ಕಾಲ್ಗೆಜ್ಜೆಯ ನಾದ ಅದೇನೋ ಮನಸ್ಸಿಗೆ ಹಿತ. ಮನೆತುಂಬ ಅಂಬೆಗಾಲಿಕ್ಕುವ ಮಗುವಿನಿಂದ ಅಮ್ಮಂದಿರವರೆಗೆ ಎಲ್ಲರಿಗೂ ಕಾಲ್ಗೆಜ್ಜೆಗೆಯೊಂದಿಗೆ ಅವಿನಾಭಾವ ಸಂಬಂಧ.
ಮಾರುಕಟ್ಟೆಯಲ್ಲಿ ನಾನಾ ಬಗೆಯ ಗೆಜ್ಜೆ ಮನಸೆಳೆಯುತ್ತವೆ. ಕಾಲಿನ ಅಂದ ಹೆಚ್ಚಿಸಲು ಕಡಗದ ಮಾದರಿ, ಒಂದೆಳೆಯ ಸರದ ಮಾದರಿ, ರೋಪ್ ಮಾದರಿ, ಸರಪಳಿ ಮಾದರಿ, ಮಾಲೆಯ ಮಾದರಿಯ ಗೆಜ್ಜೆಗಳು ಬಂದಿವೆ. ಬೆಳ್ಳಿಯ ಜೊತೆಗೆ ಬಂಗಾರದ ಕಾಲ್ಗೆಜ್ಜೆ ಈಗಿನ ಟ್ರೆಂಡ್.
ಜಾಕ್ ಸ್ಪರೋ ಕಾಲ್ಗೆಜ್ಜೆಯಲ್ಲಿ ಅನೇಕ ವಿನ್ಯಾಸಗಳಿವೆ. ದಾರ ಬಳಸಿ ವಿನ್ಯಾಸಗೊಳಿಸಿದ ಕಾಲ್ಗೆಜ್ಜೆಗಳು ಸರಳ ನೋಟ ಬೀರುತ್ತವೆ.
ಬಾಂದಿ ಪಾಯಲ್, ಜೋಧಪುರಿ, ಮೋಟಿ ಝಾಲರ್, ಡೋಲಿ ಡಿಸೈನ್ ಕಾಲ್ಗೆಜ್ಜೆಗಳು ಮೆಹಂದಿ ಹಾಕಿದ ಮದುಮಗಳ ಅಲಂಕಾರವನ್ನು ಇಮ್ಮಡಿಗೊಳಿಸುತ್ತವೆ. ರೇಷ್ಮೆ ಸೀರೆ ಧರಿಸಿದಾಗ ಮಾಣಿಕ್ಯ ಮತ್ತು ಸ್ಟೋನ್‌ಗಳಿಂದ ವಿನ್ಯಾಸಗೊಳಿಸಿದ ಗೆಜ್ಜೆಗಳು ಕಾಲಿನ ಮೆರುಗನ್ನು ದ್ವಿಗುಣಗೊಳಿಸುತ್ತವೆ.
ಸರಳುಗಳ ಮಾದರಿಯ ಕಾಲ್ಗೆಜ್ಜೆಗಳನ್ನು ಹರಳುಗಳಿಂದ ವಿನ್ಯಾಸಗೊಳಿಸಲಾಗುತ್ತದೆ. ಲೆಹಂಗಾ, ಚೂಡಿದಾರ ತೊಟ್ಟಾಗ ಇದರ ಅಂದವೇ ಬೇರೆ. ಮದುವೆಯ ರಿಸೆಪ್ಶನ್ ದಿನ ಧರಿಸಲು ಹೇಳಿ ಮಾಡಿಸಿದ ಮಾದರಿ ಇದು.
ಆಕ್ಸಿಡೈಸ್ಡ್ ಕಾಲ್ಗೆಜ್ಜೆಗಳು ನೋಡಲು ಸರಳವಾಗಿದ್ದರೂ ಸ್ಟೈಲಿಷ್ ಲುಕ್ ಕೊಡುತ್ತವೆ.
ಮೂರು ಅಥವಾ ನಾಲ್ಕು ಎಳೆಯ ಗೆಜ್ಜೆಗೆ ಹೂಗಳ ಚಿತ್ತಾರಗಳಿಗೆ, ಸುತ್ತಲೂ ರತ್ನಗಳನ್ನು ಸುತ್ತಲೂ ಅಂಟಿಸಿರುವ ಫ್ಲೋರಲ್ ಕಾಲ್ಗೆಜ್ಜೆಗಳು ಸೂಜಿಗಲ್ಲಿನಂತೆ ಯುವತಿಯರನ್ನು ಸೆಳೆಯುತ್ತವೆ.
ಪ್ಲಾಸ್ಟಿಕ್, ಗಾಜು, ತಾಮ್ರ, ಕಂಚು, ವಜ್ರ, ಮುತ್ತು, ಹವಳ, ರತ್ನದ ಗೆಜ್ಜೆಗಳು ಟ್ರೆಂಡಿಂಗ್‌ನಲ್ಲಿವೆ. ಸೂರ್ಯ, ಚಂದ್ರ, ನಕ್ಷತ್ರ, ನವಿಲು, ಚಿತ್ತಾರ, ಅಕ್ಷರಗಳ ಆಕೃತಿಯ ಗೆಜ್ಜೆಗಳೂ ಇವೆ. ಪ್ರೀತಿಪಾತ್ರರಿಗೆ ಹೆಸರನ್ನು ಅಚ್ಚುಹಾಕಿ ನೀಡಬಹುದಾದ ಅಕ್ಷರದ ಕಾಲ್ಗೆಜ್ಜೆಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ.
ಕಾಲ್ಗೆಜ್ಜೆ ಧರಿಸುವುದು ಆರೋಗ್ಯ ವೃದ್ಧಿಗೆ ಸಹಕಾರಿ. ಕಾಲ್ಗೆಜ್ಜೆ ಧರಿಸುವುದರಿಂದ ರಕ್ತಪರಿಚಲನೆ ಸರಾಗವಾಗಿ ಕಾಲುನೋವು ಬಾಧಿಸದು ಎನ್ನುತ್ತಾರೆ ಹಿರಿಯರು. ಬೆಳ್ಳಿ ಆಭರಣಗಳು ಬ್ಯಾಕ್ಟೀರಿಯಾದಿಂದ ರಕ್ಷಣೆ ನೀಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.
ಅದೇನೇ ಇರಲಿ, ಇಂದಿನ ಯುವತಿಯರಿಗೆ ಕಾಲ್ಗೆಜ್ಜೆಯರಲ್ಲಿ ಮೋಹ ಹೆಚ್ಚಿದೆ. ಮದುವೆ ಡ್ರೆಸ್ಸಿಗೆ ಹೊಂದಿಕೆಯಾಗುವ ವಿವಿಧ ವಿನ್ಯಾಸದ ಫ್ಯಾನ್ಸಿ ಕಾಲ್ಗೆಜ್ಜೆಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ.