ಮದುಮಗ

ಬಾಸಿಂಗವೇ ಭೂಷಣ ವಧು–ವರರಿಗೆ

MH-Team

ಬಾಸಿಂಗ ಮುಡಿಸಿರೆ ಗೋಪಿ ಕಂದನಿಗೆ
ಶೇಷಶಯನನಾ ಮೇಲೆ ವರಗುವವಗೆ
ವಸುಧೆಯೊಳ್‌ ದೇವಕಿ ಬಸಿರೊಳು ಜನಿಸಿದ
ಅಸಮ ಸಾಹಸಶ್ರೀ ಅಸುರರ ತರಿದಗೆ....
ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಹವ್ಯಕ ಸಮುದಾಯದ ಮದುವೆಯಲ್ಲಿ ವರನಿಗೆ ಬಾಸಿಂಗ ಕಟ್ಟುವಾಗ ಹಾಡುವ ಪದ್ಯ. ಬಾಸಿಂಗ ಕಟ್ಟಿದಾಗಲೇ ಮದುವೆ ಮಾಣಿ– ಕೂಸಿಗೆ ಮದುವೆ ಕಳೆ ಬಂದಂತೆ ಎಂಬುದು ಇಲ್ಲಿಯವರ ನಲ್ನುಡಿ.
ಹಿಂದೂ ಸಾಂಪ್ರದಾಯಿಕ ವಿವಾಹ ಪದ್ಧತಿಯಲ್ಲಿ ವಧುವರರ ಹಣೆಗೆ ಕಟ್ಟುವ ಬಾಸಿಂಗಕ್ಕೆ ತುಂಬಾ ಮಹತ್ವವಿದೆ. ಇದು ಒಂದು ರೀತಿಯಲ್ಲಿ ವಧುವರರಿಗೆ ಕಿರೀಟವಿದ್ದಂತೆ. ವಧು–ವರರು ರಾಜ–ರಾಣಿಯರಂತೆ ಶೋಭಿಸಲು ಬಾಸಿಂಗವೇ ಕಾರಣ. ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲಿ ಹಾಗೂ ಮಹಾರಾಷ್ಟ್ರದಲ್ಲೂ ಬಾಸಿಂಗವು ಮದುವೆಯ ಅವಿಭಾಜ್ಯ ಅಂಗವೆನಿಸಿದೆ. ಪ್ರಾದೇಶಿಕವಾಗಿ ಭಾಷೆ ಹೇಗೆ ಬದಲಾಗುತ್ತದೆಯೋ ಅದೇ ರೀತಿ ಬಾಸಿಂಗ ಮಾಡುವ ವಿಧಾನ ಹಾಗೂ ರಚನಾ ವಿನ್ಯಾಸ ಪ್ರತಿ ಪ್ರದೇಶಕ್ಕೂ ಬದಲಾಗುತ್ತ ಸಾಗುತ್ತದೆ.
ಉತ್ತರ ಕನ್ನಡ ಪ್ರಕಾರ: ‘ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಶಿರಸಿ ಹಾಗೂ ಶಿವಮೊಗ್ಗ ಜಿಲ್ಲೆಯ ಸೊರಬ ಹಾಗೂ ಸಾಗರಗಳಲ್ಲಿ ಗುಣಮಟ್ಟದ ಬಾಸಿಂಗ ತಯಾರಾಗುತ್ತದೆ. ಇಲ್ಲಿ ಕಲಾವಿದರು ಪ್ರಮುಖವಾಗಿ ಬೆಂಡು ಬಳಸಿ ಇದನ್ನು ತಯಾರಿಸುತ್ತಾರೆ. ಮುತ್ತು, ಬಣ್ಣ, ಬೆಗಡೆ, ಝರಿ ಪುಡಿ, ಝರಿಯ ಎಳೆಗಳು ಹಾಗೂ ಇನ್ನೂ ಹಲವು ಆಲಂಕಾರಿಕ ವಸ್ತುಗಳನ್ನು ಬಳಸಿ ಮಾಡುತ್ತಾರೆ’ ಎಂದು ಸಿದ್ದಾಪುರದ ಕಾಶಿನಾಥ ಗುಡಿಗಾರ ತಿಳಿಸಿದರು.
