ವರ

ಮದುಮಗನೇ…ಗಡ್ಡಕ್ಕೂ ಇರಲಿ ಆರೈಕೆ

MH-Team

ಗೋವರ್ಧನ ಎಸ್‌.ಎನ್‌

ಮದುವೆಗೆ ಕ್ಲೀನ್ ಶೇವ್ ಮಾಡಿಸಬೇಕು, ಆಗಷ್ಟೇ ಸುಂದರವಾಗಿ ಕಾಣಿಸುತ್ತೇವೆ ಎನ್ನುವ ಕಾಲ ಇದಲ್ಲ. ಬಹುತೇಕ ಪುರುಷರಿಗೆ ಗಡ್ಡವೇ ಮೊದಲ ಸಂಗಾತಿ. ಗಡ್ಡವನ್ನು ಅಷ್ಟೊಂದು ಇಷ್ಟಪಡುವ ಹುಡುಗರು ತಮ್ಮ ಮದುವೆಗೆ ಒಂದಿಷ್ಟು ತಯಾರಿ ನಡೆಸಬೇಕಲ್ಲವೇ. ಇದು ಗಡ್ಡದ ವಿಷಯ ಗುರೂ…

ಹೌದು, ಹುಡುಗರಿಷ್ಟೇ ಅಲ್ಲ; ಹಲವು ಹುಡುಗಿಯರಿಗೂ ಗಡ್ಡಧಾರಿ ಪುರುಷರು ಹೆಚ್ಚು ಇಷ್ಟವಾಗುತ್ತಾರೆ. ಹುಡುಗರು ಗಡ್ಡ ತೆಗೆಯುತ್ತೇನೆಂದರೂ ಬೇಡವೆನ್ನುವ ಹುಡುಗಿಯರಿದ್ದಾರೆ. ಅಂತಹುದರಲ್ಲಿ ಮದುವೆ ಸಮಾರಂಭದಲ್ಲಿ ಗಡ್ಡ ಬೇಡ ಅನ್ನೊ ಪ್ರಶ್ನೆಯೇ ಬಾರದು. ಆದರೆ, ಗಡ್ಡವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕಷ್ಟೇ. ಎಷ್ಟೋ ಹುಡುಗರಿಗೆ ಅದರಿಂದಲೇ ಸೌಂದರ್ಯ, ಇನ್ನಷ್ಟು ಹುಡುಗರಿಗೆ ಸೌಂದರ್ಯವರ್ಧಕವೂ ಹೌದು. 

ಸ್ಟಬಲ್‍, ಗೋಟಿ, ಗೋಟಿ ಮತ್ತು ಮೀಸೆ, ಎಕ್ಸ್‍ಟೆಂಡೆಟ್ ಗೋಟಿ, ಕ್ಲಾಸಿಕ್ ಫುಲ್ ಬಿಯರ್ಡ್‍, ಡಕ್ಟೈಲ್‍ ಬಿಯರ್ಡ್‍, ಗಾರಿಬಲ್ಡಿ, ಹಾರ್ಸ್‍ಶೂ, ಮಟನ್‍ ಚಾಪ್ಸ್‍, ಫ್ರೆಂಡ್ಲಿ ಮಟನ್‍ ಚಾಪ್ಸ್‍, ಬಲ್ಬೊ ಬೆಂಬೊ, ಸರ್ಕಲ್ ಬಿಯರ್ಡ್‍, ಬ್ರೆಟ್‍, ಚಿನ್ ಸರ್ಟೈನ್‍, ಈಜಿಫ್ಟಿಯನ್ ಗೋಟಿ, ವೆರ್ಡಿ ಬಿಯರ್ಡ್‍, ಸ್ಪೇಡ್‍, ಫ್ರೆಂಚ್‍ ಫಾರ್ಕ್‍, ಓಲ್ಡ್‍ ಡಚ್‍, ಹಿಪ್‍ಸ್ಟರ್‌, ಸ್ಕ್ವಯರ್‌, ರೌಂಡ್‍, ಹಾರ್ಟ್‍, ಡೈಮೆಂಡ್‍, ಓವೆಲ್‍, ಮೀಸೆ ಇಲ್ಲದೆ ಗೋಟಿ, ರಾಯಲೆ ಬಿಯರ್ಡ್‍, ಪೆಟೈಟ್‍ ಗೋಟಿ, ವ್ಯಾಬ್ ಡೈಕ್‍ ಬಿಯರ್ಡ್‍, ಶಾರ್ಟ್‍ ಬಾಕ್ಸ್ಡ್‍ ಬಿಯರ್ಡ್‍, ಆ್ಯಂಕರ್‍ ಬಿಯರ್ಡ್‍, ಮೀಸೆಯೊಟ್ಟಿಗೆ ಗನ್ಸ್‌ಲಿಂಗರ್‌ ಬಿಯರ್ಡ್‍, ಚಿನ್ ಸ್ಟ್ರಿಪ್, ದಿ ಇಂಪೀರಿಯಲ್ ಹೀಗೆ ಗಡ್ಡವು ಕಾಣುವ ರೀತಿ, ವಿನ್ಯಾಸಕ್ಕೆ ಅನುಗುಣವಾಗಿ ತರಹೇವಾರಿ ವಿಧಗಳಿವೆ. 

