ಭಾರತೀಯ ಸಂಪ್ರದಾಯದಲ್ಲಿ ಮದುವೆ ಎಂಬುದು ಮಹತ್ವದ ಸ್ಥಾನ ಪಡೆದಿದೆ. ಅದು ಕೇವಲ ಎರಡು ಜೀವಗಳ ಮಿಲನವಷ್ಟೇ ಅಲ್ಲ, ಅದು ಇಡೀ ಕುಟುಂಬ ಕೂಡಿ ನಲಿಯುವ ಪ್ರಸಂಗವಾಗಿದೆ. ಕನ್ನಡ ನಾಡಿನ ವಿವಾಹ ಪದ್ಧತಿಗಳಲ್ಲಿ ವಧುವಿನ ಅಲಂಕಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. 'ಅರಿಸಿನ ಶಾಸ್ತ್ರ'ದಿಂದ ಹಿಡಿದು 'ಮುಹೂರ್ತ'ದವರೆಗೆ ವಧುವು ಮದುವೆಯ ವಿವಿಧಕಾರ್ಯಕ್ರಮಗಳಿಗಾಗಿ ವಿವಿಧ ಉಡುಪುಗಳು ಮತ್ತು ಆಭರಣಗಳಿಂದ ಎಲ್ಲಾ ಹಂತಗಳಲ್ಲಿ ವಿಭಿನ್ನವಾಗಿ ಕಂಗೊಳಿಸುತ್ತಾಳೆ.
ಅರಿಸಿನ ಶಾಸ್ತ್ರ
ಮದುವೆಯ ಸಂಭ್ರಮ ಅದ್ದೂರಿಯಾಗಿ ಆರಂಭವಾಗುವುದೇ ಮಂಗಳಮಯ ಅರಿಸಿನ ಶಾಸ್ತ್ರದಿಂದ. ಈ ವಿಧಿಯಲ್ಲಿ ವಧುವಿಗೆ ಅರಿಸಿನ ಹಚ್ಚುವ ಮೂಲಕ ಆಕೆಯ ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡಲಾಗುತ್ತದೆ. ಸಾಮಾನ್ಯವಾಗಿ ಈ ದಿನ ವಧು ಹಳದಿ ಬಣ್ಣದ ಸೀರೆ ಅಥವಾ ಲಂಗ-ದಾವಣಿಯನ್ನು ಧರಿಸುತ್ತಾಳೆ. ಇಲ್ಲಿ ಅತಿ ಹೆಚ್ಚಿನ ಆಭರಣಗಳಿಗಿಂತ ಹೂವಿನ ಆಭರಣಗಳಿಗೆ ಆದ್ಯತೆ. ಮಲ್ಲಿಗೆ ಅಥವಾ ಸೇವಂತಿಗೆಯಿಂದ ಮಾಡಿದ ಹಾರ, ಬಳೆ ಮತ್ತು ಜಡೆ ಬಿಲ್ಲೆಗಳು ಆಕೆಗೆ ಒಂದು ಮುಗ್ಧ ಸೌಂದರ್ಯವನ್ನು ನೀಡುತ್ತವೆ. ಇತ್ತೀಚೆಗೆ ಅರಿಸಿನ ಶಾಸ್ತ್ರಕ್ಕೆಂದೇ ವಿವಿಧ ಹಳದಿ ಬಣ್ಣದ ಉಡುಪುಗಳು ಮತ್ತು ಸಿದ್ಧಪಡಿಸಿದ ಆಭರಣಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಅಥವಾ ಬಾಡಿಗೆಗೆ ದೊರಕುತ್ತವೆ.