ಕಳೆದ 58 ವರ್ಷಗಳಿಂದ ಬಾಸಿಂಗ ಮಾಡುವಲ್ಲಿ ಸಿದ್ಧಹಸ್ತರಾದ ಅವರು ಹೇಳುವಂತೆ, ಇಂದಿಗೂ ಬಾಸಿಂಗದ ಮಹತ್ವ ಕಡಿಮೆ ಆಗಿಲ್ಲ. ಸಾಮಾನ್ಯವಾಗಿ 2 ಇಂಚಿನಿಂದ ಹಿಡಿದು 8 ಇಂಚಿನಷ್ಟು ಎತ್ತರದ ಬಾಸಿಂಗ ತಯಾರಿಸಲಾಗುತ್ತದೆ. ಮೊದಲೆಲ್ಲ ದೊಡ್ಡ ಬಾಸಿಂಗಗಳಿಗೆ ಬೇಡಿಕೆ ಇದ್ದಿತ್ತು. ಇಂದಿನ ಯುವಕ–ಯುವತಿಯರು ಚಿಕ್ಕದು ಸಾಕು ಎನ್ನುತ್ತಾರೆ. ಹೀಗಾಗಿ ಚಿಕ್ಕ ಬಾಸಿಂಗಗಳ ಟ್ರೆಂಡ್‌ ಹುಟ್ಟಿಕೊಂಡಿದೆ.
‘ಬಾಸಿಂಗ ಮಾಡಲು ಒಂದು ಥಿಯರಿ ಎಂಬುದಿಲ್ಲ. ಮನಸ್ಸಿಗೆ ಹೊಳೆದಂತೆ ಹೊಸ ವಿನ್ಯಾಸಗಳನ್ನು ಸೃಷ್ಟಿಸಿ ಚಂದ ಕಾಣಿಸುವಂತೆ ಮಾಡುವುದಷ್ಟೇ  ಕೆಲಸ. ವಧು–ವರರ ಮುಖಕ್ಕೆ ಹೊಂದುವಂತೆ ವಿನ್ಯಾಸ ಮಾಡುವುದೂ ಇದೆ. ಕೆಲವರು ಮಾತ್ರ ಯಾರಾದರೂ ಮಾಡಿಸಿದಂಥ ಮಾದರಿಯದ್ದು, ಅಥವಾ ಅವರೇ ಈ ಮೊದಲು ಮಾಡಿಸಿದ್ದು ಇಷ್ಟವಾದರೆ ಅದರಂಥದ್ದೇ ಬೇಕೆಂದು ಮಾಡಿಸುತ್ತಾರೆ. ಒಂದು ಬಾಸಿಂಗ ಮಾಡಲು 2 ದಿನಗಳಾದರೂ ಬೇಕಾಗುತ್ತದೆ’ ಎಂದು ಅವರು ವಿವರಿಸಿದರು.
ವಿವಾಹದ ಸೀಸನ್‌ಗಳಲ್ಲಿ 3–4 ತಿಂಗಳುಗಳಷ್ಡು ಕಾಲ ಬಾಸಿಂಗಕ್ಕೆ ಬೇಡಿಕೆ ಬರುತ್ತದೆ. ಈಚೆಗೆ ಮಾರುಕಟ್ಟೆಗಳಲ್ಲೂ, ಆನ್‌ಲೈನ್‌ನಲ್ಲೂ ಬಾಸಿಂಗಗಳು ಲಭ್ಯವಾಗುತ್ತಿವೆ. ಆದರೆ ಸಾಂಪ್ರದಾಯಿಕವಾದ ಕಲಾತ್ಮಕ ಬಾಸಿಂಗ ಇಷ್ಟ ಪಡುವವರು ಕಲಾವಿದರನ್ನು ಹುಡುಕಿ ಹೋಗಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ಸಮುದಾಯಗಳಲ್ಲೂ ವರನ ಕಡೆಯವರು ವಧು ಹಾಗೂ ವರನಿಗಾಗಿ ಬಾಸಿಂಗವನ್ನು ಸಿದ್ಧಪಡಿಸುತ್ತಾರೆ. ವರನ ಸೋದರಮಾವ ಇದನ್ನು ಮಾಡಿಸಬೇಕು ಎಂಬ ಸಂಪ್ರದಾಯವೂ ಇದೆ. ಉತ್ತರ ಕನ್ನಡ ಭಾಗದಲ್ಲಿ ವಧು–ವರರ ಬಾಸಿಂಗದ ಜೊತೆ ಹೂವಿನ ಕೋಲು, ಕೊರಳಮಾಲೆ, ತಲೆಮುಡಿಗಳನ್ನೂ ಮಾಡಿಸುತ್ತಾರೆ.
