಮ ಸೌಂದರ್ಯದ ಬಗ್ಗೆ ತುಸು ಕಾಳಜಿ ವಹಿಸುವುದನ್ನು ಮರೆಯದಿರಿ.
ಡಯಟ್ ಅನುಸರಿಸಿ: ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರಹಾಕಲು ಬೆಳಿಗ್ಗೆ ಎದ್ದ ಕೂಡಲೇ ಉಗುರು ಬೆಚ್ಚಗಿನ ಬಿಸಿ ನೀರಿಗೆ ನಿಂಬೆ ರಸ, ಜೇನು ಬೆರೆಯಿಸಿ ಕುಡಿಯಿರಿ. ದಿನಕ್ಕೆ 6ರಿಂದ 8 ಲೋಟ ನೀರು ಕುಡಿಯಿರಿ. ದಿನದಲ್ಲಿ ಎಳೆನೀರು, ಗ್ರೀನ್ ಟೀ, ಹಣ್ಣಿನ ಪಾನೀಯಗಳನ್ನು ಕುಡಿಯುವುದರಿಂದ ದೇಹದ ಆಯಾಸ ಮಾಯವಾಗುವುದು. ಸಂಸ್ಕರಿಸಿದ ಆಹಾರ ಪದಾರ್ಥ, ಕುರುಕಲು ತಿಂಡಿಗಳನ್ನು ತಿನ್ನದಿರಿ. ಮುಖದಲ್ಲಿ ಮೊಡವೆಗಳಾಗಬಹುದು. ಕೆಮ್ಮು ಸಹ ಬರಬಹುದು. ಪೌಷ್ಟಿಕ ಆಹಾರವನ್ನು ಸೇವಿಸಿ.
ಮನೆಮದ್ದು ಬಳಸಿ: ತ್ವಚೆಯ ಆರೋಗ್ಯಕ್ಕೆ ನಿತ್ಯ ಬಳಸುತ್ತಿದ್ದ ಕ್ರೀಂಗಳ ಬದಲು ವಿಶೇಷ ಗ್ಲೋ ನೀಡುವಂಥಹ ಕ್ರೀಂ, ಫೇಸ್ ಮಾಸ್ಕ್, ಮನೆ ಮದ್ದುಗಳನ್ನು ಬಳಸಹುದು.
ಕಡ್ಲೆಹಿಟ್ಟು, ಅರಿಸಿನದ ಫೇಸ್‌ಪ್ಯಾಕ್: ಅರಿಸಿನವು ಫಂಗಲ್ ಇನ್ಫೆಕ್ಷ್‌ನ್, ಪಿಗ್ಮೆಂಟೇಷನ್, ಅಲರ್ಜಿಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಅಲ್ಲದೇ ಮುಖಕ್ಕೆ ಕಾಂತಿ ಬರುವಲ್ಲಿಯೂ ನೆರವಾಗುತ್ತದೆ. ಹಾಗಾಗಿ ಎರಡು ಚಮಚ ಕಡ್ಲೆಹಿಟ್ಟಿಗೆ ಚಿಟಿಕೆ ಅರಿಸಿನ ಹಾಗೂ ಅಗತ್ಯಕ್ಕೆ ತಕ್ಕಷ್ಟು ರೋಸ್ ವಾಟರ್ ಬೆರೆಸಿ, ಮುಖಕ್ಕೆ ಫೇಸ್ ಪ್ಯಾಕ್ ಹಾಕಿ. ಹದಿನೈದು ನಿಮಿಷಗಳ ಬಳಿಕ ತೊಳೆಯಿರಿ. ಮುಖದ ಚರ್ಮ ಮೃದುವಾಗಿ, ಕಾಂತಿಯುತವಾಗುವುದು.
