‘ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ..’ ಎಂಬ ಕನ್ನಡದ ಹಾಡನ್ನು ಕೇಳದವರಿಲ್ಲ. ಮದುವೆ ಪವಿತ್ರ ಬಂಧದಲ್ಲಿ ತಾಳಿ ಕಟ್ಟುವುದು, ಧಾರೆಯೆರೆಯುವುದರಷ್ಟೇ ಪವಿತ್ರ ಕಾಲುಂಗುರ ತೊಡುವುದು. ಕಾಲುಂಗುರವು ಮದುವೆ ಬಾಂಧವ್ಯ ಬಿಗಿಗೊಳಿಸುವ ಸಂಕೇತವೂ ಆಗಿದೆ.
ಮುಡಿಯಿಂದ ಅಡಿಯವರೆಗೂ ಮ್ಯಾಚಿಂಗ್ ಮೊರೆ ಹೋಗುವ ಜಮಾನಾದಲ್ಲಿ ವಧುವಿನ ಉಡುಗೆಗೆ ತಕ್ಕ ಕಾಲುಂಗುರ ವೈವಿಧ್ಯಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ.
ಹಿಂದೆಲ್ಲ ಬೆಳ್ಳಿಯ ತಂತಿಯನ್ನು ಮೂರು ಸುತ್ತು ಸುತ್ತಿದ ಕಾಲುಂಗುರಗಳಷ್ಟೇ ಇದ್ದವು. ಈಗ ಹಾಗಿಲ್ಲ, ಚಿನ್ನ, ಬೆಳ್ಳಿ, ಪ್ಲಾಟಿನಂನಂತಹ ಉಂಗುರಗಳನ್ನು ಬಳಸುವುದು ಇತ್ತೀಚಿನ ಶೈಲಿಯಾಗಿದ್ದು, ಕಾಲುಂಗುರದ ಬೇಡಿಕೆ ಹೆಚ್ಚಿದೆ. ಕಾಲುಂಗುರಗಳ ವಿನ್ಯಾಸವು ಕೂಡ ಕ್ಲಾಸಿಕ್‌ನಿಂದ ಟ್ರೆಂಡಿಗೆ ಬದಲಾಗಿದೆ.
ಬೆಳ್ಳಿ ಮತ್ತು ವಜ್ರದಿಂದ ಮಾಡಿದ ಕಾಲುಂಗುರ ವಿಶೇಷ ನೋಟವನ್ನು ನೀಡುತ್ತವೆ ಮತ್ತು ವಿವಿಧ ಸಮಾರಂಭಗಳಲ್ಲಿ ಧರಿಸಿದಾಗ ವಿಶೇಷ ಮೆರುಗು ನೀಡುತ್ತವೆ. ವಿವಿಧ ವಿನ್ಯಾಸಗಳಲ್ಲಿ ಇವು ಲಭ್ಯ ಇವೆ.
ರಾಜಸ್ಥಾನಿ ಶೈಲಿಯ ಕಾಲುಂಗುರಗಳು ರಾಯಲ್ ನೋಟವನ್ನು ನೀಡುತ್ತವೆ. ಸರಳ ಮಾದರಿಯ ಬಂಗಾರದಿಂದ ಮಾಡಲ್ಪಟ್ಟ ಈ ಉಂಗುರದಲ್ಲಿ ಹೂವಿನ ಮಾದರಿ ಕಾಣಬಹುದು. ಇದು ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಮತ್ತು ಲೆಹೆಂಗಾ ಧರಿಸಿದಾಗ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
ಕಪ್ಪು ಕಲ್ಲಿನ ಬೆಳ್ಳಿಯ ಕಾಲುಂಗುರವು ಬೆಳ್ಳಿಯ ಉಂಗುರದೊಂದಿಗೆ ಕಪ್ಪು ಬಣ್ಣದ ಕಲ್ಲಿನ ಮಾದರಿಯಂತಿದ್ದು, ಕಾಲಿನ ಸೌಂದರ್ಯಕ್ಕೆ ಇಮ್ಮಡಿಸುತ್ತದೆ. ಬೆಳ್ಳಿಯ ತ್ರಿವಳಿ ಕಾಲುಂಗುರ ವಧುವಿಗೆ ವಿಭಿನ್ನ ನೋಟ ನೀಡುತ್ತದೆ. ಇವುಗಳು ಮೂರು ಬೆರಳುಗಳನ್ನು ಅಲಂಕರಿಸುವುದರಿಂದ ಚಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಬೆಳ್ಳಿಯಿಂದ ಮಾಡಿದ ಸಾಂಪ್ರದಾಯಿಕ ಮಾದರಿಯ ಕಾಲುಂಗುರ ಹೆಣ್ಣಿಗೆ ಇನ್ನಷ್ಟು ಅಂದವನ್ನು ನೀಡುತ್ತದೆ.
