ಮದುವೆ ಅನುಭೂತಿ

ಡೆಸ್ಟಿನೇಷನ್ ವೆಡ್ಡಿಂಗ್‌: ಕನಸಿನ ಮದುವೆಗೊಂದು ತಾಣ

MH-Team

ಪವಿತ್ರಾ ಭಟ್‌

ಮದುವೆ. ಪ್ರತಿ ಹೆಣ್ಣು, ಗಂಡಿನ ಕನಸು. ಹೀಗಿಯೇ ಮದುವೆಯಾಗಬೇಕೆಂಬ ಹಂಬಲ ಈಗಿನ ಯುವಜನತೆಯದ್ದು. ಅದು ಸಂಪ್ರದಾಯಬದ್ಧ ಮದುವೆಯೇ ಆಗಿರಲಿ, ಸರಳವಾದ ಮಂತ್ರಮಾಂಗಲ್ಯವೇ ಆಗಿರಲಿ. ಒಬ್ಬರಿಗೊಬ್ಬರು ಜೊತೆಯಾಗಬೇಕು ಎನ್ನುವುದು ಹೇಗೆ ಡೆಸ್ಟಿನಿಯೋ ಅದೇ ರೀತಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಅಥವಾ ಅಂದುಕೊಂಡ ಸ್ಥಳದಲ್ಲಿ ಮದುವೆಯಾಗಬೇಕು ಎನ್ನುವುದು ಹಲವರ ಕನಸು.

ಇತ್ತೀಚಿನ ದಿನಗಳಲ್ಲಿ ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆಯಾಗಲು ಹೆಚ್ಚಿನವರು ಇಚ್ಛಿಸುತ್ತಾರೆ. ಇಂಥಹದ್ದೇ ಸ್ಥಳದಲ್ಲಿ ಅಚ್ಚುಕಟ್ಟಾಗಿ, ಒಪ್ಪಟವಾಗಿ ಆಯೋಜನೆಗೊಂಡ ಸ್ಥಳದಲ್ಲಿ, ಥೀಮ್‌ವೊಂದರಲ್ಲಿ ಮದುವೆಯಾಗಬೇಕು ಎನ್ನುವುದು ಅನೇಕರ ಮನಸ್ಥಿತಿಯಾಗಿದೆ.

ಇದಕ್ಕಾಗಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ವಿದೇಶದಲ್ಲಿ ಮದುವೆಯಾಗಬೇಕೆಂಬ ಕನಸಿದ್ದರೂ ಹಲವು ಕಾರಣಗಳು ಅಡ್ಡಿಯಾಗಬಹುದು. ಆದರೆ ನಮ್ಮ ದೇಶದಲ್ಲೇ ಅನೇಕ ಸುಂದರ ಸ್ಥಳಗಳು ಕನಸಿನ ಮದುವೆಯನ್ನು ಸಾಕಾರಗೊಳಿಸುತ್ತವೆ. ಆ ಬಗ್ಗೆ ಮಾಹಿತಿ ಇಲ್ಲಿದೆ. 

ಚಿಕ್ಕಮಗಳೂರು 

ಸುತ್ತಲೂ ಹಸಿರು ಗಿರಿಧಾಮ, ಹಕ್ಕಿಗಳ ಚಿಲಿಪಿಲಿಗಳ ನಡುವೆ ಸುಂದರವಾದ ಮಂಟಪದಲ್ಲಿ ಮದುವೆಯಾಗಬಹುದು. ಚಿಕ್ಕಮಗಳೂರಿನಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಹಲವು ಜಾಗಗಳಿವೆ. ಕಾಫಿ ತೋಟಗಳ ನಡುವೆ, ರೆಸಾರ್ಟ್‌ಗಳು, ನೀರಿನ ಝರಿಗಳ ಸಮೀಪ ಅತ್ಯಾಪ್ತರ ಸಮ್ಮುಖದಲ್ಲಿ ಹೊಸ ಜೀವನಕ್ಕೆ ಕಾಲಿರಿಸಬಹುದು.

ಕೂರ್ಗ್ 

ಕರ್ನಾಟಕದ ಮಿನಿ ಕಾಶ್ಮೀರ ಎಂದೇ ಹೆಸರು ಪಡೆದಿರುವ ಕೂರ್ಗ್‌, ಡೆಸ್ಟಿನೇಷನ್‌ ವೆಡ್ಡಿಂಗ್‌ಗೆ ಪ್ರಶಸ್ತ ಜಾಗ. ಕೊಡಗಿನ ಸಂಪ್ರದಾಯದಲ್ಲೂ ನೀವು ಮದುವೆಯಾಗಬಹುದು. ಮಾಮೂಲಿ ಉಡುಗೆಗಿಂತ ವಿಭಿನ್ನ ಉಡುಪು, ವಿಭಿನ್ನ ಆಚರಣೆಯೊಂದಿಗೆ ಹಸಿರು ಪರಿಸರದಲ್ಲಿ ನವಜೀವನಕ್ಕೆ ಅಡಿಯಿಡಬಹುದು.