ಉತ್ತರ ಕರ್ನಾಟಕ ವೈಶಿಷ್ಟ್ಯ: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಾಸಿಂಗವೂ ವಿವಾಹದ ಪ್ರಮುಖ ಭಾಗ. ಬೆಂಡಿನಿಂದ ಮಾಡಿದ ಬಾಸಿಂಗ, ಗುಡಿ ಬಾಸಿಂಗ, ಕಮಾನು ಬಾಸಿಂಗ, ಸಾದಾ ಬಾಸಿಂಗಗಳು ಹೆಸರುವಾಸಿ. ಇಲ್ಲಿ ಜೋಳದ ದಂಟು, ಬಣ್ಣದ ಹಾಳೆ, ಹರಳು, ಮುತ್ತು, ಬೆಗಡೆ ಕಾಗದ, ಕನ್ನಡಿ, ಮನೆದೇವರ ಚಿತ್ರ, ಕಮಾನು, ಟಿಕಳಿ, ಹೂವು, ದಾರಗಳನ್ನು ಸಹ ಬಳಸಲಾಗುತ್ತದೆ. ಬಾಸಿಂಗಗಳಲ್ಲಿ ದೇವರಗುಡಿ, ಕುಂಭ, ಹೂವು, ಗಣಪತಿ, ಈಶ್ವರ, ಬಸವ, ಕಳಸ, ಪ್ರಾಣಿ–ಪಕ್ಷಿ ಚಿತ್ರಗಳನ್ನೂ ರಚಿಸುತ್ತಾರೆ. ಬೆಂಡುಗಳ ಜೋಡಣೆಗೆ ಜಾಲಿ ಮುಳ್ಳು ಬಳಸುವ ಪದ್ಧತಿಯೂ ಕೆಲವರಲ್ಲಿದೆ.
‘ಧಾರವಾಡ ಜಿಲ್ಲೆಯಲ್ಲಿ ನಾನಾ ರೀತಿಯ ಬಾಸಿಂಗಗಳು ಸಿದ್ಧವಾಗುತ್ತವೆ. ಪ್ರಸಿದ್ಧವಾದವು ಚೌಕ ಬಾಸಿಂಗ ಹಾಗೂ ಬುಟ್ಟಿ ಬಾಸಿಂಗ. ಹುಬ್ಬಳ್ಳಿ–ಧಾರವಾಡದ ಹಳ್ಳಿ ಮಂದಿ ಇವುಗಳನ್ನೇ ಇಂದಿಗೂ ಇಷ್ಟಪಡುತ್ತಾರೆ’ ಎಂದು ಧಾರವಾಡದ ಕಲಾವಿದ ರಾಜು ಹೂಗಾರ್‌ ತಿಳಿಸಿದರು.  
‘ಕೆರೆ ನೀರಿನಲ್ಲಿ ಬೆಳೆಯುವ ಬೆಂಡನ್ನು ನಾವು ಪ್ರಧಾನವಾಗಿ ಬಳಸುತ್ತೇವೆ. ಕಲಘಟಗಿ ಹಾಗೂ ಅಕ್ಕಿಆಲೂರು ಕಡೆ ಇವು ಸಿಗುತ್ತವೆ. ಮೀನುಗಾರರು ಇವನ್ನು ಹೊರೆಗೆ 2000 ರೂಪಾಯಿಯಂತೆ ತಂದು ಕೊಡುತ್ತಾರೆ. ಬೆಳಗಾವಿ, ಬೆಂಗಳೂರು, ಹಾವೇರಿ, ಮೈಸೂರು ಭಾಗಗಳಿಂದಲೂ ಬಾಸಿಂಗಕ್ಕೆ ಬೇಡಿಕೆ ಬರುತ್ತದೆ. ಮೈಸೂರು ಪೇಟಕ್ಕೇ ಹರಳು, ತುರಾಯಿ ಬಳಸಿ ಮಾಡಿದ ವಿನ್ಯಾಸವನ್ನು ಬೆಂಗಳೂರು –ಮೈಸೂರಿನವರು ಇಷ್ಟ ಪಡುತ್ತಾರೆ. ಮರಾಠಿಗರು ಮರಾಠಿ ಮಂಡೋಳಿ ಎಂಬ ಪ್ರಕಾರ ಮಾಡಿಸುತ್ತಾರೆ. ಶಿರಸಿ–ಬನವಾಸಿ ಪ್ರಕಾರದಲ್ಲಿ ಹೆಚ್ಚು ವಿನ್ಯಾಸಗಳು ಇದ್ದು ಅವು ಕೆಲಸವೂ ಹೆಚ್ಚು ದುಬಾರಿ ಸಹ’ ಎಂದು ಅವರು ವಿವರಿಸಿದರು.