ಇಷ್ಟೊಂದು ವಿಧಗಳಿರುವಾಗ ಮದುವೆಗೆ ತಯಾರಾಗುತ್ತಿರುವ ವರ ತುಸು ಗೊಂದಲಕ್ಕೀಡಾಗಬಹುದು. ಯಾವ ಶೈಲಿ ತನಗೆ ಸೂಕ್ತವಾಗಬಹುದು, ಪ್ರಿ ವೆಡ್ಡಿಂಗ್ ಫೋಟೊ ಶೂಟ್‍, ಮದುವೆ, ಆರತಕ್ಷತೆ, ಪೋಸ್ಟ್‌ ವೆಡ್ಡಿಂಗ್ ಫೋಟೊ ಶೂಟ್‍ಗೆ ವಿಧ ವಿಧದ ವಿನ್ಯಾಸದ ಗಡ್ಡದ ಶೈಲಿ ಮಾಡಿಸುವುದೇ? ಒಂದನ್ನೇ ಮಾಡಿಸುವುದೇ? ಅದನ್ನು ನಿಭಾಯಿಸುವುದು ಹೇಗೆ? ಯಾವುದರಲ್ಲಿ ತಾನು ಹೆಚ್ಚು ಚೆನ್ನಾಗಿ ಕಾಣಿಸಬಹುದು? ಈ ಎಲ್ಲ ಪ್ರಶ್ನೆಗಳು ಕಾಡಬಹುದು. 

ಗಡ್ಡದ ವಿಚಾರದಲ್ಲಿ ನಿಖರತೆ ಅವಶ್ಯ. ಮೊದಲಿನಿಂದ ಇರುವ ಗಡ್ಡದ ಶೈಲಿಯೇ ಹೆಚ್ಚು ವಿಶ್ವಾಸ ಮೂಡಿಸಿದಲ್ಲಿ ಅದೇ ಆಯ್ಕೆ ಇರಲಿ. ಹೊಸದೊಂದು ಪ್ರಯತ್ನ ಮಾಡುವುದಾದರೆ ಕಸಿವಿಸಿ ಮಾಡಿಕೊಳ್ಳುವುದು ಬೇಡ. ಪುರುಷರ ಸೌಂದರ್ಯತಜ್ಞರು, ಸೌಂದರ್ಯದ ಸಲಹೆ ನೀಡುವವರ ಮೊರೆ ಹೋಗಬಹುದು. ಮುಖದ ಚಹರೆ, ರೀತಿಗೆ ತಕ್ಕಂತೆ ಅವರು ನೀಡುವ ಸಲಹೆ ಪಾಲಿಸಬಹುದು.    