ಪಪ್ಪಾಯ, ಆಲ್ಯುವೇರಾ ಮಾಸ್ಕ್: ಪಪ್ಪಾಯ ಪಿಗ್ಮೆಂಟೇಶನ್ ವಿರುದ್ಧ ಹೋರಾಡುತ್ತದೆ. ಮುಖದ ಮೇಲಿನ ಸುಕ್ಕು, ಮೊಡವೆ ಕಲೆಗಳನ್ನು ತಡೆಯುವಲ್ಲಿ ನೆರವಾಗುತ್ತದೆ. ಆಲ್ಯುವೇರಾ ಮುಖದ ಚರ್ಮವನ್ನು ಮೃದುವಾಗಿಟ್ಟು, ಮಾಯಿಶ್ಚರೈಸ್ ಮಾಡುತ್ತದೆ. ಹಾಗಾಗಿ ಒಂದು ಚಮಟದಷ್ಟು ಆಲ್ಯವೇರಾ ಜಲ್, ಎರಡು ಚಮಚದಷ್ಟು ಮ್ಯಾಷ್ ಮಾಡಿರುವ ಪಪ್ಪಾಯ ಹಣ್ಣಿನ ತಿರುಳನ್ನು ಚನ್ನಾಗಿ ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ. 20ರಿಂದ 30 ನಿಮಿಷಗಳ ಬಳಿಕ ತೊಳೆಯಿರಿ.
ನೈಸರ್ಗಿಕ ಹೊಳಪು ಪಡೆಯಲು ಹಾಗೂ ಚರ್ಮವನ್ನು ಆಳವಾಗಿ ಸ್ವಚ್ಛಗೊಳಿಸಲು ಆಯುರ್ವೇದ ಗಿಡಮೂಲಿಕೆಗಳು ಮತ್ತು ಅಗತ್ಯ ಪೋಷಕಾಂಶಗಳ ಮಿಶ್ರಣವನ್ನು ಬಳಸಿ ತಯಾರಿಸಿದ ಫೇಸ್ ಮಾಸ್ಕ್ ಹಾಕಿ.
ಒಂದು ಚಮಚ ಶ್ರೀಗಂಧದ ಪುಡಿ, ಎರಡು ಚಮಚ ಕಡ್ಲೆಹಿಟ್ಟು, ಅರ್ಧ ಚಮಟ ಅರಿಶಿನ ಪುಡಿ, ಎರಡು ಚಮಚ ಹಸಿ ಹಾಲು ಹಾಕಿ ಪೇಸ್ಟ್ ತಯಾರಿಸಿ, ಮೈ, ಮುಖಕ್ಕೆ ಹಚ್ಚಿ. ಮುಖದಲ್ಲಿರುವ ಎಣ್ಣೆ, ಮೊಡವೆಗಳನ್ನು ಕಡಿಮೆ ಮಾಡಿ, ಚರ್ಮದ ಕಾಂತಿಯನ್ನು ಹೆಚ್ಚಿಸಲು ನೆರವಾಗುತ್ತದೆ.
ಕೂದಲಿನ ಆರೋಗ್ಯದತ್ತ ಗಮನಹರಿಸಿ: ಒರಟು ಹಾಗೂ ಫ್ರೀಜಿ ಕೂದಲಿದ್ದರೆ ಮದುವೆಗೆ ತಿಂಗಳಿರುವಾಗಲೇ ಕೆರಾಟಿನ್ ಟ್ರೀಟ್‌ಮೆಂಟ್ ಪಡೆಯಿರಿ. ಕೂದಲಿಗೆ ನಿಮಮಿತವಾಗಿ ಎಣ್ಣೆ ಹಚ್ಚಿ. ಹೇರ್ ಸ್ಪಾ ಮಾಡಿಸಿ. ನುಣುಪಾದ ಮತ್ತು ಹೊಳಪು ಪಡೆಯಲು ಕೂದಲಿಗೆ ಹೊಂದಬಹುದಾದ ಮತ್ತು ಹಾನಿಕಾರಕವಲ್ಲದ ಕೇರ್ ಕಲರ್ ಮಾಡಿಸಬಹುದು.