‘ಬಾಸಿಂಗ ತಯಾರಿಕೆಗೆ ಬೆಂಡು, ರಟ್ಟು, ಥರ್ಮಕೋಲ್‌, ಸುನಹರಿ ಹಾಗೂ ಬಣ್ಣದ ಕಾಗದ, ಜಾಲಿ ಮುಳ್ಳು, ಹರಳು, ಮುತ್ತು, ಮಣಿಗಳನ್ನು ಹೆಚ್ಚಾಗಿ ಬಳಸುತ್ತೇವೆ’ ಎಂದು ಅವರು ತಿಳಿಸಿದರು.
ಕೂಡ್ಲಿಗಿ ವೈವಿಧ್ಯ: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಬಾಸಿಂಗದ ಇನ್ನಷ್ಟು ವೈವಿಧ್ಯ ಕಂಡು ಬರುತ್ತಿದೆ. ‘ಬಣ್ಣದ ಬಾಸಿಂಗ, 9 ಹೆಡೆ ಬಾಸಿಂಗ, 3 ಕೋಡಿನ ಬಾಸಿಂಗ, ತುರಾಯಿ ಬಾಸಿಂಗ, ಅಕ್ಕಿ ಬಾಸಿಂಗಗಳು ಇಲ್ಲಿ ಜನಪ್ರಿಯ. ಸರಳವಾದ ಮುತ್ತಿನ ಬಾಸಿಂಗವನ್ನೂ ಈಗಿನವರು ಇಷ್ಟ ಪಡುತ್ತಿದ್ದಾರೆ’ ಎಂದು ಕೂಡ್ಲಿಗಿಯ ಮಲ್ಲೇಶ ಚಿತ್ರಗಾರ ಮಾಹಿತಿ ನೀಡಿದರು.
ಮೊದಲು ವೀಳ್ಯ, ಅಕ್ಕಿ–ಬೇಳೆ, ಬೆಲ್ಲ, ಕೊಬ್ಬರಿ ಕೊಟ್ಟು  ಪೂಜೆ ಮಾಡಿಸಿ ಬಾಸಿಂಗಕ್ಕೆ ಆರ್ಡ್‌ರ್‌ ನೀಡುವ ಪದ್ಧತಿ ಇತ್ತು. ಸಿದ್ಧವಾದ ಬಾಸಿಂಗವನ್ನು ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ಹೋಗುತ್ತಿದ್ದರು. ಈಚೆಗೆ ಆ ಪದ್ಧತಿ ಅಪರೂಪವಾಗುತ್ತಿದೆ. ಈಗ ರಟ್ಟಿನ ಬಾಕ್ಸ್‌ಗಳಲ್ಲಿ ಹಾಕಿಕೊಂಡು ಹೋಗುತ್ತಾರೆ. ನಮ್ಮ ಅಜ್ಜಿ ಬಿದಿರಿನಲ್ಲಿ ಬಾಸಿಂಗ ಕಟ್ಟುತ್ತಿದ್ದರು. ಈಗ ರಟ್ಟು ಹಾಗೂ ಆಲಂಕಾರಿಕ ಸಾಮಗ್ರಿ ಬಳಸಿ ಮಾಡುತ್ತಿದ್ದೇವೆ. ಈ ಭಾಗದಲ್ಲಿ ಜೋಳದ ದಂಟು ಬಳಸಿ ಮಾಡುವ ಪದ್ಧತಿಯೂ ಇದೆ’ ಎಂದು ಅವರು ತಿಳಿಸಿದರು.