ಮದುವೆಗೆ ಒಂದು ತಿಂಗಳು ಇರುವಾಗಲೇ ಗಡ್ಡದ ವಿನ್ಯಾಸ ನಿರ್ಧರಿಸಿಕೊಂಡರೆ ಒಳಿತು. ಮೊಬೈಲ್ ಫೋನ್‍, ಟ್ಯಾಬ್‍ ಅಥವಾ ಲ್ಯಾಪ್‍ಟಾಪ್‍ಗಳಲ್ಲಿ ಸದ್ಯದ ಮುಖದ ಫೋಟೊಕ್ಕೆ ವಿವಿಧ ವಿನ್ಯಾಸದ ಗಡ್ಡಗಳನ್ನಿಟ್ಟು ನೋಡಿದಾಗ  ಸ್ಪಷ್ಟ ಚಿತ್ರಣ ಸಿಗುತ್ತದೆ. ಅದನ್ನು ಆಧರಿಸಿ, ಗಡ್ಡ ಹೆಚ್ಚು ಬೆಳೆಸಬೇಕೇ, ಸಾಮಾನ್ಯವಾಗಿರಲೇ, ಸಣ್ಣ ಪ್ರಮಾಣದಲ್ಲಿ ಸಾಕೇ ಎಂಬುದು ಗೊತ್ತಾಗುತ್ತದೆ. 

ಮದುವೆಗಾಗಿಯೇ ಗಡ್ಡ ಬಿಡಬೇಕು ಅಂದುಕೊಂಡವರು ಮಾರುಕಟ್ಟೆಯಲ್ಲಿ ಸಿಗುವ ಬಿಯರ್ಡ್‍ ಗ್ರೋತ್‍ ಆಯಿಲ್‍ ಹಚ್ಚಬಹುದು. ಗಡ್ಡ ಉಳ್ಳವರೂ ಅಗತ್ಯಕ್ಕೆ ತಕ್ಕಂತೆ ಇದನ್ನು ಬಳಸಬಹುದು. 

ಗಡ್ಡವು ಒರಟಾಗದಂತೆ ಮೃಧುವಾಗಿರಲು ಬಿಯರ್ಡ್‍ ಬಾಮ್‍ ಲೇಪನ ಮಾಡಹುದು. ಗಡ್ಡವನ್ನು ಸುಸ್ಥಿಯಲ್ಲಿಡುವ ಆಯಿಲ್‍ಗಳು ಸಹ ಲಭ್ಯ ಇವೆ. ಗಡ್ಡವನ್ನು ಆಗಾಗ ಬಾಚಣಿಗೆಯಿಂದ ಬಾಚಿಕೊಳ್ಳುವುದು, ಸಣ್ಣ ಕತ್ತರಿ ಅಥವಾ ಟ್ರಿಮ್ಮರ್‌ ನಂಬರ್ ಆಧರಿಸಿ ಶೇಪ್ ಮೂಡಿಸಿಕೊಳ್ಳುವುದು ಅಗತ್ಯ. 

ಗಡ್ಡವು ಮೃಧುವಾಗಿರಬೇಕಾದರೆ ಸ್ವಚ್ಛತೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಅದಕ್ಕಾಗಿ ಬಿಯರ್ಡ್‍ ವಾಶ್‍ಗಳನ್ನು ಬಳಸಿ, ಸ್ವಚ್ಛಗೊಳಿಸಿಕೊಳ್ಳಬೇಕು. ಇದು ನಿತ್ಯದ ಪ್ರಕ್ರಿಯೆಯಾದರೆ, ವಾರಕ್ಕೆ ಕನಿಷ್ಠ ಮೂರು ಬಾರಿಯಾದರೂ ಶಾಂಪೂವಿನಿಂದ ಗಡ್ಡ ತೊಳೆದುಕೊಳ್ಳಬೇಕು. ಡೆಡ್‍ ಸ್ಕಿನ್‍, ಗಟ್ಟಿಯಲ್ಲದ ಕೂದಲುಗಳನ್ನು ತೆಗೆಯಲು ನಿರ್ದಿಷ್ಟ ಮಾದರಿಯ ಬ್ರಶ್‍ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. 