ತಮ್ಮ ಉಡುಗೆಯ ಬಣ್ಣಕ್ಕೆ ಸರಿ ಹೊಂದುವಂತಹ ವರ್ಣರಂಜಿತ ಹರಳುಗಳಿಂದ ವಿನ್ಯಾಸಗೊಂಡ ಕಾಲುಂಗುರಗಳು ಮಹಿಳೆಯರ ಪಾದದ ಚಂದ ಹೆಚ್ಚಿಸುತ್ತವೆ. ಮುತ್ತು, ಕುಂದನ್ ಬಳಸಿ ವಿನ್ಯಾಸಗೊಳಿಸಿದ ಕಾಲುಂಗುರಗಳು ನೋಟದಲ್ಲಿ ತುಂಬಾ ಸುಂದರ.
ಕಾಲುಂಗುರ ಧರಿಸುವುದಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಪರಶಿವನ ಮಾವ ಪರ್ವತ ರಾಜ ಅಳಿಯನನ್ನು ಅವಮಾನ ಮಾಡಿದ್ದನ್ನು ಸಹಿಸದ ಪಾರ್ವತಿ ದೇವಿ, ತನ್ನ ಕಾಲ್ಬೆರಳಿನಿಂದ ಅಗ್ನಿಯನ್ನು ಹುಟ್ಟಿಸಿ, ಅದರಲ್ಲಿ ತಾನೇ ಅಹುತಿಯಾದಳಂತೆ. ಈ ಸಂದರ್ಭವನ್ನು ಅನುಸರಿಸಿ ಶಕ್ತಿಯುತವಾದ ಈ ಬೆರಳು ಭೂಮಿಗೆ ತಾಗದಂತೆ ಕಾಲುಂಗುರ ಧರಿಸುವ ಸಂಪ್ರದಾಯ ಆರಂಭವಾಯಿತೆಂದು ಪುರಾಣ ಗ್ರಂಥಗಳು ಹೇಳುತ್ತವೆ. ಬಹುತೇಕ ಎಲ್ಲ ಧರ್ಮಗಳಲ್ಲೂ ಕಾಲುಂಗುರ ಧರಿಸುವ ಕ್ರಮವಿದೆ.
ಕಾಲುಂಗುರ ಧರಿಸುವುದು ಸಂಪ್ರದಾಯವಾದರೂ ಇದರ ಹಿಂದೆ ವೈಜ್ಞಾನಿಕ ಕಾರಣ ಅಡಕವಾಗಿದೆ. ಇದು ಪ್ರತಿಫಲಿತ ಶಾಸ್ತ್ರ (ರಿಫ್ಲೆಕ್ಸೋಲಾಜಿ) ಭಾವನೆಗೆ ಸಂಬಂಧಿಸಿದ್ದಾಗಿದೆ. ಪ್ರತಿಫಲಿತ ಶಾಸ್ತ್ರದ ಅನುಸಾರ ಕಾಲಿನ ತೋರ್ಬೆರಳು ಮಹಿಳೆಯರಲ್ಲಿ ಪುನರುತ್ಪತ್ತಿ ವ್ಯವಸ್ಥೆಗೆ ಸಹಕಾರಿ. ಆ ಬೆರಳಿನ ಮೇಲೆ ಒತ್ತಡ ಬೀಳುವುದರಿಂದ ಋತು ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ ಎನ್ನುತ್ತಾರೆ ತಜ್ಞರು. ಬೆಳ್ಳಿ ಕಾಲುಂಗುರ ಧರಿಸುವುದರಿಂದ ಕಾಲಿಗೆ ಸಂಬಂಧಿಸಿದ ಅಂಟುರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ, ಫಂಗಸ್ ಬೆಳವಣಿಗೆ ಹತ್ತಿಕ್ಕಲು ನೆರವಾಗುತ್ತದೆ. ದೇಹದ ಅಧಿಕ ಉಷ್ಣವನ್ನು ಶಮನ ಮಾಡಿ, ದೇಹವನ್ನು ತಂಪಾಗಿಸುವ ಗುಣ ಬೆಳ್ಳಿಯಲ್ಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.