ಪವಿತ್ರಾ ಭಟ್
ನನ್ನವಳೀ ಶರದೃತು-
ನನ್ನೆದಯೊಳೋಲಾಡಿದವಳು.
ಅವಳ ಕಾಲಂದಿಗೆಯ ಹೊಳೆವ ಗೆಜ್ಜೆಗಳು
ನನ್ನ ನರನರಗಳಲಿ ಝಣಿರು ಝಣಿರು!
ಅವಳ ಮಂಜಿನ ಮುಸುಕು
ಪಟಪಟಿಸಿತೆನ್ನುಸಿರೊಳು.
ನನ್ನ ಕನಸುಗಳಲ್ಲಿ
ಅವಳ ತಲೆಗೂದಲಿನ ಮೃದುಲ ಸೋಂಕು....
ಚನ್ನವೀರ ಕಣವಿಯವರ ಈ ಸಾಲುಗಳಂತೆ ಹೊಸದಾಗಿ ಮದುವೆಯಾದವರಿಗೆ ತನ್ನವನು/ ತನ್ನವಳೇ ಪ್ರಪಂಚ. ಅವಳೊಂದಿಗೆ ಕಳೆಯುವ ಪ್ರತೀಕ್ಷಣವೂ ಸುಮಧುರವಾಗಿರಬೇಕು ಎನ್ನುವ ಆಸೆ. ಪ್ರಪಂಚವನ್ನಲ್ಲದಿದ್ದರೂ ಸಂಗಾತಿಯೊಂದಿಗೆ ಕಳೆಯಲು ಪ್ರಶಾಂತವಾದ, ಮನೋಹರವಾದ ಸ್ಥಳಬೇಕು ಎನ್ನಿಸುವುದು ಸಹಜ. ಇದಕ್ಕಾಗಿಯೇ ನವಜೋಡಿಗಳು ಆಯ್ಕೆಮಾಡಿಕೊಂಡಿರುವುದು ‘ಮಧುಚಂದ್ರ’ ದಾರಿಯನ್ನು.
ಹನಿಮೂನ್ ಅಥವಾ ಮಧುಚಂದ್ರಕ್ಕೆ ಇಂತಲ್ಲಿಯೇ ಹೋಗಬೇಕು. ಆಸೆ, ಆಕಾಂಕ್ಷೆ, ಜೀವನದ ಕನಸುಗಳು, ಹುದುಗಿಸಿಕೊಂಡ ಜೀವನದ ಕಥೆಗಳು ಎಲ್ಲವನ್ನೂ ಹಂಚಿಕೊಳ್ಳಬೇಕೆಂಬ ಹೆಬ್ಬಯಕೆಗೆ ಮಧುಚಂದ್ರ ಸುಸಮಯವನ್ನು ಒದಗಿಸುತ್ತದೆ. ದೀರ್ಘ ಕಾಲದ ದಾಂಪತ್ಯಕ್ಕೆ ಸದೃಢ ಅಡಿಪಾಯ ಸಿಗುವುದು ಮಧುಚಂದ್ರದಲ್ಲಿ ಕಳೆದ ದಿನಗಳಲ್ಲಿ ಎಂದರೆ ತಪ್ಪಾಗದು.
ದುಬಾರಿ ವೆಚ್ಚ ಮಾಡಿ ವಿದೇಶಕ್ಕೆ ಹೋಗಬೇಕಲ್ಲ ಎಂದು ಚಿಂತಿಸಿಕೊಳ್ಳವ ಅಗತ್ಯವಿಲ್ಲ. ನಮ್ಮ ದೇಶದಲ್ಲೇ ಅತ್ಯಂತ ಸುಂದರ ತಾಣಗಳಿವೆ. ಅವುಗಳ ಪರಿಚಯ ಇಲ್ಲಿದೆ.
