ವಧು - Bride

ವಧುವಿಗೆ ಮಿನುಗುವ ವಜ್ರದೊಡವೆ ಪ್ರೀತಿ

MH-Team

ಉಮಾ ಅನಂತ್

ವಧುವಿಗೆ ಸೂಕ್ತವಾದ ವಜ್ರದ ಒಡವೆಗಳು ಸಮಕಾಲೀನ ವಿನ್ಯಾಸ ಹಾಗೂ ಶೈಲಿಯಲ್ಲಿ ಲಭ್ಯ. ಮದುವೆಯ ದಿನ ಮಿಂಚಲು ಹಗುರವಾದ ವಜ್ರದ ಆಭರಣ ಈಗ ಕೈಗೆಟಕುವ ದರದಲ್ಲಿ ಲಭ್ಯವೂ ಇದೆ.

ವಜ್ರ ಎಂದರೆ ಅತಿ ದುಬಾರಿ ಎಂಬ ಕಾರಣಕ್ಕೆ ಮದುವೆಯಲ್ಲಿ ಮದುಮಗಳ ಆಯ್ಕೆ ಚಿನ್ನಕ್ಕೇ ಮೀಸಲಾಗಿದ್ದ ಕಾಲವಿತ್ತು. ಆದರೆ ಈಗ ಚಿನ್ನದ ಬೆಲೆಯೂ ಗಗನಕ್ಕೇರಿದೆ. ವಜ್ರದ ಒಡವೆಯಲ್ಲಿ ಹಗುರವಾದ, ಮಧ್ಯಮ ವರ್ಗದವರ ಕೈಗೆಟಕುವ ವಿನ್ಯಾಸದ ಉಂಗುರ, ಸರ, ಬ್ರೇಸ್‌ಲೆಟ್‌ ಎಲ್ಲವೂ ಲಭ್ಯ.

ಕೆಲವು ವಜ್ರಾಭರಣ ಮಳಿಗೆಗಳು ವಧುವಿಗಾಗಿಯೇ ಡೈಮಂಡ್‌ ಒಡವೆಗಳನ್ನು ವಿಭಿನ್ನ ವಿನ್ಯಾಸದಲ್ಲಿ ರೂಪಿಸಿ ಹೊರತಂದಿವೆ. ಸಮಕಾಲೀನ ಟ್ರೆಂಡ್‌ಗೆ ತಕ್ಕುದಾದ ಹೊಸ ವಿನ್ಯಾಸದ ವಜ್ರದ ಆಭರಣ ‘ಎವರ್‌ಗ್ರೀನ್‌ ಕ್ವೀನ್‌’ನ ಹಾಗೆ ಒಡವೆಪ್ರಿಯರ ಗಮನಸೆಳೆಯುತ್ತಿದೆ. ಗ್ರ್ಯಾಂಡ್‌ ಲುಕ್‌ ಕೊಡುವ ಹೊಳಪು, ಒನಪು, ವಿನ್ಯಾಸ ಮುಂತಾದ ವೈವಿಧ್ಯದಿಂದ ಕೂಡಿದ ವಜ್ರದ ಒಡವೆಗಳು ಮಹಿಳೆಯರನ್ನು ಥಟ್ಟನೆ ಸೆಳೆಯುತ್ತಿವೆ. ಇದಕ್ಕೆ ಕಾರಣ, ಎಷ್ಟು ಬಳಸಿದರೂ ಅಂದಗೆಡದ, ಹಳತಾಗದ ವಜ್ರದ ಆಭರಣಗಳ ಕುಸುರಿ ಕೆಲಸ. ವಜ್ರದ ಒಡವೆ ಮೇಲೆ ‘ಕಸ್ಟಮರ್ಸ್‌ ಫೋಕಸ್‌’ ಇರುವುದರಿಂದ ಒಡವೆ ಪ್ರೇಮಿಗಳು ಈಗ ವಜ್ರದ ಆಭರಣದ ಮೊರೆ ಹೋಗಿದ್ದಾರೆ. ಅದರಲ್ಲೂ ಮದುವೆ ಸೀಸನ್ ಬಂತೆಂದರೆ ಡೈಮಂಡ್ ಒಡವೆಗಳಿಗೆ ಡಿಮಾಂಡೋ ಡಿಮಾಂಡ್!