ಬಳೆ ತೊಡಿಸುವ ಶಾಸ್ತ್ರ
ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮದುವಣಗಿತ್ತಿಗೆ ಹಸಿರು ಬಳೆ ತೊಡಿಸುವ ಸಂಪ್ರದಾಯವಿದ್ದು, ಅದಕ್ಕಾಗೇ ಬಳೆಗಾರರನ್ನು ಕರೆಸುತ್ತಾರೆ. ವಧುವಿನ ಜೊತೆಗೆ ಮನೆಯ ಹೆಂಗಳೆಯರಿಗೆಲ್ಲ ಚಿತ್ತ ಚಿತ್ತಾರದ ಹಸಿರು ಬಳೆಗಳನ್ನು ತೊಡಿಸಲಾಗುತ್ತದೆ. ಅಲ್ಲಿಂದ ಯುವತಿಯೊಬ್ಬಳು ಮದುವಣಗಿತ್ತಿಯೆಂದು ಅನಿಸಿಕೊಳ್ಳುತ್ತಾಳೆ. ಹಸಿರು ಬಳೆಗಳ ಮಧ್ಯದಲ್ಲಿ ಉತ್ತರ ಕರ್ನಾಟಕದ ವಿಶಿಷ್ಟ ಆಭರಣಗಳಾದ ತೋಡೆ, ಬಿಲ್ವಾರ, ಪಾಟಲಿಗಳು ವಧುವಿನ ಸುಂದರ ಕೈಗಳನ್ನು ಇನ್ನೂ ಅಂದಗೊಳಿಸುತ್ತವೆ.
ಮೆಹಂದಿ ಮತ್ತು ಸಂಗೀತ: ಬಣ್ಣಗಳ ಚಿತ್ತಾರ
ಮುಂಚೆ ಕರ್ನಾಟಕದ ಮದುವೆಗಳಲ್ಲಿ ಮೆಹಂದಿ ಕಾರ್ಯಕ್ರಮವೆಂಬುದು ಇರಲಿಲ್ಲ. ಈಗ ದೇಶದ ಉತ್ತರ ಭಾಗಗಳ ವರ್ಚಸ್ಸು ಮತ್ತು ಬಾಲಿವುಡ್‍ನ ಪ್ರಭಾವಕ್ಕೊಳಗಾಗಿ ಮೆಹಂದಿ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಇದು ವಧುವಿನ ಕೈಕಾಲುಗಳಿಗೆ ಅಂದವಾದ ವಿನ್ಯಾಸಗಳನ್ನು ನೀಡುವ ಸಮಯ.ಕೆಲವರು ತಮ್ಮ ಮನೆಗಳನ್ನು ಮೆಹಂದಿಗೆಂದೇ ಅಂದವಾಗಿ ಅಲಂಕರಿಸುತ್ತಾರೆ.
ಅರಬ್ ಅಥವಾ ಸಾಂಪ್ರದಾಯಿಕ ಭಾರತೀಯ ಮೆಹಂದಿ ವಿನ್ಯಾಸಗಳು ವಧುವಿನ ಕೈಗಳಲ್ಲಿ ಅರಳುತ್ತವೆ. ಮೆಹಂದಿಯ ಬಣ್ಣ ಎಷ್ಟು ಗಾಢವಾಗಿ ಬರುತ್ತದೋ, ಅಷ್ಟು ಗಂಡನ ಪ್ರೀತಿ ಹೆಚ್ಚು ಎಂಬ ನಂಬಿಕೆ ನಮ್ಮಲ್ಲಿದೆ. ಈ ಹಂತದಲ್ಲಿ ವಧು ಸ್ವಲ್ಪ ಆಧುನಿಕ ಮತ್ತು ಸಂಪ್ರದಾಯದ ಮಿಶ್ರಣವಿರುವ ಉಡುಗೆಗಳನ್ನು (Indo-western) ಆಯ್ಕೆ ಮಾಡಿಕೊಳ್ಳುತ್ತಾಳೆ.
ಸಂಗೀತ್: ನಮ್ಮ ನಾಡಿನ ಮದುವೆಯ ವಿವಿಧ ಕಾರ್ಯಕ್ರಮಗಳಲ್ಲಿ ಸಂಗೀತ್ ಒಂದು ಹೊಸ ಸೇರ್ಪಡೆಯಾಗಿದೆ. ವಧು ಮತ್ತು ಆಕೆಯ ಗೆಳತಿಯರು ಅಂದದ ಘಾಗರಾ ಹಾಗೂ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ನರ್ತಿಸುವಾಗ ಅಪ್ಸರೆಯರೇ ಭೂಮಿಗಿಳಿದ ಭಾವನೆ ಬರುತ್ತದೆ.