ಸಕಲೇಶಪುರ
ಉಸಿರೆಳೆದುಕೊಳ್ಳುವಷ್ಟೂ ಹಿತವಾದ, ಸ್ವಚ್ಛವಾದ ಗಾಳಿಯನ್ನು ಸಕಲೇಶಪುರದ ಗಿರಿಧಾಮಗಳು ನೀಡುತ್ತವೆ. ಪ್ರಶಾಂತವಾದ ಪರಿಸರದಲ್ಲಿ ಕೈ ಕೈ ಹಿಡಿದು ನಡೆಯಬೇಕು. ಪ್ರೀತಿಯನ್ನು ಹಂಚಿಕೊಳ್ಳಬೇಕು ಎಂಬ ಕನಸು ಕಂಡಿರುವ ದಂಪತಿಗಳಿಗೆ ಮಧುಚಂದ್ರರಕ್ಕೆ ಸಕಲೇಶಪುರ ಉತ್ತಮ ಸ್ಥಳ. ಚಾರಣ, ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿರುವ ಸಕಲೇಶಪುರ ಕಡಿಮೆ ಖರ್ಚಿನಲ್ಲಿ ಖುಷಿಯ ಅನುಭವವನ್ನು ನೀಡಬಲ್ಲದು.
ಶಿಮ್ಲಾ
ಸ್ವಿಡ್ಜರ್ಲೆಂಡ್ ಅನುಭವವನ್ನು ನೀವು ಶಿಮ್ಲಾದಲ್ಲಿಯೇ ಪಡೆಯಬಹುದು. ಚುಮು ಚುಮು ಚಳಿ, ಕಣ್ಣುಹಾಯಿಸಿದಷ್ಟು ಎತ್ತರಕ್ಕೆ ಕಾಣಿಸುವ ಗಿರಿಧಾಮಗಳು ಅದ್ಭುತ ಅನುಭವವನ್ನು ನೀಡುತ್ತದೆ. ವರ್ಷವಿಡೀ ಪ್ರವಾಸಿಗರನ್ನು ಸೆಳೆಯುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಬ್ರಿಟಿಷರ ಕಾಲದ ಸುಂದರ ಕಟ್ಟಡಗಳಿಂದ ಕೂಡಿದೆ. ಆರಾಮದಲ್ಲಿ ಸಮಯ ಕಳೆಯಲು ದಂಪತಿಗೆ ಶಿಮ್ಲಾ ಅತ್ಯುತ್ತಮ ಆಯ್ಕೆಯಾಗಿದೆ. ಮಾರ್ಚ್‌ನಿಂದ ಜೂನ್, ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಶಿಮ್ಲಾ ಭೇಟಿಗೆ ಉತ್ತಮ ಸಮಯವಾಗಿದೆ.
ಅಂಡಮಾನ್ ಮತ್ತು ನಿಕೋಬಾರ್
ಕಡಲಿತೀರದಲ್ಲಿ ಸಮಯ ಕಳೆಯಲು ಬಯಸಿದರೆ ಅಂಡಮಾನ್ ಮತ್ತು ನಿಕೋಬಾರ್ ಉತ್ತಮ ಸ್ಥಳವಾಗಿದೆ. ನವದಂಪತಿಗಳು ನೀರಿನ ಬಳಿ ಕುಳಿತು ಸಮಯ ಕಳೆಯಲು ಬಯಸಿದರೆ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. ಶುಭ್ರವಾದ ನೀರು, ಸುತ್ತಲೂ ಹಸಿರು ಮರಗಳು, ಮರಳಿನ ರಾಶಿ ರೊಮ್ಯಾಂಟಿಕ್ ಅನುಭವ ಕೊಡುತ್ತದೆ.
ಲಕ್ಷದ್ವೀಪ
ಇತ್ತೀಚಿನ ದಿನಗಳಲ್ಲಿ ಲಕ್ಷದ್ವೀಪ ಹನಿಮೂನ್ ಪ್ರಿಯರ ತಾಣವಾಗುತ್ತಿದೆ. ಹವಳದ ಬಂಡೆಗಳು, ಕಡಲತೀರಗಳು ಭೇಟಿ ನೀಡುವವರನ್ನು ಮಂತ್ರಮುಗ್ಧಗೊಳಿಸುತ್ತದೆ. ಇಲ್ಲಿ ಆರಾಮವಾಗಿ ಸಮಯ ಕಳೆಯುವುದರ ಜತೆಗೆ ಸ್ಕೂಬಾಡೈವಿಂಗ್, ಕಯಾಕಿಂಗ್‌ನಂತಹ ಸಾಹಸದ ಆಟಗಳನ್ನೂ ಆಡಬಹುದು. ಹೀಗಾಗಿ ನವದಂಪತಿಗೆ ಲಕ್ಷದ್ವೀಪ ಕೂಡ ಹನಿಮೂನ್‌ಗೆ ಉತ್ತಮ ಆಯ್ಕೆಯಾಗಿದೆ.