ವಜ್ರದ ಒಡವೆಯಲ್ಲಿ ಮದುವೆ ಹೆಣ್ಣಿಗೆ ಅತ್ಯಂತ ಸೂಕ್ತವಾದ ಆಭರಣ ಎಂದರೆ ಅದು ‘ಸ್ಪಾರ್ಕ್ಲಿಂಗ್ ಡೈಮಂಡ್’. ವಜ್ರ ಮತ್ತು ಎಮರಾಲ್ಡ್‌ಗಳನ್ನು ಬಳಸಿ ವಿನ್ಯಾಸ ಮಾಡುವ ಇದರಲ್ಲಿ ನೆಕ್ಲೇಸ್ ಮತ್ತು ಜುಮ್ಕಾಗಳು ಲಭ್ಯ. ಕೆಂಪು, ನೇರಳೆ ಮತ್ತು ಹೊನ್ನಿನ ಬಣ್ಣದ ಸೀರೆಗೆ ಈ ಆಭರಣ ಚೆನ್ನಾಗಿ ಮ್ಯಾಚ್ ಆಗುತ್ತದೆ.

ಮದುವೆ, ಮುಂಜಿ, ಹಬ್ಬ ಮುಂತಾದ ಶುಭ ಸಮಾರಂಭಗಳಲ್ಲಿ ರೇಷ್ಮೆ ಸೀರೆಗೆ ಮ್ಯಾಚಿಂಗ್‌ ಆದ ವಜ್ರದ ಒಡವೆ ಧರಿಸಿಕೊಳ್ಳಬೇಕು ಎಂದು ಬಯಸುವ ಮಹಿಳೆಯರಿಗಾಗಿಯೇ ‘ಕಲರ್‌ ಚೇಂಜಿಂಗ್‌ ಡೈಮಂಡ್‌ ಜ್ಯುವೆಲ್ಲರಿ’ ಕೂಡ ಈಗ ಲಭ್ಯ. ಉಡುಪಿನ ಬಣ್ಣಕ್ಕೆ ಮ್ಯಾಚಿಂಗ್‌ ಆಗುವ ಹಾಗೆ ಡೈಮಂಡ್‌ ಹರಳುಗಳನ್ನು ಬದಲಾಯಿಸಿ ತೊಟ್ಟುಕೊಳ್ಳಬಹುದಾದ ಕಾರಣ ಇದು ‘ಮಿಕ್ಸ್‌ ಅಂಡ್ ಮ್ಯಾಚ್‌’ ಪರಿಕಲ್ಪನೆಗೆ ಅತ್ಯಂತ ಸೂಕ್ತವಾಗಿದೆ. ಸ್ಪಾರ್ಕ್ಲಿಂಗ್‌ ಡೈಮಂಡ್‌ ಜೊತೆಗೆ ಸ್ಟೇಟ್‌ಮೆಂಟ್‌ ಪೀಸ್‌ ಕೂಡ ಮದುಮಗಳ ಅಲಂಕಾರಕ್ಕಾಗಿಯೇ ರೂಪಿಸಿದಂಥವು.