ಕೇರಳ 

ಸಮುದ್ರ, ನೀರನ್ನು ಇಷ್ಟಪಡುವವರಿಗೆ, ಅಂತಹ ಸ್ಥಳದಲ್ಲಿ ಮದುವೆಯಾಗಬೇಕೆಂಬ ಕನಸಿಟ್ಟುಕೊಂಡಿದ್ದರೆ ಕೇರಳ ಉತ್ತಮ ಆಯ್ಕೆ. ಏಕೆಂದರೆ ಇಲ್ಲಿ ಬೋಟ್‌ ಹೌಸ್‌, ಕಡಲ ಕಿನಾರೆ ಎಲ್ಲವೂ ಉತ್ತಮ ಅನುಭವವನ್ನು ನೀಡುತ್ತದೆ. ಸುಂದರ ಪರಿಸರವನ್ನೂ ಇಲ್ಲಿ ಕಾಣಬಹುದು.

ಜೈಪುರ 

ಮಹಾರಾಜರುಗಳ ಕಾಲಘಟ್ಟದಲ್ಲಿ ನಡೆದಂತೆ ನಮ್ಮ ಮದುವೆಯೂ ನಡೆಯಬೇಕು ಎನ್ನುವಂತಿದ್ದರೆ ರಾಜಸ್ಥಾನದ ಹಲವು ಸ್ಥಳಗಳು ಪೂರಕವಾಗಿವೆ. ಜೈಪುರ, ಉದಯಪುರದಂತಹ ಸ್ಥಳಗಳು ಸಾಂಪ್ರದಾಯಿಕ, ಪುರಾತನ ಅನುಭವವನ್ನು ನೀಡುತ್ತದೆ. ಹಳೆಯ ಕಟ್ಟಡಗಳು, ಅರಮನೆ, ವಿಭಿನ್ನ ಸಂಸ್ಕೃತಿ ರಾಜ, ರಾಣಿಯ ಅನುಭವವನ್ನು ನೀಡುತ್ತದೆ.

ಗುಲ್ಮಾರ್ಗ್ 

ಆಗಸಕ್ಕೆ ಮುತ್ತಿಕ್ಕುವ ಪರ್ವತ, ತಣ್ಣಗೆ ಕುಳಿತಿರುವ ಹಿಮ, ಉಲ್ಲಾಸಭರಿತವಾದ ಪ್ರಕೃತಿಯ ಮಧ್ಯೆ ವಿವಾಹವಾಗುವ ಕನಸು ಕಂಡಿದ್ದರೆ ಕಾಶ್ಮೀರ ಅತ್ಯುತ್ತಮ ಸ್ಥಳ. ಕಾಶ್ಮೀರದಲ್ಲಿ ಗುಲ್ಮಾರ್ಗ್‌ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಒಳ್ಳೆಯ ಸ್ಥಳ. ಏಕೆಂದರೆ ವಿಶಾಲವಾದ ಜಾಗ, ಎತ್ತರದ ಗುಡ್ಡ, ಗುಡ್ಡದ ಮೇಲೆ ಮುತ್ತಿಕ್ಕಿ ಕುಳಿತಂತೆ ಕಾಣುವ  ಹಿಮ ಇವೆಲ್ಲವೂ ಹೊಸ ಬಾಳಿಗೆ ಹೆಜ್ಜೆಯಿಡುವಾಗ ಆಶೀರ್ವದಿಸಿಂತ ಅನುಭವ ನೀಡಬಲ್ಲದು.

ಖುಜುರಾಹೊ 

ಮಧ್ಯಪ್ರದೇಶದಲ್ಲಿನ ಈ ಸ್ಥಳದಲ್ಲಿರುವ ೧೦, ೧೧ನೇ ಶತಮಾನದ ದೇಗುಲಗಳಲ್ಲಿ ವಿವಾಹವಾಗಬಹುದು. ದೇವರ ಆಶೀರ್ವಾದದೊಂದಿಗೆ, ಕುಟುಂಬದವರ ಶುಭಾಶಯಗಳೊಂದಿಗೆ ಕನಸಿನಂತೆ ಮದುವೆಯಾಗಲು ಖುಜುರಾಹೊ ಉತ್ತಮ ಸ್ಥಳವಾಗಿದೆ. ಇಲ್ಲಿ ನಾಗರಶೈಲಿಯ ವಾಸ್ತುಶಿಲ್ಪವನ್ನು ಹೆಚ್ಚಾಗಿ ಕಾಣಬಹುದು.

ಇಲ್ಲಿ ದೇವಾಲಯಗಳಲ್ಲಿ ಮಾತ್ರವಲ್ಲದೆ ಗಾರ್ಡನ್‌ ವೆಡ್ಡಿಂಗ್‌ ಅಂದರೆ, ಹಚ್ಚ ಹಸಿರಿನ ಉದ್ಯಾನಗಳಲ್ಲಿ ವಿವಾಹ ಸ್ಥಳವಾಗಿ ಬದಲಾಯಿಸಬಹುದು. ಇದಕ್ಕೆಂದೇ ಹಲವು ವೆಡ್ಡಿಂಗ್‌ ಡಿಸೈನರ್‌ ಕಂಪನಿಗಳೂ ಲಭ್ಯವಿವೆ.