ಮುನ್ನಾರ್
ನೀವೇನಾದರೂ ಹಸಿರು, ಪ್ರಕೃತಿಯ ಪ್ರಿಯರಾಗಿದ್ದರೆ ಮುನ್ನಾರ್ ಹನಿಮೂನ್‌ಗೆ ಉತ್ತಮ ಆಯ್ಕೆ.
ಕೇರಳದ ಪಶ್ಚಿಮ ಘಟ್ಟಗಳಲ್ಲಿರುವ ಸುಂದರ ಗಿರಿಧಾನ ಮುನ್ನಾರ್. ಇದು ಒಂದು ಕಾಲದಲ್ಲಿ ಬ್ರಿಟಿಷ್ ಆಡಳಿತಗಾರರ ಬೇಸಿಗೆ ರೆಸಾರ್ಟ್ ಆಗಿತ್ತು ಎನ್ನುವ ಮಾತೂ ಇದೆ. ಚಹಾತೋಟದ ವಿಹಂಗಮ ನೋಟ, ಬೆಟ್ಟಗಳ ಸಾಲು, ತಣ್ಣನೆಯ ಗಾಳಿ, ಹಿತವಾದ ವಾತಾವರಣ ನವಜೋಡಿಗಳಿಗೆ ಮರೆಯಲಾರದ ಅನುಭವವನ್ನು ನೀಡುತ್ತದೆ.
ನೈನಿತಾಲ್
ಉತ್ತರಾಖಂಡದ ನೈನಿತಾಲ್ ನಗರ ಸುಂದರವಾದ ಪಟ್ಟಣವಾಗಿದೆ. ನೈನಿ ಸರೋವರದಲ್ಲಿ ದೋಣಿ ವಿಹಾರ, ದೇಗುಲಗಳ ಭೇಟಿ, ವನ್ಯಜೀವಿಗಳ ಓಡಾಟ ಇವೆಲ್ಲವೂ ಹಿತ ಅನುಭವವನ್ನು ನೀಡಬಲ್ಲದು. ಹೀಗಾಗಿ ನೈನಿತಾಲ್ ಮಧುಚಂದ್ರಕ್ಕೆ ಬರುವವರಿಗೆ ಇಷ್ಟವಾಗುವ ಜಾಗವಾಗಿದೆ.
ಸಿಕ್ಕಿಂ
ಭಾರತದ ಅತಿ ಚಿಕ್ಕ ರಾಜ್ಯ ಎನಿಸಿರುವ ಸಿಕ್ಕಿಂ, ಹೇರಳವಾದ ಪ್ರಕೃತಿ ಸೌಂದರ್ಯವನ್ನು ತನ್ನೊಳಗಿರಿಸಿಕೊಂಡಿದೆ. ನೇಪಾಳ, ಭೂತಾನ್, ಟಿಬೆಟ್‌ನಿಂದ ಸುತ್ತುವರಿದಿರುವ ಈ ರಾಜ್ಯ ಸುಂದರವಾದ ಆಲ್ಪೈನ್ ಕಾಡುಗಳಿಂದ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದೆ. ಹೀಗಾಗಿ ಮಧುಚಂದ್ರಕ್ಕೆ ಬರುವ ನವಜೋಡಿಗಳಿಗೆ ಹಿತವಾದ ಅನುಭವದೊಂದಿಗೆ ಮರೆಯಲಾರದ ನೆನಪಿನ ಬುತ್ತಿಯನ್ನು ನೀಡುತ್ತದೆ.