ಯೋಗಾಭ್ಯಾಸ ಮಾಡಿ, ಒತ್ತಡ ನಿಯಂತ್ರಿಸಿ: ಮದುವೆ ಎಂದಾಕ್ಷಣ ದೇಹ ಹಾಗೂ ಮನಸ್ಸಲ್ಲಿ ಒತ್ತಡ ಉಂಟಾಗುವುದು ಸಹಜ. ಅರೆಬರೆ ನಿದ್ದೆಯಿಂದಲೂ ಆರೋಗ್ಯ ಹಾಳಾಗುವುದು. ಹಾಗಾಗಿ ನಿಯಮಿತವಾಗಿ ಯೋಗಾಭ್ಯಾಸ ಮಾಡಿ. ಮೈಯಲ್ಲೆಲ್ಲ ರಕ್ತ ಸಂಚಾರ ಚನ್ನಾಗಿ ಆಗುವಂತೆ ನೋಡಿಕೊಂಡು, ಉತ್ತಮವಾಗಿ ನಿದ್ದೆ ಮಾಡಿ.
ಪೌಷ್ಟಿಕ ಆಹಾರ ಸೇವಿಸಿ: ಹೊಳೆಯುವ ಚರ್ಮ, ದಪ್ಪ ಕೂದಲು ಮತ್ತು ಆರೋಗ್ಯಕ್ಕಾಗಿ ಸುಧಾರಣೆಗಾಗಿ ವಿಟಮಿನ್ ‘ಸಿ’ ‘ಬಿ’, ‘ಡಿ‘ ಇರುವ ಹಾಗೂ ಪೋಷಕಾಂಶಯುಕ್ತ ಆಹಾರ ತಿನ್ನಲು ಆರಂಭಿಸಿ. ಚರ್ಮಕ್ಕೆ ಸಂಬಂಧಪಟ್ಟ ಗಂಭೀರ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಕಾಣಿ.
ಮೇಕಪ್ ಟ್ರೈಯಲ್ ಮಾಡಿ: ಮದುವೆ ದಿನದಂದು ಹೀಗೆ ಕಾಣಿಸಿಕೊಳ್ಳಬೇಕೆಂದು ಮೇಕಪ್ ಕಲಾವಿದರಿಗೆ ತಿಳಿಸಿದ್ದರೆ, ಒಮ್ಮೆ ಮೇಕಪ್ ಟ್ರೈಯಲ್ ಮಾಡುವುದು ಒಳ್ಳೆಯದು. ಕೆಲವು ಕ್ರೀಂಗಳು ನಿಮ್ಮ ತ್ವಚ್ಛೆಗೆ ಒಗ್ಗುವುದೊ, ಇಲ್ಲವೊ ಎಂಬುದನ್ನು ಮುಂಚಿತವಾಗಿಯೇ ತಿಳಿಯಲು ಇದು ಸಹಕಾರಿಯಾಗುತ್ತದೆ. ಬೇರೆ ಬೇರೆ ಮೇಕಪ್ ಟ್ರೈಯಲ್‌ಗಳನ್ನು ಮಾಡುವುದರಿಂದ ಬೆಸ್ಟ್ ಲುಕ್ ಆಯ್ಕೆ ಮಾಡಿಕೊಳ್ಳಲೂ ಇದು ನೆರವಾಗುತ್ತದೆ.
ಮದುವೆ ಬಟ್ಟೆ ಟ್ರಯಲ್ ಮಾಡಿ: ಮದುವೆ ದಿನದಂದು ಧರಿಸುವ ಬಟ್ಟೆಯನ್ನು ಮುಂಚೆಯೇ ಒಮ್ಮೆ ಟ್ರೈಯಲ್ ಮಾಡುವುದು ಒಳಿತು. ಕೊನೆ ಘಳಿಗೆಯಲ್ಲಿ ಆಗಬಹುದಾದ ತೊಂದರೆಗಳನ್ನು ಮುಂಚಿತವಾಗಿ ಸರಿಪಡಿಸಿಕೊಳ್ಳಬಹುದು.