ಮುಹೂರ್ತ: ಸಾಂಪ್ರದಾಯಿಕ ವೈಭವದ ಶಿಖರ
ಮದುವೆಯ ದಿನದ ಮುಹೂರ್ತವು ಅತ್ಯಂತ ಪವಿತ್ರವಾದ ಕ್ಷಣ. ಇಲ್ಲಿ ವಧುವು ಪರಿಪೂರ್ಣ 'ಮುತ್ತೈದೆ'ಯ ರೂಪದಲ್ಲಿ ದರ್ಶನ ನೀಡುತ್ತಾಳೆ.
ರೇಷ್ಮೆ ಸೀರೆ: ಕರ್ನಾಟಕದ ವಧುವೆಂದರೆ ಅದು ಧರ್ಮಾವರಂ ಅಥವಾ ಕಂಚಿ ರೇಷ್ಮೆ ಸೀರೆ. ಕೆಂಪು, ಹಸಿರು ಅಥವಾ ಸಾಂಪ್ರದಾಯಿಕ ಹಳದಿ ಬಣ್ಣದ ಸೀರೆಗಳು ವಧುವಿನ ಗಾಂಭೀರ್ಯವನ್ನು ಹೆಚ್ಚಿಸುತ್ತವೆ. ಉತ್ತರ ಕರ್ನಾಟಕದಲ್ಲಿ ವಧುವು ಬನಾರಸಿ ರೇಷ್ಮೆ ಸೀರೆ ಅಥವಾ ಮಹರಾಷ್ಟ್ರದ ಪೈಠಣಿ ಸೀರೆಯನ್ನೂ ಧರಿಸುವುದುಂಟು.
ಆಭರಣಗಳು: ತಲೆಯಿಂದ ಪಾದದವರೆಗೆ ಚಿನ್ನದ ಆಭರಣಗಳದ್ದೇ ಕಾರುಬಾರು. ಕೊರಳಲ್ಲಿ ನೆಕ್ಲೇಸ್, ಕೈಯಲ್ಲಿ ಕೆಂಪಿನ ಬಳೆ ಅಥವಾ ವಜ್ರದ ಸೆಟ್‍ಗಳು, ನೆತ್ತಿ ಬೊಟ್ಟು ಮತ್ತು ಮಾಂಗ ಟಿಕಾ ಮುಖದ ಕಳೆಯನ್ನು ಹೆಚ್ಚಿಸುತ್ತದೆ. ಶಬ್ದ ಮಾಡುವ ಗಾಜಿನ ಬಳೆಗಳ ನಡುವೆ ಮಿಂಚುವ ಚಿನ್ನದ ಬಳೆಗಳು ಸುಂದರವಾಗಿ ಕಂಗೊಳಿಸುತ್ತವೆ. ಕಿವಿಯಲ್ಲಿ ನೇತಾಡುವ ಜುಮಕಿಗಳ ಅಂದವೇ ಅಂದ.
ಸೊಂಟದ ಪಟ್ಟಿ: ಈ ಸುಂದರ ಸಾಂಪ್ರದಾಯಿಕ ಆಭರಣ ಕಾಲಾಂತರದಲ್ಲೂ ಸಲ್ಲುತ್ತದೆ. ಇದು ಸೀರೆಯನ್ನು ಅಚ್ಚುಕಟ್ಟಾಗಿ ಹಿಡಿದಿಡುವುದಲ್ಲದೆ, ವಧುವಿನ ಆಕೃತಿಯನ್ನು ಎತ್ತಿ ತೋರಿಸುತ್ತದೆ. ಡಾಬು, ಜಡೆಬಿಲ್ಲೆ, ವಂಕಿ, ಇತ್ಯಾದಿಗಳು ಇನ್ನಿತರ ವಧುವಿನ ಸೌಂದರ್ಯವನ್ನು ಎತ್ತಿ ಹಿಡಿಯುವ ಆಭರಣಗಳಾಗಿವೆ.
ಜಡೆ ಅಲಂಕಾರ: ಹೂವಿನ ಕಂಪಿನ ಸೊಬಗು
ದಕ್ಷಿಣ ಭಾರತದ ವಧುವಿನ ಅಲಂಕಾರದಲ್ಲಿ 'ಹೂವಿನ ಜಡೆ' ಇಲ್ಲದಿದ್ದರೆ ಅದು ಅಪೂರ್ಣ. ಉದ್ದನೆಯ ಜಡೆಗೆ ಮಲ್ಲಿಗೆ ಹೂವಿನ ಸುರುಳಿ, ಕನಕಾಂಬರ ಅಥವಾ ಕೆಂಪು ಗುಲಾಬಿಗಳನ್ನು ಮುಡಿಸುವುದು ಒಂದು ಕಲೆ. ಇದರೊಂದಿಗೆ 'ಜಡೆ ಬಿಲ್ಲೆ'ಗಳನ್ನು ಜೋಡಿಸಿದಾಗ ವಧುವು ಸಾಕ್ಷಾತ್ ದೇವತೆಯಂತೆ ಭಾಸವಾಗುತ್ತಾಳೆ.