ಗಡ್ಡವನ್ನು ಶಾಂಪೂವಿನಿಂದ ಸ್ವಚ್ಛವಾಗಿ ತೊಳೆದುಕೊಂಡಾಗ ಅಥವಾ ಸ್ನಾನವಾದ ಮೇಲೆ ಹೇರ್‌ ಡ್ರೈಯರ್‌ ಬಳಸಿ, ಗಡ್ಡವನ್ನೂ ಆರಿಸಿಕೊಳ್ಳಬೇಕು. ಟವೆಲ್‍ ಅಥವಾ ಬಟ್ಟೆಯಿಂದ ಗಡ್ಡವನ್ನು ಒರೆಸುವಾಗಲೂ ತಾಳ್ಮೆ ಬೇಕು. ಗಡ್ಡಕ್ಕಾಗಿಯೇ ಇರುವ ಆಯಿಲ್‍, ಬಾಮ್‍, ಬ್ರಷ್‍, ಸಾಫ್ಟ್‌ನರ್‌ ಮೊದಲಾದವುಗಳನ್ನು ಬಳಸುವುದರಿಂದ ಗಡ್ಡ ಒತ್ತೊತ್ತಾಗಿ, ಚೆಂದವಾಗಿ, ವಿನ್ಯಾಸಕ್ಕೆ ತಕ್ಕಂತೆ, ಸೌಂದರ್ಯ ಇಮ್ಮಡಿಗೊಳಿಸುವಂತೆ ಕಾಣಿಸುತ್ತದೆ. ಈ ಉತ್ಪನ್ನಗಳನ್ನು ಬಳಸುವಾಗ ಉತ್ತಮವಾದುದು ಯಾವುದೆಂದು ಆನ್‍ಲೈನ್‍ಗಳಲ್ಲಿ ಪರಿಶೀಲಿಸಿ, ತಜ್ಞರ ಸಲಹೆ ಪಡೆಯುವುದು ಉತ್ತಮ. 

ಗಡ್ಡವನ್ನು ಯೋಜನೆಯಂತೆ ಬೆಳೆಸಿ, ಉತ್ತಮ ರೀತಿಯಲ್ಲಿ ನಿಭಾಯಿಸಿ, ಅದಕ್ಕೊಂಡು ವಿನ್ಯಾಸ ಕೊಡುವುದು ಎಷ್ಟು ಮುಖ್ಯವೋ, ಅದರ ಬಣ್ಣ ನಿರ್ಧರಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಗಡ್ಡದ ನಡುವೆ ಬಿಳಿಯ ಕೂದಲುಗಳಿದ್ದರೆ ಡೈ ಬಳಸಬೇಕಾಗುತ್ತದೆ. ಗಡ್ಡದ ಮಧ್ಯೆ ಬಿಳಿ ಕೂದಲು ಬಿಟ್ಟು, ಸುತ್ತ ಕಪ್ಪು ಬಣ್ಣದಿಂದ ಕೂಡಿದ್ದರೆ ಅದೂ ವಿಶೇಷ ಅನಿಸುತ್ತದೆ. ಬಂಗಾರದ ಬಣ್ಣ, ಕಂದು ಬಣ್ಣ, ಕೆಂಪಗೆ ಮಾತ್ರವಲ್ಲದೆ ವರ್ಣಮಯ ಕೂಡ ಮಾಡಿಕೊಳ್ಳಬಹುದು. ಇದು ನಿಮ್ಮ ಆಯ್ಕೆ…