ಶ್ರೀಮಂತರ ನೆಂಟಸ್ತನ

ವಜ್ರದ ಒಡವೆಗಳು ಶ್ರೀಮಂತರ ನೆಂಟಸ್ತನ ಮಾಡಿಕೊಂಡಿವೆಯೋ ಎಂಬ ಸಂಶಯ ಮೂಡುತ್ತದೆ. ಏಕೆಂದರೆ ವಜ್ರದ ಹಾರ, ಜುಮ್ಕಾ, ಬಳೆಗಳು, ಉಂಗುರಗಳು ಎಲ್ಲವೂ ವಜ್ರದಿಂದಲೇ ತಯಾರಿಸಿದವು ಇವರ ಮದುವೆಗಳಲ್ಲಿ ಮಿಂಚುತ್ತಿರುತ್ತವೆ. ಅಲ್ಲದೆ ಪರಂಪರೆಯ ಆಭರಣ ಈಗ ಫ್ಯಾಷನ್‌ ಆಗಿದೆ. ಸಾಂಪ್ರದಾಯಿಕ ಒಡವೆಗಳು ಆಧುನಿಕ ಸ್ಪರ್ಶದೊಂದಿಗೆ ಮತ್ತೆ ಫ್ಯಾಷನ್‌ ಜಗತ್ತಿಗೆ ಎಡತಾಕಿದೆ. ರೋಸ್‌ಕಟ್‌ ಡೈಮಂಡ್‌ ಮತ್ತು ರೂಬಿ ಅಳವಡಿಸಿ ಮಾಡಿದ ಆಭರಣ ಸಾಂಪ್ರದಾಯಿಕ ಲುಕ್‌ ಆದರೂ ಆಧುನಿಕ ಶೈಲಿಯ ಉಡುಗೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ವಿಕ್ಟೋರಿಯನ್ ಡೈಮಂಡ್ ಆಭರಣ ಸಖತ್ ಲುಕ್‌ ಕೊಡಲು ಸಹಕಾರಿ.

ಬೆಂಗಳೂರಿನ ಕೆಲವು ಪ್ರಮುಖ ಆಭರಣ ಮಳಿಗೆಗಳು ವೈವಿಧ್ಯಮಯ ವಿನ್ಯಾಸಗಳ ವಜ್ರದ ಆಭರಣಗಳನ್ನು ಮದುಮಗಳ ಅಲಂಕಾರಕ್ಕಾಗಿಯೇ ವಿನ್ಯಾಸಗೊಳಿಸುತ್ತಿವೆ. ಕೀರ್ತಿಲಾಲ್ಸ್‌, ಪ್ರತಿಭಾ ಜ್ಯುವೆಲ್ಲರಿ, ಆಭರಣ ಜ್ಯುವೆಲ್ಲರಿ, ರಾಜ್ ಡೈಮಂಡ್ಸ್‌, ಕೃಷ್ಣಯ್ಯ ಚೆಟ್ಟಿ ಆಭರಣ ಮಳಿಗೆ, ನೀಲಕಂಠ ಜ್ಯುವೆಲ್ಲರಿ ಮುಂತಾದವು ವಜ್ರಾಭರಣಗಳಿಗೆ ಹೆಸರಾದವು.

ಅನ್‌ಕಟ್‌ ಡೈಮಂಡ್, ಕಲರ್ ಡೈಮಂಡ್ ಒಡವೆಗಳು ಸಮಕಾಲೀನ ಶೈಲಿಯಲ್ಲಿ, ಫ್ಯಾಷನಬಲ್ ಆಗಿ ಕಾಣಲು ಸಹಕಾರಿಯೂ ಆಗಿದೆ. ಜೇಡ್‌ ಸಾಂಪ್ರದಾಯಿಕ ಆಭರಣ ಶ್ರೇಣಿಯಡಿ, ನೆಕ್ಲೆಸ್‌, ಕಿವಿಯೋಲೆ, ಬಳೆಗಳು, ಪಚ್ಚೆ, ವಜ್ರ, ಮಾಣಿಕ್ಯ ಹಾಗೂ ಚಿನ್ನದಿಂದ ತಯಾರಿಸಿದ ಆಕರ್ಷಕ ಬೈತಲೆ ಬೊಟ್ಟು (ಹಣೆಯ ಮೇಲೆ ಧರಿಸುವಂತಹ ಆಭರಣ) ಲಭ್ಯ. ಈ ಸಂಗ್ರಹವು ವಧುವಿನ ವೈಭವಕ್ಕೆ ಸರಿ ಹೊಂದುವಂತಿದೆ, ಮದುವೆ, ಮುಂಜಿಗಳಂತಹ ಅದ್ಧೂರಿಯ ಸಂದರ್ಭಗಳಲ್ಲಿ ಧರಿಸಲು ಸೂಕ್ತವಾಗಿವೆ.