ಎಲ್ಲ ಆಭರಣಗಳ ಜೊತೆಗೆ ಅಂದವಾಗಿ ಒಪ್ಪವಾಗಿ ಉಡಿಸಿದ ಸೀರೆಯಲ್ಲಿ ವಧುವಿನ ಅಂದ ಮತ್ತು ಸೊಬಗನ್ನು ಎಷ್ಟು ನೋಡಿದರೂ ಕಡಿಮೆಯೇ. ಇದರೊಂದಿಗೆ ಮದುಮಗಳ ನೋಟ ಎದ್ದು ಕಾಣುತ್ತದೆ. ಮುಖದ ಅಲಂಕಾರವು ಮಿತಿಯಲ್ಲಿಯೇ ವೈಭವವನ್ನು ತೋರಿಸುತ್ತದೆ. ಸಣ್ಣ ಕುಂಕುಮದ ಬಿಂದು, ಕಣ್ಣಿನ ಕಾಡುಗೆರೆ, ತುಟಿಗಳ ಮೃದುವಾದ ಬಣ್ಣ—ಇವೆಲ್ಲವೂ ವಧುವಿನ ಸಹಜ ಕಾಂತಿಯನ್ನು ಮೆರೆಯಿಸುತ್ತವೆ. ಆದರೆ ನಿಜವಾದ ಸೌಂದರ್ಯವು ಆಕೆಯ ಕಣ್ಣುಗಳಲ್ಲಿ ಹೊಳೆಯುವ ಲಜ್ಜೆ, ಸಂತೋಷ ಮತ್ತು ನಿರೀಕ್ಷೆಯಲ್ಲಿದೆ. ಆ ಭಾವನೆಗಳು ಯಾವುದೇ ಆಭರಣಕ್ಕಿಂತ ಹೆಚ್ಚು ಆಕೆಯನ್ನು ಸುಂದರಳಾಗಿಸುತ್ತವೆ. ಇತ್ತೀಚೆಗೆ ವಧುವಿನ ಪರಿಪೂರ್ಣ ನೋಟಕ್ಕಾಗಿ ಮೇಕ್‍ಅಪ್ ಕೂಡ ಮಾಡುವುದುಂಟು. ಅವಳುಧರಿಸಿದ ಉಡುಪಿಗೆ ಅನುಗುಣವಾಗಿ ಮೇಕ್‍ಅಪ್ ಮಾಡಲಾಗುತ್ತದೆ.
ಅರಿಸಿನದ ಪವಿತ್ರತೆಯಿಂದ ಆರಂಭವಾಗಿ, ಮುಹೂರ್ತದ ರೇಷ್ಮೆಯ ವೈಭವದವರೆಗೆ ವಧುವಿನ ಪ್ರತಿಯೊಂದು ಅಲಂಕಾರವೂ ಒಂದು ಕಥೆಯನ್ನು ಹೇಳುತ್ತದೆ. ಇದು ತಲೆತಲಾಂತರದಿಂದ ನಡೆದುಬಂದ ಸಂಪ್ರದಾಯವಾಗಿದೆ. ಅದರ ಸ್ವರೂಪ ಬದಲಾಗಿರಬಹುದು ಅಷ್ಟೇ. ಇದು ಕೇವಲ ಬಾಹ್ಯ ಸೌಂದರ್ಯವಲ್ಲ, ಬದಲಿಗೆ ಹೊಸ ಜೀವನಕ್ಕೆ ಕಾಲಿಡುತ್ತಿರುವ ಹೆಣ್ಣಿನ ಆತ್ಮವಿಶ್ವಾಸ ಮತ್ತು ಸಾಂಪ್ರದಾಯಿಕ ಮೌಲ್ಯಗಳ ಪ್ರತಿಬಿಂಬ.